ಬಿಜೆಪಿಯ ನಾಯಕತ್ವ ಬದಲಾವಣೆಯ ಸರ್ಕಸ್ ದಿನದಿಂದ ದಿನಕ್ಕೆ ಪತ್ತೇಧಾರಿ ಕಾದಂಬರಿಯಂತಾಗಿದೆ. ಅದರ ತೀರಾ ಇತ್ತೀಚಿನ ರೋಚಕ ಎಪಿಸೋಡ್ ನೆನಪಿಸಿಕೊಳ್ಳುವುದಾದರೆ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿಯ ಬಳಿಕ ಬಣ ಸಂಘರ್ಷ ಶಮನವಾಗುವ ಬದಲು ಮತ್ತಷ್ಟು ಗರಿಗೆದರಿದೆ. ಈ ನಡುವೆ, ದಿನಕ್ಕೊಂದು ಹೊಸ ಹೊಸ ಬೆಳವಣಿಗೆಗಳು ಕೇಸರಿ ಪಾಳೆಯದಲ್ಲಿ ನಡೆಯುತ್ತಿದ್ದ ರಾಜಕಾರಣ ಆಸಕ್ತರನ್ನು ತುದಿಗಾಲಿನಲ್ಲಿ ನಿಲ್ಲಿಸಿವೆ.
ಒಂದು ಕಡೆ ಸಿಎಂ ಯಡಿಯೂರಪ್ಪ ವಿರುದ್ಧದ ಸ್ವಜನಪಕ್ಷಪಾತ, ಕುಟುಂಬಸ್ಥರ ಆಡಳಿತ ಹಸ್ತಕ್ಷೇಪದಂತಹ ಹಳೆಯ ಆರೋಪಗಳ ಬಳಿಕ ಹೊಸದಾಗಿ ಭದ್ರಾ ಮೇಲ್ಡಂಡೆ ಯೋಜನೆಯ ಭಾರೀ ಭ್ರಷ್ಟಾಚಾರದ ಗಂಭೀರ ಆರೋಪ, ದೂರವಾಣಿ ಕದ್ದಾಲಿಕೆಯ ದೂರುಗಳ ಬೆನ್ನಲ್ಲೇ ಸ್ವತಃ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧವೇ ವರಿಷ್ಠರಿಗೆ ದೂರು ನೀಡಲು ಭಿನ್ನರ ಬಣ್ಣ ನಿರ್ಧರಿಸಿದೆ ಎಂಬ ಸಾಲು ಸಾಲು ಹೊಸ ಬೆಳವಣಿಗೆಗಳು ಇಡೀ ವಿವಾದಕ್ಕೆ ಚಿತ್ರವಿಚಿತ್ರ ತಿರುವುಗಳನ್ನು ನೀಡಿವೆ.
ಆ ನಡುವೆ, ಅರುಣ್ ಸಿಂಗ್ ವರದಿಯ ಆಧಾರದ ಮೇಲೆ ನಾಯಕತ್ವ ಬದಲಾವಣೆಯ ವಿಷಯದಲ್ಲಿ ಸ್ವತಃ ತಾವೇ ಮಧ್ಯಪ್ರವೇಶಿಸಿ ಸೂಕ್ತ ತೀರ್ಮಾನ ಕೈಗೊಳ್ಳಲು ವರಿಷ್ಠರು ಮುಂದಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಈಗಾಗಲೇ ಬುಲಾವ್ ಬಂದಿದೆ. ಮುಂದಿನ ಒಂದೆರಡು ದಿನಗಳಲ್ಲಿ ಸಿಎಂ ದೆಹಲಿಗೆ ಹೋಗಲಿದ್ದಾರೆ ಎಂಬ ವಿಷಯ ಈಗ ಬಿಜೆಪಿ ವಲಯದಲ್ಲಿ ಸದ್ದುಮಾಡುತ್ತಿದೆ.
ಈ ಭೇಟಿಯ ವೇಳೆಯಲ್ಲೇ ಯಡಿಯೂರಪ್ಪ ಅವರ ಮುಖ್ಯಮಂತ್ರಿಗಿರಿಯ ಭವಿಷ್ಯದ ತೀರ್ಮಾನವಾಗಲಿದೆ. ವರಿಷ್ಠರ ಸೂತ್ರಕ್ಕೆ ಒಪ್ಪಿದರೆ, ಯಡಿಯೂರಪ್ಪ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರಾಗಿ, ಅವರ ಹಿರಿಯ ಮಗ ಬಿ ವೈ ರಾಘವೇಂದ್ರ ಅವರನ್ನು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರನ್ನಾಗಿ ಮತ್ತು ಕಿರಿಯ ಮಗ ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯ ಸಂಪುಟದಲ್ಲಿ ಆಯಕಟ್ಟಿನ ಸಚಿವ ಸ್ಥಾನ ನೀಡಿ, ಎಲ್ಲವನ್ನೂ ಸೂಸೂತ್ರವಾಗಿ ಬಗೆಹರಿಸುವ ಯೋಜನೆ ಇದೆ. ಆದರೆ, ಈ ಯೋಜನೆಗೆ ಸ್ವತಃ ಯಡಿಯೂರಪ್ಪ ಒಪ್ಪುವರೆ? ಅಥವಾ ಆರ್ ಎಸ್ ಎಸ್ ಮತ್ತು ಬಿಜೆಪಿ ಪಕ್ಷನಿಷ್ಠರ ಅಪೇಕ್ಷೆಯಂತೆ ಸರ್ಕಾರ ನಡೆಸುವುದಾಗಿಯೂ, ಆಡಳಿತದಲ್ಲಿ ತಮ್ಮ ಪುತ್ರ ವಿಜಯೇಂದ್ರ ಹಸ್ತಕ್ಷೇಪ ನಡೆಸದಂತೆ ಸಂಪೂರ್ಣ ದೂರ ಇಡುವುದಾಗಿಯೂ ಮಾತುಕೊಟ್ಟು ತಮ್ಮ ಸ್ಥಾನ ಉಳಿಸಿಕೊಳ್ಳುವರೇ ಎಂಬುದನ್ನು ಮುಂದಿನ ವಾರದ ಆ ಭೇಟಿ ನಿರ್ಧರಿಸಲಿದೆ.
ಈ ನಡುವೆ ಮತ್ತೊಂದು ರೋಚಕ ಬೆಳವಣಿಗೆಯಲ್ಲಿ ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಕೆಡವಿ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ರಮೇಶ್ ಜಾರಕಿಹೊಳಿ ಮತ್ತು ಅವರ ‘ಮೆಕೆನಸ್ ಗೋಲ್ಡ್ ಟೀಂ’ ಅಂದಿನ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ವಿರುದ್ಧ ಪ್ರಯೋಗಿಸಿದ ತಂತ್ರವನ್ನೇ ಈಗ ಮತ್ತೆ ಪ್ರಯೋಗಿಸಲು ಮುಂದಾಗಿದೆ. ಸೆಕ್ಸ್ ಸಿಡಿ ಪ್ರಕರಣದಲ್ಲಿ ಸಂಪುಟದಿಂದ ಹೊರಹೋಗಿದ್ದ ತಮಗೆ ಮತ್ತೆ ಸಣ್ಣ ನೀರಾವರಿ ಖಾತೆಯನ್ನೇ ನೀಡಿ ಸಚಿವರನ್ನಾಗಿ ಮಾಡಬೇಕು ಮತ್ತು ತಮ್ಮೊಂದಿಗೆ ಕಾಂಗ್ರೆಸ್-ಬಿಜೆಪಿ ತೊರೆದು ಬಂದ ‘ಮಾಜಿ ಅತೃಪ್ತರು’, ಹಾಲಿ ‘ಮಹಾದಾಸೆಯ’ ಶಾಸಕರು ಮತ್ತು ಸಚಿವರಿಗೆ ಆಯಕಟ್ಟಿನ ಖಾತೆಗಳನ್ನು ನೀಡಬೇಕು ಎಂಬ ಬೇಡಿಕೆ ಇಟ್ಟುಕೊಂಡು ಮುಂಬೈಗೆ ತೆರಳಿರುವ ಜಾರಕಿಹೊಳಿ ಮತ್ತು ಇತರ ಕೆಲವು ಶಾಸಕರು, ಅಲ್ಲಿನ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಿ, ತಮ್ಮ ಬೇಡಿಕೆ ಈಡೇರಿಸಿಕೊಳ್ಳುವ ದಾಳ ಉರುಳಿಸಿದ್ಧಾರೆ ಎನ್ನಲಾಗುತ್ತಿದೆ.
ಆದರೆ, ಜಾರಕಿಹೊಳಿ ಮತ್ತು ಅವರ ‘ಮೆಕೆನಸ್ ಗೋಲ್ಡ್ ಟೀಂ’ ಈ ಬಾರಿ ಮುಂಬೈಗೆ ಹೋಗಿರುವುದು ಕೇವಲ ತಮ್ಮ ಸಚಿವ ಸ್ಥಾನ ಬೇಡಿಕೆಗಾಗಿ ಮಾತ್ರವೇ? ಅಥವಾ ಅವರ ಈ ಮುಂಬೈ ಯಾತ್ರೆಯ ಹಿಂದೆ ಯಡಿಯೂರಪ್ಪ ಅವರ ಅಧಿಕಾರದ ಕುರ್ಚಿಗೆ, ಬಹಿರಂಗವಾಗಿ ತಟಸ್ಥರು ಎಂದು ಹೇಳುವ ಬಿಜೆಪಿ ತತ್ವನಿಷ್ಠರು, ಸಂಘಪರಿವಾರದ ಪ್ರಭಾವಿಗಳು ಹಾಗೂ ಅವರ ವಿರುದ್ಧ ಬಹಿರಂಗವಾಗಿ ತೊಡೆತಟ್ಟಿರುವ ಘೋಷಿತ ಭಿನ್ನರ ಕಡೆಯಿಂದ ಎದುರಾಗಿರುವ ಅಪಾಯವನ್ನು ತೊಡೆದುಹಾಕಲು ಜಾರಕಿಹೊಳಿ ಮತ್ತು ತಂಡವನ್ನು ದಾಳವಾಗಿ ಬಳಸಲಾಗುತ್ತಿದೆಯೇ? ಎಂಬುದು ಈಗಿರುವ ಪ್ರಶ್ನೆ.
ಏಕೆಂದರೆ; ಹದಿನೇಳು ಮಂದಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ತಮ್ಮ ಪಕ್ಷಗಳಿಗೆ ರಾಜೀನಾಮೆ ನೀಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೋಗಿ ತಿಂಗಳುಗಟ್ಟಲೆ ತಲೆಮರೆಸಿಕೊಂಡು, ಆಗಿನ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ್ದರು. ಹಾಗೆ ಅಧಿಕಾರದಲ್ಲಿರುವ ಸರ್ಕಾರವನ್ನು ಉರುಳಿಸುವ ಮೂಲಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಆ ಹದಿನೇಳೂ ಮಂದಿ ಆಗಲೂ ಹೇಳಿದ್ದು, ತಾವು ಯಡಿಯೂರಪ್ಪ ನೇತೃತ್ವದಲ್ಲಿ ನಂಬಿಕೆ ಇಟ್ಟು ಬಿಜೆಪಿಗೆ ಬೆಂಬಲ ನೀಡುತ್ತಿದ್ದೇವೆ ಎಂದೇ ವಿನಃ ಬಿಜೆಪಿಯ ತತ್ವ ಸಿದ್ಧಾಂತವನ್ನು ಒಪ್ಪಿ ಎಂದಲ್ಲ. ಹಾಗಾಗಿ, ಈಗ ಅವರು ನೆಚ್ಚಿ ಬಂದ ಅದೇ ಯಡಿಯೂರಪ್ಪ ಅವರ ಅಧಿಕಾರದ ಕುರ್ಚಿಗೆ ಸಂಚಕಾರ ಬಂದಿರುವ ಹೊತ್ತಲ್ಲಿ, ಅದೇ ಜಾರಕಿಹೊಳಿ ನೇತೃತ್ವದ ಕೆಲವು ಶಾಸಕರ ತಂಡ ಮತ್ತೆ ಮುಂಬೈ ಅವರಲ್ಲಿ ಕೆಲವರು ಹಿಂದಿನಂತೆಯೇ ಮತ್ತೆ ಮುಂಬೈಗೆ ಹೋಗಿ ರಹಸ್ಯ ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದರೆ; ಅದು ಕೇವಲ ಅವರ ಆಯಕಟ್ಟಿನ ಖಾತೆಗಳ ಬೇಡಿಕೆ ಈಡೇರಿಕೆಗೆ ಮಾತ್ರ ಸೀಮಿತವಾದ ತಂತ್ರಗಾರಿಕೆ ಇರಲಾರದು ಎಂಬ ಮಾತುಗಳು ಕೇಳಿಬರುತ್ತಿವೆ.
ಆ ಹಿನ್ನೆಲೆಯಲ್ಲಿ ನೋಡಿದರೆ; ಯಡಿಯೂರಪ್ಪ ಅವರನ್ನು ಬದಲಾಯಿಸುವ ನಿರಂತರ ಪ್ರಯತ್ನಗಳಿಗೆ ಮಣಿದು ಪಕ್ಷದ ವರಿಷ್ಠರು ಅವರ ರಾಜೀನಾಮೆ ಪಡೆಯಲು ಮುಂದಾಗಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಅವರನ್ನು ದೆಹಲಿಗೆ ಕರೆಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ, ತಮ್ಮನ್ನೇ ನಂಬಿ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದ ಜಾರಕಿಹೊಳಿ ಮತ್ತು ತಂಡವನ್ನೇ ಬಳಸಿಕೊಂಡು ಇದೀಗ ಅಧಿಕಾರ ಉಳಿಸಿಕೊಳ್ಳಲು ತಂತ್ರ ಹೆಣೆಯಲಾಗಿದೆ. ನಾವು ಬಿಜೆಪಿಗೆ ಬಂದಿರುವುದು ಮತ್ತು ಸರ್ಕಾರ ರಚಿಸಲು ನಮ್ಮ ಸಚಿವ ಮತ್ತು ಶಾಸಕ ಸ್ಥಾನಗಳನ್ನು ತ್ಯಾಗ ಮಾಡಿ ಬಂದಿರುವುದು ಯಡಿಯೂರಪ್ಪ ಕಾರಣಕ್ಕೆ ಮಾತ್ರ. ಹಾಗಾಗಿ, ಈಗ ಯಡಿಯೂರಪ್ಪ ಅವರನ್ನೇ ಬದಲಾಯಿಸುವುದಾದರೆ, ನಾವು ಬಿಜೆಪಿಯಲ್ಲಿ ಮುಂದುವರಿಯುವುದಿಲ್ಲ ಎಂಬ ಸಂದೇಶವನ್ನು ವರಿಷ್ಠರಿಗೆ ರವಾನಿಸುವ ತಂತ್ರ ಇದಾಗಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ಧಾರೆ ಎಂಬ ವದಂತಿ ಕೂಡ ಹಬ್ಬಿದೆ.
ಒಟ್ಟಾರೆ, ದಿನದಿಂದ ದಿನಕ್ಕೆ ರೋಚಕ ತಿರುವುಗಳ ಮೂಲಕ ಕ್ಷಣಕ್ಷಣಕ್ಕೂ ಕುತೂಹಲಕಾರಿಯಾಗಿ ಮುಂದುವರಿಯುತ್ತಿರುವ ಬಿಜೆಪಿಯ ಈ ನಾಯಕತ್ವ ಬದಲಾವಣೆ ಬಿಕ್ಕಟು ಎಂಬ ‘ರಾಜಕೀಯ ಸಸ್ಪೆನ್ಸ್ ಥ್ರಿಲ್ಲರ್’ ಧಾರಾವಾಹಿಗೆ, ಸಿಎಂ ಯಡಿಯೂರಪ್ಪ ದೆಹಲಿ ಭೇಟಿ ಕೂಡ ತೆರೆ ಎಳೆಯುವ ಸಾಧ್ಯತೆಗಳು ಕಡಿಮೆ. ಬಹುತೇಕ, ಆ ದೆಹಲಿ ಭೇಟಿಯ ಬಳಿಕ ಬಿಜೆಪಿಯ ರಾಜಕೀಯ ವಿದ್ಯಮಾನಗಳು ಅನಿರೀಕ್ಷಿತ ಮಜಲಿಗೆ ಹೊರಳಿದರೂ ಅಚ್ಚರಿಯಿಲ್ಲ ಎಂಬುದು ಸ್ವತಃ ಆ ಪಕ್ಷದ ಪಡಸಾಲೆಯಲ್ಲೇ ಕೇಳಿಬರುತ್ತಿದೆ!