ಸ್ವತಂತ್ರ್ಯೋತ್ತರ ಭಾರತ ಪ್ರಜಾತಾಂತ್ರಿಕವಾಗಿ, ಜಾತ್ಯಾತೀತವಾಗಿ ಮತ್ತು ವೈಜ್ಞಾನಿಕವಾಗಿ ರೂಪುಗೊಳ್ಳಲು ಅಪಾರವಾಗಿ ಶ್ರಮಿಸಿದವರು ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು. ಬಡತನ, ಅನಕ್ಷರತೆ, ಅಸುರಕ್ಷತೆ, ಅಪೌಷ್ಟಿಕತೆ, ಮೌಢ್ಯ, ಕಂದಾಚಾರ, ಪರಸ್ಪರ ಕಚ್ಚಾಟಗಳಿಂದ ತುಂಬಿದ್ದ ಬೃಹತ್ ರಾಷ್ಟ್ರದ ಮೊದಲ ಪ್ರಧಾನಿಯಾಗಿ ಏಕಕಾಲದಲ್ಲಿ ಎಲ್ಲಾ ಕಡೆ ಕಣ್ಣಾಯಿಸಿ ಸವೆಸಬೇಕಿರುವ ಬಲು ದೂರದ ಹಾದಿಗೆ ಭದ್ರ ಬುನಾದಿ ಹಾಕಿಕೊಟ್ಟವರು ನೆಹರು. ‘ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ್ದರೂ’ ಬಡವರ ಪಾಲಿಗೆ ಮಾತೃಹೃದಯಿ ಆಗಿದ್ದರು. ವಿದೇಶದಲ್ಲಿ ಓದಿ ಬಂದು ಅಪಾರ ಗಳಿಕೆಯ ವಕೀಲಿಕೆ ಇದ್ದರೂ ಅದನ್ನು ಬಿಟ್ಟು ಸ್ವತಂತ್ರ್ಯ ಹೋರಾಟಕ್ಕೆ ಧುಮುಕಿದರು. ಪಾಶ್ಚಿಮಾತ್ಯ ಸಂಸ್ಕೃತಿಗೆ ಆಕರ್ಷಿತರಾಗಿದ್ದರೂ ಮಹಾತ್ಮ ಗಾಂಧೀಜಿ ಅವರ ಜೊತೆ ಸೇರಿ ಭಾರತದ ಬಹುಜನರ ದೇಸಿಯ ಸಂಸ್ಕೃತಿಯನ್ನು ಅವಗಾಹಿಸಿಕೊಂಡರು. ರಾಜಕೀಯವಾಗಿ ತಮ್ಮ ಕಟುಟೀಕಾಕಾರರಾಗಿದ್ದ ರಾಮಮನೋಹರ ಲೋಹಿಯಾ ಅವರನ್ನು ಆಪ್ತ ಸ್ನೇಹಿತ ಎಂದು ಒಪ್ಪಿಕೊಂಡಿದ್ದರು. ಕಾಶ್ಮೀರಿ ಬ್ರಾಹ್ಮಣರಾಗಿದ್ದರೂ ಎಂದು ‘ಮೇಲರಿಮೆ’ ತೋರದ, ಜಾತಿಯತೆ ಮಾಡದ, ಎಲ್ಲರನ್ನೂ ಜಾತ್ಯಾತೀತವಾಗಿ ನೋಡಿದರು.
ಆದರೆ ಇದೇ ಜವಾಹರಲಾಲ್ ನೆಹರು ಅವರನ್ನು ಇಂದು ಅತ್ಯಂತ ಕೀಳು ಶಬ್ದಗಳಿಂದ ಅಪಮಾನ ಮಾಡಲಾಗುತ್ತಿದೆ. ನೆಹರು ಅವರನ್ನು ಖಳನಾಯನನ್ನಾಗಿ ಬಿಂಬಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಸುಭಾಷಚಂದ್ರ ಬೋಸ್, ಭಗತ್ ಸಿಂಗ್, ಇವರೆಲ್ಲ ವ್ಯಕ್ತಿಗಳಲ್ಲ. ಸಿದ್ಧಾಂತಗಳು. ಅದೇ ರೀತಿ ಜವಾಹರಲಾಲ್ ನೆಹರು ಕೂಡ ಒಂದು ಸಿದ್ಧಾಂತ. ಈ ಸೈದ್ದಾಂತಿಕ ಹೋರಾಟವನ್ನು ನಾವು ಗಾಂಧೀಜಿ-ನೆಹರು, ಅಂಬೇಡ್ಕರ್-ನೆಹರು ನಡುವೆ ಹಾಗೂ ಅಥವಾ ಇನ್ನಿತರರ ವಿಚಾರದಲ್ಲಿ ಕೂಡ ಕಾಣಬಹುದು.
ಜವಾಹರಲಾಲ್ ನೆಹರು ಎಂಬುದು ಸಿದ್ದಾಂತ ಎಂಬುದನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡವರು ಆರ್ ಎಸ್ ಎಸ್ ನವರು ಅಥವಾ ಬಲಪಂಥೀಯರು. ನೆಹರು ಅವರದು ಜಗತ್ತಿನ ವಿವಿಧ ದೇಶಗಳಲ್ಲಿ ಇದ್ದ ‘ಸೋಷಿಯಲಿಸಂ, ಕಮ್ಯುನಿಸಂ, ಲಿಬರಲ್ ಮತ್ತು ಡೆಮಾಕ್ರಟಿಕ್’ ಚಿಂತನೆಗಳಿಂದ ಮಿಶ್ರಣಗೊಂಡು ರೂಪಿತವಾಗಿದ್ದ ಅವರದೇಯಾದ ಪ್ರತ್ಯೇಕ ಸಿದ್ಧಾಂತ. ಹಾಗಾಗಿಯೇ ಅವರು ತಮ್ಮ ಸಮಕಾಲೀನ ನಾಯಕರ ಜೊತೆಗೆ ಹಲವು ವಿಷಯಗಳಲ್ಲಿ ಸಂವಾದ-ಸಂಘರ್ಷ ಕೂಡ ನಡೆಸಬೇಕಾಯಿತು.

ಹೀಗೆ ನೆಹರುವನ್ನು ‘ನೆಹರುಇಸಂ’ ಆಗಿ ಒಪ್ಪಿಕೊಂಡ ಮತ್ತು ಅದು ಎಲ್ಲರಿಗೂ ಸಲ್ಲುವ ಸಿದ್ಧಾಂತ ಎಂದರಿತ ಬಲಪಂಥೀಯರು ಅಂದಿನಿಂದಲೇ ನೆಹರು ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲಾರಂಭಿಸಿದರು. ನರಹರುಇಸಂ ಅನ್ನು ನಾಶಪಡಿಸುವ ಕೆಲಸಕ್ಕೂ ನಾಂದಿಯಾಡಿದರು. ನೆಹರು ಅವರಿಗೆ ಅವರ ಪರಮಾಪ್ತ ಸ್ನೇಹಿತ ಸರದಾರ್ ವಲ್ಲಭಾಯ್ ಪಟೇಲ್ ಅವರನ್ನೇ ಪರ್ಯಾಯ ಎಂದು ಬಿಂಬಿಸಿದರು. ಆನಂತರ ಪ್ರಧಾನ ಮಂತ್ರಿಯಾಗಿ ಆಂತರಿಕವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ಉಂಟಾಗುತ್ತಿದ್ದ ಹಲವು ಅನಿವಾರ್ಯ ಕಾರಣಗಳಿಂದ ಅವರು ಎಸಗಿದ ತಪ್ಪುಗಳನ್ನು ಮಹಾಪ್ರಮಾದ ಎಂಬಂತೆ ಬಿಂಬಿಸಿದರು. ನಂತರ ಅವರ ವೈಯಕ್ತಿಕ ಬದುಕಿನ ಬಗ್ಗೆಯೂ ಕೆಸರು ಎರಚಿದರು. ಈ ಎಲ್ಲಾ ಕುಕೃತ್ಯಗಳು ಈಗಲೂ ನಡೆಯುತ್ತಿವೆ.
ಜವಾಹರಲಾಲ್ ನೆಹರು ಹೀಗಿದ್ದರು, ಅವರನ್ನು ಈ ರೀತಿ ಬಿಂಬಿಸಲಾಗುತ್ತಿದೆ. ಆದರೆ ಇಲಿ, ಮೊದಲಿಗೆ ಜವಾಹರಲಾಲ್ ನೆಹರು ಅವರನ್ನು ‘ಕಾಂಗ್ರೆಸ್ ನಾಯಕ’ ಎಂಬುದರ ಬದಲು ‘ಭಾರತ ಕಂಡ, ಸ್ವತಂತ್ಯೋತ್ತರ ಭವ್ಯ ಭಾರತಕ್ಕೆ ಬುನಾದಿ ಹಾಕಿದ, ಭಾರತ ಪ್ರಜಾತಾಂತ್ರಿಕವಾಗಿ, ಜಾತ್ಯಾತೀತವಾಗಿ ಮತ್ತು ವೈಜ್ಞಾನಿಕವಾಗಿ ರೂಪುಗೊಳ್ಳಲು ಕಾರಣರಾದ ನಾಯಕ ಎಂದು’ ನೋಡಬೇಕಾಗಿದೆ. ಅವರನ್ನು ಸಿದ್ಧಾಂತ ಎಂದು ಪರಿಗಣಿಸಬೇಕಾಗಿದೆ. ಆ ಸಿದ್ಧಾಂತ ಇಂದಿನ ಪರಿಸ್ಥಿತಿಯಲ್ಲಿ ಭಾರತಕ್ಕೆ ಅಗತ್ಯವಾದುದು ಕೂಡ ಆಗಿದೆ. ಹಾಗಾಗಿ ನೆಹರುಇಸಂ ಅನ್ನು ಕಾಪಿಟ್ಟುಕೊಳ್ಳಬೇಕಿದೆ ಮತ್ತು ಮುಂದಿನ ತಲೆಮಾರಿಗೆ ರವಾನಿಸಬೇಕಾಗಿದೆ.
ಆದರೆ, ಬಲಪಂಥೀಯರು ನೆಹರುಯಿಸಂ ಅನ್ನು ನಾಶ ಮಾಡಲು ಹಗಲಿರುಳು ಮಿದುಳು ಖರ್ಚು ಮಾಡುತ್ತಿದ್ದಾರೆ ಸರಿ, ಕಾಂಗ್ರೆಸ್ ಪಕ್ಷ ಏನು ಮಾಡುತ್ತಿದೆ? ಅವರ ಪಕ್ಷಕ್ಕೆ ಮಾತ್ರವಲ್ಲ, ದೇಶಕ್ಕೆ ಅಗತ್ಯ ಇರುವ ನೆಹರುಇಸಂ ಅನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಪ್ರಯತ್ನ ಮಾಡಬೇಕಿತ್ತಲ್ಲವೇ? ಕಾಂಗ್ರೆಸ್ ಪಕ್ಷದಿಂದ ಅಂತಹ ಪ್ರಯತ್ನ ಆಗುತ್ತಿಲ್ಲ ಎನ್ನುವುದಕ್ಕೆ ‘ನವೆಂಬರ್ 14’ ಬಹಳ ಒಳ್ಳೆಯ ಉದಾಹರಣೆ. ನವೆಂಬರ್ 14 ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನ. ಈ ದಿನದಂದು ಎಐಸಿಸಿಯಿಂದ ಹಿಡಿದು ಬ್ಲಾಕ್ ಕಾಂಗ್ರೆಸ್ ವರೆಗೆ ಆ ಪಕ್ಷದ ಪದಾಧಿಕಾರಿಗಳು ನೆಹರು ಫೋಟೋಗೆ ಹೂವಿನ ಹಾರ ಹಾಕಿ, ಪೂಜೆ ಮಾಡಿ, ಹೆಚ್ಚೆಂದರೆ ‘ಅವರವರೇ’ ಇರುವ ಜಾಗದಲ್ಲಿ ಭಾಷಣ ಬಿಗಿದಿದ್ದಾರೆ. ತನ್ನ ಐಡೆಂಟಿಟಿಯೇ ಆಗಿರುವ ಜವಾಹರಲಾಲ್ ನೆಹರು ಅವರಿಗೆ ಗೌರವ ತೋರುವ ರೀತಿ ಇದಾ? ನೆಹರುಇಸಂ ಅನ್ನು ಉಳಿಸಿಕೊಳ್ಳುವ ಬಗೆ ಇದಾ?

ನೆಹರು, ನೆಹರುಇಸಂ ಸುಲಭಕ್ಕೆ ಅಳಿಸಲಾಗದ ಸಂಗತಿ ಎನ್ನುವುದು ಬಲಪಂಥೀಯರಿಗೆ ಬಹಳ ಚೆನ್ನಾಗಿ ಗೊತ್ತಿದೆ. ಅದಕ್ಕಾಗಿ ಅವರು ಶತಮಾನವಾದರೂ ಸರಿ ಶತಾಯಗತಾಯ
ನಾಶಮಾಡುತ್ತೇವೆ ಎಂದು ಪಣತೊಟ್ಟಿದ್ದಾರೆ. ಪರಿಣಾಮವಾಗಿ ನಿತ್ಯವೂ ಸತ್ಯನಾಶವಾಗುತ್ತಿದೆ. ಪ್ರತಿಯಾಗಿ ನೆಹರು ಹುಟ್ಟಿದ ದಿನದಂದಾದರೂ ಅವರ ವಿಚಾರಧಾರೆಗಳನ್ನು ಹರಡುವ ಕೆಲಸ ಮಾಡಬಾರದೆ ಕಾಂಗ್ರೆಸ್? ನೆಹರು ಜನ್ಮದಿನದಂದು ಮಾತ್ರವಲ್ಲ, ಅನುದಿನವೂ ಈ ಕೆಲಸ ಮಾಡದ ಹೊರತು ದೇಶಕ್ಕೆ ಉಳಿಗಾಲವಿಲ್ಲ; ಅದಕ್ಕೂ ಮಿಗಿಲಾಗಿ ಕಾಂಗ್ರೆಸ್ ಪಕ್ಷಕ್ಕೆ. ‘ಬಲಪಂಥೀಯರು ಜವಾಹರಲಾಲ್ ನೆಹರು ಅವರನ್ನು ಈ ತಲೆಮಾರಿಗೆ ಖಳನಾಯಕ ಎಂದು ಚಿತ್ರಿಸಿಬಿಟ್ಟಿರುವುದರಿಂದ ಅವರ ಬಗ್ಗೆ ಹೆಚ್ಚು ಮಾತನಾಡಿದಷ್ಟು ಅಪಾಯ’ ಎನ್ನುವ ಮಟ್ಟಕ್ಕೆ ಕಾಂಗ್ರೆಸ್ ಬಂದಂತೆ ಕಾಣಿಸುತ್ತಿದೆ. (ಈ ಮಾತನ್ನು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ ಕಾರಣಕ್ಕಾಗಿ ಉಲ್ಲೇಖಿಸುತ್ತಿದ್ದೇನೆ) ಇದರಿಂದ ದೇಶಕ್ಕೆ ಬೇಕಿರುವ ಜವಾಹರಲಾಲ್ ನೆಹರು ಕಾಂಗ್ರೆಸ್ ಪಕ್ಷಕ್ಕೆ ಬೇಡವಾದಂತಿದೆ.