ಕಂಪ್ಲಿ (ಬಳ್ಳಾರಿ ಜಿಲ್ಲೆ) ಫೆಬ್ರುವರಿ 22: ಕಂಪ್ಲಿ ವಿಧಾನ ಸಭಾ ಕ್ಷೇತ್ರದ ಕುರುಗೋಡಿನಲ್ಲಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳ ಅಭೂತಪೂರ್ವವಾಗಿ ಯಶಸ್ವಿಯಾಯಿತು. ಗ್ರಾಮೀಣರಿಗೆ ಉದ್ಯೋಗ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಮೇಳ.

50 ಕ್ಕೂ ಹೆಚ್ಚು ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಿದ್ದವು. 4000
ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಮೇಳದಲ್ಲಿದ್ದವು. ಎಸ್‌ಎಸ್‌ಎಲ್‌ಸಿ, ಪಿಯು, ಪದವಿ, ಡಿಪ್ಲೊಮಾ, ಪ್ಯಾರಾಮೆಡಿಕಲ್, ಫಾರ್ಮಸಿ, ಸ್ನಾತಕೋತ್ತರ ಪದವೀಧರರು, ವಿಶೇಷ ಚೇತನರು ಹಾಗೂ ತೃತೀಯ ಲಿಂಗಿಗಳು ಭಾಗವಹಿಸಿದ್ದರು.
ಚಾಲನೆ ನೀಡಿದ ಸಚಿವ ಲಾಡ್
ಮೇಳದ ರೂವಾರಿ, ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

” ಗ್ರಾಮೀಣ ಭಾಗದಲ್ಲಿ ಇಂತಹ ಮೇಳಗಳನ್ನು ಆಯೋಜಿಸುವುದರಿಂದ ಉದ್ಯೋಗಾಕಾಂಕ್ಷಿಗಳಿಗೆ ಕೆಲಸ ಪಡೆಯಲು ಉತ್ತಮ ಅವಕಾಶಗಳು ದೊರೆಯಲಿವೆ. ಇಂತಹ ಮೇಳ ಆಯೋಜಿಸಲು ಶಾಸಕರಾದ ಜೆ ಎನ್ ಗಣೇಶ್ ಅವರು ಸಾಕಷ್ಟು ಶ್ರಮವಹಿಸಿದ್ದಾರೆ. ತಮ್ಮ ಕ್ಷೇತ್ರದ ವಿದ್ಯಾವಂತ ನಿರುದ್ಯೋಗಿಗಳಿಗೆ ಕೆಲಸ ಕೊಡಿಸಲು ಗಣೇಶ್ ಅವರು ಮುಂದಾಗಿರುವುದು ಖುಷಿಯ ವಿಷಯ” ಎಂದರು.

ಶಾಸಕ ಗಣೇಶ್ ಅವರು ಮಾತನಾಡಿ, ಸಂತೋಷ್ ಫೌಂಡೇಶನ್ ಇಂತಹ ಮೇಳಗಳನ್ನು ಆಯೋಜಿಸಿ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಹಲವೆಡೆ ಮೇಳ
ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಹಲವೆಡೆ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಈ ಹಿಂದೆ ಕಲಘಟಗಿ, ಸಂಡೂರುಗಳಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಅಭ್ಯರ್ಥಿಗಳು ಈ ಮೇಳದಲ್ಲಿ ಭಾಗವಹಿಸಿ ಕೆಲಸ ಪಡೆದಿದ್ದರು.