ಭಾರ್ತಿ ಏರ್ಟೆಲ್ ಕಂಪನಿಯು ತನ್ನ ಮೊಬೈಲ್ ಕರೆ ಮತ್ತು ಡೇಟಾ ದರ ಏರಿಸುವುದನ್ನೇ ಕಾಯುತ್ತಿದ್ದ ರಿಲಯನ್ಸ್ ಜಿಯೋ ಈಗ ತಾನೂ ದರ ಏರಿಕೆ ಮಾಡುವುದಾಗಿ ಪ್ರಕಟಿಸಿದೆ.
ಏರ್ಟೆಲ್ ದರ ಏರಿಕೆ ಪ್ರಕಟಿಸಿದ ಒಂದೇ ವಾರದಲ್ಲೇ ಜಿಯೋ ಕೂಡಾ ಅದೇ ಹಾದಿಯಲ್ಲಿ ಸಾಗಿದೆ. ರಿಲಯನ್ಸ್ ಪರಿಷ್ಕೃತ ದರವು ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ. ರಿಲಯನ್ಸ್ ಶೇ.20ರಷ್ಟು ದರ ಏರಿಕೆ ಮಾಡುತ್ತಿದೆ.
ನವೆಂಬರ್ 22 ರಂದು ಏರ್ಟೆಲ್ ದರ ಏರಿಕೆಯನ್ನು ಪ್ರಕಟಿಸಿತ್ತು. ಮತ್ತು ಪರಿಷ್ಕೃತ ದರವು ನವೆಂಬರ್ 26ರಿಂದಲೇ ಜಾರಿಯಾಗಿದೆ.
ರಿಲಯನ್ಸ್ ಜಿಯೋ ನೀಡುತ್ತಿರುವ ಎಲ್ಲಾ ಅನ್ಲಿಮಿಟೆಡ್ ಕರೆಗಳು ಮತ್ತು 2 ಜಿಬಿ ಡೇಟಾ ಪ್ಯಾಕುಗಳು 155 ರುಪಾಯಿಗಳಿಂದ ಪ್ರಾರಂಭವಾಗಲಿವೆ. ಇವುಗಳ ವ್ಯಾಲಿಡಿಟಿ 28 ದಿನಗಳು. ಈ ಹಿಂದೆ ಈ ದರವು 129 ರುಪಾಯಿಗಳಾಗಿತ್ತು.
ಈ ಹಿಂದೆ 2,399 ರುಪಾಯಿಗಳಿದ್ದ 365 ದಿನಗಳ ಪ್ಯಾಕ್ ಈಗ 2,879 ರುಪಾಯಿಗಳಿಗೆ ಏರಿದೆ.
ನೂತರ ದರಗಳ ವಿವರ ಕೆಳಗಿನಂತಿದೆ.
ಎರಡು ದಿನಗಳ ಹಿಂದಷ್ಟೇ ಏರ್ಟೆಲ್ ಶೇ.25ರಷ್ಟು ದರ ಏರಿಕೆ ಮಾಡಿತ್ತು. ಹೊಸ ದರ ಜಾರಿಯಾದಗ ಇದುವರೆಗೆ 75 ರುಪಾಯಿ 28 ದಿನಗಳ ವ್ಯಾಲಿಡಿಟಿ ದರವು 99 ರುಪಾಯಿಗೆ, 149 ರುಪಾಯಿಯ 28 ದಿನಗಳ ವ್ಯಾಲಿಟಿಡಿ ದರವು 179 ರುಪಾಯಿಗೆ ಏರಿದೆ. 229 ರುಪಾಯಿ ಪ್ಯಾಕ್ 265 ರುಪಾಯಿಗೂ 249 ರುಪಾಯಿ ಪ್ಯಾಕ್ 299 ರುಪಾಯಿಗೂ, 298 ರುಪಾಯಿ ಪ್ಯಾಕ್ 359ರುಪಾಯಿಗೇರಿವೆ. ಗರಿಷ್ಠ ದರದ 2498 ಪ್ಯಾಕ್ ದರವು 2999 ರುಪಾಯಿಗೆ ಏರಿದೆ.
ಪ್ರತಿ ಬಳಕೆದಾರರನಿಂದ ಮಾಸಿಕ ಆದಾಯವು (ಎಆರ್ಪಿಯು) ಕನಿಷ್ಠ 200 ರುಪಾಯಿ ಇರಬೇಕು, ಅಂತಿಮವಾಗಿ ಇದು 300 ರುಪಾಯಿ ಮಟ್ಟಬೇಕು. ಆಗಾದಾಗ ಮಾತ್ರ ಮೊಬೈಲ್ ಉದ್ಯಮವು ಆರೋಗ್ಯದಾಯಕ ಆದಾಯಗಳಿಕೆ ಸಾಧ್ಯ ಎಂದು ಏರ್ಟೆಲ್ ಹೇಳಿಕೊಂಡಿದೆ. ಪ್ರಸ್ತುತ ಏರ್ಟೆಲ್ ಗಳಿಸುತ್ತಿರುವ ಎಆರ್ಪಿಯು 153 ರುಪಾಯಿಗಳಿವೆ. ಅಂದರೆ ಪ್ರತಿ ಗ್ರಾಹಕನಿಂದ ಏರ್ಟೆಲ್ ಗೆ ದೊರೆಯುವ ಸರಾಸರಿ ಆದಾಯವು 153 ರುಪಾಯಿ. ರಿಲಯನ್ಸ್ ಜಿಯೋ 144 ರುಪಾಯಿ ಗಳಿಸುತ್ತಿದ್ದಾರೆ, ತೀವ್ರ ನಷ್ಟದಲ್ಲಿರುವ ವೊಡಾಫೋನ್ ಐಡಿಯಾ 109 ರುಪಾಯಿ ಗಳಿಸುತ್ತಿದೆ. ಅಂದರೆ, ಎಆರ್ಪಿಯು ಲೆಕ್ಕದಲ್ಲೇ ನೋಡುವುದಾದರೆ ಏರ್ಟೆಲ್ ಶೇ.100ರಷ್ಟು ದರ ಏರಿಕೆ ಮಾಡುತ್ತದೆ ಎಂಬುದನ್ನು ಸೂಚ್ಯವಾಗಿ ಹೇಳಿತ್ತು.
ಏರ್ಟೆಲ್ ಮೊಬೈಲ್ ಕರೆ ಮತ್ತು ಡೇಟಾ ದರ ಏರಿಕೆ ಮಾಡಿರುವುದರಿಂದ ರಿಲಯನ್ಸ್ ಜಿಯೋ ಕೂಡ ದರ ಏರಿಕೆ ಮಾಡುವ ನಿರೀಕ್ಷೆ ಇದೆ ಎಂದು ಪ್ರತಿಧ್ವನಿ ನವೆಂಬರ್ 22 ರಂದೇ ವರದಿ ಮಾಡಿತ್ತು.
ಪ್ರಸ್ತುತ 144 ರುಪಾಯಿ ಎಆರ್ಪಿಯು ಗಳಿಸುತ್ತಿರುವ ರಿಲಯನ್ಸ್ ಜಿಯೋ ಮುಂಬರವ ದಿನಗಳಲ್ಲಿ ಮತ್ತಷ್ಟು ದರ ಏರಿಕೆ ಮಾಡುವ ಸಾಧ್ಯತೆ ಇದೆ.
ಕರೆ ಮತ್ತು ಡೇಟಾ ಸೇವೆ ಒದಗಿಸುತ್ತಿರುವ ಮೊಬೈಲ್ ಕಂಪನಿಗಳು ದೊಡ್ಡ ಪ್ರಮಾಣದ ಸಾಲದ ಹೊರೆಯಿಂದ ಬಳಲುತ್ತಿವೆ. ಹೀಗಾಗಿ ಮುಂಬರುವ ದಿನಗಳಲ್ಲಿ ಸಾಲದ ಹೊರೆಯನ್ನು ತಗ್ಗಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇರುವುದರಿಂದ ಮೊಬೈಲ್ ಕಂಪನಿಗಳು ದರ ಸಮರಕ್ಕೆ ಇಳಿಯುವ ಸಾಧ್ಯತೆ ಇಲ್ಲ. ಅಂದರೆ, ಏರ್ಟೆಲ್, ರಿಲಯನ್ಸ್ ಜಿಯೋ, ವೊಟಾಫೋನ್ ಐಡಿಯಾ ಮುಂಬರುವ ದಿನಗಳಲ್ಲಿ ಮತ್ತೆ ದರ ಏರಿಕೆ ಮಾಡಲಿವೆ. ಒಟ್ಟಾಗಿಯೇ ದರ ಏರಿಕೆ ಪ್ರಕಟಿಸಬಹುದು ಅಥವಾ ಪ್ರತ್ಯೇಕವಾಗಿ ದರ ಏರಿಕೆ ಪ್ರಕಟಿಸಬಹುದು. ಆದರೆ, ಮುಂಬರುವ ದಿನಗಳಲ್ಲಿ ಮೊಬೈಲ್ ಕರೆ ಮತ್ತು ಡೇಟಾ ದರವು ದುಬಾರಿಯಾಗುವುದಂತೂ ನಿಶ್ಛಿತ.