ದೇಶದ ಮುಖ್ಯ ನ್ಯಾಯಾಧೀಶರಾಗಿ ನ್ಯಾ| NV ರಮಣ ಅವರನ್ನು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಆಯ್ಕೆ ಮಾಡಿದ್ದಾರೆ. ರಮಣ ಅವರು ಎಪ್ರಿಲ್ 24 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಎಪ್ರಿಲ್ 23 ರಂದು ಪ್ರಸಕ್ತ ಮುಖ್ಯ ನ್ಯಾಯಾಧೀಶ ಎಸ್‌ಎ ಬಾಬ್ಡೆ ಅವರ ಅಧಿಕಾರಾವಧಿ ಮುಗಿಯುವ ಹಿನ್ನೆಲೆಯಲ್ಲಿ, ಬಾಬ್ಡೆ ಅವರು ಮುಖ್ಯ ನ್ಯಾಯಾಧೀಶ ಸ್ಥಾನಕ್ಕೆ ರಮಣ ಅವರನ್ನು ಶಿಫಾರಸ್ಸು ಮಾಡಿದ್ದರು.

1957 ಆಗಸ್ಟ್ 27 ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕೃಷಿಪ್ರಧಾನ ಕುಟುಂಬ ಒಂದರಲ್ಲಿ ಜನಿಸಿದ ನ್ಯಾಯಾಧೀಶ ರಮಣ ಅವರು 2022 ರ ಆಗಸ್ಟ್ 26 ರವರೆಗೆ ದೇಶದ ಮುಖ್ಯ ನ್ಯಾಯಾಧೀಶರಾಗಲಿದ್ದಾರೆ.
ಅವರು ಆಂಧ್ರಪ್ರದೇಶದಿಂದ ಭಾರತದ ಮುಖ್ಯ ನ್ಯಾಯಾಧೀಶರಾಗಲಿರುವ ಎರಡನೇಯವರು. ಈ ಹಿಂದೆ ನ್ಯಾಯಮೂರ್ತಿ ಕೆ ಸುಬ್ಬ ರಾವ್ ಅವರು 1966-67ರವರೆಗೆ ಭಾರತದ ಒಂಬತ್ತನೇ ಮುಖ್ಯ ನ್ಯಾಯಾಧೀಶರಾಗಿದ್ದರು.

ನ್ಯಾಯಾಧೀಶ ರಮಣ ತಮ್ಮ ಸುಮಾರು ನಾಲ್ಕು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಆಂಧ್ರಪ್ರದೇಶದ ಹೈಕೋರ್ಟ್, ಕೇಂದ್ರ ಮತ್ತು ಆಂಧ್ರಪ್ರದೇಶದ ಆಡಳಿತ ನ್ಯಾಯಮಂಡಳಿಗಳು ಮತ್ತು ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ನಾಗರಿಕ, ಅಪರಾಧ, ಸಾಂವಿಧಾನಿಕ, ಕಾರ್ಮಿಕ, ಸೇವೆ ಮತ್ತು ಚುನಾವಣಾ ವಿಷಯಗಳಲ್ಲಿ ಪ್ರಾಕ್ಟೀಸ್ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅವರ ಪ್ರೊಫೈಲ್ ಪ್ರಕಾರ, ಸಾಂವಿಧಾನಿಕ, ಅಪರಾಧ, ಸೇವೆ ಮತ್ತು ಅಂತರರಾಜ್ಯ ನದಿ ಕಾನೂನುಗಳಲ್ಲಿ ಪರಿಣತಿ ಹೊಂದಿದ್ದಾರೆ.
ಅವರನ್ನು ಜೂನ್ 27, 2000 ರಂದು ಆಂಧ್ರಪ್ರದೇಶದ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. ಅವರು ಮಾರ್ಚ್ 10, 2013 ರಿಂದ ಮೇ 20, 2013 ರವರೆಗೆ ಆಂಧ್ರಪ್ರದೇಶದ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದರು. ಅವರನ್ನು 2013 ರಲ್ಲಿ ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಮತ್ತು 2014 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಉನ್ನತೀಕರಿಸಲಾಯಿತು.