ತಮಿಳಿನ ಜೈ ಭೀಮ್ ಸಿನಿಮಾ ಭಾರತೀಯ ಚಿತ್ರ ಲೋಕದಲ್ಲಿ ಹೊಸದೊಂದು ಅಧ್ಯಾಯಯನ್ನು ಹುಟ್ಟು ಹಾಕಿದೆ. ಈ ಹಿಂದೆ ಸಾಕಷ್ಟು ಸಿನಿಮಾಗಳು ಅಂಬೇಡ್ಕರ್ ವಾದದ ನೆರಳಲ್ಲಿ ಹುಟ್ಟಿಕೊಂಡಿವೆಯಾದರೂ ಅದು ಜೈ ಭೀಮ್ ರೀತಿಯಲ್ಲಿ ಜನರನ್ನು ತಲುಪಲು ಸಾಧ್ಯವಾಗಿರಲಿಲ್ಲ. ಈ ಸಿನಿಮಾದಲ್ಲಿ ನಿರ್ದೇಶಕ ಟಿ.ಜೆ.ಜ್ಞಾನವೇಲ್, ಪೊಲೀಸ್ ಕ್ರೌರ್ಯ ಹಾಗೂ ತಳ ಸಮುದಾಯಗಳ ಮೇಲಿನ ದೌರ್ಜನ್ಯಗಳನ್ನು ಹೇಳುತ್ತಾ ಸಾಗುತ್ತಾರೆ. ನಿರ್ದೇಶಕ ಜ್ಞಾನವೇಲ್ ಕತೆ ಕಟ್ಟಿರುವ ರೀತಿ ಹಾಗೂ ಕಟ್ಟಿದ ಕತೆಯನ್ನು ನಿರೂಪಿಸಿರುವ ಶೈಲಿ ನಿಜಕ್ಕೂ ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಒಂದು ಕಲಿಕಾ ವಸ್ತುವಾಗಿ ಉಳಿದುಕೊಳ್ಳುವ ರೀತಿಯಲ್ಲಿದೆ. ಅಂಬೇಡ್ಕರ್ ವಾದದ ಜೊತೆಗೆ ಕಮ್ಯೂನಿಸ್ಟ್ ವಾದವನ್ನು ನಯವಾಗಿ ಕಟ್ಟಿರುವ ರೀತಿಯಿಂದಲೇ ಈ ಸಿನಿಮಾ ಬಹುತೇಕ ಮಂದಿಗೆ ಇಷ್ಟವಾಗುವಂತೆ ಮಾಡಿದೆ.
ಇದು ಕೇವಲ ಜೈ ಭೀಮ್ ಸಿನಿಮಾಗೆ ಮಾತ್ರ ಸಲ್ಲಬೇಕಿರುವ ಹೊಗಳಿಕೆಯ ಮಾತುಗಳಲ್ಲ. ಬದಲಿಗೆ ಹೊಸ ತಲೆಮಾರಿನ ಸಿನಿಮಾಗಳಾಗಿರುವ ಅಟ್ಟಕತ್ತಿ (2012), ಮದ್ರಾಸ್ (2014), ಕಬಾಲಿ (2016), ಕಾಲ (2018), ಪರಿಯೇರುಮ್ ಪೆರುಮಾಳ್ (2018), ಅಸುರನ್ (2019), ಕರ್ಣನ್ (2021), ಸಾರ್ಪಟ್ಟ ಪರಂಬರೈ (2021) ಸೇರಿದಂತೆ ಜೈ ಭೀಮ್ (2021) ಕೂಡ ಹೊಸ ತಲೆಮಾರಿನ ಸಿನಿಮಾ ಕಟ್ಟುವಿಕೆಯಲ್ಲಿ ಜಾತಿ ತಾರತಮ್ಯದ ಆಶಯಗಳನ್ನು ಚರ್ಚಿಸುತ್ತಾ ಇಡೀ ದೇಶದ ಇತರೆ ಚಿತ್ರರಂಗಕ್ಕೆ ಮಾದರಿಯಾಗಿ ನಿಂತುಕೊಂಡ ಪರಿ.
ಅದಾಗಿಯೂ ಇಂಥಾ Suppression ಕತೆಗಳ ಸಿನಿಮಾಗಳನ್ನು ಮುಂದಿಟ್ಟುಕೊಂಡು ತಮಿಳುನಾಡಿನಲ್ಲಿ ರಾಜಕೀಯ ಮೇಲಾಟಗಳು ಶುರುವಾಗಿದೆ. ಜೈ ಭೀಮ್ ಸಿನಿಮಾ ಒಂದು ನೈಜ ಕತೆ ಆಧಾರಿತ ಸಿನಿಮಾ ಎಂದು ಇದರ ನಾಯಕ ನಟ ಸೂರ್ಯ ಹಾಗೂ ನಿರ್ದೇಶಕ ಜ್ಞಾನವೇಲ್ ಬಹಿರಂಗಗೊಳಿಸಿದ್ದರು. ಇದು ಈಗ ತಮಿಳುನಾಡಿನ ಬಲಪಂಥೀಯ ರಾಜಕೀಯ ಶಕ್ತಿಗಳ ಮಾತಿನ ಕೇಂದ್ರವಾಗಿದೆ. ಪಟ್ಟಲಿ ಮಕ್ಕಲ್ ಕಕ್ಷಿ (PMK) ಪಕ್ಷದ ಸಂಸ್ಥಾಪಕ ಎಸ್ ರಾಮದಾಸ್ ಪುತ್ರ ಅನ್ಬುಮಣಿ ರಾಮದಾಸ್ ಜೈ ಭೀಮ್ ಸಿನಿಮಾದ ಬಗ್ಗೆ ತಗಾದೆ ಎತ್ತಿ ವಿವಾದ ಹುಟ್ಟು ಹಾಕಿದ್ದಾರೆ. ʻʻಈ ನೈಜ ಘಟನಾಧಾರಿತ ಚಿತ್ರದಲ್ಲಿ ಒಂದು ಪಾತ್ರಧಾರಿ ಹೆಸರನ್ನು ಹೊರತಾಗಿ ಉಳಿದೆಲ್ಲಾ ಪಾತ್ರಧಾರಿಗಳ ಹೆಸರನ್ನು ಯತಾವತ್ತಾಗಿ ಬಳಸಿಕೊಳ್ಳಲಾಗಿದೆ. ಆದರೆ ಚಿತ್ರದ ಸಬ್ ಇನ್ಸ್‌ಪೆಕ್ಟರ್ (ರಾಜಕಣ್ಣನ್ನು ಹಿಂಸಿಸುವ ಪೊಲೀಸ್ ಅಧಿಕಾರಿ) ನೈಜ ಹೆಸರನ್ನು ಬದಲಿಸಲಾಗಿದೆ. ಅಸಲಿಗೆ ಸಬ್ ಇನ್ಸ್‌ಪೆಕ್ಟರ್ ಹೆಸರು ಅಂಥೋನಿಸ್ವಾಮಿ ಎಂದಾಗಿದ್ದು, ಸಿನಿಮಾದಲ್ಲಿ ಗುರುಮೂರ್ತಿ ಎಂದು ಬಳಸಿಕೊಳ್ಳಲಾಗಿದೆ. ಈ ಒಂದು ಹೆಸರನ್ನು ಹೊರತು ಪಡಿಸಿ ಉಳಿದೆಲ್ಲವೂ ಹಾಗೇ ಹೆಸರಿಸಲಾಗಿದೆ. ಇದು ಯಾಕೆʼʼ ಎಂಬ ತಗಾದೆಯನ್ನು ಅವರು ಎತ್ತಿದ್ದಾರೆ.
ಮುಂದುವರೆದು, ಚಿತ್ರದಲ್ಲಿ ಬುಡಕಟ್ಟು ಸಮುದಾಯದ ಅಮಾಯಕನನ್ನು ಹಿಂಸಿಸಿ ಕೊಲೆ ಮಾಡುವ ಎಸ್‌ಐ ಗುರುಮೂರ್ತಿ ವನ್ನಿಯಾರ್ ಜಾತಿಗೆ ಸೇರಿದವರು ಎಂದು ಬಿಂಬಿಸುವ ದೃಶ್ಯಕ್ಕೂ ಅನ್ಬುಮಣಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಸ್‌ಐ ಮನೆಯಲ್ಲಿ ನಡೆಯುವ ದೃಶ್ಯದಲ್ಲಿ ವನ್ನಿಯಾರ್ ಸಮುದಾಯದ ಸಂಕೇತವಾದ ʻಅಗ್ನಿ ಕಲಸಂʼ (ಬೆಂಕಿಯ ಕುಂಡ) ಚಿತ್ರ ಹೊಂದಿರುವ ಕ್ಯಾಲೆಂಡರ್ ಅನ್ನೂ ಹಿನ್ನೆಯಲ್ಲಿ ತೋರಿಸಲಾಗಿದೆ ಎಂಬ ಅನ್ಬುಮಣಿ ಹೇಳಿಕೆ ಬೆನ್ನಲ್ಲೇ ನಾಯಕ ನಟ ಸೂರ್ಯರಿಗೆ ಜೀವ ಬೆದರಿಕೆಗಳು ಬರಲು ಪ್ರಾರಂಭವಾದವು. ಹೀಗಾಗಿ ನಟ ಸೂರ್ಯ ಅವರ ಚೆನ್ನೈ ನಿವಾಸಕ್ಕೆ ತಮಿಳುನಾಡು ಪೊಲೀಸರಿಂದ ಬಿಗಿ ಭದ್ರತೆಯನ್ನೂ ಒದಗಿಸಲಾಗಿದೆ.
ಈ ವಿವಾದದ ಕಿಡಿಗೆ ತಮಿಳುನಾಡು ಬಿಜೆಪಿ ನಾಯಕರೂ ತುಪ್ಪ ಸುರಿವ ಕೆಲಸವನ್ನೂ ಮಾಡಿದ್ದಾರೆ. ಅನ್ಬುಮಣಿ ಹುಟ್ಟು ಹಾಕಿದ ವಿವಾದದ ಬೆನ್ನಲ್ಲೇ ಬಿಜೆಪಿಗರು ನಟ ಪ್ರಕಾಶ್ ರಾಜ್ ಬಗ್ಗೆ ಮತ್ತೊಂದು ವಿವಾದವನ್ನು ಮೇಲಕ್ಕೆತ್ತಿದರು. ಜೈ ಭೀಮ್ ಸಿನಿಮಾದಲ್ಲಿ ನಟ ಪ್ರಕಾಶ್ ರಾಜ್ (ಐಜಿ ಪೆರುಮಾಲ್ ಸ್ವಾಮಿ ಪಾತ್ರಧಾರಿ) ತನ್ನ ಸಹ ಕಲಾವಿದನಿಗೆ ಹಿಂದಿ ಮಾತನಾಡಿದ್ದಕ್ಕೆ ಕಾರಣಕ್ಕೆ ಕಪಾಳಮೋಕ್ಷ ಮಾಡಿ ತಮಿಳಿನಲ್ಲಿ ಮಾತನಾಡುವಂತೆ ಹೇಳುತ್ತಾರೆ. ಚಿತ್ರದ ಈ ದೃಶ್ಯಕ್ಕಾಗಿ ನಟ ಪ್ರಕಾಶ್ ರಾಜ್ ಬಿಜೆಪಿ ಹಾಗೂ ಬಲಪಂಥೀಯ ಗುಂಪುಗಳ ಡಿಜಿಟಲ್ ಮತ್ತು ಮೌಖಿಕ ದಾಳಿಗೆ ಒಳಗಾಗಿದ್ದನ್ನು ಇಲ್ಲಿ ಗಮನಿಸಬಹುದು.
ಇದರ ಜತೆಜತೆಯಲ್ಲೇ ತಮಿಳುನಾಡು ಬಿಜೆಪಿ ಮುಖಂಡ ಹೆಚ್ ರಾಜಾ, ʻʻಯಾವ ವ್ಯಕ್ತಿ ತನ್ನ ಮಕ್ಕಳು NEP ಅಡಿಯಲ್ಲಿ ತ್ರಿಭಾಷಾ ಸೂತ್ರ ಕಲಿಯುವ ಅಗತ್ಯವಿಲ್ಲ ಎಂದು ಹೇಳುತ್ತಾನೋ, ಅದೇ ವ್ಯಕ್ತಿ ತನ್ನ ಸಿನಿಮಾವನ್ನು ಐದು ಭಾಷೆಗಳಲ್ಲಿ ನಿರ್ಮಿಸುತ್ತಾರೆ. ಇವರ ಈ ಸ್ವಾರ್ಥವನ್ನು ಅರ್ಥಮಾಡಿಕೊಳ್ಳಿʼʼ ಎಂದು ಟ್ವೀಟ್ ಮಾಡಿ ವಿವಾದವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದರು.
ಜೈ ಭೀಮ್ ಸಿನಿಮಾಗೆ ವ್ಯಕ್ತವಾದ ಈ ವಿರೋಧವನ್ನು ಪ್ರತ್ಯೇಕವಾಗಿ ನೋಡದೆ, ಇದು ಇಡೀ ತಮಿಳು ಚಿತ್ರರಂಗದ ಜಾತಿ ದೌರ್ಜನ್ಯದ ವಿರುದ್ಧ ದನಿ ಎತ್ತುವ ಎಲ್ಲಾ ಸಿನಿಮಾಗಳ ವಿರೋಧಿ ಅಲೆಯಂತೆ ಕಾಣಬೇಕು. ಇದು ಒಟ್ಟು ಸಂಪ್ರದಾಯವಾದಿಗಳ, ಜಾತಿವಾದಿಗಳ, ಮೇಲ್ಜಾತಿ ರಾಜಕೀಯದ ಪ್ರತಿಕ್ರಿಯೆಯೆಂದು ಭಾವಿಸಬೇಕು. ಇದು ದೇಶದ ಇತರೆ ದೊಡ್ಡ ಚಿತ್ರೋದ್ಯಮಗಳಾದ ಬಾಲಿವುಡ್, ಟಾಲಿವುಡ್ ಕ್ಷೇತ್ರವೂ ಜಾತಿ ಅಜ್ಙಾನವನ್ನು ಒಂದು ಸಮಸ್ಯೆ ಎಂದು ಪರಿಗಣಿಸದೆ ಬಂದಿರುವುದೇ ಇವಕ್ಕೆಲ್ಲಾ ಪ್ರಮುಖ ಕಾರಣ. 2018ರಲ್ಲಿ ಬಿಡುಗಡೆಗೊಂಡ ಧಡಕ್ ಎಂಬ ಹಿಂದಿ ಸಿನಿಮಾ ಮರಾಠಿಯ ಸೈರಾಟ್ ಎಂಬ ಸಿನಿಮಾದ ರಿಮೇಕ್. ಇಲ್ಲಿ ಸೈರಾಟ್ ಚಿತ್ರದ ಮೂಲ ಆಶಯವಾದ ಜಾತಿಯತೆಯನ್ನು ಸತ್ವವನ್ನು ಮರೆಮಾಚಿ ಅದೊಂದು ವರ್ಗ ಸಂಘರ್ಷ ಎಂದು ಬಿಂಬಿಸಲಾಯಿತು. ಇದೇ ಮಾದರಿಯಲ್ಲಿ ತಮಿಳಿನ ಅಸುರನ್ ಚಿತ್ರ ಕೂಡ ತೆಲುಗಿನ ನಾರಪ್ಪ ಆದಾಗ, ಇಲ್ಲೂ ಕೂಡ ಜಾತಿ ಸಂಘರ್ಷದ ಬದಲು ವರ್ಗ ಸಂಘರ್ಷ ಎಂದು ತೋರಿಸಲಾಯಿತು.
ನಿರ್ದೇಶಕ ಪಾ ರಂಜಿತ್ ನಂತರ ಮತ್ತು ಮೊದಲು
ಜೈ ಭೀಮ್ ಡ್ರಾವಿಡ ನೆಲದ ಇರುಳರ್ ಎಂಬ ಬುಡಕಟ್ಟು ಜನಾಂಗದ ಸಮಸ್ಯೆ ಬಗ್ಗೆ ಬೊಟ್ಟು ಮಾಡಿತು. ಕರ್ಣನ್ ಚಿತ್ರ ಕೊಡಿಯಂಕುಳಂ ಜಾತಿ ಹಿಂಸಾಚಾರದ ಕತೆಯನ್ನು ಹೋಲುವಂತಿತ್ತು. ಪರಿಯೇರುಂ ಪೆರುಮಾಳ್ ಸಿನಿಮಾ ಅಂತರ್ ಜಾತಿ ಪ್ರೀತಿ ವಿಚಾರವಾಗಿ ತಮಿಳುನಾಡಿನಲ್ಲಿ ರೈಲ್ವೇ ಹಳಿಯ ಮೇಲೆ ಹೆಣವಾಗಿ ಬಿದ್ದಿದ್ದ ದಲಿತ ಯುವಕ ಇಳವರಸನ್ ಬದುಕಿಗೆ ತಾಳೆಯಾಗುವಂತಿತ್ತು. ಅಸುರನ್, ಪೂಮಣಿ ಎಂಬ ಕಾದಂಬರಿಗಾರ್ತಿಯ ವೆಕ್ಕೈ ಎಂಬ ಕಾದಂಬರಿಯಿಂದ ಎಳೆಯೆತ್ತಿಕೊಂಡು ಕಟ್ಟಲಾಗಿರುವ ಸಿನಿಮಾ. ಹೀಗೆ ಜೈ ಭೀಮ್ ಸೇರಿದಂತೆ ಮೇಲೆ ಹೆಸರಿಸಲಾದ ಎಲ್ಲಾ ಸಿನಿಮಾಗಳು ಕೂಡ ತಳ ವರ್ಗದ ಬದುಕುಗಳನ್ನು ಜೀವಾಳ ಮಾಡಿಕೊಂಡು ಕಟ್ಟಲಾದ ಸಿನಿಮಾಗಳು. ಈ ಮೂಲಕ ಕಳೆದ ಕೆಲವು ವರ್ಷಗಳಿಂದ ತಮಿಳಿನಲ್ಲಿ ಇಂಥಾ ಚಿತ್ರಗಳು ಸಾಮಾನ್ಯವೆಂಬ ವಾತಾವರಣ ಸೃಷ್ಟಿಯಾಗಿದೆ. ಇಂಥದ್ದೊಂದು ಅಸಾಧ್ಯ ವಾತಾವರಣವೊಂದಕ್ಕೆ ತಳಪಾಯ ಹಾಕಿಕೊಟ್ಟ ಕೀರ್ತಿ ಪ್ರಮುಖವಾಗಿ ನಿರ್ದೇಶಕರಾದ ಪಾ ರಂಜಿತ್, ಮರಿ ಸೆಲ್ವರಾಜ್, ವೆಟ್ರಿಮಾರನ್ ಎಂಬ ಮೂವರಿಗೆ ಸಲ್ಲಬೇಕು. ಇವರಿಂದ ನೊಂದು ಬೆಂದ ಕತೆಗಳಿಗೂ ಮಾನ್ಯತೆ ಧಕ್ಕುವಂತಾಯಿತು.
ಈಗ ತಮಿಳು ಚಿತ್ರೋದ್ಯಮದಲ್ಲಿ ಎದ್ದಿರುವ ಈ ದಲಿತ ಮುಖ್ಯ ಕಥನಗಳಿಗೂ ಮೊದಲು ಕೇವಲ ಕೆಲವೇ ಕೆಲವು ಸಿನಿಮಾಗಳು ಮಾತ್ರ ಈ ಮಾದರಿಯಲ್ಲಿ ಕಟ್ಟಲಾಗಿದೆ. 2012ರಲ್ಲಿ ಅಟ್ಟಕತ್ತಿ ಎಂಬ ಸಿನಿಮಾ ಮೂಲಕ ಮುನ್ನೆಲೆಗೆ ಬಂದ ಪಾ ರಂಜಿತ್ ನಂತರ, ಮದ್ರಾಸ್, ಕಬಾಲಿ, ಕಾಲ, ಸಾರ್ಪಾಟ್ಟ ಪರಂಬರೈ ಎಂಬಂಥಾ ದಲಿತ ಕಥಾ ನಾಯಕರನ್ನು ಒಳಗೊಂಡ ಸಿನಿಮಾಗಳು ಹೆಚ್ಚೆಚ್ಚು ಹುಟ್ಟು ಹಾಕಿದರು. ಪಾ ರಂಜಿತ್‌ಗೂ ಮೊದಲು ಇಂಥಾ ಸಿನಿಮಾಗಳು ನಿರ್ದೇಶನ ಮಾಡಿದ್ದು ಅಮ್ಷಾನ್ ಕುಮಾರ್ ಮಾತ್ರ. ಅಮ್ಷಾನ್ ಕುಮಾರ್ ದಲಿತರ ಮೇಲಾದ ದೌರ್ಜನ್ಯಗಳನ್ನೇ ಕೇಂದ್ರವಾಗಿರಿಸಿಕೊಂಡು ಸಿನಿಮಾ ಕಟ್ಟಿದರು. ನಂದನಾರ್ (1933), ಮದುರೈ ವೀರನ್ (1956), ಉನ್ನೈಪೋಲ್ ಒರುವನ್ (1965), ನತೈಯಿಲ್ ಮುತ್ತು (1973) ಕಣ್ಣ್ ಸಿವಂಥಾಲ್ ಮಣ್ಣ್ ಸಿವಕ್ಕುಂ (1983), ಪಸಿ (1979), ತನ್ನೀರ್ ತನ್ನೀರ್ (1981), ಭಾರಧಿ ಕಣ್ಣಮ್ಮ (1997), ಕಾಧಲ್ (2004) ಹಾಗೂ ಪರದೇಶಿ (2013) ಯಂಥಾ ಕೆಲವೇ ಕೆಲವು ಸಿನಿಮಾಗಳು ಮಾತ್ರ ಅಷ್ಟೂ ವರ್ಷದ ಕಾಲಾವಧಿಯಲ್ಲಿ ಹುಟ್ಟು ಪಡೆದುಕೊಂಡಿದೆ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲೇ ಅದಕ್ಕೂ ಪರಿಣಾಮಕಾರಿಯಾಗಿ ದಲಿತ ಕಥನಗಳು ಸಿನಿಮಾಗಳಾಗುತ್ತಿವೆ.
ಬಲಪಂಥೀಯ ಚಿತ್ರಗಳಲ್ಲಿ ಪ್ರತಿಧ್ವನಿಸುವ ಮೇಲ್ಜಾತಿ ವೈಭವೀಕರಣ, ಹಿಂಸೆಯ ಸಮರ್ಥನೆ
ಅತ್ತ ಪ್ರತಿರೋಧಗಳ ಕತೆಗಳು ಸಿನಿಮಾಗಳಾಗುತ್ತಿರುವ ಹೊತ್ತಲ್ಲೇ ಅದೇ ತಮಿಳು ಚಿತ್ರೋದ್ಯಮದಲ್ಲಿ ಮೇಲ್ಜಾತಿಯ ಮೇಲರಿಮೆಯ ಸಿನಿಮಾಗಳೂ ಹುಟ್ಟಿಕೊಳ್ಳುತ್ತಿವೆ. ಈ ಹೊಸ ತಲೆಮಾರಿನ ನಾಯಕ, ನಿರ್ದೇಶಕರಿಂದಲೇ ಜಾತಿ ವೈಭವೀಕರಣ, ಬ್ರಾಹ್ಮಣ್ಯ ಎತ್ತಿ ಹಿಡಿಯುವ ಕಥೆಗಳೂ ಹುಟ್ಟಿಕೊಳ್ಳುತ್ತಿರುವುದು ವಿಪರ್ಯಾಸ. ಸುಂದರಪಾಂಡೈ (2012), ಕುಟ್ಟಿ ಪುಲಿ (2013), ಸಂಡೈಕೋಯಿ 1 ಮತ್ತು 2 (2005 & 2008), ದೇವರಾಟಂ (2019), ದ್ರೌಪತಿ (2020), ರುದ್ರ ತಾಂಡವಂ (2021) ಎಂಬಂಥಾ ಸಿನಿಮಾಗಳು ಮೇಲ್ಜಾತಿ ವೈಭವೀಕರಣ, ಜಾತೀಯತೆಯನ್ನು ಉಳಿಸಿಕೊಳ್ಳುವ ಹಾಗೂ ಹಿಂಸೆಯನ್ನು ಸಮರ್ಥಿಸಿ ಮಾತಾಡುವ ಚಿತ್ರಗಳು.

ಹೀಗೆ ಸಿನಿಮಾಗಳು ತಮಿಳುನಾಡಿನ ರಾಜಕೀಯ, ಸಾಂಸ್ಕೃತಿಕ ಹಾಗೂ ಇತಿಹಾಸದ ಮೇಲೆ ಸಾಕಷ್ಟು ಪ್ರಭಾವ ಬೀರ ಬಲ್ಲದು. ಆದರೆ 2010ರ ನಂತರ ಎಂದರೆ ನಿರ್ದೇಶಕ ಪಾ ರಂಜಿತ್ ನಂತರದಲ್ಲಿ ಸಿನಿಮಾಗಳು ಹೆಚ್ಚೆಚ್ಚಾಗಿ ದಲಿತರ ಬದುಕು, ದಲಿತ ಸಂಕೇತಗಳು, ಹೇಳಲು ಮರೆತ ದಲಿತ ಪ್ರತಿರೋಧಗಳ ಸಂಭಾಷಣೆಗಳೆಲ್ಲವೂ ಪರಿಣಾಮಕಾರಿಯಾಗಿ ಕಟ್ಟುವ ವಾತಾವರಣ ಸೃಷ್ಟಿಯಾಗಿದೆ. ಪಾ ರಂಜಿತ್, ಮರಿ ಸೆಲ್ವರಾಜ್, ವೆಟ್ರಿ ಮಾರನ್ ರಂಥಾ ನಿರ್ದೇಶಕರು ತಮ್ಮ ಸಿನಿಮಾ ಕಟ್ಟುವಿಕೆಯ ಪ್ರತಿಯೊಂದು ಫ್ರೇಮಿನಲ್ಲೂ ಕೇವಲ ಸಂಭಾಷಣೆಯೊಂದಕ್ಕೆ ಸೀಮಿತವಾಗದೆ, ಡಾ. ಬಿಆರ್ ಅಂಬೇಡ್ಕರ್ ಭಾವ ಚಿತ್ರಗಳು, ಕಮ್ಯೂನಿಸ್ಟ್ ಪ್ರತಿಪಾದಕರ ಚಿತ್ರಗಳನ್ನು ಬಳಿಸಿಕೊಂಡು ಒಂದು ನಿರ್ದೀಷ್ಟ ಸಂದೇಶವನ್ನು ಸಾರುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಇದು ತಮಿಳುನಾಡಿನ ರಾಜಕೀಯ ಹಿತಾಸಕ್ತಿಗಳನ್ನು ಬುಡಮೇಲು ಮಾಡುತ್ತಿದೆ.
ಬ್ರಾಹ್ಮಣ್ಯ ಪ್ರತಿಪಾದಿಸುವ ಸಿನಿಮಾಗಳಿಗೆ ಬಿಜೆಪಿ ಹಾಗೂ ಮೈತ್ರಿಗಳ ಬೆಂಬಲ
ಅಂದಹಾಗೆ, ತಮಿಳುನಾಡಿನಲ್ಲಿ ಬಿಜೆಪಿ ಜೊತೆ ಗುರುತಿಸಿಕೊಂಡಿರುವ ಪಟ್ಟಲಿ ಮಕ್ಕಲ್ ಕಕ್ಷಿ (PMK) ಸದಾ ಸಿನಿಮಾಗಳಲ್ಲಿ ಕಟ್ಟಲಾಗುವ ದಲಿತ ಕತೆಗಳನ್ನು ರಾಜಕೀಯವಾಗಿಸಿ ವಿವಾದಕ್ಕೆ ನಾಂದಿಹಾಡುತ್ತಾರೆ. ಇದು ತಮಿಳುನಾಡಿನಲ್ಲಿ ಬಿಜೆಪಿಗೆ ಪೂರಕ ವಾತಾವರಣ ಸೃಷ್ಟಿಸಿದರೂ ಅಚ್ಚರಿ ಇಲ್ಲ ಎಂಬ ಅಭಿಪ್ರಾಯವನ್ನು ರಾಜಕೀಯ ವಿಶ್ಲೇಷಕರು ಹೊರ ಹಾಕಿದ್ದಾರೆ. ಇದೇ ವೇಳೆ ದ್ರೌಪದಿಯಂತಹಾ ʻಲವ್ ಜಿಹಾದ್ʼ ಎಂಬ ನಕಲಿ ಕತೆಗಳ ಮೇಲೆ ಹುಟ್ಟು ಪಡೆಯುವ ಸಿನಿಮಾಗಳಿಗೆ ದೊಡ್ಡ ಮಟ್ಟದ ಮಾರ್ಕೆಟಿಂಗ್ ಮಾಡಿಕೊಡಲಾಗುತ್ತಿದೆ.
2017ರಲ್ಲಿ ತೆರೆಕಂಡ ಇಳಯ ದಳಪತಿ ವಿಜಯ್ ಅಭಿನಯದ ಚಿತ್ರ ಮೆರ್ಸಲ್ ಸಿನಿಮಾ ಕೂಡ ಇಂಥದ್ದೇ ಒಂದು ವಿವಾದಕ್ಕೆ ಬಲಿಯಾಗಿದ್ದು. ಸಿನಿಮಾದಲ್ಲಿ ʻʻದೇವಸ್ಥಾನವನ್ನೇಕೆ ಕಟ್ಟಬೇಕು ಬದಲಿಗೆ ಆಸ್ಪತ್ರೆ ಕಟ್ಟಲಿʼʼ ಎಂಬ ಒಂದೇ ಒಂದು ತುಣುಕು ಸಂಭಾಷಣೆಯವನ್ನು ಮುಂದಿಟ್ಟುಕೊಂಡು ನಾಯಕ ನಟ ವಿಜಯ್ ಒಬ್ಬ ಕ್ರೈಸ್ತ, ಅವನೇಗೆ ಹಿಂದೂಗಳ ದೇವಸ್ಥಾನಗಳ ಬಗ್ಗೆ ಮಾತನಾಡುತ್ತೇನೆ ಎಂಬ ಪ್ರೊಪೊಗಾಂಡವನ್ನು ಹುಟ್ಟು ಹಾಕಲಾಗಿತ್ತು. ವಿಜಯ್ ಈ ಒಂದು ಕಾರಣಕ್ಕೆ ಐಟಿ, ಈಡಿ ದಾಳಿಯನ್ನೂ ಎದುರಿಸಬಾಯ್ತು. ಅಷ್ಟರ ಮಟ್ಟಿಗೆ ಬಿಜೆಪಿ ತನ್ನ ಸೈದ್ಧಾಂತಿಕತೆಯನ್ನು ಅಸಹ್ಯದ ನೆಲೆಗಟ್ಟಿಗೆ ಕ್ಕೆ ಇಳಿಸಿಕೊಂಡಿದೆ.
ಅದೇನೇ ಇದ್ದರೂ ತಮಿಳುನಾಡಿನ ರಾಜಕೀಯದ ಮಟ್ಟಕ್ಕೆ ಬಿಜೆಪಿ ನಗಣ್ಯ. ಇದೇ ಕಾರಣಕ್ಕೆ ಒಂದು ಅಸ್ತಿತ್ವವನ್ನುಕಂಡುಕೊಳ್ಳಲು ಬಿಜೆಪಿ ದಲಿತ ಕಥನಗಳಿಂದ ಕಟ್ಟಲ್ಪಡುವ ಸಿನಿಮಾಗಳ ಬೆನ್ನು ಬಿದ್ದು ರಾಜಕೀಯವಾಗಿ ಲಾಭ ಪಡೆಯಲು ಮುಂದಾಗುತ್ತಿದೆ. ಜೊತೆಗೆ ಮೇಲ್ಜಾತಿ ಕತೆಗಳ ಚಿತ್ರಗಳ ಬಗ್ಗೆ ಪ್ರಚಾರ ಪಡಿಸಿ Suppression ಕಥನಗಳಿಗೆ ಗೋಡೆಯಾಗಿ ಕೆಲಸ ಮಾಡುತ್ತಿದೆ.