ಇಂಡಸ್ ಹರ್ಬ್ಸ್ ನಟಿಸಿ ರವೀಂದ್ರ ತುಂಬರಮನೆ ನಿರ್ಮಿಸಿ , ರಮೇಶ್ ಬೇಗಾರ್ ಶೃಂಗೇರಿ ರಚಿಸಿ ನಿರ್ದೇಶಿಸಿರುವ ʼಜಲಪಾತʼ ಚಿತ್ರದ 2 ನೇ ಹಾಡು (ಲವ್ ಸಾಂಗ್) ಇದೀಗ ಎ 2 ಮ್ಯೂಸಿಕ್ ವಾಹಿನಿಯ ಮುಖಾಂತರ ಬಿಡುಗಡೆಯಾಗಿದೆ.
ಇತ್ತೀಚೆಗೆ ನಿರ್ಮಾಣ ತಂಡ ಆಯೋಜಿಸಿದ್ದ ʼಜಲಪಾತʼ ಮಲೆನಾಡು ಉತ್ಸವ ” ಎಂಬ ಸಾಂಸ್ಕೃತಿಕ ಮೇಳದಲ್ಲಿ ಪ್ರಸಿದ್ಧ ನಟಿ ಜಯಮಾಲ ಅವರು ” ಎಲ್ಲಿ ಹೋದನೇ ಸಖಿ ” ಎಂಬ ಹಾಡನ್ನು ಲೋಕಾರ್ಪಣೆ ಗೊಳಿಸಿದರು.
ಈ ಸಂದರ್ಭ ಮಾತಾಡಿದ ಜಯಮಾಲ ತನ್ನ ಮಲೆನಾಡು ಮೂಲ ಚಿಕ್ಕಮಗಳೂರನ್ನು ನೆನಪಿಸಿಕೊಂಡು ಚಿತ್ರದ ನಾಯಕನಟಿ ನಾಗಶ್ರೀ ಎಂಬ ಶೃಂಗೇರಿ ಸುಂದರಿಗೆ ಯಶಸ್ಸು ಸಿಗಲಿ ಎಂದರು.

ಇಡೀ ಸಿನಿಮಾದ ಆಶಯವೇ ವಿನಾಶದಂಚಿಗೆ ಸರಿದಿರುವ ಪರಿಸರದ ಕುರಿತು ಕಾಳಜಿ ಮೂಡಿಸುವಂಥದ್ದು. ವ್ಯಾವಹಾರಿಕ ಉದ್ದೇಶಗಳಿಲ್ಲದೇ ನಿಜವಾದ ಪ್ರಕೃತಿ ಪ್ರೀತಿಯಿಂದ ನಿರ್ಮಿಸಿದ ಈ ಚಿತ್ರ ಖಂಡಿತಾ ಜನರ ಮನಸ್ಸು ಗೆಲ್ಲಲಿದೆ ಎಂದು ಜಯಮಾಲ ತಿಳಿಸಿದರು.
ನಿರ್ಮಾಪಕ ಟಿ.ಸಿ.ರವೀಂದ್ರ ತುಂಬರಮನೆ ಮಾತನಾಡಿ ನಾವು ಸಿನಿಮಾದಲ್ಲಿ ಹೆಚ್ಚು ಗ್ರಾಮೀಣ ಪ್ರತಿಭೆಗಳನ್ನೇ ಬಳಸಿಕೊಂಡು ಅವರಿಗೊಂದು ವೇದಿಕೆ ಒದಗಿಸಿದ್ದೇವೆ. ಬಹಳ ಅರ್ಥಪೂರ್ಣವಾದ ಈ ಲವ್ ಸಾಂಗ್ ನ್ನು ವನಿತಾ ವೆಂಕಟೇಶ್ ಎಂಬ ಗೃಹಿಣಿ ಬರೆದಿದ್ದಾರೆ ಎಂದರು.
ನಿರ್ದೇಶಕ ರಮೇಶ್ ಬೇಗಾರ್ ಮತ್ತು ಸಂಗೀತ ನಿರ್ದೇಶಕಿ ಸಾದ್ವಿನಿ ಕೊಪ್ಪ ಈ ಸಂದರ್ಭ ಮಾತನಾಡಿದರು. ಎಲ್ಲಿಹೋದನೇ ಸಖೀ ಹಾಡನ್ನು ವನಿತಾ ವೆಂಕಟೇಶ್ ಬರೆದಿದ್ದು ಸಾದ್ವಿನಿ ಕೊಪ್ಪ ಸಂಗೀತ ಸಂಯೋಜನೆ ಮಾಡಿ ಶ್ರೀನಿಧಿ ಶಾಸ್ತ್ರೀ ಇವರೊಂದಿಗೆ ಡ್ಯುಯೆಟ್ ಹಾಡಿದ್ದಾರೆ.
ಜಲಪಾತ ಚಲನಚಿತ್ರ ಸೆಪ್ಟೆಂಬರ್ 29 ಕ್ಕೆ ತೆರೆಕಾಣಲಿದೆ.