ದೆಹಲಿಯ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದ ಹಾಸ್ಟೆಲ್ ಬಳಿ ವಿದ್ಯಾರ್ಥಿ ಸಂಘದ ಐಶ್ ಘೋಷ್ ಮತ್ತಿತರೆ ವಿದ್ಯಾರ್ಥಿನಿಗಳ ಮೇಲೆ ನಡೆದ ಹಲ್ಲೆ ನಡೆಸಿರುವುದು ನಾವೇ ಎಂದು ಹಿಂದೂ ರಕ್ಷಾ ದಳ ಹೇಳಿಕೊಂಡಿದೆ.
ಆದರೆ, ಇದೇ ಹಿಂದೂಪರವಾದ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಗುಂಪೊಂದು ವಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಿಕೊಂಡು ಗಲಭೆಗೆ ಪ್ರಚೋದನೆ ನೀಡುವಂತಹ ರೀತಿಯಲ್ಲಿ ಮೆಸೇಜ್ ಗಳನ್ನು ವಿನಿಮಯ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಹಲ್ಲೆ ಘಟನೆ ನಡೆಯುವವರೆಗೆ ಆ್ಯಕ್ಟೀವ್ ಆಗಿದ್ದ ಈ ಗ್ರೂಪ್ ನಂತರ ನಿಷ್ಕ್ರಿಯವಾಗಿದೆ. ಇದರರ್ಥ ವಿಶ್ವವಿದ್ಯಾಲಯದಲ್ಲಿ ಗಲಭೆ ನಡೆಸಲೆಂದೇ ಗ್ರೂಪ್ ಮಾಡಲಾಗಿದ್ದು, ಇದರಲ್ಲಿ ಎಡಪಕ್ಷ ವಿರೋಧಿ ಸಂದೇಶಗಳನ್ನು ಹರಿಯ ಬಿಡಲಾಗಿತ್ತು. ಹೀಗಾಗಿ ತಮ್ಮದೇ ಕಾರ್ಯಕರ್ತರು ಗಲಭೆ ನಡೆಸಿದ್ದಾರೆಂದು ಹೇಳಿಕೊಂಡಿರುವ ಹಿಂದೂ ರಕ್ಷಾ ದಳದ ಕಾರ್ಯಕರ್ತರ ಜತೆ ಈ ಎಬಿವಿಪಿ ಕಾರ್ಯಕರ್ತರೂ ಕೈಜೋಡಿಸಿದ್ದಾರೆಂಬ ಗುಮಾನಿಗಳು ದಟ್ಟವಾಗತೊಡಗಿವೆ. ಎಬಿವಿಪಿ ಕಾರ್ಯಕರ್ತರು ವಾಟ್ಸಪ್ ನಲ್ಲಿ ಘರ್ಷಣೆಗೆ ಇಂಬು ಕೊಡುವ ರೀತಿಯಲ್ಲಿ ಸಂದೇಶಗಳನ್ನು ಪರಸ್ಪರ ರವಾನೆ ಮಾಡಿಕೊಂಡಿದ್ದಾರೆ.
ಅದೂ ಕೂಡ ಘೋಷ್ ಮತ್ತಿತರರ ಮೇಲೆ ಹಲ್ಲೆ ನಡೆಸುವ ಕೆಲವೇ ಹೊತ್ತಿನ ಮೊದಲು ಈ ಸಂದೇಶಗಳು ಎಬಿವಿಪಿ ಕಾರ್ಯಕರ್ತರ ಮೊಬೈಲ್ ನ ವಾಟ್ಸಪ್ ನಲ್ಲಿ ಹರಿದಾಡಿವೆ. ಅಂದರೆ, ಹಲ್ಲೆ ನಡೆದ ಸಂಜೆ 7.30 ಕ್ಕೆ ಮೊದಲು. ಈ ವಾಟ್ಸಪ್ ಗ್ರೂಪ್ ನಲ್ಲಿ “settle things for once and for all” ಎಂಬ ಸಂದೇಶವಲ್ಲದೇ, “Unity Against Left” ಎಂದೂ ಪ್ರಚಾರ ಮಾಡಲಾಗಿದೆ.
ಈ ವಾಟ್ಸಪ್ ಗ್ರೂಪಿನಲ್ಲಿ ಪತ್ರಕರ್ತರು, ವಕೀಲರು ಮತ್ತು ಎಡ ಪಕ್ಷಗಳ ಬೆಂಬಲಿತ ವಿದ್ಯಾರ್ಥಿ ಸಮೂಹವೂ ಸೇರಿಕೊಂಡಿತು. ಬಲಪಂಥೀಯ ವಿದ್ಯಾರ್ಥಿಗಳು ಈ ವಾಟ್ಸಪ್ ಗ್ರೂಪಿನಿಂದ ಹೊರಬಂದಿದ್ದಾರೆ. ಜನವರಿ 5 ರಂದು ಸಂಜೆ 5.30 ರಿಂದ ರಾತ್ರಿ 9.30 ರವರೆಗೆ ಗ್ರೂಪಿನಲ್ಲಿ ಕೆಲವು ಸಂದೇಶಗಳು ಹರಿದಾಡಿವೆ. ಇದರಲ್ಲಿ ಹಿಂಸಾಕೃತ್ಯಗಳನ್ನು ಪ್ರಚೋದಿಸುವಂತಹ ಸಂದೇಶಗಳನ್ನು ಹಾಕಿದ್ದ ಕೆಲವು ಬಲಪಂಥೀಯ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ದಿ ವೈರ್ ಪ್ರತಿನಿಧಿಗಳು ಪ್ರಯತ್ನಿಸಿದ್ದಾರೆ. ಆದರೆ, ಅವರ ಮೊಬೈಲ್ ದೂರವಾಣಿ ಸಂಖ್ಯೆಗಳು ಸ್ವಿಚ್ ಆಫ್ ಆಗಿದ್ದವು ಮತ್ತು ಫೇಸ್ ಬುಕ್ ಅಕೌಂಟ್ ಗಳನ್ನು ಡಿಲೀಟ್ ಮಾಡಲಾಗಿತ್ತು.
ಅತ್ಯಂತ ಪ್ರಮುಖವಾದ ಅಂಶವೆಂದರೆ ಈ ಕೆಲವು ವಿದ್ಯಾರ್ಥಿಗಳು ಟ್ರೂಕಾಲರ್ ನಲ್ಲಿ ತಮ್ಮ ಹೆಸರನ್ನು ಮುಸ್ಲಿಂ ಹೆಸರಿಗೆ ಬದಲಿಸಿಕೊಂಡಿದ್ದಾರೆ. ಇದು ತನಿಖೆಯ ಹಾದಿ ತಪ್ಪಿಸುವ ಪ್ರಯತ್ನ ಎಂಬುದನ್ನು ನಿಸ್ಸಂಶಯವಾಗಿ ಹೇಳಬಹುದು.
ಈ ವಾಟ್ಸಪ್ ಸಂದೇಶಗಳು ವಿನಿಮಯವಾಗಿರುವುದನ್ನು ನೋಡಿದರೆ ಇದರಲ್ಲಿ ಜೆಎನ್ ಯು ಮತ್ತು ದೆಹಲಿ ವಿಶ್ವವಿದ್ಯಾಲಯದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್) ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯಲ್ಲಿ ಸಕ್ರಿಯವಾಗಿರುವ ಹಲವಾರು ಮಂದಿ ಇದರಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗುತ್ತದೆ. ಇದನ್ನು ಮೆಸೇಜ್ ಗಳ ಸ್ಕ್ರೀನ್ ಶಾಟ್ ಗಳು ದೃಢಪಡಿಸುತ್ತವೆ.
ಫೇಸ್ ಬುಕ್ ನಲ್ಲಿ ತನ್ನನ್ನು ತಾನು ಜೆಎನ್ ಯು ವಿದ್ಯಾರ್ಥಿ ಎಂದು ಒಬ್ಬ ವ್ಯಕ್ತಿ ಗುರುತಿಸಿಕೊಂಡಿದ್ದಾನೆ. ಅವರ ಹೆಸರನ್ನು ಪತ್ತೆ ಮಾಡಲು ಟ್ರೂಕಾಲರ್ ನಲ್ಲಿ ತಡಕಾಡಿದಾಗ ಆತನ ಹೆಸರು ಯೋಗೇಂದ್ರ ಶೌರ್ಯ ಭಾರದ್ವಾಜ್ ಎಂದಾಗಿತ್ತು. ಈತ ಸಂಜೆ 5.30 ರ ವೇಳೆಗೆ ಕಳುಹಿಸಿರುವ ಮೆಸೇಜ್ ನಲ್ಲಿ ಎಡ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿ ಎಂದು ಕರೆ ಕೊಟ್ಟಿದ್ದಾನೆ. ಮತ್ತೆ 5.33 ಕ್ಕೆ ಮತ್ತೊಂದು ಮೆಸೇಜ್ ಹಾಕಿರುವ ಈತ ಈಗ ಎಲ್ಲರನ್ನೂ ಹೊಡೆದು ಓಡಿಸಬೇಕು, ಉಳಿದಿರುವುದು ಇದೊಂದೇ ಭರವಸೆ ಎಂದು ಪ್ರಚೋದನೆ ಮಾಡಿದ್ದಾನೆ.
ಈತನ ಸಾಮಾಜಿಕ ತಾಣದ ಅಕೌಂಟನ್ನು ಪರಿಶೀಲನೆ ಮಾಡಿದಾಗ 2017-18 ನೇ ಸಾಲಿನಲ್ಲಿ ಜೆಎನ್ ಯುದ ಎಬಿವಿಪಿ ಜಂಟಿ ಕಾರ್ಯದರ್ಶಿಯಾಗಿದ್ದು, ಪಿಎಚ್ ಡಿ ಸ್ಕಾಲರ್ ಎಂದು ಘೋಷಿಸಿಕೊಂಡಿದ್ದಾನೆ. ಈತನ ಮೆಸೇಜ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿದ ಹಿನ್ನೆಲೆಯಲ್ಲಿ ತನ್ನ ಫೋನನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದ.
ಟ್ರೂಕಾಲರ್ ನಲ್ಲಿ ಪತ್ತೆಯಾದ ಮತ್ತೊಬ್ಬನೆಂದರೆ ಜೆಎನ್ ಯು ನಲ್ಲಿ 2015-16 ನೇ ಸಾಲಿನಲ್ಲಿ ಎಬಿವಿಪಿಯ ಉಪಾಧ್ಯಕ್ಷನಾಗಿದ್ದವನು. ಇವನ ಹೆಸರು ಓಂಕಾರ್ ಶ್ರೀವಾಸ್ತವ. ಈತ ಸಂದೇಶಗಳಿಗೆ ಎರಡನೇ ವ್ಯಕ್ತಿಯಾಗಿ ಪ್ರತಿಕ್ರಿಯೆ ನೀಡಿದ್ದಾನೆ. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಾಕಿದ್ದ ಮೆಸೇಜ್ ನಲ್ಲಿ ದೆಹಲಿ ವಿವಿಯ ವಿದ್ಯಾರ್ಥಿ ಮಿತ್ರರೇ ನೀವು ಖಾಜನ್ ಸಿಂಗ್ ಸ್ವಿಮ್ಮಿಂಗ್ ಸೈಡ್ ನಿಂದ ಬರಬಹುದು. ಇಲ್ಲಿ ನಾವು 25-30 ಜನರಿದ್ದೇವೆ ಎಂದಿದ್ದ. ಈ ಈಜುಕೊಳ ಜೆಎನ್ ಯು ಆವರಣದೊಳಗೇ ಇದೆ.
ಈತನ ಫೋನ್ ಕೂಡ ಸ್ವಿಚ್ ಆಫ್ ಆಗಿದೆಯಾದರೂ, ಟ್ರೂಕಾಲರ್ ನಲ್ಲಿ ಎಬಿವಿಪಿ ಕಾರ್ಯಕರ್ತ ಶ್ರೀವಾಸ್ತವ ಎಂದೇ ನಮೂದಾಗಿದೆ. ಅಲ್ಲದೇ, ಫೇಸ್ ಬುಕ್ ಪ್ರೊಫೈಲ್ ಸಕ್ರಿಯವಾಗಿದೆ. ಆದರೆ, ಈ ವ್ಯಕ್ತಿಗಳು ಜೆಎನ್ ಯು ಗದ್ದಲದ ವೇಳೆ ಸ್ಥಳದಲ್ಲಿ ಇದ್ದರೋ ಇಲ್ಲವೋ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.
ವಿಚಿತ್ರವೆಂದರೆ ಈ ಮೆಸೇಜ್ ಗಳನ್ನು ಹರಿಯಬಿಟ್ಟಿದ್ದ ಬಹುತೇಕ ನಂಬರ್ ಗಳನ್ನು ಹೊಂದಿದ್ದ ವ್ಯಕ್ತಿಗಳು ಘಟನೆಯ ನಂತರ ಟ್ರೂಕಾಲರ್ ನಲ್ಲಿ ತಮ್ಮ ಹೆಸರುಗಳನ್ನು ಎಡಪಂಥೀಯ ಅಥವಾ ಐಎನ್ ಸಿ ಕಾರ್ಯಕರ್ತ ಎಂದು ಬದಲಿಸಿದ್ದಾರೆ. ಇನ್ನೂ ಕೆಲವರು ಮುಸ್ಲಿಂರ ಹೆಸರಿಗೆ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಅಂದರೆ, ಪೊಲೀಸರನ್ನು ಅಡ್ಡದಾರಿಗೆ ಎಳೆಯುವ ತಂತ್ರ ಇದರ ಹಿಂದೆ ಅಡಗಿದೆ.
ಮತ್ತೊಬ್ಬ ವಿದ್ಯಾರ್ಥಿಯನ್ನು ಸಂಪರ್ಕಿಸಲಾಗಿ, ಈ ವಾಟ್ಸಪ್ ಗ್ರೂಪ್ ನಲ್ಲಿ ನಾನೂ ಸಹ ಸಕ್ರಿಯನಾಗಿದ್ದೆ. ನನ್ನಂತೆಯೇ ಹಲವಾರು ಮಂದಿ ಈ ಗ್ರೂಪನ್ನು ಸೇರಿಕೊಂಡಿದ್ದರು. ಗದ್ದಲವೆಬ್ಬಿಸಲು ಈ ಎಬಿವಿಪಿಯವರು ಮತ್ತೆಲ್ಲಾ ಹೇಗೆ ಯೋಜನೆ ರೂಪಿಸಿದ್ದರು ಎಂಬುದನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ದಯಮಾಡಿ ನನ್ನ ಹೆಸರನ್ನು ಬಹಿರಂಗಪಡಿಸಬೇಡಿ. ಏಕೆಂದರೆ, ನಾನು ಜೆಎನ್ ಯು ನಲ್ಲೇ ಇರುತ್ತೇನೆ. ಒಂದು ವೇಳೆ ನನ್ನ ಗುರುತು ಸಿಕ್ಕಿತೆಂದರೆ ಆ ಎಬಿವಿಪಿಯವರು ನನ್ನನ್ನು ಸುಮ್ಮನೇ ಬಿಡುವುದಿಲ್ಲ ಎಂದು ವಿದ್ಯಾರ್ಥಿಯೊಬ್ಬ ಆತಂಕ ವ್ಯಕ್ತಪಡಿಸಿದ್ದಾನೆ.
ರಾತ್ರಿ 9.30 ರ ನಂತರ ಈ ಗ್ರೂಪ್ ಬಲಪಂಥೀಯರ ಹೊರತಾದವರಿಗೂ ಅಕ್ಸೆಸ್ ಆಯಿತು. ಇದರಲ್ಲಿ ಎಡಪಂಥೀಯ, ಅಂಬೇಡ್ಕರ್ ವಾದದ ಹಲವಾರು ವಿದ್ಯಾರ್ಥಿಗಳೂ ಸೇರಿಕೊಂಡರು. ಇದನ್ನೇ ಅಸ್ತ್ರವಾಗಿಟ್ಟುಕೊಂಡ ಎಬಿವಿಪಿಯವರು ಎಸ್ಎಫ್ಐ, ಎಐಎಸ್ಎ ಮತ್ತು ಡೆಮಾಕ್ರಾಟಿಕ್ ಸ್ಟೂಡೆಂಟ್ಸ್ ಫೆಡರೇಶನ್ ನ ವಿದ್ಯಾರ್ಥಿಗಳೇ ವಿವಿಯಲ್ಲಿ ಗೊಂದಲಗಳನ್ನುಂಟು ಮಾಡುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಹಾಗಾದರೆ, ಜನವರಿ 6 ಮತ್ತು 7 ನೇ ತಾರೀಖಿನಂದು ಜೆಎನ್ ಯು ಪ್ರವೇಶ ದ್ವಾರದಲ್ಲಿ ಬಡಿಗೆ ಹಿಡಿದುಕೊಂಡು ಬಂದವರಿಗೆಲ್ಲಾ ಧಮಕಿ ಹಾಕುತ್ತಾ ನಿಂತಿದ್ದವರು ಯಾರು? ಬಡಿಗೆ ಹಿಡಿದು ನಿಲ್ಲಲು ಕಾರಣವೇನು? ಇವರೇನು ಜೆಎನ್ ಯು ವಿವಿಯ ರಕ್ಷಣೆಯ ಗುತ್ತಿಗೆ ತೆಗೆದುಕೊಂಡಿದ್ದಾರೆಯೇ? ಇವರನ್ನು ಕಂಡೂ ಕಾಣದಂತೆ ಭದ್ರತಾ ಸಿಬ್ಬಂದಿ ಇದ್ದಿದ್ದೇಕೆ? ಇಷ್ಟೆಲ್ಲಾ ರಾದ್ಧಾಂತವಾಗುತ್ತಿದ್ದರೂ ಉಪಕುಲಪತಿ ಜಗದೀಶ್ ಮೌನವಾಗಿರುವುದೇಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವವರಾರು?
ಕೃಪೆ: ದಿ ವೈರ್