ಮಂಡ್ಯ : ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ರಂಗೇರಿದ್ದು ಜೆಡಿಎಸ್ ಶಾಸಕ ಪುಟ್ಟರಾಜು ಪರ ಪತ್ನಿ ನಾಗಮ್ಮ ಹಾಗೂ ಪುತ್ರ ಶಿವರಾಜು ಹಾಗೂ ಸೊಸೆ ತನುಶ್ರೀ ಮತಬೇಟೆಗೆ ಇಳಿದಿದ್ದಾರೆ. ಮತಬೇಟೆ ನಡೆಸುತ್ತಿದ್ದ ಸಂದರ್ಭದಲ್ಲಿ ಪುಟ್ಟರಾಜು ಪ್ರತಿಸ್ಪರ್ಧಿ ದರ್ಶನ್ ಪುಟ್ಟಣ್ಣಯ್ಯ ತಾಯಿಯ ಕಾಲಿಗೆ ಬಿದ್ದು ತನುಶ್ರೀ ಹಾಗೂ ಶಿವರಾಜು ಆಶಿರ್ವಾದ ಪಡೆದಿದ್ದಾರೆ. ಈ ಅಪರೂಪದ ಕ್ಷಣಕ್ಕೆ ಮಂಡ್ಯ ಜಿಲ್ಲೆ ಪಾಂಡವಪುರದ ಕ್ಯಾತನಹಳ್ಳಿ ಸಾಕ್ಷಿಯಾಗಿದೆ.

ಪುಟ್ಟರಾಜು ಪ್ರತಿಸ್ಪರ್ಧಿಯಾಗಿರುವ ರೈತ ಸಂಘದ ಅಭ್ಯರ್ಥಿ ದರ್ಶನ್ ರ ಹುಟ್ಟೂರಾಗಿರುವ ಕ್ಯಾತನಹಳ್ಳಿಯಲ್ಲಿ ನಾಗಮ್ಮ, ಶಿವರಾಜು ಹಾಗೂ ತನುಶ್ರೀ ಮತಯಾಚನೆ ಮಾಡುತ್ತಿದ್ದರು. ಈ ವೇಳೆ ಮನೆಯ ಹೊರಗಡೆಯೇ ನಿಂತಿದ್ದ ದರ್ಶನ್ ಪುಟ್ಟಣ್ಣಯ್ಯ ತಾಯಿ ಸುನೀತಾ ಪುಟ್ಟಣ್ಣಯ್ಯ ಕಾಲಿಗೆರಗಿ ಆಶಿರ್ವಾದ ಪಡೆದಿದ್ದಾರೆ.
ಸುನೀತಾ ಕೂಡ ಇವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದು ಕುಶಲೋಪರಿ ವಿಚಾರಿಸಿ ಬೀಳ್ಕೊಟ್ಟಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ದರ್ಶನ್ ಪುಟ್ಟಣ್ಣಯ್ಯ ಹೆಚ್ಡಿಡಿ ಕಾಲಿಗೆರಗಿ ನಮಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.







