ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, 2017ರಲ್ಲಿ ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೋಕಾ (KCOCA) ಕಾಯ್ದೆಯಡಿ ಆರೋಪಿ ಮೋಹನ್ ವಿರುದ್ಧ ದಾಖಲಾಗಿದ್ದ ಕೇಸನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಗೌರಿ ಲಂಕೇಶ್ ಹಂತಕರ ವಿರುದ್ಧ ಸಲ್ಲಿಸಲಾಗಿದ್ದ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ 2000 (KCOCA Act, 2000) ಅಡಿಯಲ್ಲಿನ ಆರೋಪಗಳನ್ನು ವಜಾಗೊಳಿಸಿದ್ದ ಹೈಕೋರ್ಟ್ ಹತ್ಯೆಯನ್ನು ಸಾಮಾನ್ಯ ಕೊಲೆಯಂತೆ ವಿಚಾರಣೆ ನಡೆಸಲು ಮುಂದಾಗಿತ್ತು. ಆ ಸಂದರ್ಭದಲ್ಲಿ ಮೋಹನ್ ನಾಯಕ್ ತನಗೆ ಜಾಮೀನು ನೀಡುವಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ.

ಇದಕ್ಕೆ ಗೌರಿ ಸಹೋದರಿ ಕವಿತಾ ಲಂಕೇಶ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. “ಗೌರಿ ಲಂಕೇಶ್ ಅವರ ಹತ್ಯೆ ಸಾಮಾನ್ಯ ಕೊಲೆ ಅಲ್ಲ. ಒಂದು ಸಂಘಟಿತ ಮತ್ತು ಸೈದ್ಧಾಂತಿಕ ದ್ವೇಷದ ಕಾರಣಕ್ಕೆ ನಡೆಸಲಾದ ಹತ್ಯೆ. ಕೋಕಾ ಕಾಯ್ದೆಯನ್ನು ಕೈಬಿಡುವುದರಿಂದ ಹತ್ಯೆಯ ಹಿಂದಿರುವ ಕಾಣದ ಕೈಗಳಿಗೆ ಶಿಕ್ಷೆಯಾಗುವುದಿಲ್ಲ” ಎಂದು ಕವಿತಾ ಲಂಕೇಶ್ ಅವರ ಪರವಾಗಿ ನ್ಯಾಯವಾದಿ ತೀಸ್ತಾ ಸೆತಲ್ವಾದ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದರು.
ಮೇಲ್ಮನವಿ ಆಲಿಸಿದ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶವನ್ನು ರದ್ದು ಮಾಡಿ ಈ ಮೂಲಕ ಆರೋಪಿ ಮೋಹನ್ ವಿರುದ್ಧ ದಾಖಲಾಗಿದ್ದ ಪ್ರಕರಣ ಎತ್ತಿಹಿಡಿದಿದೆ.












