ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಕ್ರಿಕೆಟ್ ತಂಡ ಹಾಗೂ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡ ಮುಖಾಮುಖಿಯಾಗಿದ್ದು, ಮೊದಲ ಬಾರಿಗೆ ಫೈನಲ್ ತಲುಪಿದ್ದ ಜಮ್ಮು ಮತ್ತು ಕಾಶ್ಮೀರ ತಂಡ ಬಲಿಷ್ಠ ಕರ್ನಾಟಕವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್‌ಗಳ ಭರ್ಜರಿ ಮೊತ್ತ ದಾಖಲಿಸಿತು. ಬಳಿಕ ಕರ್ನಾಟಕ ತಂಡ ಕೇವಲ 293 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ 291 ರನ್‌ಗಳ ಮುನ್ನಡೆ ಪಡೆದಿತು.

ಎರಡನೇ ಇನ್ನಿಂಗ್ಸ್‌ನಲ್ಲಿಯೂ ಜಮ್ಮು ಮತ್ತು ಕಾಶ್ಮೀರದ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಆರಂಭಿಕ ಆಟಗಾರ ಕಮ್ರಾನ್ ಇಕ್ಬಾಲ್ 160 ರನ್‌ಗಳ ಶತಕ ಬಾರಿಸಿದರೆ, ಸಾಹಿಲ್ ಕೂಡ ಶತಕ ದಾಖಲಿಸಿದರು. ಇದರೊಂದಿಗೆ ತಂಡದ ಒಟ್ಟು ಮುನ್ನಡೆ 630 ರನ್‌ಗಳನ್ನು ಮೀರಿತು. ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.

ರಣಜಿ ಟ್ರೋಫಿ ನಿಯಮಗಳ ಪ್ರಕಾರ, ಫೈನಲ್ ಪಂದ್ಯ ಡ್ರಾ ಆದರೆ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ವಿಜೇತ ತಂಡವನ್ನು ಘೋಷಿಸಲಾಗುತ್ತದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದ್ದ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಯಿತು.

ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಇದು ಐತಿಹಾಸಿಕ ಗೆಲುವಾಗಿದೆ. ಬರೋಬ್ಬರಿ 67 ವರ್ಷಗಳ ನಂತರ ತಂಡವು ತನ್ನ ಮೊದಲ ರಣಜಿ ಟ್ರೋಫಿಯನ್ನು ಗೆದ್ದು ಬೀಗಿದೆ. ಬಲಿಷ್ಠ ಆಟಗಾರರಿದ್ದ ಕರ್ನಾಟಕ ತಂಡ ತವರಿನ ಪ್ರಯೋಜನ ಪಡೆದುಕೊಳ್ಳುತ್ತದೆ ಎಂಬ ನಿರೀಕ್ಷೆ ಇದ್ದರೂ, ಜಮ್ಮು ಮತ್ತು ಕಾಶ್ಮೀರ ತಂಡ ಆರಂಭದಿಂದಲೇ ಪಂದ್ಯವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಇತಿಹಾಸ ನಿರ್ಮಿಸಿದೆ.






