ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಹೊರಟಿರುವ ಕೃಷಿ ಕಾಯ್ದೆಗಳನ್ನು ಪುನರ್ ಪರಿಶೀಲನೆ ನಡೆಸಬೇಕು. ಕೇಂದ್ರ ಸರ್ಕಾರ ಹಠಮಾರಿ ಧೋರಣೆ ಕೈಬಿಟ್ಟು ರೈತರಿಗೆ ಕಾಯ್ದೆಗಳ ಬಗ್ಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿಯನ್ನು ತೋರಬೇಕೆಂದು ಜೆಡಿಎಸ್ ನಾಯಕ ಮಾಜಿ ಸಿಎಂ ಕುಮಾರಸ್ವಾಮಿ ಮತ್ತೆ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ.
ರೈತರ ಸಮಸ್ಯೆಗಳ ಪರಿಹಾರಕ್ಕೆ ನಡೆಯುವ ಹೋರಾಟಕ್ಕೆ ಜೆಡಿಎಸ್ ಸದಾ ಬೆಂಬಲ ನೀಡುತ್ತಿದೆ. ರೈತರ ಅಭ್ಯುದಯಕ್ಕಾಗಿ ದುಡಿದ ಮತ್ತು ದುಡಿಯುವ ಏಕೈಕ ಪಕ್ಷವೆಂದರೆ ಅದು ಜೆಡಿಎಸ್ ಎಂದು ಪಕ್ಷದ ಕಾರ್ಯವೈಖರಿಯ ಬಗ್ಗೆ ಹೊಗಳಿಕೊಂಡಿದ್ದಾರೆ.
ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುವುದು ಎಲ್ಲರ ಹಕ್ಕು. ರಾಜ್ಯದಲ್ಲಿ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾದರೆ ಅದಕ್ಕೆ ತಕ್ಕ ಪಾಠ ಕಲಿಯಬೇಕಾಗುತ್ತದೆ. ರೈತರ ಶಾಂತಿಯುತ ಪ್ರತಿಭಟನೆಗೆ ರಾಜ್ಯ ಸರ್ಕಾರ ಅನುಕೂಲ ಮಾಡಿಕೊಡಬೇಕೆಂದಿದ್ದಾರೆ.
ರೈತ ಕ್ರಾಂತಿಯ ಹೋರಾಟದ ಕಿಚ್ಚಿಗೆ ಕೆಲವು ಪಕ್ಷಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಅದಕ್ಕೆ ರೈತರು ಬಲಿಯಾಗಬಾರದು ಎಂಬುದು ನನ್ನ ಕಿವಿಮಾತು ಎಂದು ರೈತರಿಗೆ ಸಂದೇಶ ನೀಡಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ ರೈತರ ಕ್ರಾಂತಿಯ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ. ರೈತ ಕ್ರಾಂತಿಯನ್ನು ಹಾದಿ ತಪ್ಪಿಸುವ ಹುನ್ನಾರಗಳಿಗೆ ಮಣಿಯದಿದ್ದರೆ ನೈಜ ಕಳಕಳಿಯ ಹೋರಾಟ ತಾರ್ಕಿಕ ಅಂತ್ಯ ಕಂಡು ಗೆಲುವು ಆಗುತ್ತದೆ ಎಂಬುದು ಪ್ರಾಮಾಣಿಕ ಅನಿಸಿಕೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.