ರಾಜ್ಯದಲ್ಲಿ ಸಿಂದಗಿ ಹಾಗೂ ಹಾನಗಲ್ ಕ್ಷೇತ್ರದಲ್ಲಿ ಉಪಚುನಾವಣೆ ಕಾವೇರುತ್ತಿದ್ದರಂತೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಜಿದ್ದಾಜಿದ್ದಿಗೆ ಬಿದ್ದಿವೆ. ಪೈಪೋಟಿಗೆ ಬಿದ್ದಂತೆ ಮೂರೂ ಪಕ್ಷಗಳೂ ಭರ್ಜರಿ ಪ್ರಚಾರ ನಡೆಸುತ್ತಿದೆ. ಒಂದು ಕಡೆ ಕಾಂಗ್ರೆಸ್, ಸಿದ್ದರಾಮಯ್ಯ vs HD ಕುಮಾರಸ್ವಾಮಿ, ಜೆಡಿಎಸ್ ಟ್ವೀಟ್ ವಾರ್, ವಾಕ್ಸಮರ ನಡೆಯುತ್ತಿರುವಂತೆಯೇ ಬಿಜೆಪಿ ವಿರುದ್ಧವೂ ಸಿದ್ದರಾಮಯ್ಯ ಮಾತಿನ ಬಾಣ ಹೂಡುತ್ತಿದ್ದಾರೆ. ಪ್ರತಿಯಾಗಿ ಬಿಜೆಪಿ ಕೂಡಾ ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮಾಡುತ್ತಿದೆ.
ಹಾನಗಲ್ ಕ್ಷೇತ್ರಕ್ಕೆ ಯಾರು ಎಷ್ಟು ಕೆಲಸ ಮಾಡಿದ್ದಾರೆ ಎಂಬ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ. ನನ್ನ ಅಧಿಕಾರಾವಧಿಯಲ್ಲಿ ಎಷ್ಟು ಕೆಲಸ ಆಗಿದೆ ಎಂಬುದರ ಲೆಕ್ಕ ನಾನು ಕೊಡ್ತೀನಿ, ನಿಮ್ಮ ಸರ್ಕಾರ ಏನು ಮಾಡಿದೆ ಎಂಬುದರ ಲೆಕ್ಕ ನೀವು ಕೊಡಿ. ಜನರಿಗೆ ಸತ್ಯ ಗೊತ್ತಾಗಲಿ ಎಂದು ಸಿಎಂ ಬೊಮ್ಮಾಯಿ ಅವರಿಗೆ ಸಿದ್ದರಾಮಯ್ಯ ನೇರ ಸವಾಲು ಹಾಕಿದ್ದಾರೆ.
ನನ್ನ ಅಧಿಕಾರಾವಧಿಯಲ್ಲಿ ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ರೂ. 2,400 ಕೋಟಿ ಅನುದಾನ ನೀಡಿದ್ದೆ. 2018 ರಲ್ಲಿ ಬಂದ ಪ್ರವಾಹದಿಂದಾಗಿ ಕಂಚಿನೆಗಳೂರು ಗ್ರಾಮದ ಒಡ್ಡು ಒಡೆದು ಕೆರೆಗೆ ಹೋಗಬೇಕಿದ್ದ ನೀರು ನದಿ ಸೇರುತ್ತಿದೆ. 3 ವರ್ಷ ಕಳೆದರೂ ಒಂದು ಒಡ್ಡು ಸರಿಪಡಿಸಲು ನಿಮ್ಮಿಂದ ಆಗಿಲ್ವಲ್ರೀ ಎಂದು ಮುಖ್ಯಮಂತ್ರಿ ಅವರನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನರೇಂದ್ರ ಮೋದಿಯವರನ್ನೂ, 100 ಕೋಟಿ ಲಸಿಕಾಕರಣದ ಸಂಭ್ರಮವನ್ನು ವ್ಯಂಗ್ಯವಾಡಿದ್ದಾರೆ.
ದೇಶದ 139 ಕೋಟಿ ಜನರಲ್ಲಿ 29 ಕೋಟಿ ಜನರಿಗೆ ಮಾತ್ರ ಎರಡು ಡೋಸ್ ಕೊರೊನಾ ಲಸಿಕೆ ನೀಡಿರುವ ನರೇಂದ್ರ ಮೋದಿ ಸರ್ಕಾರ, ಅತ್ಯವಸರದಿಂದ 100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮಾಚರಣೆಯ ಖಾಲಿ ತಟ್ಟೆ ಬಡಿಯುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಹಾನಗಲ್ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ವಿರುದ್ಧವೂ ಟೀಕಾಸ್ತ್ರ ಹೂಡಿರುವ ಸಿದ್ದರಾಮಯ್ಯ, ಸಂಗೂರು ಸಕ್ಕರೆ ಕಾರ್ಖಾನೆ, ಗೌರಾಪುರ ಗುಡ್ಡದ 21 ಎಕರೆ ಭೂಮಿಯನ್ನು ನುಂಗಿ ನೀರುಕುಡಿದ ಶಿವರಾಜ್ ಸಜ್ಜನರ್ ಒಬ್ಬ ಸಜ್ಜನನೋ? ದುರ್ಜನನೋ? ಇಂಥವರು ಗೆದ್ದರೆ ಕ್ಷೇತ್ರದ ಅನುದಾನ ಸದ್ಬಳಕೆಯಾಗಲು ಸಾಧ್ಯವೇ? ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಸಂಗೂರು ಸಕ್ಕರೆ ಕಾರ್ಖಾನೆ ದಿವಾಳಿ ಸಂಬಂಧ 1959ರ ಸಹಕಾರಿ ಕಾಯ್ದೆಯಡಿ ತನಿಖೆ ನಡೆದು, ನೀವು ಲೂಟಿ ಮಾಡಿದ 33 ಲಕ್ಷ ಹಣವನ್ನು ಮರುಪಾವತಿ ಮಾಡಬೇಕು ಎಂದು ಆದೇಶ ನೀಡಿರುವುದನ್ನು ಮರೆತುಬಿಟ್ರಾ ಶಿವರಾಜ್ ಸಜ್ಜನರ್? ಎಂದು ಸಿದ್ದರಾಮಯ್ಯ ಕೇಳಿದ್ದಾರೆ.
ಒಂದೆಡೆ ಸಿದ್ದರಾಮಯ್ಯ ತಮ್ಮ ಅಧಿಕೃತ ಖಾತೆ ಮೂಲಕ ಬಿಜೆಪಿ ಹಾಗೂ ಅದರ ನಾಯಕರ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆಗಳನ್ನು ಮಾಡುತ್ತಿದ್ದರೆ, ರಾಜ್ಯ ಬಿಜೆಪಿ ಖಾತೆಯಿಂದ ಸಿದ್ದರಾಮಯ್ಯ ವಿರುಧ್‌ಧ ಸರಣಿ ಟ್ವೀಟ್‌ಗಳು ಹಾಕಲಾಗುತ್ತಿದೆ.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಮಾಡಿದ ಅತಿದೊಡ್ಡ ಸಾಧನೆ ಎಂದರೆ ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೂ 44 ಸಾವಿರಕ್ಕೂ ಅಧಿಕ ಸಾಲದ ಹೊರೆ ಹೇರಿದ್ದು. ಅಕ್ಕಿ ಕೊಟ್ಟೆ, ಎಣ್ಣೆ ಕೊಟ್ಟೆ ಎಂದು ರಾಜ್ಯದ ಜನತೆಯ ಮೇಲೆ ಮಂಕು ಬೂದಿ ಎರಚುತ್ತಾ ಎಲ್ಲರನ್ನೂ ಸಾಲದ ಸುಳಿಗೆ ದೂಡಿಬಿಟ್ಟರು. ವಿತ್ತೀಯ ಶಿಸ್ತನ್ನೇ ಹದೆಗೆಡಿಸಿದರು ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆಂಬ ಮಜಾವಾದಿ ರಾಜಕಾರಣಿಗಳ ಪಟ್ಟಿಯಲ್ಲಿ ಮೊದಲ ಶ್ರೇಣಿಯಲ್ಲಿ ನಿಲ್ಲುವವರು ಸಿದ್ದರಾಮಯ್ಯ.ತಾವು ಮುಖ್ಯಮಂತ್ರಿಯಾಗಿದ್ದಾಗ ಕೇವಲ 4 ವರ್ಷದ ಅವಧಿಯಲ್ಲಿ ಸಾಲ ಎತ್ತುವಳಿಯನ್ನು 4 ಲಕ್ಷ ಕೋಟಿಗೆ ತಲುಪಿಸಿದ್ದೇ ಸಿದ್ದರಾಮಯ್ಯ ಸಾಧನೆ ಎಂದು ಬಿಜೆಪಿ ಹೇಳಿದೆ.
ಅಧಿಕಾರಾವಧಿಯ ಕೊನೆಯಲ್ಲಿ “ಮುಖ್ಯಮಂತ್ರಿ 1 ಲಕ್ಷ ಮನೆ” ಯೋಜನೆಯನ್ನು ಬೆಂಗಳೂರು ನಗರದ ಬಡವರಿಗೆ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಆದರೆ ಬಜೆಟ್‌ನಲ್ಲಿ ಸೂಕ್ತ ಅನುದಾನ ಕಾಯ್ದಿರಿಸಲಿಲ್ಲ. ಮನೆಕಟ್ಟುವುದಕ್ಕೆ ಆಯ್ದುಕೊಂಡ ಜಾಗವೇ ವಿವಾದಗ್ರಸ್ಥವಾಗಿತ್ತು. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯಗೆ ಪಿಎಚ್‌ಡಿ ನೀಡಬಹುದು ಎಂದಿರುವ ಬಿಜೆಪಿ ಸಿದ್ದರಾಮಯ್ಯ ಅವರನ್ನು ಬುರುಡೆರಾಮಯ್ಯ ಎಂದು ಸಂಭೋದಿಸಿ ಸರಣಿ ಟ್ವೀಟ್ ಮಾಡುತ್ತಿದೆ.