ಕನ್ನಡ ಬೋರ್ಡ್ ಹಾಕದ ಕಾರಣಕ್ಕೆ ಕರವೇ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಏರ್ಪೋರ್ಟ್ ರಸ್ತೆಯ ಟೋಲ್ ಬಳಿ ಬೃಹತ್ ಬ್ಯಾನರ್ ಹರಿದು ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಸಾದಹಳ್ಳಿ ಗೇಟ್ ಬಳಿ ಇರೋ ಟೋಲ್ ಬಳಿ ಇಂಗ್ಲಿಷ್ ಭಾಷೆಯ ಪ್ಲೆಕ್ಸ್ಗಳನ್ನ ಹರಿದು ಹಾಕಿದ್ದಾರೆ. ಈ ವೇಳೆ ಪೊಲೀಸರು ಹಾಗು ಕಾರ್ಯಕರ್ತ ನಡುವೆ ವಾಗ್ವಾದ ನಡೆದಿದೆ. ಕರವೇ ಕಾರ್ಯಕರ್ತರ ವರ್ತನೆ ಪೊಲೀಸರ ನಿಯಂತ್ರಣಕ್ಕೆ ಸಿಗದೆ ಕೆಲಕಾಲ ಪೊಲೀಸರು ಪರದಾಡುವಂತಾಗಿದೆ. ಏಕಾಏಕಿ ಸಾವಿರಾರು ಕಾರ್ಯಕರ್ತರ ಜಮಾವಣೆ ಆಗಿದ್ದು, ಕರವೇ ಕಾರ್ಯಕರ್ತರು ಮಾಲ್ ಆಫ್ ಏಷ್ಯಾಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ದಾರೆ.
ಮಾಲ್ ಆಫ್ ಏಷ್ಯಾಗೆ ಪೊಲೀಸರ ಬಿಗಿ ಬಂದೊಬಸ್ತ್ ಮಾಡಿದ್ದು, ಕೊಡಿಗೇಹಳ್ಳಿ ಬಳಿಯ ಮಾಲ್ ಸುತ್ತಲೂ ಹದ್ದಿನ ಕಣ್ಣಿಟ್ಟಿದ್ದಾರೆ. ಭದ್ರತೆಗಾಗ ಕೆಎಸ್ಆರ್ಪಿ ಸೇರಿದಂತೆ 120 ಜನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕರವೇಯಿಂದ ಕನ್ನಡ ಭಾಷೆಯ ನಾಮಫಲಕ ಅಳವಡಿಕೆ ಮಾಡುವಂತೆ ಪ್ರತಿಭಟನೆ ಮಾಡಿದ್ದಾರೆ. ಮಾಲ್ ಆಫ್ ಏಷ್ಯಾಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕುವ ಸಾಧ್ಯತೆಯಿದ್ದು ಫಿನಿಕ್ಸ್ ಮಾಲ್ ಆಫ್ ಏಷ್ಯಾ ಮಾಲ್ ಸಂಪೂರ್ಣ ಕ್ಲೋಸ್ ಮಾಡಲಾಗಿದೆ. ಮಾಲ್ ಒಳಗೆ ಇಂದು ಸಾರ್ವಜನಿಕರ ಪ್ರವೇಶ ನಿಷೇಧ ಮಾಡಲಾಗಿದೆ. ಮಾಲ್ ಒಳಗೆ ಪ್ರವೇಶ ಪಡೆಯುವ ಗೇಟ್ಗಳನ್ನ ಸಂಪೂರ್ಣವಾಗಿ ಬಂದ್ ಮಾಡಿಸಿದೆ ಆಡಳಿತ ಮಂಡಳಿ.
ಟೋಲ್ ಬಳಿ ಬ್ಯಾನರ್ ಹರಿದಿರುವ ಕರವೇ ಕಾರ್ಯಕರ್ತರು. ಇಂಗ್ಲಿಷ್ನಲ್ಲಿ ಹಾಕಿರುವ ನಾಮಫಲಕಗಳಿಗೆ ಕಲ್ಲು ಹೊಡೆದಿದ್ದಾರೆ. ಇಂಗ್ಲೀಷ್ ನಾಮ ಫಲಕ ದ್ವಂಸ ಮಾಡಿದ್ದಾರೆ. ಸಾದಹಳ್ಳಿಯ ಬ್ಲೂಮ್ ಹೋಟೆಲ್ ಬಳಿಯೂ ಇಂಗ್ಲಿಷ್ ನಾಮಫಲಕ ದ್ವಂಸ ಮಾಡಿ, ಲೈಟಿಂಗ್ ಬೋರ್ಡ್ ಹೊಡೆದು ಹಾಕಿದ್ದಾರೆ. ಬೆಂಗಳೂರಿನಿಂದ ಕೆಂಪೇಗೌಡ ಏರ್ಪೋಟ್ಗೆ ತೆರಳುವ ರಾಷ್ಟ್ರೀಯ ಹೆದ್ದಾರಿ ಸಾದಹಳ್ಳಿ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ಪ್ರಯಾಣಿಕರ ಪರದಾಡುವಂತಾಗಿದೆ.
ಮಾಲ್ ಆಪ್ ಏಷ್ಯಾ ಬಳಿ ಕರವೇ ಕಾರ್ಯಕರ್ತರು ಆಗಮಿಸಿದ್ದಾರೆ. ಪೊಲೀಸರನ್ನ ಕಂಡು ನೂರು ಮೀಟರ್ ದೂರದಲ್ಲೇ ವಾಹನ ನಿಲ್ಲಿಸಿದ್ದು, ಕಾಲ್ನಡಿಗೆಯಲ್ಲಿ ಮಾಲ್ ಬಳಿಗೆ ಹೋಗಲು ಯತ್ನಿಸಿದ್ದಾರೆ. ಈ ವೇಳೆ ತಡೆಯಲು ಬಂದ ಪೊಲೀಸರ ಜೊತೆಗೆ ವಾಗ್ವಾದ ಮಾಡಿದ್ದು, ಮುಂದೆ ನಾವು ಹೋಗೇ ಹೋಗ್ತೀವಿ ಎಂದು ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮುಂದೆ ಹೋಗಿ,ನನ್ನ ಅರೆಸ್ಟ್ ಮಾಡಿ ಎಂದು ನಾರಾಯಣ ಗೌಡ ಕೋಪತಾಪ ಪ್ರದರ್ಶನ ಮಾಡಿದ್ದಾರೆ. ಮಾಲ್ ಬಳಿಯಿಂದ ವಾಪಸ್ ಹೋಗುವಂತೆ ಪೊಲೀಸರು ಆಗ್ರಹ ಮಾಡಿದ್ದು, ಹತೋಟಿಗೆ ಬಾರದಿದ್ದಾಗ ನಾರಾಯಣ ಗೌಡ ಸೇರಿದಂತೆ ಎಲ್ಲರನ್ನು ವಶಕ್ಕೆ ಪಡೆಯಲಾಗಿದೆ. ಮಾಲ್ ಬಳಿ ಟಿಟಿ ವಾಹನದಲ್ಲಿ ಕರವೇ ಮಹಿಳಾ ಕಾರ್ಯಕರ್ತರು ಆಗಮಿಸಿದ್ದು, ಟಿಟಿ ವಾಹನ ವಾಪಸ್ ತೆಗೆದುಕೊಂಡು ಹೋಗುವಂತೆ ಪೊಲೀಸರು ಸೂಚನೆ ಕೊಟ್ಟಿದ್ದಾರೆ. ಪೊಲೀಸರ ಸೂಚನೆಗೆ ಬಗ್ಗದೆ ಪೊಲೀಸರ ಜೊತೆಗೆ ಮಹಿಳಾ ಕಾರ್ಯಕರ್ತರು ವಾಗ್ವಾದ ಮಾಡಿದ್ದಾರೆ. ಬಸ್ ಚಕ್ರದ ಗಾಳಿ ಬಿಟ್ಟಿದ್ದಾರೆ ಕಾರ್ಯಕರ್ತರು.

ನಾರಾಯಣ ಗೌಡರನ್ನು ವಶಕ್ಕೆ ಪಡೆದು ಕರೆದೊಯ್ಯುವಾಗ ನಾರಾಯಣಗೌಡರು ಇದ್ದ ಬಸ್ ತಡೆದ ಕರವೇ ಕಾರ್ಯಕರ್ತರು, ಪೊಲೀಸರ ಲಾಠಿ ಕಸಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ಗೆ ಅಡ್ಡವಾಗಿ ರಸ್ತೆಯಲ್ಲಿ ಮಲಗಿದ ಕಾರ್ಯಕರ್ತರು, ಕಲ್ಲು ತೂರಾಟ ನಡೆಸಿದ್ದಾರೆ. ನಾರಾಯಣಗೌಡರನ್ನ ಬಸ್ನಲ್ಲಿ ಕರೆದೊಯ್ಯುವ ವೇಳೆ ಪೊಲೀಸ್ರು ಹರಸಾಹಸ ಮಾಡುವಂತಾಗಿದೆ. ಕನ್ನಡ ಬೋರ್ಡ್ ಹಾಕದಿದ್ದರೆ ವ್ಯಾಪಾರ ವ್ಯವಹಾರ ಮಾಡಲು ಬಿಡುವುದಿಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎನ್ನುವುದು ಕರವೇ ಕಾರ್ಯಕರ್ತರ ನಿಲುವು.