ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಸೆ.29ರಂದು ನಡೆಯಲಿರುವ ಕರ್ನಾಟಕ ಬಂದ್‌ಗೆ ಮೈಸೂರಿನಲ್ಲೂವ್ಯಾಪಕ ಬೆಂಬಲ ವ್ಯಕ್ತವಾಗಿದೆ. ದೇವರಾಜ ಅರಸು ರಸ್ತೆಯಲ್ಲಿರುವ ಪ್ರತಿಯೊಂದು ಅಂಗಡಿ, ರಸ್ತೆ ಬದಿ ವ್ಯಾಪಾರಿಗಳು ಮತ್ತು ಪಾದಚಾರಿಗಳಿಗೆ ಗುರುವಾರ ಗುಲಾಬಿ ಹೂ ನೀಡಿ ವಿಷ್ಣು ಸೇನಾ ಸಮಿತಿ ವತಿಯಿಂದ ಶುಕ್ರವಾರದ ಬಂದ್ ಬೆಂಬಲಿಸುವಂತೆ ಮನವಿ ಮಾಡಲಾಯಿತು.
ರೈತ ಸಂಘ, ವಿವಿಧ ಕನ್ನಡಪರ ಸಂಘಟನೆಗಳು, ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಸ್ಥೆ, ಮೈಸೂರು ಸಂಘ-ಸಂಸ್ಥೆಗಳ ಒಕ್ಕೂಟ, ಹೋಟೆಲ್ ಮಾಲೀಕರ ಸಂಘ ಬಂದ್‌ಗೆ ಬೆಂಬಲ ಸೂಚಿಸಿವೆ. ಇದಲ್ಲದೆ, ಕಾವೇರಿ ಕ್ರಿಯಾ ಸಮಿತಿ, ಮೈಸೂರು ಟಾಂಗಾವಾಲಗಳ ಸಂಘ, ಹಿಂದುಸ್ಥಾನ ಜನತಾ ಪಾರ್ಟಿ, ಜಯಕರ್ನಾಟಕ, ಕರ್ನಾಟಕ ರಾಜ್ಯ ರೈತ ಸಂಘ, ಖಾಸಗಿ ಬಸ್ ಮಾಲೀಕ ಮತ್ತು ಚಾಲಕರ ಸಂಘ, ಕರ್ನಾಟಕ ತಮಿಳು ಸಂಘಟನೆಗಳ ಒಕ್ಕೂಟ, ವಾಣಿಯರ್ ಸಂಘಂ (ತಮಿಳು ಗಾಣಿಗರು) ಸಂಘಟನೆ ಸೇರಿದಂತೆ ವಿದ್ಯಾರ್ಥಿ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು ಬೆಂಬಲ ಸೂಚಿಸಿವೆ.