ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ರಾಜೀನಾಮೆ ವಿಷಯ ಭಾರಿ ವಿವಾದಕ್ಕೀಡಾಗಿದೆ. ಅನಾರೋಗ್ಯ ನೆಪವೊಡ್ಡಿ ರಾಜೀನಾಮೆ ನೀಡಿರುವುದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ (Dr. Sharana Prakash R Patil) ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ವಿಕಾಸ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

ಉಪರಾಷ್ಟ್ರಪತಿ ಅನಿರೀಕ್ಷಿತ ರಾಜೀನಾಮೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಬಿಜೆಪಿ ಆರೋಗ್ಯ ಚೆನ್ನಾಗಿಲ್ಲದಿರುವುದೇ ಇದಕ್ಕೆ ಕಾರಣ. ಬಿಜೆಪಿಯಲ್ಲಿರುವ ಸರ್ವಾಧಿಕಾರ ಧೋರಣೆಯೇ ಜಗದೀಪ್ ಧನಕರ್ (Jagadeep Dhanakar) ಅವರ ರಾಜೀನಾಮೆಗೆ ಪ್ರಮುಖ ಕಾರಣವಾಗಿದೆ ಎಂದು ಸಚಿವರು ಆರೋಪಿಸಿದರು.

ಇಡೀ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಬಿಜೆಪಿಯಲ್ಲಿ ಏನೋ ಸರಿಯಲ್ಲಿ ಎಂಬುದು ಸ್ಪಷ್ಟವಾಗುತ್ತದೆ. ಇಡೀ ಪಕ್ಷ ಇಬ್ಬರ ಕೈಯಲ್ಲಿದೆ. ಸರ್ವಾಧಿಕಾರ ಹೆಚ್ಚಾಗಿರುವುದರಿಂದ ಬೇರೆ ಯಾವ ನಾಯಕರೂ ಮಾತನಾಡದೇ ಮುಗಮ್ಮಾಗಿದ್ದಾರೆ. ಜನರಿಗೆ ಇದು ಗೊತ್ತಾಗುವುದಿಲ್ಲ ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ. ಆದರೆ ಇಡೀ ಪ್ರಕರಣದಿಂದ ಬಿಜೆಪಿಯ ಬಣ್ಣ ಸಂಪೂರ್ಣ ಬಯಲಾಗಿದೆ ಎಂದು ಡಾ.ಪಾಟೀಲ್ ದೂರಿದರು.

ಬಿಜೆಪಿಯಲ್ಲಿ ಪ್ರಜಾಪ್ರಭುತ್ವ, ನೀತಿ-ನಿಯಮಗಳು ಇಲ್ಲ. ಕೇಂದ್ರ ಸರ್ಕಾರ ಕೂಡ ಸಂವಿಧಾನ ಪಾಲನೆ ಮಾಡುತ್ತಿಲ್ಲ. ಸರ್ಕಾರವನ್ನು ಮುನ್ನಡೆಸುತ್ತಿರುವವರು ಇದುವರೆಗೂ ಒಂದಾದರೂ ಸುದ್ದಿಗೋಷ್ಠಿ ಮಾಡಿದ್ದಾರಾ? ಏಕಪಕ್ಷೀಯ ನಿರ್ಧಾರಗಳೇ ಹೆಚ್ಚಾಗಿ ತೆಗೆದುಕೊಳ್ಳಲಾಗುತ್ತದೆ. ಇಂಥ ಅಪಸವ್ಯಗಳಿಂದಲೇ ಬಿಜೆಪಿಯಲ್ಲಿ ಅನಾರೋಗ್ಯ ಪರಿಸ್ಥಿತಿ ಇದೆ ಎಂದು ಸಚಿವರು ಟೀಕಿಸಿದರು.

ಗ್ಯಾರಂಟಿಗಳಿಂದ ಹೆಚ್ಚಾದ ತಲಾದಾಯ
ನಮ್ಮ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಳಿಂದ ಕರ್ನಾಟಕದಲ್ಲಿ ತಲಾದಾಯ ಹೆಚ್ಚಾಗಿದೆ. ನಾವೀಗ ದೇಶಕ್ಕೆ ನಂಬರ್ ಒನ್ ಸ್ಥಾನದಲ್ಲಿದ್ದೇವೆ ಎಂದು ಸಚಿವರು ತಿಳಿಸಿದರು. 50 ಸಾವಿರ ಕೋಟಿ ಹಣ ನೇರವಾಗಿ ಜನರಿಗೆ ತಲುಪುತ್ತಿದೆ. ಕರ್ನಾಟಕದಲ್ಲಿ ಜನಸ್ನೇಹಿ ಸರಕಾರವಿದೆ. ಜನೋಪಯೋಗಿ ಆರ್ಥಿಕ ನೀತಿಗಳಿಂದ ಸುಧಾರಣೆಯಾಗುತ್ತಿದೆ. ನಮ್ಮ ಕಾಂಗ್ರೆಸ್ ಅಧಿಕಾರದಲ್ಲಿ ಭೂ ಸುಧಾರಣಾ ಕಾಯಿದೆ ಸೇರಿದಂತೆ ಒಳ್ಳೊಳ್ಳೆ ಯೋಜನೆಗಳು ಅನುಷ್ಠಾನಕ್ಕೆ ಬಂದಿವೆ. ಇದು ತಲಾದಾಯ ಹೆಚ್ಚಳಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣವಾಗಿದೆ ಎಂದು ಡಾ.ಪಾಟೀಲ್ ತಿಳಿಸಿದರು.

ಜಿಎಸ್‌ಟಿ ಕೇಂದ್ರದ ನಿರ್ಧಾರ
ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ (GST Notice) ನೀಡಿರುವ ನಿರ್ಧಾರ ಕೇಂದ್ರ ಸರ್ಕಾರದ ನಿರ್ಣಯದಂತೆ ಮಾಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಜಿಎಸ್‌ಟಿ ಮಂಡಳಿ ಮುಖ್ಯಸ್ಥರು ಹಣಕಾಸು ಸಚಿವರು. ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಅದರಂತೆ ಇಂಪ್ಲಿಮೆಂಟ್ ಮಾಡಲಾಗುತ್ತದೆ. ಜಿಎಸ್ ಟಿ ಎಲ್ಲವನ್ನು ಕೇಂದ್ರ ಸರ್ಕಾರ ಕಲೆಕ್ಟ್ ಮಾಡುತ್ತೆ, ಬಳಿಕ ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ. ನಾವು ಹೇಗೆ ನೊಟೀಸ್ ಕೊಡಲು ಸಾಧ್ಯ? ಎಲ್ಲ ನಿರ್ಧಾರವನ್ನು ಕೇಂದ್ರ ಸರಕಾರವೇ ಮಾಡಿದೆ ಎಂದು ಡಾ. ಶರಣಪ್ರಕಾಶ್ ಪಾಟೀಲ್ ವಿವರಿಸಿದರು.