ಪ್ರಸ್ತುತ ರಾಜಕಾರಣವು ಅಪರಾಧೀಕರಣಗೊಂಡು ಕುಳಿತಿದೆ. ರಾಜಕೀಯ ಅಪರಾಧದ ಆರೋಪಿಗಳು ಭಾರತದ ನ್ಯಾಯ ವ್ಯವಸ್ಥೆಯಲ್ಲಿ ಬಹುಬೇಗ ಜಾಮೀನು ಪಡೆದು ಹೊರಬರುತ್ತಿದ್ದರೆ ಸಾಮಾಜಿಕ ಕಾರ್ಯಕರ್ತರು ಸುದೀರ್ಘ ಅವಧಿ ಜೈಲುಗಳಲ್ಲೆ ಕೊಳೆಯುತ್ತಿದ್ದಾರೆ. ಒಂದೆಡೆˌ ಹಿಂಸಾಚಾರ ಪ್ರಚೋದನೆಯ ಆರೋಪಿಳಿಗೆ ಸುಲಭವಾಗಿ ಜಾಮೀನು ಸಿಗುತ್ತಿದ್ದರೆ ಪ್ರೊಫೆಸರ್ ಜಿ. ಎನ್. ಸಾಯಿಬಾಬಾರಂತ ಸಾಮಾಜಿಕ ಕಾರ್ಯಕರ್ತರನ್ನು ಬಾಂಬೆ ಉಚ್ಚ ನ್ಯಾಯಾಲಯ ಜಾಮೀನು ನೀಡಿದ್ದರೂ ಆ ತೀರ್ಪಿಗೆ ತಡೆಯಾಜ್ಞೆ ತರಲು ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಪ್ರೊ. ಸಾಯಿಬಾಬಾ ಅವರು ಜಾಮೀನಿನ ಮೇಲೆ ಬಿಡುಗಡೆಯಾಗದಂತೆ ಸರಕಾರ ನೋಡಿಕೊಳ್ಳಲು ಕಾರಣ ಅವರು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರಕಾರವನ್ನು ವಸ್ತುನಿಷ್ಟವಾಗಿ ಟೀಕಿಸಲು ತಮ್ಮ ಮಿದುಳನ್ನು ಸಾಕಷ್ಟು ಪರಿಣಾಮಕಾರಿಯಾಗಿ ನಿಯೋಜಿಸುತ್ತಾರೆ ಎಂಬುದು. ಇದೇ ಅಕ್ಟೋಬರ್ ೨೯, ೨೦೨೨ ರ ದಿ ವೈರ್ ವೆಬ್ ನಿಯತಕಾಲಿಕದಲ್ಲಿ ಶಾರುಖ್ ಆಲಂ ಬರೆದಿರುವ ಅಂಕಣವನ್ನು ಆಧಾರವಾಗಿಟ್ಟುಕೊಂಡು ನಾನು ಇಲ್ಲಿ ರಾಜಕೀಯ ಕ್ಷೇತ್ರದ ಅಪರಾಧೀಕರಣ ಪ್ರಕ್ರೀಯೆಯ ಹಲವು ಸಂಗತಿಗಳನ್ನು ಚರ್ಚಿಸಿದ್ದೇನೆ.
ಕಳೆದ ಏಳೆಂಟು ವರ್ಷಗಳಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ನಿಜವಾದ ಗಲಭೆಕೋರರ ಬಗ್ಗೆ ಸರಕಾರ ತಲೆಕೆಡಿಸಿಕೊಂಡಂತೆ ತೋರುತ್ತಿಲ್ಲ; ಅಥವಾ ದ್ವೇಷ ಭಾಷಣದಲ್ಲಿ, ಮತಾಂಧ ಅಪರಾಧಗಳಲ್ಲಿ ತೊಡಗಿಸಿಕೊಂಡವರು, ಗುಂಪು ಹತ್ಯೆಕೋರರು, ಕೆಲವು ‘ರಾಜಕೀಯ’ ಅತ್ಯಾಚಾರಿಗಳು ಮತ್ತು ಕೊಲೆಗಾರರಿಗೆ ಸೂಕ್ತ ರಕ್ಷಣೆ ನೀಡುವ ಹಾಗು ಅಂತಹ ಚಟುವಟಿಕೆಗಳ ಬಗ್ಗೆ ಸರಕಾರದ ದಿವ್ಯ ನಿರ್ಲಕ್ಷತನ ನೋಡುತ್ತಿದ್ದೇವೆ. ಈ ಅಸಂಗತತೆಗಳ ಬಗ್ಗೆ ನಾವು ಹೇಗೆ ಯೋಚಿಸಬೇಕು ಎಂದು ಅಲಂ ಅವರು ಪ್ರಶ್ನಿಸಿದ್ದಾರೆ. ಅಲಂ ಅವರು ತಾವು ಕಾನೂನು ವಿದ್ಯಾರ್ಥಿಯಾಗಿದ್ದಾಗ ರಾಜಕೀಯ ತತ್ತ್ವಶಾಸ್ತ್ರ ಪರಿಚಯಿಸುವ ಚಿಕ್ಕ ಅದ್ಯಾಯವನ್ನ ಓದಿದ್ದರಂತೆ. ಆ ಅದ್ಯಾಯದ ಪಠ್ಯವು ರಾಜಕೀಯವನ್ನು ಎರಡು ಪ್ರಶ್ನೆಗಳ ಮೇಲೆ ಕೇಂದ್ರೀಕರಿಸುತ್ತ ‘ಯಾರು ಏನು ಪಡೆಯುತ್ತಾರೆ’ ಮತ್ತು ‘ಯಾರು ಏನು ಹೇಳುತ್ತಾರೆ?’ ಎಂದು ವಿವರಿಸುತ್ತಿತ್ತಂತೆ. ಭೌತಿಕ ಅಥವಾ ಸಂಪನ್ಮೂಲಗಳನ್ನು ಮೀರಿ, ರಾಜಕೀಯವು ಹಲವು ಪ್ರಶ್ನೆಗಳನ್ನು ಕೇಳುತ್ತದೆ: ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಜನರಿಗೆ ಹೇಗೆ ವಿತರಿಸಬೇಕು? ಕೆಲವು ಜನರಿಗೆ ಇತರರಿಗಿಂತ ವಿಶೇಷವಾದ ಹಾಗು ಹೆಚ್ಚಿನ ಸ್ವಾತಂತ್ರ್ಯ ಕೊಡಬೇಕೆ? ಮತ್ತು ಹಾಗೆ ವಿಶೇಷವಾದ ಹಾಗು ಹೆಚ್ಚಿನ ಸ್ವಾತಂತ್ರ್ಯ ನೀಡಲು ಅಂತಿಮವಾಗಿ ಅದು ಯಾವ ಆಧಾರದಲ್ಲಿ? ಹೀಗೆ ಅಲಂ ಅವರು ಸ್ವಾತಂತ್ರ್ಯ ಮತ್ತು ಹಕ್ಕುಗಳ ಕುರಿತ ತಾರತಮ್ಯವನ್ನು ವಿವರಿಸಿದ್ದಾರೆ.
ರಾಜಕೀಯ ತತ್ತ್ವಶಾಸ್ತ್ರವು ‘ಯಾರು ಏನನ್ನು ಪಡೆಯಬೇಕು’ ಮತ್ತು ‘ಯಾವ ಪ್ರಮಾಣದಲ್ಲಿ’ ಎಂಬುದನ್ನು ರಾಜಕೀಯ ಅಧಿಕಾರವನ್ನು ಉಳಿಸಿಕೊಂಡವರು ನಿರ್ಧರಿಸುತ್ತಾರೆ. ರಾಜಕೀಯ ಅಧಿಕಾರವು ಕೆಲವೊಮ್ಮೆ ‘ಯಾರು ಏನನ್ನು ಪಡೆಯಬೇಕು’ ಎಂಬ ಪ್ರಶ್ನೆಯ ಮೇಲೆ ಸಂವಿಧಾನವನ್ನು ಕಡೆಗಣಿಸುತ್ತದೆ ಮತ್ತು ದೃಢವಾದ ಕ್ರಮ ಹಾಗು ಸಂರಕ್ಷಿತ ಗುಂಪುಗಳಿಗೆ ವಿಶೇಷ ಹಕ್ಕುಗಳನ್ನು ನೀಡುತ್ತದೆ. ರಾಜಕೀಯ ಅಧಿಕಾರವು ಸದಾ ಬಹುಸಂಖ್ಯಾತರ ಭಾವನೆಗಳಿಗೆ ಮನ್ನಣೆ ನೀಡುತ್ತದೆ ಎನ್ನುತ್ತಾರೆ ಅಲಂ ಅವರು. ರಾಜಕೀಯವು ಅಧಿಕಾರದ ಜಗಳದಲ್ಲಿ ತನ್ನನ್ನು ತೊಡಗಿಸಿಕೊಂಡಿರುತ್ತದೆ, ಮತ್ತು ಅದು ಅಂತಿಮವಾಗಿ ನ್ಯಾಯವನ್ನು ಜನರಿಗೆ ಹೇಗೆ ವಿತರಿಸಬೇಕು ಎಂಬುದನ್ನು ನಿರ್ಧರಿಸುತ್ತದೆ. ಚಾರ್ಲ್ಸ್ ಡಿಕನ್ಸ್ ೧೮೩೭ ರಲ್ಲಿ ಆಲಿವರ್ ಟ್ವಿಸ್ಟ್ (ಅಥವಾ ದಿ ಪ್ಯಾರಿಷ್ ಬಾಯ್ಸ್ ಪ್ರೋಗ್ರೆಸ್) ಅನ್ನು ಬರೆದು, ಅಲ್ಲಿ ಮಾಸ್ಟರ್ ಪ್ಯಾರಿಷ್ ಅನಾಥಾಶ್ರಮದಲ್ಲಿನ ಹುಡುಗರಿಗೆ ಅತ್ಯಂತ ಕಡಿಮೆ ಪ್ರಮಾಣದ ಆಹಾರವನ್ನು ಹೇಗೆ ಬಡಿಸಿದರು ಮತ್ತು ಅದರಲ್ಲಿ ಹೆಚ್ಚಿನದನ್ನು ತನಗಾಗಿ ಇಟ್ಟುಕೊಳ್ಳುವ ಪ್ರಕಣವನ್ನು ಒಂದು ಅಧ್ಯಾಯ ವಿವರಿಸುತ್ತದೆ. ಒಂದು ಕಟುವಾದ ದೃಶ್ಯದಲ್ಲಿ, ಆಲಿವರ್ ಟ್ವಿಸ್ಟ್, ‘ದುಃಖ ಮತ್ತು ಏಕಾಂಗಿ’ ಮತ್ತು ‘ದಣಿದ ಮತ್ತು ಹಸಿದ’ ಸ್ಥಿತಿಯಲ್ಲಿ ಮಾಸ್ಟರ್‌ನ ಬಳಿಗೆ ನಡೆದುಕೊಂಡು ಹೋಗುತ್ತಾನೆ: “ಸರ್ ದಯವಿಟ್ಟು, ನನಗೆ ಇನ್ನೂ ಸ್ವಲ್ಪ ಸಿಗಬಹುದೇ” ಎಂದು ಪ್ರಶ್ನಿಸುವ ದೃಶ್ಯಯು ಈ ದೇಶದ ರಾಜಕೀಯ ಅಧಿಕಾರವನ್ನು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ ಅಲಂ ಅವರು.

ಆಗ ಆ ಮಾಸ್ಟರ್ ಆಲಿವರ್‌ನ ತಲೆಗೆ ಹೊಡೆಯುತ್ತಾನೆ. ‘ಕೃತಘ್ನ ಹುಡುಗ!’ ಎಂದು ವಿಕೃತ ಆನಂದ ಪಡೆಯುತ್ತಾನೆ. ತಕ್ಷಣವೇ ಆತ ಆಶ್ರಮದ ಆಡಳಿತ ಮಂಡಳಿಯ ಸಭೆಯನ್ನು ಕರೆಯುತ್ತಾನೆ. ಆ ಅನಾಥ ಹುಡುಗನಿಗೆ ಹೆಚ್ಚಿನ ಆಹಾರ ಕೇಳಿದ್ದಕ್ಕಾಗಿ ನೇಣು ಹಾಕಬೇಕು ಎಂದು ಸಭೆ ಆಕ್ರೋಶ ವ್ಯಕ್ತಪಡಿಸುತ್ತದೆ.” ಸಮಾನ ಪ್ರಮಾಣದ ಆಹಾರ ವಿತರಣೆಗಾಗಿ ಆಲಿವರ್‌ನ ಕೋರಿಕೆಯ ಅಧಿಕಾರಸ್ಥ ಮಾಸ್ಟರಗೆ ಆಘಾತ ಮತ್ತು ಭಯ ಹುಟ್ಟಿಸುತ್ತದೆ. ಆ ಹುಡುಗನನ್ನು ಕೃತಘ್ನ ಅಥವಾ ಅಪರಾಧಿ ಎಂದು ಪರಿಗಣಿಸಲಾಗುತ್ತದೆ. ಅವನ ಆ ನ್ಯಾಯಯುತ ಬೇಡಿಕೆಯ ನಡವಳಿಕೆಯು ಇತರ ಹುಡುಗರ ಮನಸ್ಸಿನ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆಂದು ಪರಿಗಣಿಸಲಾಗುತ್ತದೆ. ಆ ಹುಡುಗನ ಹಠಾತ್ ಕ್ರಿಯೆಯು ಯಜಮಾನನಿಗೆ ದೈಹಿಕ ಅಸ್ವಸ್ಥತೆಯನ್ನು ಉಂಟುಮಾಡಿತ್ತು. ಅಂತಿಮವಾಗಿ, ಆಲಿವರ್‌ನ ದೈಹಿಕ ಸೆರೆವಾಸವು ಒಂದು ರಾಜಕೀಯ ಕಾರ್ಯದ ಭಾಗವಾಗಿ ನಿರ್ಣಯಿಸುತ್ತದೆ ಎನ್ನುತ್ತಾರೆ ಅಲಂ ಅವರು.
ರಾಜಕೀಯ ಅಧಿಕಾರವು ಈ ರೀತಿಯಾಗಿ ಜನಸಾಮಾನ್ಯರ ಅಧಿಕಾರˌ ಹಕ್ಕುಗಳು ಮತ್ತು ಸಂಪನ್ಮೂಲಗಳನ್ನು ನ್ಯಾಯಯುತವಾಗಿ ವಿತರಿಸುವುದಿಲ್ಲ ಹಾಗು ಸಮಾನತೆಯ ಬದಲಾವಣೆಯನ್ನು ತಡೆಯುವ ವ್ಯವಹಾರವಾಗಿದೆ. ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವ ಪ್ರಯತ್ನಗಳನ್ನು ಅರಾಜಕತೆˌ ಸಂಘರ್ಷ ಅಥವಾ ರಾಷ್ಟ್ರವಿರೋಧಿ ಎಂದು ಹಣೆಪಟ್ಟಿ ಕಟ್ಟುವ ಮೂಲಕ ಯಥಾಸ್ಥಿತಿವಾದವನ್ನು ಘನೀಕರಿಸುತ್ತದೆ ಎನ್ನುವುದು ಅಲಂ ಅವರ ಅಭಿಪ್ರಾಯವಾಗಿದೆ. ಜ್ಯೋತಿ ಜಗತಾಪ್ ಅವರಿಗೆ ಜಾಮೀನು ನಿರಾಕರಿಸುವ ಆದೇಶದಲ್ಲಿ ಹೀಗೆ ಬರೆಯಲಾಗಿದೆ:
‘ಕಬೀರ್ ಕಲಾ ಮಂಚ್ ಸದಸ್ಯರು ರಚಿಸಿದ ರಂಗ ನಾಟಕದ ಲಿಪಿಯನ್ನು ನಾವು ಎಚ್ಚರಿಕೆಯಿಂದ ಪರಿಶೀಲಿಸಿದ್ದೇವೆ. ಇದನ್ನು ಓದುವಾಗ, ಘಟನೆಯ ದಿನಾಂಕದಂದು ಕಲಾ ಮಂಚ್ ಮತ್ತು ಅದರ ಕಾರ್ಯಕರ್ತರು ವಹಿಸಿದ ಪಾತ್ರವು ಆಕ್ರಮಣಕಾರಿ ಮಾತ್ರವಲ್ಲ, ಹೆಚ್ಚು ಪ್ರಚೋದನಕಾರಿ ಮತ್ತು ದ್ವೇಷ ಮತ್ತು ಭಾವೋದ್ರೇಕವನ್ನು ಪ್ರಚೋದಿಸಲು ಸ್ಪಷ್ಟವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲು ನಾವು ಭಯಪಡುತ್ತೇವೆ. ಕಲಾ ಮಂಚ್ ನ ಪಠ್ಯ/ಪದಗಳು/ಕಾರ್ಯನಿರ್ವಹಣೆಯಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರದ ವಿರುದ್ಧ ನೇರವಾಗಿ ಸೂಚಿಸಲಾದ ಹಲವಾರು ಒಳನುಗ್ಗುವಿಕೆಗಳಿವೆ, ಸರ್ಕಾರವನ್ನು ಉರುಳಿಸಲು, ಸರ್ಕಾರವನ್ನು ಅಪಹಾಸ್ಯ ಮಾಡಲು, ಪಾತ್ರವನ್ನು ಎತ್ತಿ ತೋರಿಸಲು ಅದರ ಆಯ್ದ ಭಾಗಗಳನ್ನು ಇಲ್ಲಿ ಉಲ್ಲೇಖಿಸಬೇಕಾಗಿದೆ. ಇವುಗಳ ಹಾಡುಗಳು / ಪದಗುಚ್ಛಗಳು / ಕೇಳಲಾದ ಪ್ರಶ್ನೆಗಳು ಮತ್ತು ನೀಡಿದ ಉತ್ತರಗಳು ಮತ್ತು ಪ್ರದರ್ಶನವು ಹಾಸ್ಯಾಸ್ಪದ ನುಡಿಗಟ್ಟುಗಳಿಗೆ ಸಂಬಂಧಿಸಿದೆ; “ಅಚ್ಛೇ ದಿನ್”, “ಗೋಮೂತ್ರ”, “ಶಾಕಾಹಾರ್”, “ಪ್ರಧಾನಿಗಳನ್ನು “ಶಿಶು”, “ಪ್ರಧಾನಿಯವರ ಪ್ರವಾಸ”, “ಆರ್‌ಎಸ್‌ಎಸ್ ಉಡುಗೆ/ಉಡುಪು”, “ನೋಟು ರದ್ದತಿಯಂತಹ ನೀತಿಗಳು”, “ಸನಾತನ ಧರ್ಮ” ಎಂದು ಉಲ್ಲೇಖಿಸಲಾಗಿದೆ. ”, “ರಾಮ ಮಂದಿರ” […].’ ಈ ಆದೇಶದ ಹಿಂದಿರುವ ಭಾವನೆಯು ಆಲಿವರ್ ಟ್ವಿಸ್ಟ್ನಲ್ಲಿನ ಮಾಸ್ಟರ್ ನ ಮಾನಸಿಕ ಅಸ್ವಸ್ಥತೆಯನ್ನು ನೆನಪಿಸುತ್ತದೆ.
ಇಂತಹ ಕೇಸುಗಳನ್ನು ನೋಡಿದಾಗ ಮೊದಮೊದಲು ಆ ರೀತಿ ಕಾಣಿಸದೇ ಇರಬಹುದು, ಆದರೆ ಕ್ರಿಮಿನಲ್ ಮೊಕದ್ದಮೆಗಳ ರೂಪದಲ್ಲಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಕರೆತಂದಾಗಲೂ ಸ್ಥಾಪಿತ ರಾಜಕೀಯವು ಮೋಸ, ಹಣ ಮತ್ತು ವಶೀಲಿಗಳ ಮೂಲಕವೇ ತನ್ನ ಕಾರ್ಯವನ್ನು ಮಾಡುತ್ತದೆ. ನಮ್ಮ ದೇಶದಲ್ಲಿ ರಾಜಕೀಯವು ಬದುಕಿನ ವ್ಯವಹಾರದಲ್ಲಿ ಅಂತರ್ಗತವಾಗಿದ್ದು ಅದು ಆ ಮಟ್ಟಿಗೆ ನ್ಯಾಯಾಂಗದ ತೀರ್ಪುಗಳಲ್ಲಿ ನುಸುಳುತ್ತದೆ. ಇದು ಭೌತಿಕ ಸಂಪನ್ಮೂಲಗಳು ಮತ್ತು ಸ್ವಾತಂತ್ರ್ಯಗಳ ಅಸಮಾನವಾದ ವಿತರಣೆಯನ್ನು ಪ್ರೋತ್ಸಾಹಿಸುತ್ತದೆ ಅಥವಾ ಯಥಾಸ್ಥಿತಿಯನ್ನು ಫ್ರೀಜ್ ಮಾಡುತ್ತಾರೆ. ಸಂಪನ್ಮೂಲಗಳ ಹಂಚಿಕೆಗೆ ಸಂಬಂಧಿಸಿದ ಹಲವಾರು ಪ್ರಕರಣಗಳ ಉದಾಹರಣೆ ನಮ್ಮ ಮುಂದಿದೆ. ಅದನ್ನು ನಾವು ಸಶಸ್ತ್ರ ಪಡೆಗಳಲ್ಲಿ ˌ ಶಾಶ್ವತ ಆಯೋಗದ ರಚನೆ ಮತ್ತು ಕಾರ್ಯಗಳಲ್ಲಿ ಹಾಗು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯ ಸಂದರ್ಭದಲ್ಲಿ ನಾವು ಕಾಣಬಹುದಾಗಿದೆ ಎನ್ನುತ್ತಾರೆ ಅಲಂ ಅವರು.
ನಮ್ಮ ನ್ಯಾಯಾಲಯಗಳು ಸಾಮಾನ್ಯವಾಗಿ ಗಂಭೀರ ರಾಜಕೀಯ ಅಪರಾಧಿಗಳ ವಿಚಾರಣೆಯ ಸಂದರ್ಭಗಳಲ್ಲಿ ಇಂತಹ ತೀವ್ರ ಸ್ವರೂಪದ ವಾದಗಳನ್ನು ನಿರ್ಲಕ್ಷಿಸುತ್ತವೆ ಮತ್ತು ಎಲ್ಲಿ ಸಾಧ್ಯವೋ ಅಲ್ಲಿ ಜಾಮೀನು ನೀಡುತ್ತವೆ. ಆದರೆ ನ್ಯಾಯಾಲಯಗಳು ರಾಜಕೀಯದ ಪ್ರಭಾವದಿಂದ ಹೊರಬಂದು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು ಎಂದು ಅಲಂ ಅವರು ಬಯಸುತ್ತಾರೆ. ಶಾರುಖ್ ಆಲಂ ಅವರು ಪ್ರಸ್ತುತ ಸುಪ್ರೀಂ ಕೋರ್ಟ್ ವಕೀಲರಾಗಿದ್ದು ಈ ಅಂಕಣವನ್ನು ಪ್ರಸ್ತುತ ಮೋದಿ ಆಡಳಿತದಲ್ಲಿ ನ್ಯಾಯಾಂಗದ ಮೇಲಿನ ರಾಜಕೀಯ ಪ್ರಭಾವವನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದಂತಿದೆ.