ವಿಧಾನ ಪರಿಷತ್ ಅಧಿವೇಶನದ ಸಮಯದಲ್ಲಿ ಡಿಸೆಂಬರ್ 15 ರಂದು ನಡೆದ ಅಹಿತಕರ ಘಟನೆಯ ವಿಚಾರಣೆ ನಡೆಸಿ ವರದಿ ಸಲ್ಲಿಸಲು ರಚಿಸಲಾಗಿದ್ದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅಧ್ಯಕ್ಷತೆಯ ಸದನ ಸಮಿತಿ ಇಂದು 84 ಪುಟಗಳ ಮಧ್ಯಂತರ ವರದಿ ಮಂಡನೆ ಆಗಿದೆ.
ವಿಧಾನಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮೀ ಅವರು ನಿಯಮಗಳ ಪ್ರಕಾರ ಜವಾಬ್ದಾರಿ ನಿರ್ವಹಿಸದೇ ಇರುವುದರಿಂದ ಈ ಘಟನೆ ನಡೆದಿದೆ. ಅಂತಿಮ ವರದಿ ಬರುವವರೆಗೂ ಅವರು ಕಾರ್ಯದರ್ಶಿಯಾಗಿ ಮುಂದುವರೆಯದಂತೆ ಸದನ ಸಮಿತಿ ಶಿಫಾರಸು ಮಾಡಿದೆ.
ಆಡಳಿತಾತ್ಮಕ ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ಬಗ್ಗೆ ಇಲಾಖಾ ತನಿಖೆ ನಡೆಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಕಾನೂನುಬಾಹಿರವಾಗಿ ಉಪಸಭಾಪತಿಯನ್ನು ಸಭಾಪತಿ ಪೀಠದ ಮೇಲೆ ಕೂರಲು ಪ್ರೇರೇಪಿಸಿದ ಸಚಿವರಾದ ಜೆ.ಸಿ. ಮಾಧುಸ್ವಾಮಿ ಮತ್ತು ಅಶ್ವತ್ಥ ನಾರಾಯಣ ಅವರ ಕೃತ್ಯ ಸಿಡಿ ಮತ್ತು ಮಾಧ್ಯಮ ದೃಶ್ಯಗಳ ಮೂಲಕ ಸಾಬೀತಾಗಿದ್ದು, ಇವರಿಬ್ಬರು ಸರ್ಕಾರದ ಯಾವುದೇ ಜವಾಬ್ದಾರಿಯಲ್ಲಿ ಮುಂದುವರಿಯಬಾರದು ಎಂದು ಸಮಿತಿ ಶಿಫಾರಸು ಮಾಡಿದೆ.
ಬಸವರಾಜ್ ಹೊರಟ್ಟಿ, ಕೆ.ಟಿ. ಶ್ರೀಕಂಠೇಗೌಡ ಮತ್ತು ಗೋವಿಂದರಾಜ್ ನಿಯಮಬಾಹಿರವಾಗಿ ಉಪಸಭಾಪತಿಯನ್ನು ಅಧ್ಯಕ್ಷರ ಪೀಠದ ಮೇಲೆ ಕೂರಿಸಿ ನಿಯಮಬಾಹಿರವಾಗಿ ಸದನ ನಡೆಸಲು ಯತ್ನಿಸಿದರು. ಉಪಸಭಾಪತಿಯನ್ನು ಕೆಳಗಿಳಿಸಿದ ನಂತರ ಅಶ್ವತ್ಥನಾರಾಯಣ ಜೊತೆ ಸೇರಿ ಶ್ರೀಕಂಠೇಗೌಡ ಮತ್ತು ಗೋವಿಂದರಾಜ್ ಮತ್ತೆ ಕೂರಿಸಲು ಯತ್ನಿಸಿರುವುದು ಸರ್ಕಾರಿ ಮತ್ತು ಖಾಸಗಿ ದೃಶ್ಯ ಮಾಧ್ಯಮಗಳ ಸಿಡಿಯಲ್ಲಿ ದೃಢಪಟ್ಟಿದೆ. ಈ ಮೂವರನ್ನು ಎರಡು ಅಧಿವೇಶನದ ಕಲಾಪಕ್ಕೆ ನಿರ್ಬಂಧಿಸಲು ಸಮಿತಿ ಶಿಫಾರಸು ಮಾಡಿದೆ.
ಸಭಾಪತಿ ಆಗಮನದ ಪ್ರವೇಶ ದ್ವಾರವನ್ನು ಮುಚ್ಚಿ ಸಭಾಪತಿ ಆಗಮನವನ್ನು ತಡೆದ ಅಸಂಸದೀಯ ಮತ್ತು ಕಾನೂನು ಬಾಹಿರ ನಡವಳಿಕೆ ಪ್ರದರ್ಶಿಸಿದ ಸದಸ್ಯರಾದ ಎಂ.ಕೆ. ಪ್ರಾಣೇಶ್, ವೈ.ಎ. ನಾರಾಣಸ್ವಾಮಿ, ಅರುಣ್ ಶಹಾಪುರ ಕೃತ್ಯವು ದೃಶ್ಯಾವಳಿಗಳು, ಮಾರ್ಷಲ್‌ಗಳ ಹೇಳಿಕೆಗಳ ಮೂಲಕ ಧೃಡಪಟ್ಟಿದ್ದು, ಈ ಮೂವರನ್ನು ಮುಂದಿನ ಎರಡು ಅಧಿವೇಶನದ ಕಲಾಪದಲ್ಲಿ ಭಾಗವಹಿಸದಂತೆ ನಿರ್ಬಂಧಿಸಲು ಶಿಫಾರಸು ಮಾಡಲಾಗಿದೆ.
ಉಪಸಭಾಪತಿಯನ್ನು ಪೀಠದಿಂದ ಬಲವಂತವಾಗಿ ಇಳಿಸಿದ ನಜೀರ್ ಅಹ್ಮದ್, ಎಂ. ನಾರಾಯಣಸ್ವಾಮಿ, ಶ್ರೀನಿವಾಸ್ ಮಾನೆ, ಪ್ರಕಾಶ್ ರಾಥೋಡ್ ಅವರ ಕೃತ್ಯವೂ ಸಾಬೀತಾಗಿದ್ದು, ಈ ಮೂವರನ್ನು ಮುಂದಿನ ಒಂದು ಅಧಿವೇಶನದ ಕಲಾಪದಲ್ಲಿ ಭಾಗವಹಿಸದಂತೆ ನಿರ್ಬಂಧಿಸಲು ಶಿಫಾರಸು ಮಾಡಲಾಗಿದೆ.
ಇನ್ನು, ಕಾನೂನುಬಾಹಿರವಾಗಿ ಸಭಾಪತಿ ಪೀಠದಲ್ಲಿ ಕುಳಿತಿದ್ದ ಎಸ್.ಎಲ್. ಧರ್ಮೇಗೌಡ ಅವರು ಮೃತಪಟ್ಟಿರುವುದರಿಂದ ಅವರ ಮೇಲಿನ ವಿಚಾರಣೆಯನ್ನು ಕೈಬಿಡಲಾಗಿದೆ.