ರಾಜ್ಯ ಬಿಜೆಪಿಯ ಹಕ್ಕಬುಕ್ಕರೆಂದೇ ಹೆಸರಾಗಿರುವ ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ಭುಗಿಲೆದ್ದಿದೆ. ಹಿರಿಯ ಸಂಪುಟ ದರ್ಜೆ ಸಚಿವರಾಗಿ ಈಶ್ವರಪ್ಪ, ಸ್ವತಃ ಮುಖ್ಯಮಂತ್ರಿ ವಿರುದ್ಧವೇ ರಾಜ್ಯಪಾಲರಿಗೆ ಪತ್ರ ಬರೆದಿರುವುದು ರಾಜಕೀಯ ಸಂಚಲನ ಸೃಷ್ಟಿಸಿದೆ.
ಸುಮಾರು ಹನ್ನೆರಡು ವರ್ಷಗಳ ಹಿಂದೆ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಈ ‘ಅಪೂರ್ವ ಸಹೋದರರ’ ನಡುವೆ ಅಧಿಕಾರದ ಗುದ್ದಾಟ ರಾಜ್ಯದ ಮನೆಮಾತಾಗಿದೆ. ಅಧಿಕಾರವಿಲ್ಲದಾಗ ಪರಸ್ಪರ ಹೆಗಲ ಮೇಲೆ ಕೈಹಾಕಿಕೊಂಡು ಕ್ಯಾಮರಾಗಳ ಮುಂದೆ ಪೋಜು ಕೊಟ್ಟು ನಾವಿಬ್ಬರು ಅಣ್ಣತಮ್ಮ ಎಂದು ಹೇಳುವುದು, ಅಧಿಕಾರ ಸಿಕ್ಕಾಗ ಪರಸ್ಪರ ಹಾವು ಮುಂಗುಸಿಯಂತೆ ಕಚ್ಚಾಡುವುದು ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದ ಈ ನಾಯಕರಿಬ್ಬರ ವಿಷಯದಲ್ಲಿ ಹೊಸದಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೆ, ಈ ಬಾರಿ ಈಶ್ವರಪ್ಪ ಮುನಿಸು ಹಿಂದಿನಂತಿಲ್ಲ. ಈ ಮೊದಲು ತಮ್ಮ ಬೆಂಬಲಿಗರ ಮುಂದೆ, ಪಕ್ಷದ ವೇದಿಕೆಗಳಲ್ಲಿ, ಹೆಚ್ಚೆಂದರೆ ಮಾಧ್ಯಮಗಳ ಮುಂದೆ ಯಡಿಯೂರಪ್ಪ ವಿರುದ್ಧ ಮುನಿಸು ವ್ಯಕ್ತಪಡಿಸುತ್ತಿದ್ದ, ಯಡಿಯೂರಪ್ಪ ಪಕ್ಷ ತೊರೆದು ಕೆಜೆಪಿ ಕಟ್ಟಿದಾಗಲೂ ಅವರ ಹೆಸರು ನೇರವಾಗಿ ಪ್ರಸ್ತಾಪಿಸದೆ ಟೀಕೆ, ವ್ಯಂಗ್ಯವಾಡುತ್ತಿದ್ದ ಈಶ್ವರಪ್ಪ, ಈ ಬಾರಿ ನೇರವಾಗಿ ರಾಜ್ಯಪಾಲರಿಗೇ ಲಿಖಿತ ದೂರು ನೀಡುವ ಮೂಲಕ ಮುಖ್ಯಮಂತ್ರಿ ವಿರುದ್ಧವೇ ‘ಅವಿಶ್ವಾಸ’ದ ಬಾಣ ಪ್ರಯೋಗಿಸಿದ್ಧಾರೆ.
ಸ್ವತಃ ಬಿಜೆಪಿಯ ಹಿರಿಯ ನಾಯಕರಾಗಿ ಈಶ್ವರಪ್ಪ, ಎಂಥಹದ್ದೇ ಭಿನ್ನಮತವಿರಲಿ, ಅಸಮಾಧಾನವಿರಲಿ ನೇರವಾಗಿ ಯಡಿಯೂರಪ್ಪ ಅವರೊಂದಿಗೆ ಕೂತು, ಪಕ್ಷದ ಪ್ರಮುಖರೊಂದಿಗೆ ಸಮಾಲೋಚಿಸಿ, ಪಕ್ಷದ ವೇದಿಕೆಗಳಲ್ಲಿ ಚರ್ಚಿಸಿ ಸಿಎಂ ವಿರುದ್ಧದ ತಮ್ಮ ಆಕ್ಷೇಪ, ಆರೋಪಗಳಿಗೆ ಪರಿಹಾರ ಕಂಡುಕೊಳ್ಳಬಹುದಿತ್ತು. ತಮ್ಮ ಸಮಸ್ಯೆ ಬಗೆಹರಿಯದೇ ಹೋದರೆ, ನೇರವಾಗಿ ದೆಹಲಿಯ ವರಿಷ್ಠರನ್ನೇ ಕಂಡು ಮಾತನಾಡಿ ಅಲ್ಲಿಂದಲೇ ಸಿಎಂ ಅವರಿಗೆ ತಾಕೀತು ಮಾಡುವ ತಾಕತ್ತು ಕೂಡ ಈಶ್ವರಪ್ಪ ಅವರಿಗೆ ಇದೆ ಎಂದು ಬಿಜೆಪಿಯಷ್ಟೇ ಅಲ್ಲ; ಇಡೀ ಕರ್ನಾಟಕವೇ ಈವರೆಗೆ ನಂಬಿತ್ತು.
ಆದರೆ, ಇದೀಗ ಈಶ್ವರಪ್ಪ ಸಿಎಂ ವಿರುದ್ದ ಹಣಕಾಸು ಹಂಚಿಕೆಯಲ್ಲಿ ಲೋಪ, ತಮ್ಮ ಖಾತೆಯಲ್ಲಿ ಹಸ್ತಕ್ಷೇಪದಂತಹ ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿ, ನೇರವಾಗಿ ರಾಜ್ಯಪಾಲರಿಗೇ ದೂರು ನೀಡುವ ಮೂಲಕ ಆಡಳಿತ ವ್ಯವಸ್ಥೆ ಬದಲಾಗಬೇಕು ಎಂದು ಆಗ್ರಹಿಸಿದ್ದಾರೆ. ಆ ಮೂಲಕ ಪರೋಕ್ಷವಾಗಿ ತಮಗೆ ರಾಜ್ಯಪಾಲರ ಮೇಲಿರುವಷ್ಟು ನಂಬಿಕೆ ಪಕ್ಷದ ವ್ಯವಸ್ಥೆಯ ಮೇಲಿಲ್ಲ ಎಂಬುದನ್ನು ಸಾರಿ ಹೇಳಿದ್ದಾರೆ. ಹಾಗೇ ಯಡಿಯೂರಪ್ಪ ಅವರ ಆಡಳಿತ ವೈಖರಿ ರಾಜ್ಯಕ್ಕೂ, ಪಕ್ಷಕ್ಕೂ ಮಾರಕ ಮತ್ತು ಪಕ್ಷ ಮತ್ತು ಸರ್ಕಾರದ ಹಿರಿಯ ನಾಯಕರಾಗಿ ತಮಗೇ ಆ ವೈಖರಿ ಬದಲಾಗದೇ ಹೋದರೆ ಅಪಾಯ ಎನಿಸಿದೆ ಎಂಬುದನ್ನೂ ಲಿಖತವಾಗಿಯೇ ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ ತಮ್ಮ ಖಾತೆಯಲ್ಲಷ್ಟೇ ಅಲ್ಲದೆ ಇತರ ಹಲವು ಸಚಿವರ ಅಧಿಕಾರ ವ್ಯಾಪ್ತಿಯಲ್ಲಿಯೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಹಣಕಾಸು ಇಲಾಖೆ ಕೂಡ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಬಳಿಯೇ ಇದೆ. ಹಾಗಾಗಿ ತಮ್ಮ ಗ್ರಾಮೀಣಾಭಿವೃದ್ಧಿ ಇಲಾಖೆಯ ಮಹತ್ವದ ಯೋಜನೆಗಳಿಗೆ ಸಹಕಾರ ಕೊಡುತ್ತಿಲ್ಲ. ಹಲವು ಯೋಜನೆಗಳು ಬಜೆಟ್ ಘೋಷಣೆಯ ಹೊರತಾಗಿಯೂ ಹಣಕಾಸು ಇಲಾಖೆಯಿಂದ ಹಣ ಬಿಡುಗಡೆಯಾಗದೆ ನೆನಗುದಿಗೆ ಬಿದ್ದಿವೆ. ತಮ್ಮ ಇಲಾಖೆಯಿಂದ ಬಿಡುಗಡೆಯಾಗಿರುವ 1200 ಕೋಟಿಗೆ ಸಂಬಂಧಿಸಿದಂತೆ ನಿಯಮ ಮೀರಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದಕ್ಕೆ ಕೂಡಲೇ ತಡೆ ಹಾಕದೇ ಇದ್ದರೆ, ಪಕ್ಷಕ್ಕೂ, ರಾಜ್ಯಕ್ಕೂ ಒಳಿತಾಗದು ಎಂದು ಈಶ್ವರಪ್ಪ ಆರೋಪಿಸಿದ್ದಾರೆ.
ಮುಖ್ಯಮಂತ್ರಿಗಳ ವಿರುದ್ಧವೇ ನೇರ ಆರೋಪ ಮಾಡಿ, ಆಡಳಿತ ಶೈಲಿ ಬದಲಾಗಬೇಕು ಎಂದು ಆಗ್ರಹಿಸಿ ಬರೆದಿರುವ ಆ ಪತ್ರವನ್ನು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೂ ಕಳಿಸಿಕೊಟ್ಟಿದ್ಧಾರೆ ಎಂಬುದು, ಈಶ್ವರಪ್ಪ ತಮ್ಮ ಒಂದು ಕಾಲದ ಕುಚುಕು ಮಿತ್ರ ಹಾಗೂ ಕಳೆದ ಒಂದೂವರೆ ದಶದಕ ಮಗ್ಗುಲ ಮುಳ್ಳು ಯಡಿಯೂರಪ್ಪ ವಿರುದ್ಧ ಎಷ್ಟು ತಾಳ್ಮೆಗೆಟ್ಟಿದ್ದಾರೆ ಎಂಬುದಕ್ಕೆ ನಿದರ್ಶನ.
ಹಾಗೆ ನೋಡಿದರೆ, ಈಶ್ವರಪ್ಪ ನಿಜಕ್ಕೂ ಈ ಪರಿಯ ಆಕ್ರೋಶ ಹೊರಹಾಕಲು, ಈ ಮಟ್ಟದಲ್ಲಿ ಸಿಡಿದೇಳಲು ಕಾರಣ ಕೇವಲ ತಮ್ಮ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಿಎಂ ಯಡಿಯೂರಪ್ಪ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದಷ್ಟೇ ಕಾರಣವಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಯಡಿಯೂರಪ್ಪ ಮತ್ತು ಅವರ ಕುಟುಂಬದವರು ಆಡಳಿತದಲ್ಲಿ ನಡೆಸುತ್ತಿರುವ ಹಸ್ತಕ್ಷೇಪ, ಶಿವಮೊಗ್ಗ ಜಿಲ್ಲೆಯಲ್ಲಿ ತಮ್ಮನ್ನು ಸಂಪೂರ್ಣ ನಿರ್ಲಕ್ಷಿಸಿ ಬಿಎಸ್ ವೈ ಮತ್ತು ಕುಟುಂಬ ನಡೆಸುತ್ತಿರುವ ಸರ್ವಾಧಿಕಾರಿ ಧೋರಣೆಯ ವಿರುದ್ದ ಮಡುಗಟ್ಟಿದ್ದ ಆಕ್ರೋಶ ಈ ಪತ್ರದ ಹಿಂದಿದೆ ಎಂಬುದು ಗುಟ್ಟೇನಲ್ಲ.
ಅದರಲ್ಲೂ, ಸರ್ಕಾರದ ಹಿರಿಯ ಸಚಿವರು, ಪಕ್ಷದ ಹಿರಿಯ ನಾಯಕರು, ಅನುಭವಿಗಳು ಎಂಬುದೇನನಲ್ಲೂ ಗಣನೆಗೆ ತೆಗೆದುಕೊಳ್ಳದೆ ಸಿಎಂ ಪುತ್ರ ಬಿ ವೈ ವಿಜಯೇಂದ್ರ ಅವರು ರಾಜಧಾನಿಯಲ್ಲಿ ನಡೆಸುತ್ತಿರುವ ಪಾರುಪಥ್ಯ ಮತ್ತು ಅದೇ ಹೊತ್ತಿಗೆ ಇತ್ತ ಶಿವಮೊಗ್ಗದಲ್ಲಿ ಮತ್ತೊಬ್ಬ ಪುತ್ರ ಹಾಗೂ ಸಂಸದ ಬಿ ವೈ ರಾಘವೇಂದ್ರ, ಸಣ್ಣಪುಟ್ಟ ನೌಕರರ ವರ್ಗಾವಣೆಯ ವಿಷಯದಲ್ಲಿ ಕೂಡ ತಮ್ಮ ಮಾತನ್ನು ಮೂಲೆಗುಂಪು ಮಾಡುತ್ತಿರುವುದು, ಸ್ಮಾರ್ಟ್ ಸಿಟಿಯಂತಹ ಕಾಮಗಾರಿಗಳ ವಿಷಯದಲ್ಲಿ ಕೂಡ ತಮ್ಮ ಮಾತು ಲೆಕ್ಕಕ್ಕಿಲ್ಲದಂತೆ ಇಡೀ ವ್ಯವಸ್ಥೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವುದು ಈಶ್ವರಪ್ಪ ಹೀಗೆ ಮೂರನೇ ಕಣ್ಣು ಬಿಡಲು ಕಾರಣ ಎಂಬುದು ಬೆಂಗಳೂರು ಮತ್ತು ಶಿವಮೊಗ್ಗದ ಬೆಳವಣಿಗೆಗಳನ್ನು ಗಮನಿಸಿದವರಿಗೆ ಅರಿವಾಗದೇ ಇರದು.
ಇಂತಹ ಅಸಮಾಧಾನದ ಜ್ವಾಲಾಮುಖಿ ಈಗ ಈ ಪತ್ರದ ಮೂಲಕ ಸ್ಫೋಟಿಸಿದೆ. ಪತ್ರ ಬರೆದ ವಿಷಯ ಬಹಿರಂಗವಾಗುತ್ತಲೇ ಇದು ಪಕ್ಷದ ಆಂತರಿಕ ವಿಷಯ. ನಾವೇ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದ್ದ ಈಶ್ವರಪ್ಪ, ಮಾರನೇ ದಿನ ಪತ್ರದ ಉದ್ದೇಶ ನಾಯಕತ್ವ ಬದಲಾವಣೆಯಲ್ಲ. ಕೆಲವು ಲೋಪಗಳನ್ನು ಸರಿಪಡಿಸಿಕೊಳ್ಳಬೇಕು ಎಂಬ ಆಶಯವಷ್ಟೇ. ಒಬ್ಬ ಹಿರಿಯ ಸಚಿವನಾಗಿ, ಪಕ್ಷದ ಮುಖಂಡನಾಗಿ ನನಗೆ ಅಷ್ಟೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿಲ್ಲವೆ ಎಂದಿದ್ದಾರೆ. ಇದು ತಮ್ಮ ಪತ್ರದ ಗಂಭೀರತೆಯನ್ನು ಸ್ವತಃ ತಾವೇ ತೇಲಿಸುವ ಈಶ್ವರಪ್ಪ ಅವರ ಜಾಣತನ.
ಆದರೆ, ಈಗಾಗಲೇ ಆ ಪತ್ರ ಬಿಜೆಪಿ ಮತ್ತು ಅದರ ಸರ್ಕಾರಕ್ಕೆ ಕೊಡಬೇಕಾದ ಪೆಟ್ಟು ಕೊಟ್ಟಾಗಿದೆ. ಪ್ರತಿ ಪಕ್ಷ ಕಾಂಗ್ರೆಸ್ ಅಂತೂ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅವರದೇ ಸಂಪುಟದ ಪ್ರಮುಖ ಸಚಿವರೇ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅವರು ಹಣಕಾಸು ಅವ್ಯವಹಾರ, ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ, ಸ್ವಜನಪಕ್ಷಪಾತದ ಬಗ್ಗೆ ಹಿರಿಯ ಸಚಿವರೇ ಲಿಖಿತ ದೂರು ನೀಡಿದ್ದಾರೆ. ಹಾಗಿರುವಾಗ ಯಡಿಯೂರಪ್ಪ ಅವರಿಗೆ ಸಿಎಂ ಆಗಿ ಮುಂದುವರಿಯುವ ಯಾವ ನೈತಿಕತೆಯೂ ಇಲ್ಲ. ಕೂಡಲೇ ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಬೇಕು ಎಂದು ಪಟ್ಟು ಹಿಡಿದಿದೆ.
ಈ ನಡುವೆ ಸ್ವಪಕ್ಷೀಯ ಶಾಸಕರು, ಹಿರಿಯ ಸಚಿವರು ಕೂಡ ಈಶ್ವರಪ್ಪ ವಿರುದ್ದ ತಿರುಗಿಬಿದ್ದಿದ್ದಾರೆ. ಅವರು ಯಾವುದೇ ಅಸಮಾಧಾನ, ಸಮಸ್ಯೆಗಳಿದ್ದರೆ ಅದನ್ನು ನೇರವಾಗಿ ಸಿಎಂ ಬಳಿಯೇ ಮಾತನಾಡಿ ಪರಿಹಾರ ಕಂಡುಕೊಳ್ಳಬಹುದಿತ್ತು. ಇಲ್ಲವೇ ಪಕ್ಷದ ವೇದಿಕೆಯಲ್ಲಿ ಪರಿಹರಿಸಿಕೊಳ್ಳಬಹುದಿತ್ತು. ಹಿರಿಯ ನಾಯಕರಾಗಿ ಅವರು ಹೀಗೆ ನೇರವಾಗಿ ರಾಜ್ಯಪಾಲರಿಗೆ ಪತ್ರ ಬರೆದು ಪಕ್ಷವನ್ನೂ, ಸರ್ಕಾರವನ್ನೂ ಮುಜುಗರಕ್ಕೀಡು ಮಾಡಿರುವುದು ಸರಿಯಲ್ಲ ಎಂದಿರುವ ಬಹುತೇಕ ಶಾಸಕರು, ಸಚಿವರು, ಈಶ್ವರಪ್ಪ ನಡೆ ದುಡುಕಿನದ್ದು, ಹುಂಬತನದ್ದು. ನಾವೆಲ್ಲಾ ಸಚಿವರಾಗಿರುವುದೇ ಯಡಿಯೂರಪ್ಪ ವಿವೇಚನೆಯಿಂದಾಗಿ, ಹಾಗೇ ಸಿಎಂ ಆಗಿ, ಹಣಕಾಸು ಸಚಿವರೂ ಆಗಿ ಹಣಕಾಸು ಹಂಚಿಕೆಯ ಬಗ್ಗೆಯೂ ಅವರು ತಮ್ಮ ವಿವೇಚನೆ ಪ್ರಯೋಗಿಸುವ ಹಕ್ಕು ಹೊಂದಿದ್ದಾರೆ. ಅದರಲ್ಲೇನು ತಪ್ಪಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೂಡ ಈಶ್ವರಪ್ಪ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ವೇದಿಕೆಯಲ್ಲಿ ಪರಿಹರಿಸಿಕೊಳ್ಳಬೇಕಾದ ವಿಷಯವನ್ನು ರಾಜ್ಯಪಾಲರವರೆಗೆ ಕೊಂಡೊಯ್ದಿರುವುದು ಸರಿಯಲ್ಲ ಎಂದು ಈಶ್ವರಪ್ಪಗೆ ಅರುಣ್ ಸಿಂಗ್ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಗುರುವಾರ ಸಂಜೆ ಯಡಿಯೂರಪ್ಪ ತಮ್ಮ ಬೆಂಬಲಿಗ ಶಾಸಕರು, ಸಚಿವರಿಗೆ ಭೋಜನಕೂಟ ಏರ್ಪಿಡಿಸಿದ್ದರು. ಆ ವೇಳೆ, ಈಶ್ವರಪ್ಪ ವಿರುದ್ದ ಹರಿಹಾಯ್ದಿದ್ದಾರೆ. ಅವರ ಖಾತೆ ಬದಲಾಯಿಸುತ್ತೇನೆ. ಅದಕ್ಕೂ ಸುಮ್ಮನಾಗಲಿಲ್ಲ ಎಂದರೆ, ಸಂಪುಟದಿಂದಲೇ ಕಿತ್ತೊಗೆಯುತ್ತೇನೆ ಎಂದು ಯಡಿಯೂರಪ್ಪ ಕೆಂಡಕಾರಿದ್ಧಾರೆ ಎಂದು ವರದಿಯಾಗಿದೆ.
ಹಾಗಾಗಿ, ನಾಯಕತ್ವ ಬದಲಾವಣೆಯ ಸೂಚಕವೆಂದೇ ಹೇಳಲಾಗುತ್ತಿದ್ದ ಈಶ್ವರಪ್ಪ ಅವರ ಸಂಚನಲಕಾರಿ ಪತ್ರ, ಇದೀಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಬೆಳವಣಿಗೆಗಳಿಗೆ ನಾಂದಿ ಹಾಡಿದ್ದು, ಅಂತಿಮವಾಗಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಇತ್ತೀಚಿನ ದಿನಗಳಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದ ಅಸಮಾಧಾನ, ಬೇಗುದಿ ಸ್ಫೋಟಗೊಂಡಿದೆ. ಈ ಅಸಮಧಾನವೇ ಈಗಾಗಲೇ ಇರುವ ಬಸನಗೌಡ ಪಾಟೀಲ್ ಯತ್ನಾಳ್, ಶ್ರೀನಿವಾಸ್ ಪ್ರಸಾದ್ ಮುಂತಾದ ಹಿರಿಯ ನಾಯಕರ ಪಡೆಗೆ ಈಶ್ವರಪ್ಪ ಅವರನ್ನೂ ಸೇರಿಸಿ, ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಬಿಜೆಪಿಯ ಬಣಕ್ಕೆ ಬಲ ಕೊಡುವುದೇ? ಆ ಬಲ ಅಂತಿಮವಾಗಿ 2009ರ ಕ್ಷಿಪ್ರಕ್ರಾಂತಿಯನ್ನು ಮತ್ತೆ ಪುನರಾವರ್ತನೆ ಮಾಡುವುದೇ? ಅಥವಾ ಸ್ವತಃ ಈಶ್ವರಪ್ಪ ಅವರಿಗೇ ಈ ಪತ್ರಾಸ್ತ್ರ ತಿರುಗು ಬಾಣವಾಗುವುದೆ? ಎಂಬುದನ್ನು ಕಾದುನೋಡಬೇಕಿದೆ.
ಈ ನಡುವೆ ಪತ್ರಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಪ್ರತಿಕ್ರಿಯೆಗಳು ಏನಿರಬಹುದು ಮತ್ತು ಆ ಪ್ರತಿಕ್ರಿಯೆಗಳು ರಾಜ್ಯ ಬಿಜೆಪಿ ಪಕ್ಷ ಮತ್ತು ಸರ್ಕಾರದಲ್ಲಿ ತರಬಹುದಾದ ಬದಲಾವಣೆಗಳು ಎಂಬುದು ಕೂಡ ಸಾಕಷ್ಟು ಕುತೂಹಲ ಕೆರಳಿಸಿದೆ.