ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ ಮತ್ತಿತರ ಕಡೆ ಆಗಾಗ್ಗೆ ಚರ್ಚೆಗೆ ಬರುವ ಜಾಟರ ಬಗ್ಗೆ ಈಗಾಗಲೇ ಮೊದಲನೇ ಕಂತಿನಲ್ಲಿ ಆ ಸಮುದಾಯದ ಎಲ್ಲೆಲ್ಲಿ ಪ್ರಭಾವ ಹೊಂದಿದೆ. ಸಮುದಾಯಕ್ಕೆ ದಶಕಗಳಿಂದ ನಾಯಕತ್ವ ನೀಡಿದವರು ಯಾರು? ಹಿಂದುತ್ವ ಮತ್ತು ಮಂಡಲ್ ರಾಜಕಾರಣದ ಬಳಿಕ ಆದ ಬದಲಾವಣೆಗಳೇನು ಎಂಬುದನ್ನು ಓದಿಯಾಗಿದೆ. ಈಗ ಮತ್ತಿತರ ಸಂಗತಿಗಳನ್ನು ನೊಡೋಣ.
ಅಜಿತ್ ಸಿಂಗ್ ರಾಜಕೀಯ ಜೀವನ ಹೇಗಿತ್ತು?
ಚರಣ್ ಸಿಂಗ್ ಅವರ ಮಗ ಚೌಧರಿ ಅಜಿತ್ ಸಿಂಗ್ ಅವರು ಐಐಟಿ-ವಿದ್ಯಾವಂತ. ತಂದೆಯಿಂದ ಬಳುವಳಿ ರೂಪದಲ್ಲಿ ಬಂದ ರಾಜಕೀಯದ ಅಧಿಕಾರ, ನಾಯಕತ್ವ ಬಹುಕಾಲ ಸಾಂಗವಾಗಿ ಸಾಗಲಿಲ್ಲ. ಪರಿಣಾಮವಾಗಿ ರಾಷ್ಟ್ರೀಯ ಮತ್ತು ಉತ್ತರ ಪ್ರದೇಶದ ರಾಜಕೀಯದಲ್ಲಿ ಪ್ರಸ್ತುತವಾಗಿರಲು ಆಗಾಗ್ಗೆ ಪಕ್ಷಗಳನ್ನು ಬದಲಾಯಿಸಬೇಕಾಯಿತು. ಮೊದಲಿಗೆ ವಿ.ಪಿ. ಸಿಂಗ್ ಅವರ ಸರ್ಕಾರವನ್ನು ಬೆಂಬಲಿಸಿ ಸರ್ಕಾರದ ಭಾಗವಾಗಿದ್ದರು. ನಂತರ 1995ರಲ್ಲಿ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡು ಪಿ.ವಿ. ನರಸಿಂಹ ರಾವ್ ಅವರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದರು. 1996ರ ಲೋಕಸಭಾ ಚುನಾವಣೆಯಲ್ಲಿ ಅವರು ಬಾಗ್‌ಪತ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದರು. ಆದರೆ 1997ರಲ್ಲಿ ಸಂಸತ್ತಿಗೆ ರಾಜೀನಾಮೆ ನೀಡಿ ತಮ್ಮದೇ ಆದ ಭಾರತೀಯ ಕಿಸಾನ್ ಕಾಮಗಾರಿ ಪಕ್ಷವನ್ನು (BKKP) ಸ್ಥಾಪಿಸಿದರು. ಪರಿಣಾಮವಾಗಿ 1998ರ ಲೋಕಸಭಾ ಚುನಾವಣೆಯಲ್ಲಿ ಅಜಿತ್ ಸಿಂಗ್ ಅವರು ತಮ್ಮ ಸಾಂಪ್ರದಾಯಿಕ ಬಾಗ್ಪತ್ ಸ್ಥಾನವನ್ನು ಕಳೆದುಕೊಂಡರು.
1999ರಲ್ಲಿ ಅಜಿತ್ ಸಿಂಗ್ ಅವರು ರಾಷ್ಟ್ರೀಯ ಲೋಕದಳ (RLD) ಸ್ಥಾಪಿಸಿದರು. ಅದು ಅದೇ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನಗಳಲ್ಲಿ ಜಯಗಳಿಸಿತು. ಅವುಗಳೆಂದರೆ ಬಾಗ್ಪತ್ ಮತ್ತು ಪಕ್ಕದ ಕೈರಾನಾ. ಆಗ ಅಜಿತ್ ಸಿಂಗ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರವನ್ನು ಬೆಂಬಲಿಸಿ ಸರ್ಕಾರದ ಭಾಗವಾಗಿದ್ದರು. ಇದಾದ ಮೇಲೆ 2004ರಲ್ಲಿ ಈ ಸ್ಥಾನಗಳನ್ನು ಉಳಿಸಿಕೊಂಡಿತ್ತು. ಆದರೆ ಕೇಂದ್ರದಲ್ಲಿ ಸರ್ಕಾರ ಬದಲಾಗಿದ್ದರಿಂದ ಅಜಿತ್ ಸಿಂಗ್ ಕೂಡ ತಮ್ಮ ನಿಲುವು ಬದಲಿಸಿ ಮನಮೋಹನ್ ಸಿಂಗ್ ಸರ್ಕಾರವನ್ನು ಸೇರಲು ಪ್ರಯತ್ನಿಸಿದರು. ಆದರೆ ಹಲವಾರು ವರ್ಷಗಳವರೆಗೆ ಅದು ಕಾರ್ಯರೂಪಕ್ಕೆ ಬರಲಿಲ್ಲ.
ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳ 2009ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಒಂಬತ್ತು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಐದು ಸ್ಥಾನಗಳನ್ನು ಗೆದ್ದಿತ್ತು. ಆದರೂ 2011ರಲ್ಲಿ ಅಜಿತ್ ಸಿಂಗ್ ಅವರು ಮನಮೋಹನ್ ಸಿಂಗ್ ಅವರ ಸರ್ಕಾರಕ್ಕೆ ಬೆಂಬಲ ಸೂಚಿಸಿ ಸರ್ಕಾವನ್ನೂ ಸೇರಿಕೊಂಡರು. ಇವರ ಇಂತಹ ನಡೆಗಳ ಪರಿಣಾಮವಾಗಿ ಮುಂದಿನ ಎರಡು ಲೋಕಸಭಾ ಚುನಾವಣೆಗಳು (2014 ಮತ್ತು 2019ರಲ್ಲಿ) ರಾಷ್ಟ್ರೀಯ ಲೋಕದಳ ರಾಷ್ಟ್ರ ರಾಜಕಾರಣದಲ್ಲಿ ನೆಲೆ ಕಳೆದುಕೊಂಡಿತು. ಅಜಿತ್ ಸಿಂಗ್ ಮತ್ತು ಅವರ ಮಗ ಜಯಂತ್ ಚೌಧರಿ ಇಬ್ಬರೂ ಸೋತರು. 2021ರಲ್ಲಿ ಅಜಿತ್ ಸಿಂಗ್ ಕೊರೋನಾಗೆ ಬಲಿಯಾದರು.
ಮಂಡಲ-ಕಮಂಡಲ ವರ್ಷಗಳಲ್ಲಿ ಹೇಗಿತ್ತು ಪರಿಸ್ಥಿತಿ?
BKKP ಅಜಿತ್ ಸಿಂಗ್ ಅವರು ಒಂಬತ್ತು ಸಲ ರಾಜಕೀಯ ಪಥ ಬದಲಿಸಿದ್ದಾರೆ. 1996ರ ಯುಪಿ ಚುನಾವಣೆಯಲ್ಲಿ ರೈತ ನಾಯಕ ಮಹೇಂದ್ರ ಸಿಂಗ್ ಟಿಕಾಯತ್ ಬೆಂಬಲ ಪಡೆದ ರಾಷ್ಟ್ರೀಯ ಲೋಕದಳ ಮುಲಾಯಂ ಸಿಂಗ್ ಅವರ ಎಸ್ಪಿಯೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಂಡಿತು. 38 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ ಎಂಟು ಸ್ಥಾನಗಳಲ್ಲಿ ಗೆದ್ದಿತು. 2002ರ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು 38 ಸ್ಥಾನಗಳಲ್ಲಿ ಸ್ಪರ್ಧಿಸಿ 14 ಸ್ಥಾನ ಗೆದ್ದಿತು. ಅಲ್ಲದೆ ಮಾಯಾವತಿ ನೇತೃತ್ವದ ಬಿಜೆಪಿ-ಬಿಎಸ್ಪಿ ಸರ್ಕಾರವನ್ನು ಬೆಂಬಲಿಸಿತು. ಆದರೆ ಬಿಜೆಪಿ ಜೊತೆಗಿನ ಮೈತ್ರಿಯನ್ನು ಕೆಲವೇ ದಿನಗಳಲ್ಲಿ ಮುರಿದುಕೊಂಡಿತು.
ಇದಾದ ಮೇಲೆ 2003ರಲ್ಲಿ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳ ಮುಲಾಯಂ ಸಿಂಗ್ ಸರ್ಕಾರವನ್ನು ಬೆಂಬಲಿಸಿತು. ಆದರೆ 2007ರ ಉತ್ತರ ಪ್ರದೇಶ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಮುಲಾಯಂ ಸರ್ಕಾರದಿಂದ ಹೊರಬಂದಿತು. 2007ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟವಾದ ಜನಾದೇಶ ಸಿಕ್ಕಿದ್ದರಿಂದ ರಾಷ್ಟ್ರೀಯ ಲೋಕದಳ ಅಸ್ತಿತ್ವ ಕಳೆದುಕೊಂಡಿತು.
2017ರ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಉತ್ತರ ಪ್ರದೇಶದ 17 ಜಿಲ್ಲೆಗಳ 94 ಸ್ಥಾನಗಳಲ್ಲಿ ಬಿಜೆಪಿ 73 ಸ್ಥಾನಗಳನ್ನು ಗೆದ್ದುಕೊಂಡಿತು. ಎಸ್‌ಪಿ 15, ಬಿಎಸ್‌ಪಿ ಮೂರು, ಕಾಂಗ್ರೆಸ್ ಎರಡು ಮತ್ತು ಜಾಟ್‌ಗಳ ಪಕ್ಷವಾದ ಆರ್‌ಎಲ್‌ಡಿ ಕೇವಲ ಒಂದು ಸ್ಥಾನವನ್ನು ಗೆದ್ದಿದ್ದವು. ಹೀಗೆ ಬಿಜೆಪಿ ಪಶ್ಚಿಮ ಉತ್ತರ ಪ್ರದೇಶದಲ್ಲಿ ಗೆಲ್ಲಲು ಇತರೆ ಹಿಂದುಳಿದ ವರ್ಗಗಳಾದ ಕುರ್ಮಿಗಳು, ಮೌರ್ಯ, ಶಕ್ಯ, ಸೈನಿ, ಕುಶ್ವಾಹ ಜಾತಿಗಳ ಬಲವೂ ಕಾರಣ. ಆದರೀಗ ಈ ಜಾತಿಗಳ ಪ್ರಬಲ ನಾಯಕರು ಕೂಡ ಇತ್ತೀಚಿಗೆ ಬಿಜೆಪಿ ತ್ಯಜಿಸಿದ್ದಾರೆ. ಇದು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತವಾಗಬಹುದು ಎಂದು ಹೇಳಲಾಗುತ್ತಿದೆ.
2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 15 ಜಾಟ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆ ಪೈಕಿ 14 ಮಂದಿ ಗೆದ್ದಿದ್ದರು. ಈ ಬಾರಿ ಪಕ್ಷವು ಸಮುದಾಯದ 17 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಷ್ಟ್ರೀಯ ಲೋಕದಳ 12 ಜಾಟ್ ಅಭ್ಯರ್ಥಿಗಳನ್ನು ಮತ್ತು ಅದರ ಮೈತ್ರಿ ಪಕ್ಷ ಸಮಾಜವಾದಿ ಆರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜಾಟರಿಗೆ ಈಗ ಹಿಂಪಡೆದಿರುವ ಕೃಷಿ ಕಾನೂನುಗಳ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಮೇಲೆ ಕೋಪವಿದೆ. ಅಲ್ಲದೆ ಕಬ್ಬಿನ ಬಾಕಿ ಪಾವತಿಯಂತಹ ಸಮಸ್ಯೆಗಳು ಸಹ ಬಿಜೆಪಿಗೆ ವಿರುದ್ಧವಾದ ಅಂಶಗಳಾಗಿವೆ. ಅಖಿಲೇಶ್ ಯಾದವ್ ಮತ್ತು ಜಯಂತ್ ಚೌಧರಿ ಅವರ ಕಾರಣದಿಂದ ಯಾದವ್, ಮುಸ್ಲೀಮ್ ಮತ್ತು ಜಾಟ್ ಮತದಾರರು ಮತ್ತೆ ಒಟ್ಟಿಗೆ ಬರುತ್ತಿರುವುದು ನಿರ್ಣಾಯಕವಾದ ವಿಷಯವಾಗಿದೆ. ಇದೇ ಕಾರಣಕ್ಕೆ ಬಿಜೆಪಿ ಈ ಚುನಾವಣೆಯನ್ನು ಹಿಂದೂ-ಮುಸ್ಲಿಂ ರೀತಿಯಲ್ಲಿ ಧ್ರುವೀಕರಿಸಲು ಪ್ರಯತ್ನಿಸುತ್ತಿದೆ.