
ಕಲಬುರಗಿ: ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ 38ನೇ ಪುಣ್ಯಸ್ಮರಣೆ ಅಂಗವಾಗಿ ಟೌನ್‌ಹಾಲ್ ಆವರಣದ ಬಾಬೂಜಿ ಅವರ ಪ್ರತಿಮೆಗೆ ಅಲಂಕಾರ ಮಾಡದೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಬಾಬೂಜಿ ಅಭಿಮಾನಿಗಳು, ದಲಿತ ಸಂಘರ್ಷ ಸಮಿತಿಯ ಮುಖಂಡರು ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬಂದಿದ್ದ ಶಾಸಕ ಅಲ್ಲಮಪ್ರಭು ಪಾಟೀಲ ಅವರನ್ನು ತಡೆದ ಮುಖಂಡರು, ತಮ್ಮ ಅಳಲು ತೋಡಿಕೊಂಡರು. ಪುಣ್ಯಸ್ಮರಣೆಯ ಹಿಂದಿನ ದಿನ ಜಿಲ್ಲಾಡಳಿತವು ಪ್ರತಿಮೆಯ ಸುತ್ತ ಹೂ ಗುಚ್ಛಗಳನ್ನು ಇರಿಸಿ ಅಲಂಕಾರ ಮಾಡಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳು, ಪಾಲಿಕೆಯ ಅಧಿಕಾರಿಗಳು ಬೆಳಿಗ್ಗೆ 9ಕ್ಕೆ ಬರುವ ಬದಲು ತಡವಾಗಿ ಬಂದು ಕಾಟಾಚಾರಕ್ಕೆ ಸಣ್ಣದೊಂದು ಹೂವಿನ ಮಾಲೆ ಹಾಕಿದ್ದಾರೆ ಎಂದು ಶಾಸಕರ ಗಮನಕ್ಕೆ ತಂದರು.
ಶಾಸಕರು ಪಾಲಿಕೆಯ ಅಧಿಕಾರಿಗಳಿಗೆ ಫೋನ್ ಕರೆ ಮಾಡಿ, ಲೋಪ ಆಗದಂತೆ ಕ್ರಮ ವಹಿಸುವಂತೆ ಸೂಚಿಸಿದರು. ಇಷ್ಟಕ್ಕೆ ಸಮ್ಮನಾಗದ ಮುಖಂಡರು ಪಾಲಿಕೆಯ ಕಚೇರಿಗೆ ತೆರಳಿ, ಅಲ್ಲಿನ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಅವರನ್ನು ಭೇಟಿಯಾದರು.

ರಾಷ್ಟ್ರ ನಾಯಕರ ಪ್ರತಿಮೆ ಸುತ್ತ ಅಲಂಕಾರ ಮಾಡದೆ ಅಪಮಾನ ಮಾಡಲಾಗಿದೆ. ಹತ್ತಾರು ಕರೆ ಮಾಡಿದರೂ ಯಾವೊಬ್ಬ ಅಧಿಕಾರಿಯೂ ಸ್ವೀಕರಿಸಲಿಲ್ಲ. ಜಯಂತಿ ಆಚರಣೆಗೂ ಸಮುದಾಯದ ಮುಖಂಡರನ್ನು ಕರೆಯಿಸಿ, ಕಾರ್ಯಕ್ರಮ ಆಯೋಜನೆ ಬಗ್ಗೆ ಮಾತನಾಡಲಿಲ್ಲ. ಈಗ ಪುಣ್ಯಸ್ಮರಣೆಗೂ ಅದೇ ಚಾಳಿ ಮುಂದುವರಿಸಿದ್ದಾರೆ. ಸಮುದಾಯದ ಮುಖಂಡರು ಸಭೆ ನಡೆಸಿ, ಜಿಲ್ಲಾಡಳಿತದ ವಿರುದ್ಧ ಹೋರಾಟ ಮಾಡುತ್ತೇವೆ’ ಎಂದು ದಲಿತ ಸಂಘರ್ಷ ಸಮಿತಿಯ ಕಾರ್ಯಾಧ್ಯಕ್ಷ ದಶರಥ ಕಲಗುರ್ತಿ ಹೇಳಿದರು.
ಸಮಾಜದ ಮುಖಂಡರಾದ ರಾಜು ಕಟ್ಟಿಮನಿ, ರಮೇಶ ವಾಡೇಕರ, ಮಲ್ಲಿ ಸರಡಗಿ, ಮಲ್ಲಿಕಾರ್ಜುನ ಜಿನಕೇರಿ, ಸಚಿನ್ ಕಟ್ಟಿಮನಿ, ಚಂದಪ್ಪ ಕಟ್ಟಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.