ಎರಡು ವರ್ಷಗಳ ಹಿಂದೆ 2018ರ ಆರಂಭದಲ್ಲಿ ಫೈನಾನ್ಷಿಯಲ್ ಎಕ್ಸ್ ಪ್ರೆಸ್ ಪ್ರಕಟಿಸಿದ ವಿಶೇಷ ವರದಿಯ ಪ್ರಕಾರ 2016-17ರಲ್ಲಿ ಅಮೆರಿಕೆಯಲ್ಲಿನ ಭಾರತೀಯ ವಿದ್ಯಾರ್ಥಿಗಳು ತಮ್ಮ ವಿದೇಶೀ ವ್ಯಾಸಂಗಕ್ಕಾಗಿ ಮಾಡಿದ್ದ ವೆಚ್ಚ 42,835 ಕೋಟಿ ರುಪಾಯಿ. ಈಗ ಈ ಮೊತ್ತ ಇನ್ನಷ್ಟು ಏರಿರುತ್ತದೆಯೇ ವಿನಾ ಇಳಿದಿರುವುದಿಲ್ಲ. 2019ರ ಜುಲೈನಲ್ಲಿ ಮಂಡಿಸಲಾದ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಉನ್ನತ ಶಿಕ್ಷಣಕ್ಕೆ ಹಂಚಿಕೆ ಮಾಡಲಾಗಿರುವ ಮೊತ್ತ 38,317 ಕೋಟಿ ರುಪಾಯಿಗಳು.
ಅರ್ಥಾತ್ ಭಾರತ ಸರ್ಕಾರ ಉನ್ನತ ಶಿಕ್ಷಣದ ಮೇಲೆ ಮಾಡುತ್ತಿರುವ ವಾರ್ಷಿಕ ವೆಚ್ಚಕ್ಕಿಂತ ಸಾವಿರಾರು ಕೋಟಿ ರೂಪಾಯಿ ಹೆಚ್ಚು ಹಣವನ್ನು ಅಮೆರಿಕೆಯಲ್ಲಿ ಕಲಿಯುತ್ತಿರುವ ಭಾರತದ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಹೂಡುತ್ತಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ನಾಲ್ಕು ವರ್ಷಗಳ ಹಿಂದೆ ಐದು ಲಕ್ಷದಷ್ಟಿತ್ತು.
ಹಣವುಳ್ಳ ಪೋಷಕರು ತಮ್ಮ ಮಕ್ಕಳಿಗೆ ದೇಶ ವಿದೇಶಗಳಲ್ಲಿ ಉನ್ನತ ಶಿಕ್ಷಣವನ್ನು ಖರೀದಿಸುತ್ತಿದ್ದಾರೆ. ಉನ್ನತ ಶಿಕ್ಷಣ ಭಾರತದಲ್ಲಿ ಭರದಿಂದ ಖಾಸಗೀಕರಣಗೊಂಡಿದೆ. ಲಕ್ಷಾಂತರ ರೂಪಾಯಿಗಳ ಶುಲ್ಕ ವಿಧಿಸುವ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯಗಳು ತಲೆಯೆತ್ತಿವೆ. ಆದರೆ ಲಕ್ಷಾಂತರ ರುಪಾಯಿ ಹಣ ತೆತ್ತು ಗುಣಮಟ್ಟದ ಉನ್ನತ ಶಿಕ್ಷಣವನ್ನು ಖರೀದಿಸಲಾರದ ಕೋಟ್ಯಾಂತರ ಜನವರ್ಗ ಭಾರತದಲ್ಲಿದೆ. ಈ ಜನವರ್ಗಕ್ಕೆ ಸರ್ಕಾರಿ ಪ್ರಾಯೋಜಿತ ಉನ್ನತ ಶಿಕ್ಷಣದ ವಿನಾ ಬೇರೆ ಗತಿಯಿಲ್ಲ. ಆದರೆ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಭ್ರಷ್ಟಾಚಾರ, ಸ್ವಜನಪಕ್ಷಪಾತದ ಗೆದ್ದಲು ಮೆತ್ತಿ ಬಹಳ ಕಾಲವಾಯಿತು. ಅಲ್ಲಿನ ಶಿಕ್ಷಣದ ಗುಣಮಟ್ಟವೂ ಕುಸಿದಿದೆ. ಹಣಕಾಸಿನ ಕೊರತೆಯಿಂದ ಬಳಲಿವೆ. ಮನರೇಗಾ ಕೂಲಿಗಿಂತ ಕಡಿಮೆ ದರದ ಸಂಬಳ ಪಡೆದು ಕಲಿಸುತ್ತಿರುವ ಹಂಗಾಮಿ ಶಿಕ್ಷಕರು ನಮ್ಮ ಕಾಲೇಜು ಮತ್ತು ಉನ್ನತ ಶಿಕ್ಷಣದಲ್ಲಿ ಭಾರೀ ಸಂಖ್ಯೆಯಲ್ಲಿದ್ದಾರೆ. ಲಕ್ಷಾಂತರ ಗುತ್ತಿಗೆ ಶಿಕ್ಷಕರ ಕೆಲಸ 20-25 ವರ್ಷಗಳಿಂದ ಕಾಯಂ ಆಗಿಲ್ಲ.
ಖಿನ್ನಗೊಳಿಸುವ ಈ ಚಿತ್ರಣವನ್ನು ಮತ್ತಷ್ಟು ಮೂರಾಬಟ್ಟೆಯಾಗುವಂತೆ ಕದಡಲಾಗುತ್ತಿದೆ. ಅಳಿದುಳಿದಿರುವ ಉತ್ತಮ ಸರ್ಕಾರಿ ವಿಶ್ವವಿದ್ಯಾಲಯಗಳನ್ನು ನಾನಾ ನೆವಗಳನ್ನು ಒಡ್ಡಿ, ಕೆಟ್ಟ ಹೆಸರಿಟ್ಟು, ನಿಧಿ ನೀಡದೆ ಕೊರಗಿಸಲಾಗುತ್ತಿದೆ. ನಿಧಾನ ಸಾವಿನ ಮದ್ದು ಚುಚ್ಚಲಾಗುತ್ತಿದೆ. ಈ ಪ್ರಕ್ರಿಯೆಯ ಬಗಲಿನಲ್ಲೇ ದುಬಾರಿ ಶುಲ್ಕಗಳ ಕುಲೀನ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ವಂಚಿತ ಸಮುದಾಯಗಳು ಮತ್ತು ತಳವರ್ಗಗಳು ಈ ವಿಚ್ಛಿದ್ರೀಕರಣದ ನೇರ ಬಲಿಪಶುಗಳು. ಒಂದು ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯುವ ದುಷ್ಟತನವಿದು. ಅರಿವಿನ ಏಕಸ್ವಾಮ್ಯವನ್ನು, ಯಥಾಸ್ಥಿತಿಯನ್ನು ಪ್ರಶ್ನಿಸುವ ವಂಚಿತ ಸಮುದಾಯಗಳನ್ನು ಗುಣಮಟ್ಟದ ಉನ್ನತ ಶಿಕ್ಷಣದಿಂದ ದೂರ ಇರಿಸುವುದು. ಉನ್ನತ ಶಿಕ್ಷಣವನ್ನು ಇಂತಹ ಯಾವ ಪ್ರಶ್ನೆಯನ್ನೂ ಕೇಳದಿರುವ ಕುಲೀನರಿಗೆ ಸೀಮಿತಗೊಳಿಸುವುದು. ಸರ್ವಾಧಿಕಾರಿ ಪ್ರಭುತ್ವ ಮತ್ತು ಸರ್ವಾಧಿಕಾರಿ ರಾಜಕಾರಣ ಹಾಗೂ ಸಮಾನತೆಯನ್ನು ನಿರಾಕರಿಸುವ ಬಹುಸಂಖ್ಯಾವಾದದ ಸಾಮಾಜಿಕ ವ್ಯವಸ್ಥೆಗೆ ಜಾಗೃತ ವಿದ್ಯಾರ್ಥಿಸಮುದಾಯ ಬಹುದೊಡ್ಡ ಬೆದರಿಕೆ. ಅದರ ಕಾರ್ಯಸೂಚಿ ಜಾರಿಗೆ ವಿದ್ಯಾರ್ಥಿಶಕ್ತಿಯೇ ಅಡ್ಡಗಲ್ಲು.
ಈ ಕಾರ್ಯಸೂಚಿಯ ಅಂಗವಾಗಿ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯವನ್ನು ಹಾಳುಗೆಡವುವ ಹುನ್ನಾರ ಜರುಗಿದೆ.
ಸಮಾನತೆ-ಅರಿವು ಮತ್ತು ಪ್ರಶ್ನಿಸುವ ಮನೋಧರ್ಮದಲ್ಲಿ ಎತ್ತರಕ್ಕೆ ಬೆಳೆದಿರುವುದರಿಂದಾಗಿಯೇ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮೇಲೆ ಕಳೆದ ನಾಲ್ಕು ವರ್ಷಗಳಿಂದ ಸತತ ದಾಳಿ ನಡೆದಿದೆ. ದೇಶದ ಎಲ್ಲ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಸಮುದಾಯಕ್ಕೆ ಜೆ.ಎನ್.ಯು ಒಂದು ಆದರ್ಶ ಮಾದರಿ. ಹೀಗಾಗಿಯೇ ವಿವಿಯ ದಾಳಿಗೆ ದೇಶದ ಮೂಲೆ ಮೂಲೆಗಳಿಂದ ಪ್ರತಿರೋಧದ ಸ್ಪಂದನ ಒಡಮೂಡತೊಡಗಿದೆ.
ದೇಶದ್ರೋಹಿ ಘೋಷಣೆ ಕೂಗಿದ ಹುಸಿ ಆಪಾದನೆಗಳನ್ನು ಹೊರಿಸಿ ಪ್ರಭುತ್ವನಿಷ್ಠ ಮಾಧ್ಯಮಗಳ ಮೂಲಕ ಅಪಪ್ರಚಾರ ಮಾಡಲಾಯಿತು. ದೇಶದ್ರೋಹದ ಮೊಕದ್ದಮೆಯನ್ನು ಹೂಡಿ ಅಮಾಯಕ ಜನರ ಭಾವನೆಗಳನ್ನು ಕೆರಳಿಸಲಾಯಿತು. ಪರಿವಾರ ನಿಷ್ಠ ಉಪಕುಲಪತಿಯನ್ನು ನೇಮಕ ಮಾಡಲಾಯಿತು. ಬಲಪಂಥೀಯರನ್ನು ದೊಡ್ಡ ಪ್ರಮಾಣದಲ್ಲಿ ವಿವಿ ಹುದ್ದೆಗಳಿಗೆ ತುಂಬಲಾಯಿತು. ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಶುಲ್ಕಗಳಲ್ಲಿ ತೀವ್ರ ಏರಿಕೆ ಮಾಡಲಾಯಿತು. ಈ ಕ್ರಮಗಳು ನಿರೀಕ್ಷಿತ ಫಲ ನೀಡದೆ ಹೋದಾಗ ಗೂಂಡಾಗಳನ್ನು ವಿಶ್ವವಿದ್ಯಾಲಯದ ಆವರಣಕ್ಕೆ ನುಗ್ಗಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಕ್ರೂರವಾಗಿ ಥಳಿಸಲಾಯಿತು. ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಕೋಣೆಗಳ ಮೇಲೆ ದಾಳಿ ನಡೆಯಿತು.
ಈ ಪೂರ್ವನಿಯೋಜಿತ ದಾಳಿಗೆ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ದೆಹಲಿಯಲ್ಲಿ ಆಮ್ ಆದ್ಮೀ ಪಾರ್ಟಿಯ ಸರ್ಕಾರ ಅಧಿಕಾರದಲ್ಲಿರುವುದು ನಿಜ. ಆದರೆ ಈ ನಗರರಾಜ್ಯದ ಪೊಲೀಸ್ ವ್ಯವಸ್ಥೆಯ ಸಂಪೂರ್ಣ ಅಧಿಕಾರ ಕೇಂದ್ರ ಸರ್ಕಾರದ ಕೈಯಲ್ಲಿದೆ ಎಂಬುದನ್ನು ಗಮನಿಸಬೇಕು
ದಾಳಿಯ ಎರಡು ಮೂರು ತಾಸುಗಳ ಅವಧಿಯುದ್ದಕ್ಕೂ ಇಡೀ ಜೆ.ಎನ್.ಯು ಪ್ರದೇಶದ ಒಳ ಹೊರಗೆ ವಿದ್ಯುಚ್ಛಕ್ತಿ ಸಂಪರ್ಕವನ್ನು ಕಡಿದು ಹಾಕಲಾಗಿತ್ತು. ಮುಸುಕು ಧರಿಸಿದ ಪುಂಡರು ವಿದ್ಯಾರ್ಥಿಗಳನ್ನು ಮನಸೇಚ್ಛೆ ಥಳಿಸಿದರು. ಜಾಮಿಯಾ ಮಿಲಿಯಾ ಮತ್ತು ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯದ ಒಳಗೆ ನುಗ್ಗಿ ವಿದ್ಯಾರ್ಥಿಗಳನ್ನು ಅಟ್ಟಾಡಿಸಿಕೊಂಡು ಬಡಿದ ಪೊಲೀಸರು ಇಲ್ಲಿ ಗೂಂಡಾಗಳ ಅಟ್ಟಹಾಸಕ್ಕೆ ಮೂಕಪ್ರೇಕ್ಷಕರಾಗಿ ನಿಂತಿದ್ದರು. ಮುಖ್ಯದ್ವಾರದ ಮೂಲಕ ಬೇರೆ ಯಾರೂ ಒಳಹೋಗದಂತೆ ತಡೆದು ಒಳಗೆ ಗೂಂಡಾಗಿರಿಗೆ ರಕ್ಷಣೆ ನೀಡಿದರು. ಭಯಭೀತರಾಗಿದ್ದ ವಿದ್ಯಾರ್ಥಿಗಳು ಕ್ಯಾಂಪಸಿನೊಳಗಿಂದ ನೆರವು ಕೋರಿ ಮಾಡಿದ ಇಪ್ಪತ್ತಕ್ಕೂ ಹೆಚ್ಚು ದೂರವಾಣಿ ಕರೆಗಳಿಗೆ ಪೊಲೀಸರು ಕಿವುಡಾದರು. ತಮ್ಮ ಮುಂದೆಯೇ ಬಡಿಗೆ, ಸುತ್ತಿಗೆ, ಲಾಠಿಗಳನ್ನು ಹಿಡಿದು ವಿವಿ ಆವರಣದಿಂದ ಹೊರಬಿದ್ದ ಪುಂಡರನ್ನು ಪೊಲೀಸರು ಬಂಧಿಸುವುದಿರಲಿ, ಕನಿಷ್ಠ ತಡೆದು ನೀವು ಯಾರು ಎಂದು ಪ್ರಶ್ನಿಸಲೂ ಇಲ್ಲ. ಈ ದಾಳಿಕೋರರಿಂದ ತಲೆ ಒಡೆಸಿಕೊಂಡು ಕೈ ಮುರಿಸಿಕೊಂಡ ಜೆ.ಎನ್.ಯು. ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಐಷಿ ಘೋಷ್ ಮೇಲೆ ಮೂರು ಎಫ್.ಐ.ಆರ್.ಗಳನ್ನು ದಾಖಲಿಸಿ ತಮ್ಮ ಶೌರ್ಯ ಮೆರೆದರು ದೆಹಲಿ ಪೊಲೀಸರು. ಗುರುವಾರ ಸಂಜೆಯವರೆಗೆ ದಾಳಿಕೋರರ ಪೈಕಿ ಒಬ್ಬರನ್ನೂ ಬಂಧಿಸಲಾಗಿಲ್ಲ.
ಭಿನ್ನ ಹಿನ್ನೆಲೆಗಳಿಂದ ಬಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮುಖಾಮುಖಿ ಈ ವಿಶ್ವವಿದ್ಯಾಲಯಕ್ಕೆ ವಿಶೇಷ ಗುಣವನ್ನು ಸಂಪಾದಿಸಿಕೊಟ್ಟಿತು. ಪಟ್ಟಭದ್ರ ಹಿತಾಸಕ್ತ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ಬಂದ ಜೆ.ಎನ್.ಯು.ವನ್ನು ಎಡಪಂಥೀಯರ ಗಢವೆಂದು ಹೆಸರಿಡಲಾಯಿತು.
60 ಮತ್ತು 70ರ ದಶಕಗಳಲ್ಲಿ ಜಗತ್ತಿನ ಹಲವು ವಿಶ್ವವಿದ್ಯಾಲಯಗಳಲ್ಲಿ ಮಾರ್ಕ್ಸ್ ವಾದದ ಅಧ್ಯಯನಕ್ಕೆ ಸಾಕಷ್ಟು ಆಸಕ್ತಿ ಇತ್ತು. ಅಂದಿನ ಸಮಾಜವಿಜ್ಞಾನಿಗಳು ಕೇಳುತ್ತಿದ್ದ ಪ್ರಶ್ನೆಗಳಲ್ಲೇ ಮಾರ್ಕ್ಸ್ ವಾದ ಅಂತರ್ಗತ ಆಗಿತ್ತು. ಸಮಾಜ ಎಂದರೇನು, ಸಮಾಜದ ಸಂರಚನೆಯೇನು, ಅದು ಹುಟ್ಟಿದ್ದು ಹೇಗೆ, ಪ್ರಭುತ್ವ ಅಥವಾ ರಾಜ್ಯಾಧಿಕಾರ ಹೊರಹೊಮ್ಮಿದ್ದು ಎಂದು, ಅದರ ರೂಪ ಏನಿತ್ತು, ನೂರಾರು ವರ್ಷಗಳ ಅವಧಿಯಲ್ಲಿ ಈ ರೂಪ ಬದಲಾದ ಬಗೆ ಎಂತು, ಸಂಪನ್ಮೂಲಗಳನ್ನು ಯಾರು ನಿಯಂತ್ರಿಸುತ್ತಿದ್ದರು, ದೈಹಿಕ ದುಡಿಮೆ ಯಾರದಿತ್ತು,
ಧರ್ಮ ವಹಿಸಿದ ಪಾತ್ರವೇನು, ಧರ್ಮ ಕೇವಲ ಪೂಜೆ ಮತ್ತು ಶ್ರದ್ಧೆಯ ವಿಷಯಕ್ಕಷ್ಟೇ ಸೀಮಿತ ಆಗಿತ್ತೇ ಅಥವಾ ಸಾಮಾಜಿಕ ಸಂಸ್ಥೆಗಳನ್ನೂ ಅದು ನಿಯಂತ್ರಿಸುತ್ತಿತ್ತೇ, ವಿವಾಹದ ಮತ್ತು ಆಸ್ತಿಯ ವಾರಸುದಾರಿಕೆಯ ನಿಯಮಗಳು ಎಲ್ಲೆಡೆಯೂ ಒಂದೇ ಆಗಿರದೆ ಭಿನ್ನ ಭಿನ್ನ ಆಗಿದ್ದು ಯಾಕೆ ಎಂಬಂತಹ ಚರ್ಚೆ ಆಗುತ್ತಿತ್ತು. ಕೇವಲ ಮಾರ್ಕ್ಸ್ ವಾದ ಅಲ್ಲದೆ ಇತರೆ ಸಿದ್ಧಾಂತಗಳ ಮೂಲಕವೂ ಈ ಸಂಗತಿಯನ್ನು ಚರ್ಚಿಸಲಾಗುತ್ತಿತ್ತು. ಈ ಕಾರಣಕ್ಕಾಗಿ ಸಮಾಜವಿಜ್ಞಾನಗಳನ್ನು ಬಗೆದು ವಿಶ್ಲೇಷಿಸುವ ವಿಧಾನವೇ ಬದಲಾಯಿತು.
ಒಂದೇ ವಿಷಯದ ವಿವರಣೆಯನ್ನು ವಿದ್ಯಾರ್ಥಿಗಳು ಹಲವು ಸಿದ್ಧಾಂತಗಳ ಮೂಲಕ ಅಧ್ಯಯನ ಮಾಡಿದ್ದೇ ಅಲ್ಲದೆ ಅವುಗಳ ಕುರಿತು ವಾದಿಸಿದರು ಜೆ.ಎನ್.ಯುವಿನಲ್ಲಿ. ಚರ್ಚೆ ಮತ್ತು ಸಂವಾದಕ್ಕೆ ನೀಡಿದ ಪ್ರೋತ್ಸಾಹವೇ ಇಂತಹ ಆರೋಗ್ಯಕರ ಅಧ್ಯಯನಕ್ಕೆ ದಾರಿ ಮಾಡಿತ್ತು. ಭಾರತೀಯ ಸಮಾಜವನ್ನು ಅರ್ಥ ಮಾಡಿಕೊಳ್ಳಲು ಈ ಸಂವಾದದ ಪ್ರಶ್ನೆಗಳನ್ನು ಹೇಗೆ ಅದಕ್ಕೆ ಜೋಡಿಸುವುದು ಎಂಬುದರ ಕುರಿತೂ ಜೆ.ಎನ್.ಯು. ಚಿಂತಿಸಿತ್ತು. ಜೆ.ಎನ್.ಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮಾರ್ಕ್ಸ್ ವಾದಿಗಳುೇ ಎಂಬ ಹಣೆಪಟ್ಟಿ ಹಚ್ಚಿದ್ದು ಇದೇ ಹಂತದಲ್ಲಿ.
ಯಾವುದೇ ಸಂದರ್ಭದಲ್ಲೆ ತಲೆ ಎಣಿಕೆ ಮಾಡಿದರೂ ಜೆ.ಎನ್.ಯು.ವಿನ ಅಧ್ಯಾಪಕ ಸಿಬ್ಬಂದಿಯಲ್ಲಿ ಮಾರ್ಕ್ಸ್ ವಾದಿಗಳ ಸಂಖ್ಯೆ ಅತಿ ಸಣ್ಣದಾಗಿತ್ತು ಎಂದಿದ್ದಾರೆ ಪ್ರೊ.ರೊಮಿಲಾ ಥಾಪರ್. ಇಲ್ಲಿ ಕಲಿಸಲಾಗುತ್ತಿದ್ದ ಕೋರ್ಸ್ ಗಳ ಬಗ್ಗೆ, ಅವುಗಳ ಬೌದ್ಧಿಕ ಹೂರಣ ಬಗ್ಗೆ, ಯಾವ ಕೋರ್ಸನ್ನು ಹೇಗೆ ಕಲಿಸಲಾಗುತ್ತಿದೆ ಮತ್ತು ಅದನ್ನು ಹಾಗೆಯೇ ಯಾಕೆ ಕಲಿಸಲಾಗುತ್ತಿದೆ ಎಂಬುದನ್ನೇ ತಿಳಿಯದವರು ಈ ವಿಶ್ವವಿದ್ಯಾಲಯವನ್ನು ಪದೇ ಪದೇ ಮಾರ್ಕ್ಸ್ ವಾದಿ ವಿಶ್ವವಿದ್ಯಾಲಯ ಎಂದು ಕರೆದರು.
ಮಾರ್ಕ್ಸ್ ವಾದವನ್ನೇ ಅಧ್ಯಯನ ಮಾಡಿಲ್ಲದವರಿಗೆ ಉದಾರ ಚಿಂತನೆ ಮತ್ತು ಮಾರ್ಕ್ಸ್ ವಾದಿ ಚಿಂತನೆಯ ನಡುವಣ ವ್ಯತ್ಯಾಸವೇ ತಿಳಿಯಲಿಲ್ಲ.
ಇಪ್ಪತ್ತನೆಯ ಶತಮಾನದ ದ್ವಿತೀಯಾರ್ಧದಲ್ಲಿ ಸಮಾಜ ವಿಜ್ಞಾನಗಳು ಅಂತಾರಾಷ್ಟ್ರೀಯ ಆಂದೋಲನದೋಪಾದಿಯಲ್ಲಿ ಹೊರ ಹೊಮ್ಮಿದವು. ಹೀಗಾಗಿ ಸಾಂಪ್ರದಾಯಿಕ ಶಿಸ್ತುಗಳು ಹೊಸ ಬಗೆಯ ಚಿಂತನೆಗಳಿಗೆ ತೆರೆದುಕೊಂಡವು. ಈ ಬದಲಾವಣೆ ಅಂತಾರಾಷ್ಟ್ರೀಯ ಸ್ವರೂಪದ್ದು. ಮಾರ್ಕ್ಸ್ ವಾದಿ ಪ್ರಭೇದಗಳ ಜೊತೆಗೆ ಅಷ್ಟೇ ಬಗೆಯ ಇತರೆ ಥಿಯರಿಗಳ ಕುರಿತು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅತೀವ ಆಸಕ್ತಿ ತಳೆದಿದ್ದ ಕಾಲವಿದು. ಹೊಸ ಬಗೆಯ ಪ್ರಭಾವಿ ಬೌದ್ಧಿಕ ಚರ್ಚೆಗಳು ಹುಟ್ಟಿದವು. ನವ ಮಾರ್ಕ್ಸ್ ಸಿದ್ಧಾಂತವಾದಿ ಆಂಟೋನಿಯೋ ಗ್ರಾಂ ಶಿ, ಹಂಗೇರಿಯನ್ ಮಾರ್ಕ್ಸವಾದಿ ತತ್ವಜ್ಞಾನಿ ಜಾರ್ಜ್ ಲೂಕಾಕ್ಸ್ ಮತ್ತಿತರರ ಕೃತಿಗಳು ಅನುವಾದಗಳ ಮೂಲಕ ಲಭಿಸಿದವು. ಅವುಗಳ ವ್ಯಾಪಕ ಓದು ಮತ್ತು ಚರ್ಚೆ ಇದೇ ಕಾಲಘಟ್ಟದಲ್ಲಿ ಜರುಗಿತು.
ಅಲ್ಲಿಯತನಕ ಹೊರಬಂದಿದ್ದ ಭಾರತೀಯ ಎಡಪಂಥೀಯ ಮತ್ತು ಭಾರತೀಯ ಬಲಪಂಥೀಯ ಬರೆಹಗಳಿಗಿಂತ ಈ ಬರೆಹಗಳು ಆಲೋಚನೆಗಳು ಭಿನ್ನವಾಗಿದ್ದವು. ಒಂದೆರಡು ದಶಕಗಳ ನಂತರ ಚರಿತ್ರೆಯ ಅಧ್ಯಯನ ವಲಯಗಳ ಆಸಕ್ತಿ ಈ ಬರೆಹಗಾರರಿಂದ ಹೇಡನ್ ವೈಟ್, ಫೌಕಾಲ್ಟ್, ಡೆರ್ರಿಟಾ ಮುಂತಾದವರ ಬರೆಹಗಳತ್ತ ತಿರುಗಿತು. ಇವರ್ಯಾರನ್ನೂ ಯಾವುದೇ ಕೋನದಿಂದಲೂ ಮಾರ್ಕ್ಸ್ ವಾದಿಗಳು ಎಂದು ಕರೆಯಲು ಬರುವುದಿಲ್ಲ. ಜೆ.ಎನ್.ಯು. ಕುರಿತ ಈ ಉನ್ಮಾದ ತಮಗೆ ಅರ್ಥವಾಗುವುದಿಲ್ಲ ಎನ್ನುತ್ತಾರೆ ರೊಮೀಲಾ ಥಾಪರ್.
ದೇಶದ ಹಲವು ಮಹತ್ವದ ಬದಲಾವಣೆಗಳ ಹಿಂದಿನ ಶಕ್ತಿಯಾಗಿರುವ ವಿದ್ಯಾರ್ಥಿಶಕ್ತಿಯನ್ನು ಮೋಶಾ ಜೋಡಿ ಎದುರು ಹಾಕಿಕೊಂಡಿದೆ. ಮಣಿಸುವುದೋ ಇಲ್ಲವೇ ಮಣಿಯುವುದೋ ಕಾದು ನೋಡಬೇಕಿದೆ.