ಕಳೆದ ವರ್ಷ ಪರೀಕ್ಷೆಯೇ ಇಲ್ಲದೆ ಪಿಯುಸಿ ವಿದ್ಯಾರ್ಥಿಗಳು ಪಾಸ್ ಆಗೋದ್ರು. ಇದೇ ಥರ ಈ ವರ್ಷಾನೂ ಎಕ್ಸಾಂ ಇರುವುದಿಲ್ಲ ಅಂತ ಒಂದಿಷ್ಟು ವಿದ್ಯಾರ್ಥಿಗಳು ಸಂಭ್ರಮಿಸುತ್ತಿದ್ರು. ಆದರೆ, ಈ ವರ್ಷ ಕೊರೊನಾನೂ ಇಲ್ಲ, ಓಮಿಕ್ರಾನೂ ಇಲ್ಲದ ಕಾರಣ SSLC ಪರೀಕ್ಷೆ ಮಾದರಿಯಲ್ಲೇ ದ್ವಿತೀಯ ಪಿಯು ಪರೀಕ್ಷೆಯೂ ನಡೆಯಲಿದೆ. ಇದರ ಜೊತೆಗೆ ಸಮವಸ್ತ್ರ ಪಾಲನೆಯೂ ಕಡ್ಡಾಯವಾಗಿರಲಿದೆ.
ಇದೇ ತಿಂಗಳ 22ರಿಂದ ಮೇ 18ರವರೆಗೂ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸಲಾಗುತ್ತೆ. 1,076 ಕೇಂದ್ರಗಳಲ್ಲಿ ಒಟ್ಟೂ 6,84,463 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಸಂದರ್ಭದಲ್ಲಿ ಯಾವುದೇ ಏರುಪೇರು ಉಂಟಾಗದಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಕೂಡ ಈಗಾಗಲೇ ಸಿದ್ದತೆ ನಡೆಸಿದೆ. ಏ.13ರಂದು ಪರೀಕ್ಷೆ ಸಂಬಂಧ ಜಿಲ್ಲಾಮಟ್ಟದ ಮೀಟಿಂಗ್ ಅನ್ನು ಶಿಕ್ಷಣ ಸಚಿವ ಬಿಸಿ ನಾಗೇಶ್ ನಡೆಸಲಿದ್ದಾರೆ. ಪರೀಕ್ಷೆಗೆ ಹಾಜರಾಗ್ತಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮವಸ್ತ್ರ ನಿಯಮವನ್ನು ಪಾಲಿಸಬೇಕು ಅಂತ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ. ರಾಜ್ಯದಲ್ಲಿ ಕಳೆದ ಕೆಲ ತಿಂಗಳ ಹಿಂದೆ ಕೇಸರಿ ಶಾಲು, ಹಿಜಾಬ್ ಕುರಿತಾಗಿ ವಿವಾದ ಸೃಷ್ಟಿಯಾಗಿ ಈ ಪ್ರಕರಣ ಕೋರ್ಟ್ ಮೆಟ್ಟಿಲನ್ನೂ ಏರಿತ್ತು. ತರಗತಿಗಳಲ್ಲಿ ಧಾರ್ಮಿಕ ವಸ್ತ್ರಗಳ ಧಾರಣೆ ಕಡ್ಡಾಯವಲ್ಲ ಎಂಬ ಅಭಿಪ್ರಾಯವನ್ನೂ ಹೈಕೋರ್ಟ್ ತಿಳಿಸಿತ್ತು. ಇದರ ಮಧ್ಯದಲ್ಲೇ ಸಮವಸ್ತ್ರದ ವಿಚಾರವಾಗಿ ಯಾವುದೇ ಕಿರಿಕಿರಿಯಿಲ್ಲದೇ SSLC ಪರೀಕ್ಷೆಯನ್ನೂ ಇಲಾಖೆ ನಡೆಸಿತ್ತು.
ಈ ವರ್ಷದ ಪರೀಕ್ಷಾ ವೇಳಾಪಟ್ಟಿ ನಾನಾ ಕಾರಣಗಳಿಂದ ಹಲವಾರು ಬಾರಿ ಬದಲಾವಣೆ ಕಂಡಿತ್ತು. ಆದರೆ ಕೆಲ ದಿನಗಳ ಹಿಂದಷ್ಟೇ ಅಂತಿಮ ವೇಳಾಪಟ್ಟಿ ಪ್ರಕಟಗೊಂಡಿದ್ದು ಅದರ ಮಾಹಿತಿ ಹೀಗಿದೆ –
ಏ. 22 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಏ. 23 – ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ
ಏ. 25 – ಅರ್ಥಶಾಸ್ತ್ರ
ಏ. 26 – ಮನಶ್ಶಾಸ್ತ್ರ, ರಸಾಯನ ಶಾಸ್ತ್ರ, ಹಿಂದೂಸ್ಥಾನಿ ಸಂಗೀತ
ಏ. 28 – ಕನ್ನಡ
ಮೇ 4 – ಭೂಗೋಳಶಾಸ್ತ್ರ, ಜೀವಶಾಸ್ತ್ರ
ಮೇ 5 – ಮಾಹಿತಿ ತಂತ್ರಜ್ಞಾನ, ರಿಟೈಲ್ ಆಟೋಮೊಬೈಲ್, ಹೆಲ್ತ್ ಕೇರ್ ಬ್ಯೂಟಿ ಅಂಡ್ ವೆಲ್ ನೆಸ್
ಮೇ. 6 – ಇಂಗ್ಲಿಷ್
ಮೇ 10 – ಇತಿಹಾಸ, ಭೌತಶಾಸ್ತ್ರ
ಮೇ 12 – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 14 – ಸಮಾಜಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನ ಶಾಸ್ತ್ರ
ಮೇ 17 – ಐಚ್ಚಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹವಿಜ್ಞಾನ
ಮೇ 18 – ಹಿಂದಿ
ಪಿಯುಸಿ ಪ್ರಾಕ್ಟಿಕಲ್ಸ್ ಅಟೆಂಡ್ ಮಾಡದಿರುವ ವಿದ್ಯಾರ್ಥಿಗಳೂ ಕೂಡ ಪರೀಕ್ಷೆಯನ್ನು ಬರೆಯಬಹುದಾಗಿತ್ತು. ಉತ್ತೀರ್ಣರಾಗಲು ಪೇಪರ್ನಲ್ಲೇ ಮಿನಿಮಂ 35 ಪಡೆಯಬೇಕು ಎಂದು ತಿಳಿದುಬಂದಿದೆ. ಅದೇನೇ ಇರಲಿ, SSLC ಪರೀಕ್ಷೆ ಸಂದರ್ಭದಲ್ಲಿ ಯಾವುದೇ ಕಿರಿಕಿರಿಯಿಲ್ಲದೇ ನಡೆದ ಪರೀಕ್ಷೆಯಂತೆಯೂ ಪಿಯುಸಿ ಪರೀಕ್ಷೆಗಳೂ ನಡೆಯಬೇಕು ಅನ್ನೋದು ಪೋಷಕರು ಆಶಯ. ಕಳೆದ ವರ್ಷದ ಪಿಯು ಪರೀಕ್ಷೆ ನಡೆಸದೇ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಸರ್ಕಾರ ಆದೇಶಿಸಿತ್ತು. ಈ ಹಿನ್ನೆಲೆ SSLC, 1st PUC ಹಾಗು 2nd PUC Internals ಆಧರಿಸಿ ಪಾಸ್ ಮಾಡಲಾಗಿತ್ತು. ಆದರೆ ಈ ಬಾರಿ ಇಂತಹ ಯಾವುದೇ ಲೆಕ್ಕಾಚಾರಕ್ಕೂ ಅವಕಾಶ ಇಲ್ಲ ಅನ್ನೋದನ್ನ ಮತ್ತೊಮ್ಮೆ ಮನದಟ್ಟು ಮಾಡಿಕೊಳ್ಳಬೇಕು.