ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರ ಸೇಫ್ ಅನ್ನೋ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್, ಸಿದ್ದರಾಮಯ್ಯ ಅವರನ್ನು ಕೋಲಾರ ಸ್ಪರ್ಧೆ ಬೇಡ, ವರುಣಾದಿಂದ ಸ್ಪರ್ಧೆ ಮಾಡುವಂತೆ ಸೂಚನೆ ನೀಡಿದ್ದರು. ಹೈಕಮಾಂಡ್ ತೀರ್ಮಾನದಂತೆ ಕೋಲಾರ ಬಿಟ್ಟು ವರುಣಾಗೆ ಬಂದು ಸ್ಪರ್ಧೆ ಮಾಡಿದ್ದರು. ಮೊದಲಿಗೆ ಲಿಂಗಾಯತ ನಾಯಕ ವಿ. ಸೋಮಣ್ಣ ಅವರನ್ನು ಕರೆದುಕೊಂಡು ಬಂದು ಅಖಾಡಕ್ಕೆ ಇಳಿಸಿದ್ದ ಭಾರತೀಯ ಜನತಾ ಪಾರ್ಟಿ ನಾಯಕರು, ಲಿಂಗಾಯತ ಮತಗಳು ಸಿದ್ದರಾಮಯ್ಯ ಅವರಿಂದ ದೂರ ಮಾಡುವ ಯತ್ನ ಮಾಡಿದ್ದರು. ಇದೀಗ ಮತ್ತೊಂದು ಸ್ಟ್ರೋಕ್ ನೀಡಲು ಮುಂದಾಗಿದ್ದು, ಶೀಘ್ರದಲ್ಲೇ ವರುಣಾ ಅಖಾಡಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅಖಾಡಕ್ಕೆ ಇಳಿಯಲಿದ್ದಾರೆ.
ಚುನಾವಣಾ ಚಾಣಕ್ಯ ಎಂದೇ ಅಮಿತ್ ಷಾ ಖ್ಯಾತಿ..!!
ಬಿಜೆಪಿ ಗೆಲುವಿಗೆ ಕಾರಣವಾಯಿತು ತಂತ್ರಗಾರಿಕೆ ಮಾಡುವಲ್ಲಿ ಎಕ್ಸ್‌ಫರ್ಟ್ ಆಗಿರುವ ಅಮಿತ್ ಷಾ, ಸದಾಕಾಲವೂ ಮೋದಿಗೆ ನೆರಳಾಗಿ ನಡೆದುಕೊಳ್ತಾರೆ. ಇದೀಗ ಸಿದ್ದರಾಮಯ್ಯ ಅವರ ವಿರುದ್ಧ ಸ್ವತಃ ಬಿಜೆಪಿ ಚುನಾವಣಾ ಚಾಣಕ್ಯನೇ ವರುಣಾ ಅಖಾಡಕ್ಕೆ ಇಳಿಯುತ್ತಿರುವುದು ಕಾಂಗ್ರೆಸ್ ನಾಯಕರ ಪಾಲಿಗೆ ಶಾಕಿಂಗ್ ಸುದ್ದಿಯಾಗಿದೆ. ಮೇ 2ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಸಿದ್ದರಾಮಯ್ಯ ವಿರುದ್ಧ ಪ್ರಚಾರ ಕೈಗೊಳ್ಳಲಿದ್ದಾರೆ. ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ಸೋಮಣ್ಣ ಪರ ಮತಯಾಚನೆ ಮಾಡಲಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಸೋಲಿಸಲು ವರುಣಾದಲ್ಲಿ ರಣತಂತ್ರ ರೂಪಿಸಲಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಗೆದ್ದೇ ಗೆಲ್ಲುತ್ತಾರೆ ಎನ್ನುವ ವಿಶ್ವಾಸದಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಅಮಿತ್ ಷಾ ಬರುತ್ತಿರೋದು ನುಂಗಲಾರದ ತುತ್ತಾಗಿದೆ ಎನ್ನುವಂತಾಗಿದೆ.
ಬಿಜೆಪಿ ತಂತ್ರಗಾರಿಕೆಯ ಭಾಗವಾಗಿದ್ಯಾ ಜೆಡಿಎಸ್ ಆಲೋಚನೆ..?

ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆ ಆಗುತ್ತಿದ್ದ ಹಾಗೆ ಮೊದಲಿಗೆ ಟಿಕೆಟ್ ಘೋಷಣೆ ಮಾಡಿದ್ದು ಜೆಡಿಎಸ್. ಮೊದಲ ಪಟ್ಟಿಯಲ್ಲೇ ವರುಣಾ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿತ್ತು. ಅಭಿಷೇಕ್ ಎಂಬುವರಿಗೆ ಟಿಕೆಟ್ ಘೋಷಣೆ ಆದ ಬಳಿಕ ವರುಣಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮಾಡಲಾಗಿತ್ತು. ಆದರೆ ಚುನಾವಣೆ ಕಾವು ಪಡೆದುಕೊಳ್ತಿದೆ ಎನ್ನುವಾಗ ವರುಣಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಅವರನ್ನು ಘೋಷಣೆ ಮಾಡದೆ ಸಿದ್ದರಾಮಯ್ಯ ಅವರನ್ನೇ ಅಖಾಡಕ್ಕೆ ಇಳಿಸುವ ನಿರ್ಧಾರ ಮಾಡಿತ್ತು. ಸಿದ್ದರಾಮಯ್ಯ ಅಖಾಡಕ್ಕೆ ಎಂಟ್ರಿ ಕೊಡ್ತಿದ್ದ ಹಾಗೆ ಜೆಡಿಎಸ್ ಅಭ್ಯರ್ಥಿ ಅಭಿಷೇಕ್ ನಾಯಕರ ಸಂಪರ್ಕಕ್ಕೆ ಸಿಗದೆ ನಾಪತ್ತೆ ಆಗಿದ್ದರು. ಸಿದ್ದರಾಮಯ್ಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಪ್ರಚಾರ ಮಾಡದೆ ಸುಮ್ಮನಾಗಿದ್ದಾರೆ ಎನ್ನುವ ಮಾಹಿತಿ ಹರಿದಾಡಿತ್ತು. ಕೂಡಲೇ ಎಚ್ಚೆತ್ತ ಕುಮಾರಸ್ವಾಮಿ, ಅಭ್ಯರ್ಥಿಯನ್ನೇ ಬದಲಿಸಿದರು.
ಡಾ ಭಾರತಿ ಶಂಕರ್ ಕೂಡ ಸಿದ್ದರಾಮಯ್ಯ ಗೆಲುವಿಗೆ ಅಡ್ಡಿ..!!

ಡಾ ಭಾರತಿ ಶಂಕರ್ ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಾಡಿದೆ. ದಲಿತ ಸಮುದಾಯಕ್ಕೆ ಸೇರಿದ ಮಾಜಿ ಶಾಸಕ ಡಾ ಭಾರತಿ ಶಂಕರ್ ಆರ್‌ಎಸ್‌ಎಸ್‌ನಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. 1999 ರಲ್ಲಿ ಟಿ ನರಸೀಪುರ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆಲುವು ಕಂಡಿದ್ದರು. ದಲಿತ ಸಮುದಾಯದಲ್ಲಿ ಹಿಡಿತ ಹೊಂದಿರುವ ಡಾ ಭಾರತೀ ಶಂಕರ್ ಸ್ಪರ್ಧೆಯಿಂದ ಸಿದ್ದರಾಮಯ್ಯ ಗೆಲುವಿಗೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ. ವರುಣಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಮೊದಲ ಸ್ಥಾನದಲ್ಲಿದ್ರೆ ಎರಡನೇ ಸ್ಥಾನದಲ್ಲಿ ದಲಿತ ಸಮುದಾಯವಿದೆ. ಇದೀಗ ಜೆಡಿಎಸ್ ಹಾಗು ಬಿಜೆಪಿ ಎರಡು ಪ್ರಮುಖ ಸಮುದಾಯದಿಂದಲೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದು ಅಹಿಂದ ನಾಯಕ ಎನ್ನುವ ಪಟ್ಟ ಪಡೆದಿರುವ ಸಿದ್ದರಾಮಯ್ಯ ಗೆಲುವಿಗೆ ಅಡ್ಡಿಯಾಗುವ ಆತಂಕ ಎದುರಾಗಿದೆ. ಇದರ ನಡುವೆ ಅಮಿತ್ ಷಾ ಕೂಡ ಪ್ರಚಾರಕ್ಕೆ ಬರುತ್ತಿರುವುದು ಸಹಜವಾಗಿಯೇ ಆತಂಕ ಹುಟ್ಟಿಸಿದೆ.
ಕೃಷ್ಣಮಣಿ