ಆರ್ಯ-ದ್ರಾವಿಡ ಸಂಘರ್ಷ ಈ ನೆಲದ ಮೊದಲ ಸ್ವತಂತ್ರ ಚಳುವಳಿ. ಶಿವಸಂಸ್ಕೃತಿಯನ್ನು ಹುಡಿಗೊಳಿಸಲು ಯತ್ನಿಸಿ ಭಾಗಶಃ ಯಶಸ್ವಿಯಾದ ಉರೇಷಿನ್ ಆರ್ಯರನ್ನು ಆನಂತರ ಯಶಸ್ವಿಯಾಗಿ ಮಣಿಸಿದ್ದು ಬೌದ್ದ ಧರ್ಮ. ಪುಷ್ಯಮಿತ್ರ ಶುಂಗˌ ಶಂಕರಾಚಾರ್ಯ ಮುಂತಾದ ಆರ್ಯರು ಬೌದ್ದ ಧರ್ಮವನ್ನು ಹುಡಿಗೊಳಿಸಿ ಮತ್ತೆ ಪರಕೀಯ ಆರ್ಯ ಧರ್ಮವನ್ನು ಪುನಃಸ್ಥಾಪಿಸಿದರು. ಆಗ ಆರ್ಯನ್ನರ ವಿರುದ್ಧ ಸಾಂಘಿಕ ಮತ್ತು ಸಾಮೂಹಿಕವಾಗಿ ತೊಡೆತಟ್ಟಿದ ಮತ್ತೊಂದು ಉತ್ಪಾದಕ ವರ್ಗದ ಸಂಘರ್ಷವೆ ವಚನ ಚಳುವಳಿ. ಬಸವಾದಿ ಶರಣರು ಹುಟ್ಟುಹಾಕಿದ ವಚನ ಚಳುವಳಿ ವೈದಿಕ ಧರ್ಮಕ್ಕೆ ಬಹಳ ದೊಡ್ಡ ಗದಾ ಪ್ರಹಾರ ಮಾಡಿತು.
ಮಹಾರಾಷ್ಟ್ರದ ಸಂತ ನಾಮದೇವ ತನ್ನ ತಾಯಿಯ ತವರು ಮನೆಯಾಗಿದ್ದ ಬಸವ ಕಲ್ಯಾಣದಲ್ಲಿ ನಡೆಯುತ್ತಿದ್ದ ವಚನ ಚಳುವಳಿಯನ್ನು ಹತ್ತಿರದಿಂದ ನೋಡಿ ಪ್ರಭಾವಿತನಾಗಿ ಮಹಾರಾಷ್ಟ್ರದಲ್ಲಿ ಪ್ರಗತಿಪರ ವಾರಕರಿ ಭಕ್ತಿ ಚಳುವಳಿಯನ್ನು ಹುಟ್ಟುಹಾಕಿದ. ವೈದಿಕ ವ್ಯವಸ್ಥೆಯ ವಿರುದ್ಧ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದ ಮತ್ತೊಬ್ಬ ವ್ಯಕ್ತಿ ಸಂತ ತುಕಾರಾಮ ಪುರೋಹಿತರ ಹುನ್ನಾರಕ್ಕೆ ಬಲಿಯಾಗಿ ಇಂದ್ರಾಣಿ ನದಿಯಲ್ಲಿ ದುರಂತ ಅಂತ್ಯ ಕಂಡ. ವಾರಕರಿ ಚಳುವಳಿ ಉತ್ತರ ಭಾರತದಲ್ಲಿ ಚಮ್ಮಾರ ಸಮಾಜದ ರವಿದಾಸನ ಚಳುವಳಿಗೆ ಸ್ಪೂರ್ತಿಯಾಯಿತು. ಆ ಸರಣಿ ಪ್ರಭಾವವು ಕೊನೆಗೆ ಪಂಜಾಬಿನಲ್ಲಿ ಸಿಖ್ ಧರ್ಮ ಸ್ಥಾಪನೆಯಲ್ಲಿ ಕೊನೆಗೊಂಡಿತು.
ವಚನ ಚಳುವಳಿಗೆ ಉತ್ತರ ಎನ್ನುವಂತೆ ಕರ್ನಾಟಕದಲ್ಲಿ ಸಾಂಪ್ರದಾಯವಾದಿಗಳು ದಾಸ ಚಳುವಳಿಯನ್ನು ಹುಟ್ಟುಹಾಕಿದರು. ಅದು ಸಂಪೂರ್ಣ ವಿಷ್ಣು ಭಕ್ತಿಯ ಉದ್ದೇಶ ಹೊಂದಿತ್ತೆ ವಿನಹ ಅಲ್ಲೊಮ್ಮೆ ಇಲ್ಲೊಮ್ಮೆ ಸಮಾಜದ ಡಾಂಬಿಕತೆ ವಿಮರ್ಶಿಸಿದಂತಿದ್ದರೂ ಮತ್ತಾವ ಸಾಮಾಜಿಕ ಪರಿವರ್ಪನೆಯ ಉದ್ದೇಶ ಹೊಂದಿರಲಿಲ್ಲ. ಆ ದಾಸ ಪರಂಪರೆಯನ್ನು ಆರಂಭಿಸಿದವರಲ್ಲಿ ಬಹುತೇಕರು ಸಾಂಪ್ರದಾಯವಾದಿ ಬ್ರಾಹ್ಮಣರೆ ಆಗಿದ್ದರು. ಆಗ ದಾಸ ಸಾಹಿತ್ಯದಿಂದ ಪ್ರಭಾವಿತರಾಗಿ ಮಡಿವಂತ ಬ್ರಾಹ್ಮಣರ ಕೆಂಗಣ್ಣಿಗೆ ಗುರಿಯಾದ ಶೂದ್ರ ಸಂತನೆ ಕನಕ ನಾಯಕ. ವಿಷ್ಣು ಭಕ್ತಿಯ ಉತ್ಕಟ ಹಂಬಲದಿಂದ ಕೀರ್ತನೆಗಳನ್ನು ರಚಿಸುತ್ತ ಉಡುಪಿಗೆ ಕೃಷ್ಣ ದರುಶನಕ್ಕೆ ಬಂದ ಕನಕನನ್ನು ಮಡಿವಂತ ಬ್ರಾಹ್ಮಣರು ಹೊರಗಟ್ಟಿ ಅವಮಾನಿಸಿದ್ದು ಮತ್ತು ಆತನ ಉಡುಪಿ ಭೇಟಿಯನ್ನು ಉಪಯೋಗಿಸಿಕೊಂಡು ಕನಕನ ಕಿಂಡಿ ಸೃಷ್ಟಿಸುವ ಮೂಲಕ ತಮ್ಮ ಉಪಜೀವನಕ್ಕೆ ಶಾಸ್ವತವಾದ ಮಾರ್ಗವನ್ನು ಹುಡುಕಿಕೊಂಡ್ಡದ್ದು ಈಗ ಇತಿಹಾಸ.
ಮೂಲತಃ ಹಾಲುಮತಸ್ಥರು ಶಿವಸಂಸ್ಕೃತಿಗೆ ಸೇರಿದವರು. ಕನಕ ನಾಯಕ ಅದು ಹೇಗೆ ವಿಷ್ಣುಭಕ್ತಿಯ ಸಾಹಿತ್ಯದಿಂದ ಪ್ರಭಾವಿತನಾದ ಎನ್ನುವ ಯಕ್ಷ ಪ್ರಶ್ನೆಯ ಮೇಲೆ ಸಂಶೋಧನೆ ಆಗಬೇಕಿದೆ. ಸಾಂಪ್ರದಾಯವಾದಿ ಬ್ರಾಹ್ಮಣರು ಕನಕನನ್ನು ವಿಷ್ಣುಭಕ್ತನಾಗಿಯು ಹಾಗು ಪ್ರಮುಖ ಕೀರ್ತನಕಾರನಾಗಿಯು ಇಂದಿಗೂ ಒಪ್ಪಿಕೊಳ್ಳುವ ಮಾನಸಿಕತೆ ಹೊಂದಿಲ್ಲ. ಅದಕ್ಕೆ ಆತ ಶೂದ್ರ ಎನ್ನುವುದು ಒಂದು ಕಾರಣವಾದರೆ ಬ್ರಾಹ್ಮಣ್ಯದ ಭಕ್ತಿಪಂಥದೊಳಗೆ ಹೊಕ್ಕು ಬ್ರಾಹ್ಮಣ್ಯವನ್ನು ತೀಕ್ಷ್ಣವಾಗಿ ಆತ ಟೀಕಿಸಿದ್ದು ಮತ್ತೊಂದು ಕಾರಣ. ಬ್ರಾಹ್ಮಣರ ಡಾಂಬಿಕತೆಯನ್ನು ಕನಕ ನಾಯಕ ಬಹಳ ಹತ್ತಿರದಿಂದ ನೋಡಿದವ. ಶತಮಾನಗಳಿಂದ ಅಕ್ಷರ ವಂಚಿತ ಸಮುದಾಯಕ್ಕೆ ಸೇರಿದ ಕನಕನ ಭಕ್ತಿ-ವೈರಾಗ್ಯ ಮತ್ತು ಆತನ ಕೀರ್ತನೆಗಳಲ್ಲಿ ಬಳಸಿದ ಪದ ಪ್ರಯೋಗದ ಸಾಮರ್ಥ್ಯ, ಹಾಗು ಅದನ್ನು ಯಶಸ್ವಿಯಾಗಿ ನಿರೂಪಿಸಿದ ಕೌಶಲ್ಯ ಬಹುಶಃ ಮಡಿವಂತ ಬ್ರಾಹ್ಮಣ ಕೀರ್ತನಕಾರರಲ್ಲಿ ಆ ಪ್ರತಿಭೆ ಅಪರೂಪವೆಂದೆ ಹೇಳಬೇಕು.
ಹಾಲು ಮತಸ್ಥ ಸಮುದಾಯ ಶಿವ ಸಂಸ್ಕೃತಿಯ ಸಂಕೇತ ಮತ್ತು ಶಿವನ ಮತ್ತೊಂದು ರೂಪವಾದ ಮೈಲಾರನ ಆರಾಧಕರು. ವಿಷ್ಣು ಭಕ್ತಿ ಹಾಲು ಮತಸ್ಥರ ಕುಲ ಸಾಂಪ್ರದಾಯಕ್ಕೆ ಹೊರಗು. ಹಾಗಾಗಿ ಬಸವಾದಿ ಶಿವಶರಣರ ಸಮಕಾಲೀನ ವಚನಕಾರ ಶರಣನಾದ ಕುರುಬ ಗೊಲ್ಲಾಳ ಮತ್ತು ಇನ್ನೊಬ್ಬ ಪ್ರಮುಖ ಶರಣ ರೇವಣಸಿದ್ಧರು ಕುರುಬ ಸಮುದಾಯಕ್ಕೆ ಹೆಚ್ಚು ಹತ್ತಿರವಾಗಬೇಕು. ಏಕೆಂದರೆˌ ವಚನ ಚಳುವಳಿ ವೈದಿಕ ವ್ಯವಸ್ಥೆಯ ವಿರುದ್ಧ ಈ ನೆಲಮೂಲದ ಉತ್ಪಾದಕ ಹಾಗು ಶ್ರಮ ಸಂಸ್ಕೃತಿ ವರ್ಗದ ಜನರೆಲ್ಲರು ಸಾಂಘಿಕ ಹಾಗು ಸಾಮೂಹಿಕವಾಗಿ ಹುಟ್ಟುಹಾಕಿದ ಹೋರಾಟವಾಗಿತ್ತು. ಹಾಗಾಗಿ ತನ್ನ ಉತ್ಕಟ ಭಕ್ತಿ ಹಾಗು ಬ್ರಾಹ್ಮಣ್ಯವನ್ನು ಟೀಕಿಸುವ ತೀಕ್ಷ್ಣ ನಿಲುವಿನ ಹೊರತಾಗಿಯೂ ಹಾಲುಮತದ ಕುಲಮೂಲ ಸಾಂಪ್ರದಾಯಕ್ಕೆ ಹೊರಗಾದ ವಿಷ್ಣು ಭಕ್ತಿಯನ್ನು ಆರಿಸಿಕೊಂಡ ಕನಕ ನಾಯಕನಿಗಿಂತ ಶರಣ ಕುರುಬ ಗೊಲ್ಲಾಳ ಹಾಗು ಶರಣ ರೇವಣಸಿದ್ಧರು ಹಾಲುಮತದ ಆರಾಧ್ಯರು ಹಾಗು ಆದರ್ಶರು ಎನ್ನುವ ಸಂಗತಿ ನಾನು ಇಲ್ಲಿ ಜ್ಞಾಪಿಸಲೇಬೇಕಿದೆ.
ಇಂದು ಕನಕ ನಾಯಕನ ಜಯಂತಿಯ ದಿನ. ಇದೆಲ್ಲದರ ನಡುವೆಯೂ ಅನಿರೀಕ್ಷಿತವಾಗಿ ವಿಷ್ಣುಭಕ್ತನಾಗಿ ವೈಷ್ಣವರ ಎಲ್ಲ ಸೋಗುಗಳನ್ನು ಬಯಲುಗೊಳಿಸಿ ದೇವನಿಗೆ ಪ್ರೀಯನಾಗಲು ಜಾತಿ ಶ್ರೇಷ್ಟತೆಗಿಂತ ಪ್ರತಿಭೆ ಹಾಗು ಅನನ್ಯ ಭಕ್ತಿ ಬಹಳ ಮುಖ್ಯ ಎನ್ನುವುದನ್ನು ತೋರಿಸಿದ ಹಾಗು ಬ್ರಾಹ್ಮಣ್ಯದ ಒಳಹೊಕ್ಕು ಬ್ರಾಹ್ಮಣ್ಯವನ್ನು ಹಸನುಗೊಳಿಸಲು ಪ್ರಯತ್ನಿಸಿ ದೊಡ್ಡ ಸಾಧನೆಗೈದ ಕನಕ ನಾಯಕ ನಮಗೆಲ್ಲರಿಗೆ ಅನಿವಾರ್ಯವಾಗಿ ಪೂಜನೀಯನಾಗುತ್ತಾನೆ.
~ ಡಾ. ಜೆ ಎಸ್ ಪಾಟೀಲ.