ರಾಜ್ಯ ರಾಜಕಾರಣದಲ್ಲಿ ಸದ್ಯ ಚರ್ಚೆಯಾಗುತ್ತಿರುವ ವಿಚಾರವೆಂದರೆ ಮಂಡ್ಯದ ಅಕ್ರಮ ಗಣಿಗಾರಿಕೆ. ಒಂದೆಡೆ ಅಕ್ರಮ ಗಣಿಗಾರಿಕೆ ವಿರುದ್ಧ ಸಂಸದೆ ಸುಮಲತಾ ಸಮರ ಸಾರಿದರೆ, ಇನ್ನೊಂದೆಡೆ ಜಿಲ್ಲೆಯ ಜೆಡಿಎಸ್ ಶಾಸಕರು ಸ್ಥಗಿತಗೊಂಡಿರುವ ಸಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಸದನದಲ್ಲಿ ಚರ್ಚಿಸಲು ಮುಂದಾಗಿದ್ದಾರೆ. ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮೂಲಕ ಈ ವಿಚಾರದ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲು ಸಜ್ಜಾಗಿದ್ದಾರೆ.
ಮಂಡ್ಯದ ಜಿದ್ದಾಜಿದ್ದಿನ ರಾಜಕಾರಣಕ್ಕೆ ಪ್ರಮುಖ ಅಸ್ತ್ರವಾಗಿದ್ದು, ಅಕ್ರಮ ಗಣಿಗಾರಿಕೆ. ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದ ಸಂಸದೆ ಸುಮಲತಾ, ಸಂಸತ್ತಿನಲ್ಲಿ ಈ ಬಗ್ಗೆ ಧ್ವನಿ ಎತ್ತಿ ಸರ್ಕಾರದ ಗಮನವನ್ನು ಸೆಳೆದಿದ್ದರು. ಆದರೆ, ಈ ಬಗ್ಗೆ ಸರಿಯಾಗಿ ಆಲೋಚಿಸದ ಜಿಲ್ಲಾಡಳಿತ, ಅಕ್ರಮದ ಜೊತೆ ಸಕ್ರಮ ಕಲ್ಲುಗಣಿಗಾರಿಕೆಯನ್ನು ಏಕಾಏಕಿ ಸ್ಥಗಿತಗೊಳಿಸಿತ್ತು. ಇದು ಜಿಲ್ಲೆಯ 6 ಮಂದಿ ಜೆಡಿಎಸ್ ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ ಇದೇ ವಿಚಾರವನ್ನ ಸದನದಲ್ಲಿ ಪ್ರಸ್ತಾಪಿಸಿ ಚರ್ಚಿಸಲು ಮುಂದಾಗಿದ್ದಾರೆ.
ಸಕ್ರಮ ಗಣಿಗಾರಿಕೆಯನ್ನು 3 ತಿಂಗಳಿಂದ ಸ್ಥಗಿತಗೊಳಿಸಲಾಗಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಜನಸಾಮಾನ್ಯರು ಮನೆ, ಶೌಚಾಲಯ ನಿರ್ಮಿಸಲಾಗದೆ ಹೊರ ಜಿಲ್ಲೆಗಳಿಂದ ದುಪ್ಪಟ್ಟು ಹಣ ನೀಡಿ ಕಟ್ಟಡ ಸಾಮಾಗ್ರಿ ತರಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನಲಾಗಿದೆ.
ಅತ್ತ ಗಣಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಮಧ್ಯೆ ಪ್ರವೇಶಿಸಿ ಜನರಿಗೆ ನ್ಯಾಯ ಒದಗಿಸಬೇಕಿತ್ತು. ಆದರೆ, ಸರ್ಕಾರವಾಗಲಿ, ಗಣಿ ಸಚಿವರಾಗಲಿ ಇತ್ತ ಗಮನ ಹರಿಸದೇ ಇರೋದು, ಅನುಮಾನಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಸೆಪ್ಟೆಂಬರ್ 13ರಿಂದ ಪ್ರಾರಂಭವಾಗಲಿರುವ ಸದನದಲ್ಲಿ ಈ ಕುರಿತು ಜೆಡಿಎಸ್ ಶಾಸಕರು ಗಂಭೀರವಾಗಿ ಚರ್ಚೆ ನಡೆಸಲಿದ್ದಾರೆ. ಇನ್ನು, ಸಂಸದೆ ಸುಮಲತಾ ಲೆಟರ್ ಹೆಡ್ ದುರ್ಬಳಕೆ ವಿಚಾರವು ಸದನದಲ್ಲಿ ಚರ್ಚೆಯಾಗಲಿದೆ. 15 ದಿನಗಳ ಹಿಂದೆಯೇ ಲೆಟರ್ ಹೆಡ್ ದುರ್ಬಳಕೆ ಬಗ್ಗೆ ಎಸ್ಪಿಯವರಿಗೆ ತಿಳಿಸಿದ್ರೂ, ಇದುವರೆಗೂ ಯಾರ ಮೇಲೂ ದೂರು ದಾಖಲಿಸಿಲ್ಲ ಎಂದು ಜೆಡಿಎಸ್ ಶಾಸಕರು ಆರೋಪಿಸಿದ್ದಾರೆ.
ಇನ್ನು, ಸಂಸದರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ದೇಶದ ಆಸ್ತಿ ಕೆಆರ್ಎಸ್ ಡ್ಯಾಂ ಬಗ್ಗೆ ಅನಾಮಧೇಯ ವ್ಯಕ್ತಿ ಮಾಹಿತಿ ಪಡೆದುಕೊಳ್ಳೋದು ಅಪೆನ್ಸ್. ಅಧಿಕಾರಿಗಳಿಗೂ ಬೆದರಿಕೆ ಹಾಕಲಾಗಿದ್ದು, ಇದಕ್ಕೆ ಎಂಪಿ ಸೇರಿದಂತೆ ಹಲವರು ಕಾರಣರಾಗುತ್ತಾರೆ. ನಾನು ಇದರ ಬಗ್ಗೆಯು ಅಸೆಂಬ್ಲಿಯಲ್ಲಿ ಚರ್ಚೆ ಮಾಡ್ತೀನಿ ಎಂದು ಶಾಸಕ ರವಿಂದ್ರ ಶ್ರೀಕಂಠಯ್ಯ ಗುಡುಗಿದ್ದಾರೆ.
ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ಶಾಸಕರು ಬಿಜೆಪಿ ಸರ್ಕಾರದ ವಿರುದ್ಧ ಕೆಂಡಕಾರುವ ಸಾಧ್ಯತೆ ಇದೆ. ಸಂಸದೆ ಸುಮಲತಾ ಅಂಬರೀಶ್ ಮಾತು ಕಟ್ಟಿಕೊಂಡು ಸಕ್ರಮ ಗಣಿಗಾರಿಕೆ ಸ್ಥಗಿತಗೊಳಿಸಲಾಗಿದೆ. ಇದರಿಂದ ಗಣಿ ಮಾಲೀಕರು ಬೀದಿಗೆ ಬಂದತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಿದ್ದಾರೆ.
ಇನ್ನು, ಸಂಸದೆ ಸುಮಲತಾ ಅಂಬರೀಶ್ ಮಾತು ಕಟ್ಟಿಕೊಂಡು ಮಂಡ್ಯದಲ್ಲಿ ಎಲ್ಲಾ ಗಣಿಗಾರಿಕೆಯನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸುವುದರ ಹಿಂದೆ ಚುನಾವಣಾ ರಾಜಕೀಯದ ಉದ್ದೇಶ ಇದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಭಿಷೇಕ್ ಅಂಬರೀಶ್ ಮಂಡ್ಯದಿಂದಲೇ ಕಣಕ್ಕಿಳಿಯಲಿದ್ದಾರೆ. ಹೇಗಾದರೂ ಸರಿ ಸುಮಲತಾ ಅಂಬರೀಶ್ ಅವರನ್ನು ಬಿಜೆಪಿಯತ್ತ ಸೆಳೆಯಬೇಕು ಎಂಬುದು ಕೇಸರಿ ನಾಯಕರ ಉದ್ದೇಶ.
ಹೀಗಿರುವಾಗ ದಳ ಶಾಸಕರು ವರ್ಸಸ್ ಸಂಸದೆ ಸುಮಲತಾ ಮತ್ತು ಬಿಜೆಪಿ ಸರ್ಕಾರ ಆಗಿದೆ. ಕಲ್ಲು ಗಣಿಗಾರಿಕೆ ವಾಕ್ಸಮರ, ಈಗ ಸದನದಲ್ಲಿ ಪ್ರತಿಧ್ವನಿಸಲು ಮುಂದಾಗಿದೆ. ಮುಂದೆ ಈ ವಿಚಾರ ಯಾವ ಹಂತಕ್ಕೆ ಹೋಗುತ್ತೆ ಅಂತ ಕಾದು ನೋಡಬೇಕಿದೆ.