ದೇಶಾದ್ಯಂತ ಭಾರೀ ಚರ್ಚೆಯಾಗಿದ್ದ ಮತ್ತು ಲಕ್ಷಾಂತರ ಕೋಟಿ ರೂಪಾಯಿಗಳ ಭ್ರಷ್ಟಾಚಾರ ಎಂದೇ ಹೇಳಲಾಗುತ್ತಿದ್ದ ‘ಬಳ್ಳಾರಿ ಗಣಿ ಅಕ್ರಮ’ದ (Bellary Mining Scam) ಹಿನ್ನೆಲೆಯಲ್ಲಿ ಜೈಲು ಸೇರಿ ರಾಜಕಾರಣದಿಂದ ದೂರ ಉಳಿದಿದ್ದ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ (Janardana Reddy) ಮತ್ತೆ ಸಕ್ರೀಯ ರಾಜಕಾರಣಕ್ಕೆ ಬರಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ರಾಮುಲು ಮೂಲಕ ರೆಡ್ಡಿ ಪ್ರಯತ್ನ
ಹಿಂದೆ ಬಿಜೆಪಿ ಹೈಕಮಾಂಡಿನಲ್ಲಿ ಅತ್ಯಂತ ಪ್ರಭಾವಿಗಳಲ್ಲಿ ಒಬ್ಬರಾಗಿದ್ದ ದಿವಂಗತ ಸುಷ್ಮಾ ಸ್ವರಾಜ್ ಅವರು ಜನಾರ್ದನ ರೆಡ್ಡಿ ಅವರಿಗೆ ಆಸರೆಯಾಗಿದ್ದರು. ಆದರೆ ಈಗ ಅವರು ಇಲ್ಲದಿರುವುದರಿಂದ ಜನಾರ್ದನ ರೆಡ್ಡಿ ಅವರಿಗೆ ಮತ್ತೆ ಬಿಜೆಪಿ ಮಡಿಲಿಗೆ ಮರಳುವುದು ಬಹಳ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ತಮ್ಮ ಪರಮಾಪ್ತ ಸ್ನೇಹಿತ ಹಾಗೂ ರಾಜ್ಯ ಸಾರಿಗೆ ಸಚಿವ ಶ್ರೀರಾಮುಲು ಮೂಲಕ ಸಕ್ರೀಯ ರಾಜಕಾರಣಕ್ಕೆ ಬರಲು ತಯಾರಿ ನಡೆಸುತ್ತಿದ್ದಾರೆ. ವೇದಿಕೆ ಸಿದ್ದಪಡಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ದಿಢೀರನೆ ದೆಹಲಿಗೆ ಆಗಮನ
ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನವೇ ಬಿಜೆಪಿ ಸೇರಬೇಕು. ಚುನಾವಣೆಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡಬೇಕು. ಆ ಮೂಲಕ ಮತ್ತೆ ಪ್ರವರ್ಧಮಾನಕ್ಕೆ ಬರಬೇಕು ಎಂಬ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಈಗಿನಿಂದ ಬಿಜೆಪಿ ಸೇರಲು ಪ್ರಯತ್ನ ನಡೆಸುತ್ತಿದ್ದಾರೆ. ಅದೇ ಕಾರಣಕ್ಕೆ ಅವರ ಗನ್ ಮ್ಯಾನ್, ಪಿಎ. ಪಿಎಸ್ ಗಳಿಗೂ ಮಾಹಿತಿ ನೀಡಿದೆ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ದೆಹಲಿಗೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ದೆಹಲಿಯಲ್ಲಿ ರಾಮುಲು-ರೆಡ್ಡಿ ಸೀಕ್ರೆಟ್ ಆಪರೇಷನ್
ದೆಹಲಿಯಲ್ಲೇ ಠಿಕಾಣಿ ಹೂಡಿ ಬಿಜೆಪಿ ಹೈಕಮಾಂಡ್ ನಾಯಕರ ಭೇಟಿಗಾಗಿ ಸ್ನೇಹಿತರಿಬ್ಬರೂ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ. ನಡ್ಡಾ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಭೇಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಪ್ರಹ್ಲಾದ್ ಜೋಷಿ ಭೇಟಿ ಮಾಡಿದ ಶ್ರೀರಾಮುಲು
ಅಮಿತ್ ಶಾ, ಜೆ.ಪಿ. ನಡ್ಡಾ ಮತ್ತು ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಲು ದಿನವಿಡಿ ಕಾದು ಕುಳಿತರೂ ಸಮಯಾವಕಾಶ ಸಿಗದ ಹಿನ್ನೆಲೆಯಲ್ಲಿ ಶ್ರೀರಾಮುಲು ಅವರು ಬುಧವಾರ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿದ್ದಾರೆ. ಪ್ರಹ್ಲಾದ್ ಜೋಷಿ ಮೂಲಕ ಅಮಿತ್ ಶಾ, ಜೆ.ಪಿ. ನಡ್ಡಾ ಮತ್ತು ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಲು ರಾಮುಲು – ರೆಡ್ಡಿ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಡಿಸಿಎಂ ಸ್ಥಾನಕ್ಕಾಗಿ ಶ್ರೀರಾಮುಲು
ಇದಲ್ಲದೆ ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಪರಿಶಿಷ್ಟ ಪಂಗಡಕ್ಕೆ ಅತಾರ್ಥ್ ತನಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದಾಗಿ ಭರವಸೆ ನೀಡಿತ್ತು. ಆ ಭರವಸೆಯಂತೆ ತನ್ನನ್ನು ಉಪ ಮುಖ್ಯಮಂತ್ರಿ ಸ್ಥಾನವನ್ನು ಕೊಡಿ ಎಂದು ಕೂಡ ಶ್ರೀರಾಮುಲು ಹೈಕಮಾಂಡ್ ಬಳಿ ಕೇಳಿಕೊಳ್ಳಲಿದ್ದಾರೆ. ಶ್ರೀರಾಮುಲು ಉಪ ಮುಖ್ಯಮಂತ್ರಿಯಾದರೆ ಬಿಜೆಪಿಯಲ್ಲಿ ನೆಲೆ ಕಂಡುಕೊಳ್ಳಲು ಹೆಚ್ಚಿನ ಅವಕಾಶ ಇರುತ್ತದೆ ಎಂದು ಜನಾರ್ದನ ರೆಡ್ಡಿ ಕೂಡ ಉಪ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂಬ ಮಾಹಿತಿಗಳು ಕೂಡ ಇವೆ.
ಪ್ರಹ್ಲಾದ್ ಜೋಷಿ ಟ್ವೀಟ್
ತಮ್ಮನ್ನು ಶ್ರೀರಾಮುಲು ಅವರು ಭೇಟಿ ಮಾಡಿದ್ದು ಇಲಾಖೆಯ ಕೆಲಸಕ್ಕೆ ಎಂದು ಪ್ರಹ್ಲಾದ್ ಜೋಷಿ ಟ್ವೀಟ್ ಮಾಡಿದ್ದಾರೆ. ‘ಇಂದು ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವರಾದ ಶ್ರೀ @sriramulubjp ಅವರು ನನ್ನನ್ನು ಭೇಟಿಯಾದ ಸಂದರ್ಭದಲ್ಲಿ ಧಾರವಾಡ ಕ್ಷೇತ್ರದ ಗ್ರಾಮೀಣ ಕ್ಷೇತ್ರದ ಪರಿಶಿಷ್ಟ ಪಂಗಡ ಸಮುದಾಯದ ಪ್ರದೇಶಗಳಲ್ಲಿ ಟಿ.ಎಸ್. ಪಿ ಯೋಜನೆಯಡಿ ಮೂಲಭೂತ ಸೌಕರ್ಯಗಳ ಕಾಮಗಾರಿಕೆಗೆ ಅನುದಾನವನ್ನು ಬಿಡುಗಡೆ ಮಾಡಲು ಕೋರಲಾಯಿತು’ ಎಂದು ತಿಳಿಸಿದ್ದಾರೆ.