“ಸಂಘಟನೆಗಾಗಿ ನಮ್ಮ ಪಕ್ಷ ಹಾಗೂ ಸರ್ಕಾರ ಇಡೀ ದಿನ ಮುಡಿಪಾಗಿಟ್ಟು ಸಭೆ ನಡೆಸಲಾಗಿದೆ. ಈ ವರ್ಷ ಪಕ್ಷ ಸಂಘಟನೆಗೆ ಆದ್ಯತೆ ನೀಡುವುದು ಹಾಗೂ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ಸಿದ್ಧತೆ ಬಗ್ಗೆ ಚರ್ಚೆ ಮಾಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಭಾರತ ಜೋಡೋ ಭವನದಲ್ಲಿ ಪಕ್ಷದ ಶಾಸಕರು, ಸಚಿವರು, ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳ ಸಭೆ ಬಳಿಕ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಸೋಮವಾರ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಶಿವಕುಮಾರ್ ಅವರು, “ಬೆಳಗ್ಗೆ 12 ಗಂಟೆಗೆ ಶಾಸಕರು, ಮಂತ್ರಿಗಳು, ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಪ್ರಮುಖ ಘಟಕಗಳ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಭೆ ಮಾಡಿದ್ದೇವೆ. ಗಾಂಧಿ ಭಾರತದ ಕಾರ್ಯಕ್ರಮ ಅಂಗವಾಗಿ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯ ನಿರ್ಣಯಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ಮಾಡಲಾಗಿದೆ” ಎಂದು ತಿಳಿಸಿದರು.
“ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ನಿಧನರಾದ ಹಿನ್ನೆಲೆಯಲ್ಲಿ ಕಳೆದ ವರ್ಷದ ಡಿ. 27 ರಂದು ನಡೆಯಬೇಕಾಗಿದ್ದ ಎಐಸಿಸಿಯ ಸಮಾವೇಶವನ್ನು ಮುಂದೂಡಲಾಗಿತ್ತು. ಈ ಸಮಾವೇಶವನ್ನು ಇದೇ ತಿಂಗಳು 21ರಂದು ಬೆಳಗಾವಿಯಲ್ಲೇ ನಡೆಸಲಾಗುವುದು. ಈ ಸಮಾವೇಶದ ಪೂರ್ವಭಾವಿ ಸಭೆಯನ್ನು ನಡೆಸಿ ನಮ್ಮ ನಾಯಕರಿಗೆ ನೀಡಲಾಗಿರುವ ಜವಾಬ್ದಾರಿಗಳ ಬಗ್ಗೆ ಮಾರ್ಗದರ್ಶನ ನೀಡಿದ್ದೇವೆ” ಎಂದು ತಿಳಿಸಿದರು.
“224 ಕ್ಷೇತ್ರಗಳಿಂದ ಕನಿಷ್ಠ ಪಕ್ಷದ ನೂರು ಜನ ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸಬೇಕು ಎಂದು ಹೇಳಿದ್ದೇವೆ. ಈ ಐತಿಹಾಸಿಕ ಸಭೆಗೆ ಎಲ್ಲರೂ ಆಗಮಿಸಬೇಕು ಎಂದು ಆಹ್ವಾನ ನೀಡುತ್ತೇನೆ. ನಾವು ಈ ಸಮಾವೇಶಕ್ಕೆ ನೇಮಿಸಿದ್ದ ಸಮಿತಿಗಳು ತಮ್ಮ ಕಾರ್ಯ ನಿರ್ವಹಣೆ ಮಾಡಲಿವೆ. ನಮ್ಮ ಎಲ್ಲ ಪದಾಧಿಕಾರಿಗಳು ಇದೇ 15 ಹಾಗೂ 16ರಂದು ಎಲ್ಲಾ ಕ್ಷೇತ್ರಗಳಿಗೆ ಪ್ರವಾಸ ಮಾಡಿ ಈ ಸಮಾವೇಶದ ಪೂರ್ವಭಾವಿ ಸಭೆ ಮಾಡಲು ಸೂಚಿಸಿದ್ದೇವೆ. ಕಿತ್ತೂರು ಕರ್ನಾಟಕ ಭಾಗಕ್ಕೆ ನಮ್ಮ ಸಚಿವರು ಹಾಗೂ ಶಾಸಕರು ವಿಧಾನಸಭಾ ಕ್ಷೇತ್ರಗಳಿಗೆ ಹೋಗಿ ಪೂರ್ವಭಾವಿ ಸಭೆ ನಡೆಸಲು ಸೂಚಿಸಿದ್ದೇವೆ” ಎಂದು ತಿಳಿಸಿದರು.
“ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶಕ್ಕೆ ನಮ್ಮ ಸಿದ್ಧತೆ ಆರಂಭವಾಗಿದೆ. ಈ ವರ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಈ ವರ್ಷ ಪಕ್ಷದ ಸಂಘಟನೆ ಮಾಡಬೇಕು ಎಂದು ತೀರ್ಮಾನಿಸಿರುವ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲ ಅವರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬ್ಲಾಕ್, ಪಕ್ಷದ ಪ್ರಮುಖ ಘಟಕಗಳು, ಜಿಲ್ಲಾ ಕಾಂಗ್ರೆಸ್, ವಿಧಾನಸಭಾ ಕ್ಷೇತ್ರ, ಜಿಲ್ಲಾ ಹಾಗೂ ಲೋಕಸಭಾ ಕ್ಷೇತ್ರ ಹಂತಗಳಲ್ಲಿ ಹೊಸ ಸಮಿತಿ ರಚಿಸಬೇಕು” ಎಂದು ತಿಳಿಸಿದರು.
“ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಪಂಚಾಯ್ತಿಯಿಂದ ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿ ಪಕ್ಷ ಬಲವರ್ಧನೆಗೆ ಹೊಸರೂಪ ನೀಡಬೇಕು ಎಂದು ತೀರ್ಮಾನಿಸಲಾಗಿದೆ. ಉದಯಪುರ ಘೋಷಣೆಯಂತೆ ಕಾರ್ಯನಿರ್ವಹಣೆಗೆ ಸೂಚಿಸಲಾಗಿದೆ. ಇಂದು ನಡೆಸಿದ ಸಭೆಯಲ್ಲಿ ಯಾರಿಗೆ ಯಾವ ಜವಾಬ್ದಾರಿ ನೀಡಲಾಗಿದೆ ಅದನ್ನು ನಿಭಾಯಿಸಬೇಕು. ಯಾರಿಗೆಲ್ಲ ಬೇರೆ ಜವಾಬ್ದಾರಿ ಇದೆಯೋ ಅವರಿಗೆ ವಿಶ್ರಾಂತಿ ನೀಡಬೇಕು. ಈ ಬಗ್ಗೆ ವರದಿ ನೀಡುವಂತೆ ಹೇಳಿದ್ದೇನೆ” ಎಂದು ಮಾಹಿತಿ ನೀಡಿದರು.
ಪ್ರಶ್ನೋತ್ತರ:
ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿರುವ ಬಗ್ಗೆ ಕೇಳಿದಾಗ, “ಈ ವಿಚಾರವನ್ನು ನಾವು ಕೂಲಂಕುಶವಾಗಿ ಪರಿಶೀಲಿಸುತ್ತಿದ್ದು, ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ವಿಚಾರವಾಗಿ ನಾವು ಒಂದು ತೀರ್ಮಾನಕ್ಕೆ ಬರುತ್ತೇವೆ” ಎಂದರು ತಿಳಿಸಿದರು.
ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೇ ಎಂದು ಕೇಳಿದಾಗ, “ನಮ್ಮ ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಉಸ್ತುವಾರಿಗಳು ಈ ವಿಚಾರವನ್ನು ನೋಡಿಕೊಳ್ಳುತ್ತಾರೆ” ಎಂದು ತಿಳಿಸಿದರು.
ಸಚಿವರ ಕಾರ್ಯಗಳ ಬಗ್ಗೆ ವರದಿ ಸಲ್ಲಿಕೆ ಬಗ್ಗೆ ಕೇಳಿದಾಗ, “ಸಚಿವರುಗಳ ಕಾರ್ಯಗಳ ವಿಚಾರವಾಗಿ ಮುಖ್ಯಮಂತ್ರಿಗಳು ಹೈಕಮಾಂಡ್ ಗೆ ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ಎಐಸಿಸಿ ಪರಿಶೀಲನೆ ನಡೆಸಲಿದೆ” ಎಂದು ತಿಳಿಸಿದರು.