
- ವಾರ್ಷಿಕ ಕ್ರಿಯಾ ವರದಿ, ಇಂಧನ ಉಳಿತಾಯ ವರದಿ ತಯಾರಿಕೆಯ ಸಮಾಲೋಚನೆಗೆ ಎರಡನೇ ಕಾರ್ಯಾಗಾರ
ಅವಧಿಗೂ ಮೊದಲೇ ‘ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆ ನೀತಿ 2022-27’ ಅನುಷ್ಠಾನದ ಗುರಿ ಸಾಧಿಸುವ ಮೂಲಕ ಕರ್ನಾಟಕ ಮಹತ್ವದ ಮೈಲಿಗಲ್ಲು ಸಾಧಿಸಿದೆ.
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (ಕ್ರೆಡಲ್), ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ಹಾಗೂ ವರ್ಲ್ಡ್ ರಿಸೋರ್ಸ್ ಇನ್ಸ್ಟಿಟ್ಯೂಟ್ (ಡಬ್ಲ್ಯೂಆರ್‌ಐ) ಇಂಡಿಯಾ ಸಹಯೋಗದಲ್ಲಿ ಪಾಲುದಾರ ಸಂಸ್ಥೆಗಳಿಗಾಗಿ ಮಂಗಳವಾರ ಆಯೋಜಿಸಿದ್ದ “ಇಂಧನ ಸಂರಕ್ಷಣೆ ಹಾಗೂ ಇಂಧನ ದಕ್ಷತೆ ನೀತಿ-2022-27” ಅನುಷ್ಠಾನ ಕುರಿತ ಎರಡನೇ ಕಾರ್ಯಾಗಾರವನ್ನು ಉದ್ಘಾಟಿಸಿ ಮತನಾಡಿದ ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಈ ವಿಷಯ ತಿಳಿಸಿದರು.

“ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆಯ 744 ಮಿಲಿಯನ್ ಕಿ.ವ್ಯಾ. ಯೂನಿಟ್ ಉಳಿತಾಯದ ಗುರಿಯನ್ನು ಮೀರಿ 800 ಕ್ಕೂ ಹೆಚ್ಚು ಮಿಲಿಯನ್ ಯೂನಿಟ್ ಉಳಿತಾಯದ ಸಾಧನೆ ಮಾಡಲಾಗಿದೆ. ವಲಯಾವಾರು ಗುರಿ ನಿಗದಿಪಡಿಸುವ ಮೂಲಕ ಇಂಧನ ಉಳಿತಾಯ ಹಾಗೂ ದಕ್ಷತೆಯ ಗುರಿ ಸಾಧಿಸಲಾಗಿದೆ. ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆ ನೀತಿಯ ಅನುಷ್ಠಾನಕ್ಕೆ ನೋಡಲ್ ಏಜೆನ್ಸಿಯಾಗಿರುವ ಕ್ರೆಡಲ್ ಸಂಬಂಧಪಟ್ಟ ಎಲ್ಲ ಇಲಾಖೆ ಹಾಗೂ ಇಂಧನ ವಲಯದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವ ವಿಶ್ವಾಸ ಇದೆ,” ಎಂದು ಅವರು ಹೇಳಿದರು.
“ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಸಮರ್ಥ ನಾಯಕತ್ವದಲ್ಲಿ ಇಂಧನ ಉಳಿತಾಯ ಮತ್ತು ಇಂಧನ ದಕ್ಷತೆಯ ನೀತಿ ರೂಪಿಸಿ, ಅನುಷ್ಠಾನದಲ್ಲಿ ಕರ್ನಾಟಕ ಮಹತ್ವದ ಸಾಧನೆ ಮಾಡಿದೆ. ಶುದ್ಧ ಇಂಧನ ಉತ್ಪಾದನೆ ಹಾಗೂ ನವೀನ ಇಂಧನ ಸಂಪನ್ಮೂಲಗಳ ಅಭಿವೃದ್ಧಿಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ವಾರ್ಷಿಕ ಕ್ರಿಯಾ ಯೋಜನೆ ಮತ್ತು ಇಂಧನ ಉಳಿತಾಯ ವರದಿ ತಯಾರಿಕೆ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಡಬ್ಲ್ಯೂಆರ್‌ಐ ಇಂಡಿಯಾ ಚಿಂತಕರ ಚಾವಡಿಯಾಗಿ ಕಾರ್ಯನಿರ್ವಸುತ್ತಿದೆ”, ಎಂದರು.

ಇಂಧನ ಉಳಿತಾಯ ಹಾಗೂ ಇಂಧನ ದಕ್ಷತೆಯ ಜಾಗತಿಕ ಮಾನದಂಡಗಳ ಕುರಿತು ಮಾತನಾಡಿದ ಇನ್ಫೋಸಿಸ್ ಸಹಾಯಕ ಉಪಾಧ್ಯಕ್ಷ ಗುರುಪ್ರಕಾಶ್ ಶಾಸ್ತ್ರಿ , ಸುಸ್ಥಿರ ಕಟ್ಟಡ ವಿನ್ಯಾಸ ಹಾಗೂ ವಿದ್ಯುತ್ ದಕ್ಷತೆಯಲ್ಲಿ ಅಳವಡಿಸಿಕೊಂಡಿರುವ ಕ್ರಮಗಳು ಹಾಗೂ ‘ನೆಟ್ ಜೀರೋ’ ಗುರಿಗಳನ್ನು ವಿವರಿಸಿದರು.
ಇಂಧನ ಉಳಿತಾಯ ಹಾಗೂ ದಕ್ಷತೆ ಅನುಷ್ಠಾನದ ಕಾರ್ಯಗಾರದಲ್ಲಿ ಭಾಗಿಯಾಗಿದ್ದ 28 ಎಸ್‌ಆರ್‌ಓಗಳು ಪ್ರತಿನಿಧಿಗಳನ್ನೊಳಗೊಂಡ ತಂಡಗಳೊಂದಿಗೆ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಇಂಧನ ಸಂರಕ್ಷಣೆಯ ವರದಿ ತಯಾರಿಕೆಯ ಕುರಿತು ಡಬ್ಲ್ಯೂಆರ್‌ಐ ನೇತೃತ್ವದಲ್ಲಿ ಚರ್ಚೆ ನಡೆಯಿತು.
ಕ್ರೆಡಲ್ ಡಿಜಿಎಂ (ತಾಂತ್ರಿಕ) ಸಿ.ಕೆ.ಶ್ರೀನಾಥ್, ಕ್ರೆಡಲ್ ಇಸಿ ಮತ್ತು ಇಇ ವಿಭಾಗದ ಎಜಿಎಂ ಲಲಿತಾ, ಡಬ್ಲ್ಯೂ ಆರ್ ಐ ಇಂಡಿಯಾ ಎನರ್ಜಿ ವಿಭಾಗದ ಉಪ ನಿರ್ದೇಶಕ ದೀಪಕ್ ಕೃಷ್ಣನ್, ಡಬ್ಲ್ಯೂ ಆರ್ ಐ ಇಂಡಿಯಾದ ಸುಮೇದಾ ಮಾಳವಿಯಾ, ಇನ್ಫೋಸಿಸ್ ಸಹಾಯಕ ಉಪಾಧ್ಯಕ್ಷ ಗುರುಪ್ರಕಾಶ್ ಶಾಸ್ತ್ರಿ ಉಪಸ್ಥಿತರಿದ್ದರು.