ಶುಕ್ರವಾರ ಜೆಡಿಎಸ್ ತನ್ನ ಮೊದಲ ಪಟ್ಟಿಯನ್ನು ಪ್ರಕಟ ಮಾಡಲಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ಪ್ರಯುಕ್ತ ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈಗಾಗಲೇ ಆಯ್ಕೆಯಾಗಿರುವ ಸಂಭವನೀಯ ಅಭ್ಯರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ತಿರುಪತಿಯಿಂದ ವೈದಿಕರು ಬರುತ್ತಿದ್ದು, TTD ಗೆ ಮನವಿ ಮಾಡಿಕೊಂಡು ತಿರುಪತಿ ತಿಮ್ಮಪ್ಪನ ಮೂಲ ದೇವರನ್ನು ರಾಮನಗರಕ್ಕೆ ತರಿಸಲಾಗ್ತಿದೆ. ಮೊದಲಿಗೆ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಪೂಜೆ ಪುನಸ್ಕಾರಗಳು ನಡೆಯಲಿದ್ದು, ಮಧ್ಯಾಹ್ನದ ಬಳಿಕ ರಾಮನಗರದ ಪ್ರಮುಖ ಬೀದಿಗಳಲ್ಲಿ ತಿಮ್ಮಪ್ಪನ ಬೃಹತ್ ಮೆರವಣಿಗೆ ನಡೆಯಲಿದೆ. ಆ ನಂತರ ಸಂಜೆ 4 ಗಂಟೆಯಿಂದ ವೇದಿಕೆ ಕಾರ್ಯಕ್ರಮ ನಡೆದು ಪ್ರಸಾದ ವಿತರಣೆ ಮಾಡಲಾಗುತ್ತದೆ. ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಅವರ ಪತ್ನಿ ಚೆನ್ನಮ್ಮ ಕೂಡ ಭಾಗಿಯಾಗಲಿದ್ದಾರೆ. ದೇವರ ಪೂಜೆ ಬಳಿಕ ಪಟ್ಟಿಯನ್ನು ಮಾಜಿ ಸಿಎಂ ಕುಮಾರಸ್ವಾಮಿ ಪ್ರಕಟ ಮಾಡಲಿದ್ದಾರೆ.
64ನೇ ವರ್ಷಕ್ಕೆ ಕಾಲಿಟ್ಟ ಮಾಜಿ ಸಿಎಂ ಕುಮಾರಸ್ವಾಮಿ..!
ಮಾಜಿ ಸಿಎಂ ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ನಡೆಸುತ್ತಿದ್ದು ಮ್ಯಾಂಡೋಸ್ ಚಂಡಮಾರುತ ಹಿನ್ನೆಲೆಯಲ್ಲಿ ನಾಲ್ಕೈದು ದಿನಗಳ ಹಿಂದೆ ಕಾರ್ಯಕ್ರಮ ಸ್ಥಗಿತ ಮಾಡಲಾಗಿತ್ತು. ಆ ಬಳಿಕ ಮಾಗಡಿಯಿಂದ ನಿನ್ನೆ ಸಂಜೆ ಪಂಚರತ್ನ ರಥಯಾತ್ರೆ ಶುರುವಾಗಿದ್ದು, ಮಾಗಡಿ ಕೋಟೆ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಾಗಡಿಯ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದ ಕುಮಾರಸ್ವಾಮಿ, ಯಾತ್ರೆ ಆರಂಭ ಆದಾಗಿನಿಂದಲೂ ನಾನು ಸರಿಯಾಗಿ ನಿದ್ರೆ ಮಾಡ್ತಿಲ್ಲ. ನೀವು ಮುಂದಿನ ಮುಖ್ಯಮಂತ್ರಿ ಎಂದು ಘೋಷನೆ ಕೂಗುತ್ತಿದ್ದೀರಿ. ನಿಮ್ಮ ಪ್ರೀತಿ ಸಂಪಾದಿಸಿದ್ದೇನೆ. ಇದು ಯಾವುದೋ ಜನ್ಮದ ಪುಣ್ಯ ಎಂದರು. 2 ಬಾರಿ ಮುಖ್ಯಮಂತ್ರಿ ಆಗಿದ್ದೇನೆ, 3ನೇ ಬಾರಿಗೆ ಆಗಬೇಕು ಅನ್ನೋ ಆಸೆ ನನಗಿಲ್ಲ. ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕು ಎನ್ನುವುದುನ ನನ್ನಾಸೆ ಎಂದಿದ್ದಾರೆ.

95 ಜನರ ಹೆಸರನ್ನು ಘೋಷಣೆ ಮಾಡಲಿದ್ದಾರೆ ಕುಮಾರಸ್ವಾಮಿ..!
ಜೆಡಿಎಸ್ ಈ ಬಾರಿ ಟಾರ್ಗೆಟ್ 123 ಅನ್ನೋ ಘೋಷ ವಾಕ್ಯ ಇರಿಸಿಕೊಂಡಿದೆ. ಇದೇ ಕಾರಣಕ್ಕೆ 95ಕ್ಕೂ ಹೆಚ್ಚು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಕುಮಾರಸ್ವಾಮಿ ಘೋಷಣೆ ಮಾಡಲಿದ್ದಾರೆ. ಪ್ರತಿಬಾರಿಯೂ ಕಾಂಗ್ರೆಸ್, ಬಿಜೆಪಿ ಟಿಕೆಟ್ ಘೋಷಣೆಯನ್ನು ನೋಡಿಕೊಂಡು ಟಿಕೆಟ್ ನೀಡುತ್ತಿದ್ದ ಜೆಡಿಎಸ್ ಈ ಬಾರಿ ಅಖಾಡದಲ್ಲಿ ತನ್ನದೇ ಹೆಜ್ಜೆಗಳನ್ನು ಮೂಡಿಸುವ ಪ್ರಯತ್ನ ಮಾಡುತ್ತಿದೆ. ಈ ಬೆಳವಣಿಗೆ ಜೆಡಿಎಸ್ ಪಾಲಿಗೆ ಸಕಾರಾತ್ಮಕ ಬೆಳವಣಿಗೆ ಎನ್ನಬಹುದು. ಇನ್ನು ನಿನ್ನೆ ಮಾಗಡಿಯಲ್ಲಿ ರಥಯಾತ್ರೆ ತಾಂತ್ರಿಕವಾಗಿ ಶುರುವಾಗಿದ್ದರೂ ಕಾರಣಾಂತರಗಳಿಂದ ಹಳ್ಳಿ ಹಳ್ಳಿಗಳಲ್ಲಿ ಯಾತ್ರೆ ಸಾಗುವುದಕ್ಕೆ ಸಾಧ್ಯವಾಗಿಲ್ಲ. ಮಧ್ಯರಾತ್ರಿ ಕುಮಾರಸ್ವಾಮಿ ಅವರ ಹುಟ್ಟು ಹಬ್ಬ ಆಚರಣೆ ಮಾಡಿದ ಬಳಿಕ ಇಂದಿನ ಪೂಜಾ ಕಾರ್ಯಕ್ರಮಕ್ಕೆ ಬಂದಿದ್ದು, ಪೂಜೆ ಬಳಿಕ ಹಲಗೂರು, ಕನಕಪುರ, ಚನ್ನಪಟ್ಟಣ ಮೂಲಕ ಮುಂದಿನ ದಿನಗಳಲ್ಲಿ ಪಂಚರತ್ನ ರಥಯಾತ್ರೆ ಮಂಡ್ಯ ಜಿಲ್ಲೆಯನ್ನು ಪ್ರವೇಶ ಮಾಡಲು ಬ್ಲ್ಯೂ ಪ್ರಿಂಟ್ ರೆಡಿಯಾಗಿದೆ.
ರಾಮನಗರಕ್ಕೆ ಘೋಷಣೆ ಆಗ್ತಿಲ್ಲ ಜೆಡಿಎಸ್ ಅಭ್ಯರ್ಥಿ..!
ಇಂದಿನ ಕಾರ್ಯಕ್ರಮದಲ್ಲಿ ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ ಆಗುತ್ತಿದೆ. ಸಾಮಾನ್ಯವಾಗಿ ಹಾಲಿ ಎಲ್ಲಾ ಶಾಸಕರಿಗೂ ಟಿಕೆಟ್ ಖಚಿತವಾಗಿದೆ. ಆದರೆ ಈ ಬಾರಿ ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಟಿಕೆಟ್ ಸಿಗ್ತಿಲ್ಲ. ಇದೇ ಕಾರಣಕ್ಕೆ ರಾಮನಗರ ಕ್ಷೇತ್ರದ ಟಿಕೆಟ್ ಘೋಷಣೆ ಮಾಡದೆ ಇರಲು ಜೆಡಿಎಸ್ ನಿರ್ಧಾರ ಮಾಡಿದೆ. ಆದರೆ ಮುಂದಿನ ದಿನಗಳಲ್ಲಿ ರಾಮನಗರ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಪಕ್ಷವನ್ನು ಬಲಾಢ್ಯವಾಗಿ ಕಟ್ಟುವ ಜೊತೆ ಜೊತೆಗೆ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ರಾಜಕೀಯವಾಗಿ ಬೆಳೆಸುವ ಹೊಣೆಗಾರಿಕೆಯೂ ಓರ್ವ ತಂದೆಯಾಗಿ ಕುಮಾರಸ್ವಾಮಿ ಅವರ ಜವಾಬ್ದಾರಿ. ಇನ್ನು ರಾಮನಗರದಲ್ಲಿ ಅನಿತಾ ಕಯುಮಾರಸ್ವಾಮಿ ಸ್ಪರ್ಧಿಸಿ, ಬೇರೊಂದು ಕ್ಷೇತ್ರದಿಂದ ನಿಖಿಲ್ ಸ್ಪರ್ಧೆ ಮಾಡಿದರೆ ಕಳೆದ ಬಾರಿಯಂತೆ ಮತ್ತೆ ಕುಟುಂಬ ರಾಜಕಾರಣ ಅನ್ನೋ ಟೀಕೆಯನ್ನು ಎದುರಿಸಬೇಕಾಗುತ್ತದೆ ಅನ್ನೋ ಕಾರಣಕ್ಕೆ ಅನಿತಾ ಕುಮಾರಸ್ವಾಮಿ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಾರೆ ಎನ್ನಲಾಗಿದೆ.
ಕೃಷ್ಣಮಣಿ