
ಕಣ್ಣೂರು: ಆನ್‌ಲೈನ್ ಹಣ ವಂಚನೆ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ಕೇರಳದ ಕಣ್ಣೂರು ಪೋಲೀಸರು ಕೊಡಗಿನಿಂದ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಬಂಧಿತನನ್ನು ವಿರಾಜಪೇಟೆ ಮೂಲದ 24 ವರ್ಷದ ಆದರ್ಶ್ ಕುಮಾರ್ ಎಂದು ಗುರುತಿಸಲಾಗಿದೆ.ಆರೋಪಿಯು ಕಣ್ಣೂರಿನ ವ್ಯಕ್ತಿಯೊಬ್ಬರಿಗೆ 41 ಲಕ್ಷ ರೂಪಾಯಿ ವಂಚಿಸಿದ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ.

ಆದರ್ಶ್ ಕುಮಾರ್ ತಾನು ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ಮತ್ತು ಫಾರೆಕ್ಸ್ ಟ್ರೇಡಿಂಗ್‌ನಲ್ಲಿ ಕೋಟಿಗಟ್ಟಲೆ ರೂಪಾಯಿ ಹಣ ಹೂಡಿಕೆ ಮಾಡಿದ್ದು ಆನ್‌ಲೈನ್ ಷೇರು ವ್ಯಾಪಾರವನ್ನು ನಿರ್ವಹಿಸಲು ಅಮೆರಿಕಾದ ಚಿಕಾಗೋ ನಗರದಲ್ಲಿ ಸಂಸ್ಥೆಯನ್ನು ಹೊಂದಿದ್ದೇನೆ ಎಂದು ಕೇರಳದ ಪಲ್ಲಿಕ್ಕುನ್ನು ಮೂಲದ ವ್ಯಕ್ತಿಯೊಬ್ಬರಿಗೆ ಮನವರಿಕೆ ಮಾಡಿದ್ದ. ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಫೇಸ್ ಬುಕ್ ನಲ್ಲಿ ಜಾಹೀರಾತು ನೀಡುವ ಮೂಲಕ ಈತನು ದೂರುದಾರರಿಗೆ ಅಮಿಷ ಒಡ್ಡಿದ್ದ. ಮೊದಲಿಗೆ ಈತನ ಮಾತಿಗೆ ಮರುಳಾಗಿ ಷೇರು ಖರೀದಿಸಲು ೫-೧೦ ಸಾವಿರ ರೂಪಾಯಿ ಹಣ ಹೂಡಿಕೆ ಮಾಡಿದ್ದರು.
ಆರೋಪಿಯು ಆವರ ಬಂಡವಾಳಕ್ಕೆ ಆರಂಭಿಕ ಹಂತದಲ್ಲಿ ಹೂಡಿದ ಮೊತ್ತಕ್ಕಿಂತ ದುಪ್ಪಟ್ಟು ಹಣ ನೀಡಿದ್ದ. ಇದರಿಂದ ಆವರು ಆತನ ಮೇಲೆ ನಂಬಿಕೆ ಇರಿಸಿ ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಒಂಭತ್ತು ಲಕ್ಷ ಹಣವನ್ನು ಹೂಡಿಕೆ ಮಾಡಿದರು. ಹೂಡಿಕೆ ಮಾಡಿದ ಒಂದೇ ವಾರದಲ್ಲಿ ಒಂದು ಲಕ್ಷ ಲಾಭ ತೋರಿಸಿದ ಆರೋಪಿಯು ನಂತರ ಹೆಚ್ಚಿನ ಮೊತ್ತದ ಲಾಭ ತೋರಿಸಿದ್ದಾನೆ. ಈತನ ಬಣ್ಣದ ಮಾತಿಗೆ ಮರುಳಾಗಿ ದೂರುದಾರರು ಕಂತುಗಳಲ್ಲಿ ಓಟ್ಟು ೪೧ ಲಕ್ಷ ರೂಪಾಯಿ ಹಣವನ್ನು ಆತನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಅದರಲ್ಲಿ ಈತನೇ ಸೃಷ್ಟಿಸಿರುವ ನಕಲಿ ಆಪ್ ನಲ್ಲಿ ಲಾಭವನ್ನೂ ತೋರಿಸಿದ್ದಾನೆ. ಆದರೆ ಕೇರಳ ನಿವಾಸಿಗೆ ಹಣ ಹಿಂಪಡೆಯಲು ಪ್ರಯತ್ನಿಸಿದಾಗ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ, ಕೂಡಲೇ ಎಚ್ಚೆತ್ತ ಅವರು ಕಣ್ಣೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಣ್ಣೂರು ಸೈಬರ್ ಪೊಲೀಸರು ಆರೋಪಿಯ ಸ್ಥಳ ಮತ್ತು ಹಣ ವರ್ಗಾವಣೆಗೆ ಬಳಸಲಾದ ಖಾತೆಗಳನ್ನು ಪತ್ತೆ ಮಾಡಿದರು. ಶನಿವಾರ ಆದರ್ಶ್ ವಯನಾಡಿಗೆ ಬರುವ ಮಾಹಿತಿ ತನಿಖಾ ತಂಡಕ್ಕೆ ಸಿಕ್ಕಿತ್ತು. ಬಂಧನಕ್ಕೆ ಬಲೆ ಹೆಣೆದ ಪೋಲೀಸರು ಆದರ್ಶ್ ನನ್ನು ವಯನಾಡಿನ ಕಟ್ಟಿಕ್ಕುಳಂನಲ್ಲಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಆನ್‌ಲೈನ್ ಷೇರು ಟ್ರೇಡಿಂಗ್ ಮೂಲಕ ಹಣ ದ್ವಿಗುಣಗೊಳಿಸುವುದಾಗಿ ಮನವರಿಕೆ ಮಾಡಿಕೊಟ್ಟು ದೂರುದಾರರಿಂದ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿದ್ದಾನೆ ಎಂದು ಕಣ್ಣೂರು ಟೌನ್ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಜಿತ್ ಕೊಡೇರಿ ತಿಳಿಸಿದರು. ಆರೋಪಿಯು ಇದೇ ರೀತಿಯಲ್ಲಿ ಇತರ ಹೂಡಿಕೆದಾರರಿಗೂ ಮೋಸ ಮಾಡಿರುವ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸೈಬರ್ ಪೊಲೀಸರ ತಂಡ ಹಾಗೂ ಸಬ್ ಇನ್ಸ್‌ಪೆಕ್ಟರ್ ಪಿ ಪಿ ಶಮೀಲ್ ನೇತೃತ್ವದ ತಂಡ ನಡೆಸಿದ ವ್ಯವಸ್ಥಿತ ತನಿಖೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಶ್ರೀಜಿತ್ ತಿಳಿಸಿದರು.– ವರದಿ -ಕೋವರ್ ಕೊಲ್ಲಿ ಇಂದ್ರೇಶ್










