ಚನ್ನಪಟ್ಟಣ ಉಪ ಚುನಾವಣೆಯ (Channapattana bypoll) ಅಖಾಡ ದಿನೇ ದಿನೇ ರಂಗೇರುತ್ತಿದ್ದು, ಪ್ರಚಾರದ ಭರಾಟೆ, ಜಾತಿ ಲೆಕ್ಕಾಚಾರ, ವಾಗ್ಯುದ್ಧ ಜೋರಾಗಿದೆ. ಒಂದೆಡೆ ಡಿಕೆ ಬ್ರದರ್ಸ್ ಸಿಪಿ ಯೋಗೇಶ್ವರ್ (Co Yogeshwar) ಬೆನ್ನಿಗೆ ನಿಂತಿದ್ರೆ ಮತ್ತೊಂದೆಡೆ ನಿಖಿಲ್ (Nikhil Kumaraswamy) ಗೆಲ್ಲಿಸಿಕೊಳ್ಳಲು ದಳಪತಿಗಳು ರಣತಂತ್ರ ಹೆಣೆಯುತಿದ್ದಾರೆ. ಈ ಮಧ್ಯೆ ಒಕ್ಕಲಿಗ ಮತಗಳ ನಂತರದಲ್ಲಿ ನಿರ್ಣಾಯಕವಾಗಿರುವ ಅಲ್ಪಸಂಖ್ಯಾತ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಜೆಡಿಎಸ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.
ಚನ್ನಪಟ್ಟಣದಲ್ಲಿ ಮುಸ್ಲಿಂ ಮತಗಳು (Muslim votes) ಕಾಂಗ್ರೆಸ್ ಕಡೆ ವಾಲುವ ಸಾಧ್ಯತೆಯಿದ್ದು, ಜೆಡಿಎಸ್ ಗೆ ಮೈನಸ್ ಆಗುವ ಆತಂಕದಲ್ಲಿ ಮೈತ್ರಿ ಪಾಳಯವಿದ್ದು, ಮುಸಲ್ಮಾನರ ಮತ ಸೆಳೆಯಲು ಜೆಡಿಎಸ್ ಹಣದ ಆಮಿಷ ಒಡ್ಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಚನ್ನಪಟ್ಟಣದ ಮುಸ್ಲಿಂ ಮತದಾರರ ಒಲೈಕೆಗಾಗಿ ಜೆಡಿಎಸ್ ಹಣ, ಹಾಸಿಗೆ ಹಂಚಲು ಮುಂದಾಗಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಈ ಕ್ಷೇತ್ರದಮುಸ್ಲಿಮರ ಮತಕ್ಕಾಗಿ ಜೆಡಿಎಸ್ ಹಣದ ಜೊತೆ ನಮಾಜ್ ಮಾಡುವ ಹಾಸಿಗೆ ಮತ್ತು ಕುರಾನಿನ ಶ್ಲೋಕದ ಪ್ರತಿಗಳನ್ನು ಕೊಟ್ಟು, ಜೆಡಿಎಸ್ ಗೆ ಮತ ಹಾಕುವಂತೆ ಕಾರ್ಯಕರ್ತರು ಪ್ರಮಾಣ ಮಾಡಿಸಿಕೊಳ್ಳುತ್ತಿರುವ ಫೋಟೋ ಮತ್ತು ವಿಡಿಯೋಗಳು ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ಜೆಡಿಎಸ್ ಕಾರ್ಯಕರ್ತರ ಈ ನಡವಳಿಕೆಯ ವಿರುದ್ಧ ಮುಸಲ್ಮಾನ್ ಮತದಾರರು ಮತ್ತು ಕಾಂಗ್ರೆಸ್ (Congress) ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಈ ರೀತಿಯ ಕೀಳು ಮಟ್ಟದ ರಾಜಕಾರಣ ಮಾಡುತ್ತಿರುವ ಜೆಡಿಎಸ್ ಗೆ ಚನ್ನಪಟ್ಟಣ ಮತದಾರರು ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.