ಬೆಂಗಳೂರು: ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದು ಹೆಚ್‌ಆರ್ ಹುದ್ದೆಗೆ ನಾನ್ ಕನ್ನಡಿಗ (Non Kannadiga) ಕನ್ನಡಿಗರಲ್ಲದ ಅಭ್ಯರ್ಥಿ ಬೇಕು ಎಂದು ಜಾಹೀರಾತು ಪ್ರಕಟಿಸಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕನ್ನಡಪರ ಸಂಘಟನೆಗಳ ಒತ್ತಡದ ಹಿನ್ನೆಲೆಯಲ್ಲಿ ಕಂಪನಿ ಯೂಟರ್ನ್ ಹೊಡೆದು ಕ್ಷಮೆ ಕೇಳಿ ಜಾಹೀರಾತು ಹಿಂಪಡೆದಿದೆ.

ಜೆಪಿ ನಗರದಲ್ಲಿರುವ ‘ಸ್ಕಿಲ್ ಸೋನಿಕ್ಸ್’ (Skills Sonix) ಎಂಬ ಖಾಸಗಿ ಕಂಪನಿ, ನೌಕರಿ ಡಾಟ್ ಕಾಂ ವೆಬ್‌ಸೈಟ್‌ನಲ್ಲಿ ಹೆಚ್‌ಆರ್ ಹುದ್ದೆಗೆ ಅರ್ಜಿ ಆಹ್ವಾನಿಸಿ, ‘NON KANNADA PERSON’ ಎಂದು ಸ್ಪಷ್ಟವಾಗಿ ಉಲ್ಲೇಖಿಸಿತ್ತು. ಈ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡಿಗರಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿತು. ದುಡಿಯೋಕೆ ಕನ್ನಡ ನೆಲ ಬೇಕು, ದುಡ್ಡು ಮಾಡೋಕೆ ಕರ್ನಾಟಕ ಬೇಕು; ಆದರೆ ಉದ್ಯೋಗಕ್ಕೆ ಕನ್ನಡಿಗರು ಬೇಡವೇ? ಎಂದು ಪ್ರಶ್ನಿಸಿ, ನೆಟ್ಟಿಗರು ಕಂಪನಿಯ ವಿರುದ್ಧ ಕಿಡಿಕಾರಿದ್ದರು.

ಕನ್ನಡಪರ ಸಂಘಟನೆಗಳ ಎಚ್ಚರಿಕೆ
ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಈ ಜಾಹೀರಾತನ್ನು ತೀವ್ರವಾಗಿ ಖಂಡಿಸಿ, ಖಾಸಗಿ ಕಂಪನಿಗೆ ಎಚ್ಚರಿಕೆ ನೀಡಿದರು. ಇದೇ ವೇಳೆ ಯುವ ಕರ್ನಾಟಕ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದವು. ಪ್ರತಿಭಟನೆಯ ತೀವ್ರತೆ ಅರಿತ ಸ್ಕಿಲ್ ಸೋನಿಕ್ಸ್ ಕಂಪನಿ, ತಕ್ಷಣವೇ ಜಾಹೀರಾತನ್ನು ಹಿಂಪಡೆದು, ಕನ್ನಡಿಗರ ಬಳಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದೆ.

ಈ ಜಾಹೀರಾತಿನಲ್ಲಿ ನಾನ್ ಕನ್ನಡಿಗ ಜೊತೆಗೆ ನಾನ್ ಮರಾಠಿ ಅಭ್ಯರ್ಥಿ ಬೇಕು ಎನ್ನುವ ಅಂಶವನ್ನೂ ಕೂಡ ಉಲ್ಲೇಖಿಸಲಾಗಿದ್ದು, ಮಹಾರಾಷ್ಟ್ರದಲ್ಲೂ ಮರಾಠಿ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಕಂಪನಿ ವಿರುದ್ಧ ಎರಡು ರಾಜ್ಯಗಳಲ್ಲಿ ಒತ್ತಡ ಹೆಚ್ಚಾಗಿತ್ತು. ಈ ಘಟನೆ ಬೆನ್ನಲ್ಲೇ, ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮತ್ತೆ ಭುಗಿಲೆದ್ದಿದೆ.











