ಕೊಡಗು:ಪ್ರತಿ ಮನೆ, ಮನೆಗೆ ನೀರು ತಲುಪಬೇಕೆನ್ನುವ ಮಹತ್ವಾಕಾಂಕ್ಷೆಯಿಂದ ಜಾರಿಗೆ ತರಲಾದ ಜಲಜೀವನ್ ಮಿಷನ್ ಯೋಜನೆ ಕೊಡಗಿನಲ್ಲಿ ಹಳ್ಳಹಿಡಿದಿದ್ದು, ನಾಮಕಾವಸ್ಥೆಗೆ ಕೆಲವು ಕಡೆಗಳಲ್ಲಿ ನೀರಿನ ಸಂಪರ್ಕ ನೀಡದೆ ನಲ್ಲಿಗಳನ್ನು ಅಳವಡಿಸಿ ಭ್ರಷ್ಟಾಚಾರ ಎಸಗಿರುವುದು ಗುಟ್ಟಾಗಿಯೇನು ಉಳಿದಿಲ್ಲ.
ಇದೀಗ ಜಿಲ್ಲೆಯಲ್ಲಿ ಈ ಯೋಜನೆ ಸಂಬಂಧ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿ ಬರಲಾರಂಭಿಸಿದ್ದು, ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಈ ವಿಚಾರ ಪ್ರತಿಧ್ವನಿಸುವಂತಾಗಿದೆ.ಈಗಾಗಲೇ ಕೊಡಗಿನ ಬಹುತೇಕ ಮನೆಗಳಿಗೆ ನಲ್ಲಿ ಅಳವಡಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನೀರು ಮನೆಗೆ ಹರಿದು ಬರುತ್ತಿಲ್ಲ. ಹೀಗಾಗಿ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಈ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವನ್ನು ಹಲವರು ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಪೊನ್ನಂಪೇಟೆಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇದೇ ವಿಚಾರ ಪ್ರಸ್ತಾಪವಾಗಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯರು ಈ ಬಗ್ಗೆ ಮಾತನಾಡಿ, ಯೋಜನೆಯಂತೆ ಪ್ರತಿ ಮನೆಗೆ ನೀರು ತಲುಪಬೇಕಾಗಿದ್ದು ಇದುವರೆಗೆ ತಲುಪಿಲ್ಲ ಎಂಬ ಅಸಮಾಧಾನ ಹೊರ ಹಾಕಿದ್ದಾರೆ.
ಚೆನ್ನನಕೋಟೆಯ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಚ್ . ಇ.ಗಣೇಶ್ ಸಮಗ್ರ ತನಿಖೆಗೆ ಸಭೆಯಲ್ಲಿ ಒತ್ತಾಯಿಸಿದರು. ಜಲಜೀವನ ಯೋಜನೆಯಡಿಯಲ್ಲಿ ಬಾರಿ ಭ್ರಷ್ಟಾಚಾರ ನಡೆದಿದ್ದು ಸತ್ಯ ಹೊರಬರಲು ಸಮಿತಿ ಒಂದನ್ನು ರಚಿಸಿ ತನಿಖೆಗೆ ಒಳಪಡಿಸಬೇಕು ಹಾಗೆ ಉಳಿದಿರುವ ಯಾವುದೇ ಬಿಲ್ಲುಗಳನ್ನು ಪಾವತಿಸಲು ತಡೆಹಿಡಿಯಬೇಕು ಎಂದು ಗಣೇಶ್ ಒತ್ತಾಯಿಸಿದರು.
ಇದೇ ಸಂದರ್ಭ ಮಾತನಾಡಿದ ಶಾಸಕ ಎ. ಎಸ್. ಪೊನ್ನಣ್ಣ ಜೆ.ಜೆ. ಎಂ ಸಮಸ್ಯೆಗಳ ಬಗ್ಗೆ ಹತ್ತು ದಿನದ ಒಳಗೆ ಸೂಕ್ತ ವರದಿ ನೀಡುವಂತೆ ಜೆ.ಜೆ. ಎಂ ಅಧಿಕಾರಿಗೆ ಸೂಚನೆಯನ್ನು ನೀಡಿದ್ದಾರೆ.ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾದ ಯೋಜನೆಯ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ. ಯೋಜನೆಯ ಸಮಸ್ಯೆಯ ಬಗ್ಗೆ ಜನವರಿ 20 ರಂದು ಪ್ರತ್ಯೇಕ ವಿಶೇಷ ಸಭೆಯನ್ನು ಕರೆಯುವುದಾಗಿ ಶಾಸಕರು ಈ ಸಂದರ್ಭ ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆಯಲ್ಲಿ ಭಾರಿ ದುರುಪಯೋಗವಾಗಿದೆ ಎಂದು ಕಳೆದ ಮೂರು ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷದ ವಕ್ತಾರಾರಾದ ತೆನ್ನಿರಾ ಮೈನಾ ಅವರು ಪತ್ರಿಕಾಗೋಷ್ಠಿಯನ್ನು ಕರೆದು ಕ್ರಮಕ್ಕೆ ಒತ್ತಾಯಿಸಿದ್ದರು.
ತಾವು ಪಡೆದುಕೊಂಡ ದಾಖಲೆಯ ಅನುಸಾರ 200 ಕೋಟಿಗೆ ಹೆಚ್ಚು ಹಣ ಕೊಡಗಿನಲ್ಲಿ ದುರುಪಯೋಗ ಆಗಿದೆ ಎಂದು ಅವರು ಸ್ಪಷ್ಟಪಡಿಸಿದ್ದರು.ಈ ಹಿಂದೆ ಈ ಸಂಬಂಧ ದಾಖಲುಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಪಡೆದುಕೊಂಡಿದ್ದರು.ಆದರೆ ಇದುವರೆಗೂ ಯಾವುದೇ ಕ್ರಮ ಜರುಗಲಿಲ್ಲ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣನವರಿಗೆ ತಿಳಿಯದಂತೆ ಕೆಲವು ಮುಖಂಡರು, ಅಧಿಕಾರಿಗಳು,ಮತ್ತು ಗುತ್ತಿಗೆದಾರರು ನಡುವೆ ಸಂದಾನದ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ವಕ್ತಾರರು ಮೂರು ತಿಂಗಳ ಹಿಂದೆ ಬಾರಿ ಭ್ರಷ್ಟಾಚಾರ ನಡೆದಿದೆ ಎಂದು ಬಹಿರಂಗವಾಗಿ ಹೇಳಿದಾಗ ಇದುವರೆಗೂ ಕೂಡ ಯಾವೊಬ್ಬ ಅಧಿಕಾರಿಯೂ ಮತ್ತು ಸಂಬಂಧಿಸಿದವರು ಅವರ ವಿರುದ್ಧ ಪ್ರಶ್ನೆಯನ್ನು ಮಾಡಿಲ್ಲ ಹಾಗೆ ಸ್ಪಷ್ಟೀಕರಣವನ್ನು ಕೂಡ ನೀಡಿರುವುದಿಲ್ಲ. ಈ ಎಲ್ಲ ಬೆಳವಣಿಗೆಯ ಹಿಂದೆ ಹಲವು ಕಾಣದ ಕೈಗಳು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಇದೀಗ ಸಂಶಯಿಸಲಾಗಿದೆ.ಶಾಸಕರು ಹಾಗು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಈ ಆರೋಪಗಳ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.