ಪ್ರಸ್ತುತ ಶೈಕ್ಷಣಿಕ ವರ್ಷ 2021-2022 ರಿಂದ ಜಾರಿಗೆ ಬರುವಂತೆ ರಾಷ್ಟ್ರೀಯ ಶಿಕ್ಷಣ ನೀತಿ -2020 ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಶನಿವಾರ ಆದೇಶ ಹೊರಡಿಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಡಾ ಸಿ.ಎನ್.ಅಶ್ವತ್ಥ್ ನಾರಾಯಣ ಅವರನ್ನು ಉನ್ನತ ಶಿಕ್ಷಣ ಸಚಿವರಾಗಿ ಘೋಷಿಸಿದ ಬೆನ್ನಲ್ಲೇ ಸಚಿವರು ಉನ್ನತ ಶಿಕ್ಷಣ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಈ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಕರ್ನಾಟಕವು NEP-2020ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಈ ನೀತಿಯನ್ನು ಮಾರ್ಗಸೂಚಿಯಂತೆ ಅನುಷ್ಠಾನ ಮಾಡಲಾಗುವುದು ಎಂದು ಅವರು ಸಚಿವರು ತಿಳಿಸಿದ್ದಾರೆ.
ಬಿಎ ಅಥವಾ ಬಿಎಸ್ಸಿ ಪದವಿ ಕೋರ್ಸ್ಗಳಿಗೆ ಸೇರುವ ವಿದ್ಯಾರ್ಥಿಗಳು ಆಯಾ ಕಾಲೇಜಿನಲ್ಲಿ ಲಭ್ಯವಿರುವ ಎರಡು ವಿಷಯಗಳನ್ನು (Discipline Core) ಆಯ್ಕೆ ಮಾಡಿಕೊಳ್ಳಬೇಕು. ಕೋರ್ಸ್ನ ಮೂರನೇ ವರ್ಷದ ಆರಂಭದಲ್ಲಿ, ಒಂದು ವಿಷಯವನ್ನು ಮೇಜರ್ ಆಗಿ ಮತ್ತು ಇನ್ನೊಂದು ವಿಷಯವನ್ನು ಮೈನರ್ ಆಗಿ ಆಯ್ಕೆ ಮಾಡಬಹುದಾಗಿದೆ. ಅಥವಾ ಎರಡನ್ನೂ ಪ್ರಮುಖ ವಿಷಯಗಳಾಗಿ ಆಯ್ಕೆ ಮಾಡುವ ಮೂಲಕ ಅವರು ಅಧ್ಯಯನ ಮಾಡಬಹುದು ಎಂದು ಎನ್ಇಪಿ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಎರಡು ವಿಷಯಗಳನ್ನು ಆಯ್ಕೆ ಮಾಡುವುದರ ಜೊತೆಗೆ, ವಿದ್ಯಾರ್ಥಿಗಳು ಕನ್ನಡ ಮತ್ತು ಇತರೆ ಭಾಷಿಕ ವಿಷಯವನ್ನು ಕೋರ್ ಸಬ್ಜೆಕ್ಟ್ ಅಗಿ ಅಯ್ಕೆ ಮಾಡಿಕೊಳ್ಳಬಹುದಾಗಿದೆ. ಇದಲ್ಲದೆ ವಿದ್ಯಾರ್ಥಿಗಳು Open Electives ಮತ್ತು Discipline Electives ಮಾದರಿಯಲ್ಲಿ ಪಠ್ಯಕ್ರಮ ಅಯ್ದುಕೊಳ್ಳಬೇಕಿದೆ. ಪಿಯುಸಿ ಹಾಗೂ 10+2 (CBSE & ICSE) ಹಂತದಲ್ಲಿ ಕನ್ನಡವನ್ನು ಕಲಿಯದವರಿಗೆ ಅಥವಾ ಮಾತೃಭಾಷೆ ಕನ್ನಡವಲ್ಲದವರಿಗೆ ಪ್ರತ್ಯೇಕ ಕನ್ನಡ ಪಠ್ಯಕ್ರಮವನ್ನು ಸಿದ್ಧಪಡಿಸಲು ಈ ಮೂಲಕ ಸಚಿವ ಅಶ್ವತ್ಥ್ ನಾರಾಯಣ್ ನಿರ್ದೇಶಿಸಿದ್ದಾರೆ.
B com, BCA, BBA, BVA, BPA ಮೊದಲಾದ ವಿಷಯಾಧಾರಿತ ಪದವಿ ಕೋರ್ಸ್ಗಳಿಗೆ Discipline Core ವಿಷಯಗಳನ್ನು ಆಯ್ಕೆ ಮಾಡುವುದು ಅನಿವಾರ್ಯವಲ್ಲ. ಮೊದಲ ವರ್ಷದ ಬಳಿಕ ಕಾಲೇಜು ಮೊಟಕುಗೊಳಿಸಿದ ವಿಧ್ಯಾರ್ಥಿ, ವಿಧ್ಯಾರ್ಥಿನಿಯರಿಗೆ ರಾಷ್ಟ್ರೀಯ ಕೌಶಲ್ಯ ಅರ್ಹತೆ, ನೀತಿ 5ರ ಪ್ರಕಾರ ಮತ್ತು ಎರಡನೇ ವರ್ಷ ಮುಗಿಸಿ ಮೊಟಕುಗೊಳಿಸಿದ ವಿಧ್ಯಾರ್ಥಿ, ವಿಧ್ಯಾರ್ಥಿನಿಯರಿಗೆ ರಾಷ್ಟ್ರೀಯ ಕೌಶಲ್ಯ ಅರ್ಹತೆ, ನೀತಿ 6ರ ಪ್ರಕಾರ ಹಾಗೂ 3ನೇ ವರ್ಷದ ಪದವಿಯನ್ನು ಪೂರ್ಣಗೊಳಿಸಿದ ನಂತರ ಯಾವುದಾದರು ಕಾರಣಕ್ಕೆ ವಿದ್ಯಾರ್ಥಿಯು ಓದನ್ನು ನಿಲ್ಲಿಸಿದರೆ ರಾಷ್ಟ್ರೀಯ ಕೌಶಲ್ಯ ಅರ್ಹತೆ, ನೀತಿ 7ರ ಅಡಿಯಲ್ಲಿ ಡಿಪ್ಲೊಮಾ ಪ್ರಮಾಣಪತ್ರವನ್ನು ಈ ನೀತಿಯ ಪ್ರಕಾರ ನೀಡಬಹುದಾಗಿದೆ. ಇದರ ಜೊತೆಗೆ ಕೋರ್ಸ್ನ 4 ನೇ ವರ್ಷದಲ್ಲಿ ರಾಷ್ಟ್ರೀಯ ಕೌಶಲ್ಯ ಅರ್ಹತೆ, ನೀತಿ 8ರ ಅಡಿಯಲ್ಲಿ ವಿದ್ಯಾರ್ಥಿಯು ಹಿಂದಿನ ವರ್ಷಗಳಲ್ಲಿ ಅಧ್ಯಯನ ಮಾಡಿದ ಕಾಲೇಜಿನಲ್ಲಿ ಆಯ್ದ ಐಚ್ಛಿಕ ವಿಷಯಗಳ ಜೊತೆಗೆ ಅಧ್ಯಯನವನ್ನು ಮಾಡಿ ಗೌರವ ಪದವಿ ಪಡೆಯಲು ಮುಂದುವರಿಸಬಹುದು. ಮತ್ತು ಸಂಶೋಧನಾ ಕೋರ್ಸ್ನ ಭಾಗವಾಗಿದ್ದರೆ ಅಂತಹ ವಿದ್ಯಾರ್ಥಿಗಳು ನೇರವಾಗಿ ಪಿಎಚ್ಡಿ ಅಧ್ಯಯನಕ್ಕೆ ಈ ಹೊಸ ನೀತಿಯ ಪ್ರಕಾರ ಅರ್ಹರಾಗಲಿದ್ದಾರೆ.
ವಿದ್ಯಾರ್ಥಿಯು ಹಿಂದಿನ ವರ್ಷಗಳಲ್ಲಿ ಅಧ್ಯಯನ ಮಾಡಿದ ಕಾಲೇಜಿನಲ್ಲಿ ಗೌರವ ಪದವಿ ಇಲ್ಲದಿದ್ದರೆ ಪದವಿ ಲಭ್ಯವಿರುವ ಬೇರೆ ಯಾವುದಾದರು ಕಾಲೇಜಿಗೆ ಸೇರುವ ಮೂಲಕ ವಿದ್ಯಾರ್ಥಿ ಅಧ್ಯಯನವನ್ನು ಮುಂದುವರಿಸಬಹುದು. ಕಾಲೇಜುಗಳು ಗೌರವ ಪದವಿ ಹೊಂದಿರುವುದು ಕಡ್ಡಾಯವಲ್ಲ. ಅಧಿಕೃತ ಆನ್ಲೈನ್ ಕೋರ್ಸ್ಗಳ ಮೂಲಕ ವಿದ್ಯಾರ್ಥಿಗಳು ಗರಿಷ್ಠ 40% ನಿರೀಕ್ಷಿತ ಕ್ರೆಡಿಟ್ಗಳನ್ನು ಪಡೆಯಬಹುದು. ಆಯಾ ವಿಶ್ವವಿದ್ಯಾನಿಲಯದಿಂದ ಕನಿಷ್ಠ 50% ಕ್ರೆಡಿಟ್ಗಳನ್ನು ಪಡೆಯುವ ಮೂಲಕ ವಿದ್ಯಾರ್ಥಿಯು ತನ್ನ ಆಯ್ಕೆಯ ವಿಶ್ವವಿದ್ಯಾಲಯದಿಂದ ಪದವಿ ಪಡೆಯಬಹುದು ಎಂದು NEP ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಅರ್ಹ ಕಾಲೇಜುಗಳು ಮೂರು ವರ್ಷಗಳ ಪದವಿ ಮತ್ತು ನಾಲ್ಕು ವರ್ಷಗಳ ಗೌರವ ಪದವಿಗಳ ಜೊತೆಗೆ ಐದು ವರ್ಷಗಳ ಸಮಗ್ರ ಕೋರ್ಸ್ಗಳನ್ನು ಹೊಂದಬಹುದು. ಮೂರು ವರ್ಷದ ಪದವಿಯ ನಂತರ ಯಾವುದೇ ವಿದ್ಯಾರ್ಥಿ ಓದನ್ನು ನಿಲ್ಲಿಸಿದರೆ, ಅಂಥಾ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಈ ಹೊಸ ನೀತಿಯ ಮೂಲಕ ನಾಲ್ಕು ವರ್ಷಗಳ ನಂತರವೂ ಗೌರವ ಪದವಿಯನ್ನು ಪಡೆಯಬಹುದಾಗಿದೆ. ಇದಕ್ಕೆ ಕೆಲವೊಂದು ನೀತಿ ನಿಯಮಗಳನ್ನೂ ಎನ್ಇಪಿ ಅಳವಡಿಸಿಕೊಂಡಿದೆ.
ಸ್ನಾತಕೋತ್ತರ ಪದವಿ (ಪಿಜಿ) ಒಂದು ವರ್ಷ ಅಥವಾ ಎರಡು ವರ್ಷ ಇರುತ್ತದೆ. ಗೌರವ ಪದವಿ ಪಡೆದವರು ಒಂದು ವರ್ಷದ ಪಿಜಿ ಅಧ್ಯಯನ ಮಾಡಲು ಅರ್ಹರಾಗಿರುತ್ತಾರೆ. ಮತ್ತು 3 ವರ್ಷಗಳ ಪದವಿ ಅಧ್ಯಯನ ಮಾಡಿದವರು ಎರಡು ವರ್ಷದ ಪಿಜಿಗೆ ಸೇರಲು ಅರ್ಹರಾಗಿರುತ್ತಾರೆ. ಪಿಜಿಯ 2 ನೇ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಯು ಮೊದಲ ವರ್ಷಕ್ಕೆ ನಿಗದಿತ ಕ್ರೆಡಿಟ್ಗಳನ್ನು ಪಡೆದ ನಂತರ ಓದನ್ನು ಸ್ಥಗಿತಗೊಳಿಸಿದರೆ, ವಿದ್ಯಾರ್ಥಿ/ವಿದ್ಯಾರ್ಥಿನಿಗೆ ಸ್ನಾತಕೋತ್ತರ ಡಿಪ್ಲೊಮಾ ಪ್ರಮಾಣಪತ್ರ ಪಡೆದುಕೊಳ್ಳಬಹುದಾಗಿದೆ.
- ಮೂಲ: The News Minute
- ಅನು: ಮಂಜುನಾಥ ಬಿ