ವಿದ್ಯಾರ್ಥಿ ದೆಸೆಯಲ್ಲೇ ಜನಪರವಾದ, ರೈತಪರವಾದ ಹೋರಾಟದ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಬಸವರಾಜ ಬೊಮ್ಮಾಯಿಯವರು ಜನರ ನಡುವಿನಿಂದಲೇ ಬಂದ, ಜನಪರ ರಾಜಕಾರಣಿ. ಧಾರವಾಡದಿಂದ ನರಗುಂದದವರೆಗೆ ನಡೆದ ಪಾದಯಾತ್ರೆಯ ನೇತೃತ್ವ ವಹಿಸಿ ರೈತರ ಪರವಾದ ಚಳವಳಿಯನ್ನು ಕಟ್ಟಿದವರಲ್ಲಿ ಬೊಮ್ಮಾಯಿಯವರು ಪ್ರಮುಖರು. ಇಂಥ ಒಬ್ಬ ಚಳವಳಿಗಾರ ನಾಡಿನ ಮುಖ್ಯಮಂತ್ರಿ ಹುದ್ದೆಗೆ ಏರಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಕರ್ನಾಟಕ ರಕ್ಷಣಾ ವೇದಿಕೆ ಹಾರ್ದಿಕವಾಗಿ ಅಭಿನಂದಿಸುತ್ತದೆ ಎಂದಿದೆ.
ಬಸವರಾಜ ಬೊಮ್ಮಾಯಿಯವರ ತಂದೆ ಎಸ್.ಆರ್.ಬೊಮ್ಮಾಯಿಯವರು ಸಹ ಕರ್ನಾಟಕ ರಾಜಕಾರಣದಲ್ಲಿ ಎಂದೂ ಮರೆಯಲಾಗದ ವ್ಯಕ್ತಿತ್ವವನ್ನು ಹೊಂದಿದವರು. ಜನತಾ ಪರಿವಾರವನ್ನು ಕಟ್ಟಿಬೆಳೆಸುವುದರಲ್ಲಿ ಅವರ ಪಾತ್ರ ದೊಡ್ಡದು. ಎಸ್.ಆರ್.ಬೊಮ್ಮಾಯಿಯವರು ಕರ್ನಾಟಕ ಏಕೀಕರಣದ ಹೋರಾಟದಲ್ಲಿ ತೊಡಗಿಕೊಂಡವರು, ಚಲೇಜಾವ್ ಚಳವಳಿಯಲ್ಲಿ ಪಾಲ್ಗೊಂಡವರು, ತುರ್ತುಪರಿಸ್ಥಿತಿ ವಿರುದ್ಧ ಹೋರಾಡಿದವರು. ಅಪಾರವಾದ ಕನ್ನಡದ ಕಳಕಳಿ ಹೊಂದಿದ್ದವರು. ತಂದೆಯ ಸದ್ಗುಣಗಳೆಲ್ಲ ಬಸವರಾಜ ಬೊಮ್ಮಾಯಿಯವರಿಗೂ ಇದ್ದು, ಅವರು ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ನಿರ್ವಹಿಸುವರೆಂಬ ನಿರೀಕ್ಷೆ ನಮ್ಮದು ಎಂದಿದ್ದಾರೆ.
ಬಸವರಾಜ ಬೊಮ್ಮಾಯಿಯವರು ಈ ಹಿಂದಿನ ಸರ್ಕಾರಗಳಲ್ಲಿ ಹಲವಾರು ಇಲಾಖೆಯ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ವಿಶೇಷವಾಗಿ ಜಲಸಂಪನ್ಮೂಲ ಇಲಾಖೆಯ ಸಚಿವರಾಗಿ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ಸ್ಪಷ್ಟ ಮಾಹಿತಿ ಹೊಂದಿದ್ದಾರೆ. ಹೀಗಾಗಿ ಅವರ ನೇತೃತ್ವದ ಸರ್ಕಾರ ನೆನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗುತ್ತದೆ ಎಂಬ ನಂಬುಗೆ ನಮ್ಮದು ಎಂದಿದ್ದಾರೆ.

*ದೇಶದ ಜಿಎಸ್ ಟಿ ಕೌನ್ಸಿಲ್ ಸಭೆಗಳಲ್ಲಿ ಬಸವರಾಜ ಬೊಮ್ಮಾಯಿಯವರು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರು. ಹೀಗಾಗಿ ಜಿಎಸ್ ಟಿ ಹಂಚಿಕೆ, ಬಾಕಿ ಪಾವತಿಯಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯಗಳ ಕುರಿತು ಅವರಿಗೆ ಸ್ಪಷ್ಟವಾದ ಮಾಹಿತಿ ಇದೆ. ತಮ್ಮ ಪಕ್ಷದ ಕೇಂದ್ರ ನಾಯಕತ್ವಕ್ಕೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು, ಕರ್ನಾಟಕಕ್ಕೆ ಬರಬೇಕಾದ ಜಿಎಸ್ ಟಿ ಬಾಕಿ ಮತ್ತು ಇತರ ಯೋಜನೆಗಳಿಗೆ ಅನುದಾನವನ್ನು ತಂದು ರಾಜ್ಯವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಹೊಣೆಗಾರಿಕೆಯೂ ನೂತನ ಮುಖ್ಯಮಂತ್ರಿಗಳಿದೆ ಎಂದಿದ್ದಾರೆ.
ಬಸವರಾಜ ಬೊಮ್ಮಾಯಿಯವರು ಉತ್ತರ ಕರ್ನಾಟಕ ಭಾಗವನ್ನು ಪ್ರತಿನಿಧಿಸುತ್ತಾರೆ. ಹೀಗಾಗಿ ಉತ್ತರ ಕರ್ನಾಟಕದ ಜಿಲ್ಲೆಗಳ ಸಮಸ್ಯೆಗಳ ಕುರಿತು ಅವರಿಗೆ ಅರಿವಿದೆ. ಡಾ.ಡಿ.ಎಂ.ನಂಜುಂಡಪ್ಪ ವರದಿಯ ಸಮರ್ಪಕ ಅನುಷ್ಠಾನವೂ ಸೇರಿದಂತೆ, ಆ ಭಾಗದ ಎಲ್ಲ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವರೆಂಬ ಆಶಯ ಕರ್ನಾಟಕ ರಕ್ಷಣಾ ವೇದಿಕೆಯದು ಎಂದಿದ್ದಾರೆ.
ನಾಡು, ನುಡಿ, ಸಂಸ್ಕೃತಿ ಕುರಿತಾಗಿ ಅಪಾರವಾದ ಕಾಳಜಿ ಹೊಂದಿರುವ ಬಸವರಾಜ ಬೊಮ್ಮಾಯಿಯವರು ಕರ್ನಾಟಕಕ್ಕೆ ಸಲ್ಲಬೇಕಾದ ಎಲ್ಲ ಸ್ಥಾನಮಾನ, ಹಕ್ಕುಗಳು, ಯೋಜನೆಗಳ ಅನುಷ್ಠಾನಕ್ಕೆ ತಮ್ಮ ಅವಧಿಯಲ್ಲಿ ಕಾರ್ಯ ನಿರ್ವಹಿಸಲಿ ಎಂದು ಆಶಿಸುತ್ತ ಅವರಿಗೆ ಮತ್ತೊಮ್ಮೆ ವೇದಿಕೆ ಪರವಾಗಿ ಮನದಾಳದ ಶುಭಾಶಯ ಕೋರುತ್ತೇನೆ ಎಂದಿದ್ದಾರೆ.





