ಬೆಳಗಾವಿ : ಕಳೆದ ಅಧಿವೇಶನದ(Winter session) ವೇಳೆ ಲಿಂಗಾಯತರಿಗೆ 2ಎ ಮೀಸಲಾತಿಗಾಗಿ ಹೋರಾಟ ನಡೆಸಿದ್ದವರ ಮೇಲಿನ ಹಲ್ಲೆಯನ್ನು ಖಂಡಿಸಿ ಇದೇ ಡಿಸೆಂಬರ್ 10ರಂದು ದೌರ್ಜನ್ಯ ದಿನವೆಂದು ಆಚರಿಸುತ್ತೇವೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ(Jayamruthyunjaya Swamiji) ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಹೋರಾಟಗಾರರ ಮೇಲೆ ಪೊಲೀಸರನ್ನು ಬಳಸಿಕೊಂಡು ನಮ್ಮ ಜನರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಹಲ್ಲೆ ನಡೆಸಿದ ಪೊಲೀಸರನ್ನು ಅಮಾನತು ಮಾಡಬೇಕೆಂದು ಒತ್ತಾಯ ಮಾಡಿದ್ದೇವೆ. ಆದರೆ ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದೆ, ಹೀಗಾಗಿ ಡಿಸೆಂಬರ್ 2024ರ ಡಿಸೆಂಬರ್ 10 ರಂದು ಪಂಚಮಸಾಲಿಗಳ ಮೇಲೆ ನಡೆದ ಲಾಠಿ ಚಾರ್ಜ್ ಪ್ರಕರಣಕ್ಕೆ ಈಗಾಗಲೇ ಸಮುದಾಯ ಸಾಕಷ್ಟು ನೊಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೀಸಲಾತಿ ಕೇಳಿದವರ ಮೇಲೆ ಈ ಸರ್ಕಾರ ಲಾಠಿ ಪ್ರಹಾರ ನಡೆಸಿದೆ. ಮುಖ್ಯಮಂತ್ರಿ ಇಡೀ ಸಮುದಾಯದ ಕ್ಷಮೆ ಕೇಳಬೇಕು, ಅಲ್ಲಿಯವರೆಗೆ 2ಎ ಮೀಸಲಾತಿ ಕೇಳಲ್ಲ. ಮೀಸಲಾತಿ ಗೋಸ್ಕರ ನಮ್ಮ ಹೋರಾಟ ನಿರಂತರ ನಡೆಯಲಿದೆ. ಜನರ ಮಧ್ಯೆ ನಮ್ಮ ಹೋರಾಟ ತೆಗೆದುಕೊಂಡು ಹೋಗುತ್ತೇವೆ. ಅಂದು ಲಾಠಿ ಬೀಸಿದವರ ವಿರುದ್ಧ ಕ್ರಮ ಆಗಬೇಕು, ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಈ ಘಟನೆಗೆ ವಿಷಾದಿಸಿ ಬೆಳಗಾವಿ ನಗರದ ಗಾಂಧಿ ಭವನದಿಂದ ಮೌನ ಪ್ರತಿಭಟನೆ ನಡೆಸಿ, ಮೆರವಣಿಗೆ ಮೂಲಕ ಕಪ್ಪು ಬಟ್ಟೆ ಧರಿಸಿ, ಬಾಯಿಗೆ ಕಪ್ಪು ಬಟ್ಟೆ ಕಟ್ಟಿ ಸರ್ಕಾರದ ನಡೆಯನ್ನು ಖಂಡಿಸಲು ನಿರ್ಧರಿಸಿದ್ದೇವೆ ಎಂದು ಸ್ವಾಮೀಜಿ ಮಾಹಿತಿ ನೀಡಿದ್ದಾರೆ.






