
ಕನಕಪುರ: ತಾಲ್ಲೂಕಿನ ತಾಮಸಂದ್ರ ವೃತ್ತದಲ್ಲಿ ಬುಧವಾರ ಮೇಲ್ಜಾತಿ ತಿಗಳ ಸಮುದಾಯದ ಗುಂಪೊಂದು ಭೋವಿ ಸಮುದಾಯದವರ ವಾಸ ಸ್ಥಳಕ್ಕೆ ನುಗ್ಗಿ, ಲಾಂಗು ಮತ್ತು ಮಚ್ಚುಗಳಿಂದ ಮಹಿಳೆಯರು ಸೇರಿದಂತೆ ಸುಮಾರು 12 ಮಂದಿ ಮೇಲೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದೆ.
ಘಟನೆಯಿಂದ ಬೆಚ್ಚಿ ಬಿದ್ದಿರುವ ಗ್ರಾಮಸ್ಥರು ಕನಕಪುರ-ರಾಮನಗರ ರಸ್ತೆಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು, ಎಸ್.ಸಿ ಮತ್ತು ಎಸ್.ಟಿದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ವಿವಿಧ ಕಲಂಗಳಡಿ 16 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಮೂವರು ಆರೋಪಿಗಳಾದ ಪ್ರಸಾದ್ ಅಲಿಯಾಸ್ ಕರಿಯಪ್ಪ, ನಾಗೇಂದ್ರ ಹಾಗೂ ಆಟೋ ಮಹದೇವ ಎಂಬಾತನನ್ನು ಘಟನೆ ನಡೆದ ಕೆಲವೇ ತಾಸಿನಲ್ಲಿ ಬಂಧಿಸಿದ್ದಾರೆ.

ತಲೆ ಮರೆಸಿಕೊಂಡಿರುವ ಮೇಗಳ ಬೀದಿಯ ಮಂಜು, ಕೀರ್ತಿ, ಶರತ್, ನಾಗೇಂದ್ರ ತಂದೆ ನಾಗಲಿಂಗಯ್ಯ ಸೇರಿದಂತೆ ಉಳಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಯಲ್ಲಿ ಭರತ್ ಎಂಬುವರ ತಲೆಗೆ ಗಾಯವಾಗಿದ್ದು, ಅವರ ಪತ್ನಿ ಶಶಿಕಲಾಗೂ ಪೆಟ್ಟು ಬಿದ್ದಿದೆ. ಹೆಚ್ಚು ಗಾಯವಾಗಿರುವವರು ಆಸ್ಪತ್ರೆಗೆ ದಾಖಲಾಗಿದ್ದು, ಸಣ್ಣಪುಟ್ಟ ಗಾಯವಾಗಿರುವವರು ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಪೊಲೀಸರು ಹೇಳಿದರು.

ಶಾಮಿಯಾನ ವಿಷಯಕ್ಕೆ ಜಗಳ: ತಾಮಸಂದ್ರ ವೃತ್ತದಲ್ಲಿ ಬೋವಿ ಸಮುದಾಯದ 50ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿವೆ. ಈ ವೃತ್ತದ ಮುಂದೆ ಸ್ವಲ್ಪ ದೂರದಲ್ಲಿರುವ ಹೊಸಕೋಟೆ ಎಂಬ ಊರಿನಲ್ಲಿ ತಿಗಳ ಸಮುದಾಯದವರಿದ್ದಾರೆ. ಜುಲೈ 11ರಂದು ತಾಮಸಂದ್ರ ವೃತ್ತದ ಶ್ರೀನಿವಾಸ್ ಎಂಬುವರ ಹೊಸ ಮನೆಯ ಗೃಹ ಪ್ರವೇಶವಿತ್ತು.
ಅದಕ್ಕಾಗಿ, ಗ್ರಾಮದ ರಸ್ತೆಯಲ್ಲಿ ಶಾಮಿಯಾನ ಹಾಕಿದ್ದರು.ಇದೇ ಮಾರ್ಗದಲ್ಲಿ ಬಂದ ತಿಗಳ ಸಮುದಾಯದ ನಾಗಲಿಂಗಯ್ಯ, ಪ್ರಸಾದ್ ಹಾಗೂ ಸಹಚರರು ಶಾಮಿಯಾನ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಜಗಳ ತೆಗೆದರು. ಕಾರ್ಯಕ್ರಮ ಮುಗಿದ ಬಳಿಕ ಶಾಮಿಯನಾ ತೆಗೆಯುತ್ತೇವೆ ಎಂದ ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಶ್ರೀನಿವಾಸ್ ಅವರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಆಗ ಸ್ಥಳೀಯ ಮುಖಂಡರು ಮಧ್ಯಪ್ರವೇಶಿಸಿ, ಮತ್ತೆ ಜಗಳ ಮಾಡಿಕೊಳ್ಳದಂತೆ ಎರಡೂ ಕಡೆಯವರಿಗೆ ಹೇಳಿದ್ದರು ಎಂದು ಗ್ರಾಮಸ್ಥರು ತಿಳಿಸಿದರು.