
ಕಲಬುರಗಿ: 371(ಜೆ) ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯು ಕಲ್ಯಾಣ ಕರ್ನಾಟಕ ಭಾಗದ ಚುನಾಯಿತ ಪ್ರತಿನಿಧಿಗಳು ಹಾಗೂ ಸಚಿವರ ನಿಯೋಗದೊಂದಿಗೆ ತೆರಳಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಲು ನಿರ್ಧರಿಸಿದೆ.
ನಗರದಲ್ಲಿ ಭಾನುವಾರ ನಡೆದ ಸಮಿತಿಯ ಉನ್ನತ ಮಟ್ಟದ ಕೋರ್ ಕಮಿಟಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಿತಿ ಗೌರವಾಧ್ಯಕ್ಷ ಬಸವರಾಜ ದೇಶಮುಖ ಹಾಗೂ ಅಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿ, ‘ಹಳೇ ಮೈಸೂರು ಮತ್ತು ಕಿತ್ತೂರು ಕರ್ನಾಟಕದ ಪಟ್ಟಭದ್ರ ಹಿತಾಸಕ್ತಿಗಳಿಂದ 371 (ಜೆ) ಅನುಷ್ಠಾನ ಬುಡಮೇಲು ಮಾಡುವ ಯತ್ನ ನಡೆದಿದೆ. ಅದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುವ ಅಗತ್ಯವಿದೆ. ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ವಿಸ್ತರಿಸಲು ನಿಯಮಗಳು ಮತ್ತು ನಿಬಂಧನೆಗಳ ಮೇಲೆ ವಿವಿಧ ನ್ಯಾಯಾಲಯಗಳು ಒದಗಿಸಿರುವ ನಮೂನೆಯಲ್ಲಿನ ತೊಡಕುಗಳನ್ನು ನಿವಾರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಕಲ್ಯಾಣ ಕರ್ನಾಟಕದಲ್ಲಿ ತಜ್ಞರ ತಂಡ ರಚಿಸಿ ಶಾಲೆ-ಕಾಲೇಜುಗಳಲ್ಲಿ ಬೃಹತ್ ಜಾಗೃತಿ ಅಭಿಯಾನ ಕೈಗೊಳ್ಳಲಾಗುವುದು. 371 (ಜೆ) ಪರಿಣಾಮಕಾರಿ ಅನುಷ್ಠಾನದ ಅಗತ್ಯತೆ ಕುರಿತು ವಿಚಾರ ಸಂಕಿರಣ ಆಯೋಜಿಸಲಿದ್ದು, ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಲಾಗುವುದು’ ಎಂದು ಹೇಳಿದರು.ಬಸವರಾಜ ಕೊಣ್ಣೂರ ಮಾತನಾಡಿ, ‘ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಬೇಕು’ ಎಂದು ಹೇಳಿದರು. ಪ್ರೊ.ಆರ್.ಕೆ. ಹುಡಗಿ ಸೇರಿದಂತೆ ಹಲವು ಇತರ ತಜ್ಞರು ಸಭೆಯಲ್ಲಿ ಈ ವಿಷಯದ ಕುರಿತು ಮಾತನಾಡಿದರು.