ಲೋಕಸಭಾ ಎಲೆಕ್ಷನ್ ಹತ್ತಿರವಾಗ್ತಿದ್ದಂತೆ ನಾಯಕರ ನಡುವಿನ ವಾಕ್ಸಮರ ಜೋರಾಗ್ತಿದೆ.
ಅದರಲ್ಲೂ ಜೆಡಿಎಸ್ ವಿರುದ್ಧ ಸಂಸದ ಡಿಕೆ ಸುರೇಶ್ ಟೀಕಾ ಪ್ರಹಾರ ನಡೆಸ್ತಿದ್ದಾರೆ.
“ನಾವು ಜೆಡಿಎಸ್ ನಾಯಕರನ್ನು ಪ್ರಧಾನಮಂತ್ರಿ, ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇವೆ. ಆ ಮೂಲಕ ದೇಶ ಹಾಗೂ ರಾಜ್ಯದ ಜನರ ನೆನಪಿನಲ್ಲಿ ಅವರು ಉಳಿಯುವಂತೆ ಮಾಡಿದ್ದೇವೆ” ಎಂದು ಸಂಸದ ಡಿ.ಕೆ. ಸುರೇಶ್ ತಿರುಗೇಟು ನೀಡಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ಸಿನಂತೆ ಬಿಜೆಪಿಯವರು ಕುತ್ತಿಗೆ ಕೊಯ್ಯುವ ಕೆಲಸ ಮಾಡಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಡಿಕೆ ಸುರೇಶ್ ಆಕ್ರೋಶ ಹೊರಹಾಕಿದ್ರು.
“ಜೆಡಿಎಸ್ ನವರನ್ನು ಈ ದೇಶದ ಪ್ರಧಾನಿ, ರಾಜ್ಯದ ಸಿಎಂ ಮಾಡಿದ್ದೇವೆ. ಈ ದೇಶ ಗುರುತಿಸುವಂತಹ ಕೆಲಸಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಕಾಂಗ್ರೆಸ್ ಪ್ರಧಾನಿ ಮಾಡದೇ ಹೋಗಿದ್ದರೆ ಅವರನ್ನು ಈ ದೇಶ ನೆನಪಿಸಿಕೊಳ್ಳುತ್ತಿರಲಿಲ್ಲ. ರಾಜ್ಯದ ಮೂವತ್ತು ಸಿಎಂಗಳಲ್ಲಿ ಕುಮಾರಸ್ವಾಮಿ ಅವರು ಒಬ್ಬರಾಗುತ್ತಿರಲಿಲ್ಲ” ಎಂದು ತಿರುಗೇಟು ನೀಡಿದರು.

“ಕುಮಾರಸ್ವಾಮಿ ಅವರ ಪ್ರಶ್ನೆಗಳಿಗೆ ನಾನು ಉತ್ತರ ನೀಡಲು ಹೋಗುವುದಿಲ್ಲ. ಆರೋಗ್ಯ ಸರಿ ಇಲ್ಲ ಎಂದು ಆಸ್ಪತ್ರೆ ಸೇರಿರುವ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ರಾಜಕಾರಣದಲ್ಲಿ ಎದುರಾಳಿಗಳು ಬಲಿಷ್ಟವಾಗಿದ್ದಷ್ಟು ಚೆನ್ನಾಗಿ ಕೆಲಸ ಮಾಡಲು ಸಾಧ್ಯ. ಅದಕ್ಕೆ ಅವರು ಮೊದಲು ಗುಣಮುಖರಾಗಲಿ” ಎಂದು ಹೇಳಿದರು.
ಮಾಜಿ ಪ್ರಧಾನಿಗಳು ಹಿಂದೆ ಹೇಳಿದ್ದ, ʼಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆʼ, ʼಮೋದಿ ಗೆದ್ದರೆ ದೇಶ ಬಿಟ್ಟು ಹೋಗುತ್ತೇನೆʼ, ʼರಾಜ್ಯಕ್ಕೆ ರಾಷ್ಟ್ರೀಯ ಪಕ್ಷಗಳ ಅವಶ್ಯಕತೆಯಿಲ್ಲ, ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆʼ – ಎಂಬೆಲ್ಲ ಹೇಳಿಕೆಗಳನ್ನು ಜನರಿಗೆ ತೋರಿಸಿ. ನಾನು ಮಾಡಿರುವ ಕೆಲಸಗಳಿಗೆ ನನ್ನ ಕ್ಷೇತ್ರದ ಜನತೆಯ ಬಳಿ ಕೂಲಿ ಕೇಳುತ್ತಿದ್ದೇನೆ. ಮಾಧ್ಯಮದವರು ನನಗೆ ಕೂಲಿ ಕೊಡಿಸುತ್ತೀರಾ ಎನ್ನುವ ಭಾವನೆ ಇದೆ” ಎಂದು ಹೇಳಿದರು.

“ನಾನು ಕ್ಷೇತ್ರದ ಕೆಲಸದಲ್ಲಿ ನಿರತನಾಗಿದ್ದು, ಈ ಬಗ್ಗೆ ನಮ್ಮ ಪಕ್ಷದ ವರಿಷ್ಠರನ್ನು ಕೇಳಬೇಕು. ಈಗ ನಾನು ಏನನ್ನೂ ಹೇಳುವುದಿಲ್ಲ. ನಾನು ಗ್ರೌಂಡಿನಲ್ಲಿ ಇದ್ದೇನೆ, ನೀವು ಮೇಲೆ ಇದ್ದೀರಿ. ಈ ಬಗ್ಗೆ ನನಗೆ ಗೊತ್ತಿಲ್ಲ. ಎಲ್ಲವೂ ಪಕ್ಷದ ಹೈಕಮಾಂಡ್ ನಿರ್ಧಾರ” ಎಂದರು.