ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ವಿಡಿಯೋಗಳ ವೈರಲ್ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೆಸರು ಕೇಳಿಬಂದಿದೆ.

ವಿಡಿಯೋಗಳ ವೈರಲ್ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಈ ಸಂಬಂಧ ನಟ ಧನ್ವೀರ್ ರನ್ನ ಪೊಲೀಸರು ಎರಡನೇ ಬಾರಿ ವಿಚಾರಣೆ ನಡೆಸುವಾಗ ವಿಜಯಲಕ್ಷ್ಮೀ ಹೆಸರು ಹೇಳಿದ್ದಾರೆ ಎನ್ನಲಾಗಿದೆ.
ವಿಚಾರಣೆ ವೇಳೆ ನನಗೆ ವಿಡಿಯೋ ಬಂತು, ನಾನು ವಿಜಯಲಕ್ಷ್ಮಿಗೆ ಕಳಿಸಿದ್ದೆ ಹೊರತು ವೈರಲ್ ಮಾಡಿಲ್ಲ. ಆದರೂ ಹೇಗೆ ವೈರಲ್ ಆಯ್ತೋ ಗೊತ್ತಿಲ್ಲ ಎಂದಿದ್ದಾರೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.

ಇನ್ನು ಧನ್ವೀರ್ ವಿಜಯಲಕ್ಷ್ಮೀ ಹೆಸರು ಹೇಳಿದ ಹಿನ್ನೆಲೆ ತನಿಖಾಧಿಕಾರಿ ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಪ್ರಕರಣ ಸಂಬಂಧ ಧನ್ವೀರ್ ಸಂಪೂರ್ಣ ಸತ್ಯ ಬಾಯಿಬಿಡದಿದ್ದರೆ ವಿಜಯಲಕ್ಷ್ಮಿಯನ್ನು ವಿಚಾರಣೆಗೆ ಕರೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಇದರ ಜೊತೆ ಪೊಲೀಸರು ವೈರಲ್ ವಿಡಿಯೋ ಅಪ್ ಲೋಡ್ ಮಾಡಿದ ಅಕೌಂಟ್‌ಗಳ ಪತ್ತೆಗೆ ಮುಂದಾಗಿದ್ದಾರೆ. ಈ ಬಗ್ಗೆ METAಗೆ ಪತ್ರ ಬರೆದಿರುವ ಪರಪ್ಪನ ಅಗ್ರಹಾರ ಪೊಲೀಸರು, ವೈರಲ್ ವಿಡಿಯೋ ಎಷ್ಟು ಅಕೌಂಟ್‌ಗಳಲ್ಲಿ ಪೋಸ್ಟ್ ಆಗಿದೆ ಎಂದು ಮಾಹಿತಿ ಕೇಳಿದ್ದಾರೆ.





