ಭಾರತದ ನೆವಮೂಲ ಸಂಸ್ಕೃತಿ ಹಾಗು ಇತಿಹಾಸವನ್ನು ಹುಡಿಗೊಳಿಸಲು ಪರಕೀಯ ಆರ್ಯ ಸಂತತಿ ಮಾಡಿದ ದುಸ್ಸಾಹಸಗಳಿಗೆ ಮಿತಿಯೆಯಿಲ್ಲ. ಇತಿಹಾಸ ತಿರುಚುವಿಕೆ ಆರ್ಯನ್ನರ ವಂಶವಾಹಿನಿಯ ಪ್ರಮುಖ ಗುಣಲಕ್ಷಣಗಳಲ್ಲಿ ಒಂದು. ಆರ್ಯನ್ನರು ಭಾರತದಲ್ಲಿ ಶಾಸ್ವತವಾಗಿ ನೆಲೆಕಂಡುಕೊಂಡು ಮೂಲನಿವಾಸಿಗಳ ಮೇಲೆ ನಿಯಂತ್ರಣವನ್ನು ಸಾಧಿಸಿದ್ದೆ ತಮ್ಮ ಕುಠಿಲತೆ ಮತ್ತು ತಿರುಚುವಿಕೆಯ ದುಸ್ಕೃತ್ಯಗಳಿಂದ. ಆರಂಭದಲ್ಲಿ ದ್ರಾವಿಡ ಶಿವಸಂಸ್ಕೃತಿಯನ್ನು ನಾಶಗೊಳಿಸಿದ ಆರ್ಯರು ಆಮೇಲೆ ಬೌದ್ಧ ಧರ್ಮವನ್ನು ಹತ್ತಿಕ್ಕಲು ಮಾಡಿದ ಪ್ರಯತ್ನಗಳು ಅಗಣಿತ. ಇಂದಿಗೂ ಆರ್ಯ ಸಂತತಿಗಳ ಇತಿಹಾಸˌ ಸಂಪ್ರದಾಯˌ ಸಂಸ್ಕೃತಿಗಳ ತಿರುಚುವಿಕೆಯ ಕೃತ್ಯಗಳು ನಿಂತಿಲ್ಲ. ಖ್ಯಾತ ಇತಿಹಾಸಕಾರ ಡಿ. ಎನ್. ಝಾ ಅವರು ಜೂನ್ ೨೨, ೨೦೧೮ ರಲ್ಲಿ ಕೌಂಟರ್ ವ್ಯೂ ನ್ಯೂಸ್ ಬ್ಲಾಗ್ ನಲ್ಲಿ ಬರೆದ ಅಂಕಣವು ಬ್ರಾಹ್ಮಣ ಆಡಳಿತಗಾರರು ಬೌದ್ಧ ಸ್ಮಾರಕಗಳ ನಾಶಕ್ಕೆ ಮಾಡಿದ ಎಲ್ಲಾ ಕೃತ್ಯಗಳನ್ನು ಸಂಪೂರ್ಣವಾಗಿ ವಿವರಿಸುತ್ತದೆ. ಆ ಅಂಕಣದಲ್ಲಿ ವಿವರಿಸಲಾಗಿರುವ ಬ್ರಾಹ್ಮಣ ಆಡಳಿತಗಾರರ ಬೌದ್ಧ ಸ್ಮಾರಕಗಳ ಮೇಲಿನ ದಾಳಿಗಳನ್ನು ನಾನು ಇಲ್ಲಿ ಪುನರ್-ವಿಮರ್ಶಿಸಿದ್ದೇನೆ.
ಭಾರತದ ಪುರಾತನ ಮತ್ತು ಮಧ್ಯಕಾಲೀನ ಚರಿತ್ರೆಯಲ್ಲಿ ಅತ್ಯಂತ ಪರಿಣಿತರಾದ ಖ್ಯಾತ ಇತಿಹಾಸಕಾರ ಡಿ. ಎನ್. ಝಾ ಅವರು ತಮ್ಮ ಹೊಸ ಪುಸ್ತಕ, “ಅಗೇನ್ಸ್ಟ್ ದಿ ಗ್ರೇನ್: ನೋಟ್ಸ್ ಆನ್ ಐಡೆಂಟಿಟಿ, ಇನ್ನಟೊಲರೆನ್ಸ್ ಆಂಡ್ ಹಿಸ್ಟರಿ” ನಲ್ಲಿ, ಹಿಂದುತ್ವವಾದಿಗಳ ಇತಿಹಾಸ ತಿರುಚುವಿಕೆಯ ಕೃತ್ಯಗಳನ್ನು ಬಹಳ ತೀಕ್ಷ್ಣವಾಗಿ ವಿಮರ್ಶಿಸಿದ್ದಾರೆ. ಆ ಗ್ರಂಥದಲ್ಲಿ ಝಾ ಅವರು ಭಾರತದ ಪ್ರಾಚೀನ ಕಾಲದ ಇತಿಹಾಸವು “ಯಾವುದೇ ಧಾರ್ಮಿಕ ಹಿಂಸೆಯಿಲ್ಲದ ಸಾಮಾಜಿಕ ಸಾಮರಸ್ಯದಿಂದ ಗುರುತಿಸಲ್ಪಟ್ಟ ಸುವರ್ಣಯುಗ” ಎಂದು ಕರೆದಿದ್ದಾರೆ. ಮುಂದುವರೆದು ಝಾ ಅವರು “ಇಸ್ಲಾಂ ಧರ್ಮದ ಆಗಮನದ ಮೊದಲು ಭಾರತದಲ್ಲಿ ಪ್ರತಿಸ್ಪರ್ಧಿ ಧಾರ್ಮಿಕ ಸಂಸ್ಥೆಗಳು ಮತ್ತು ಸ್ಮಾರಕಗಳ ಕೆಡವುವಿಕೆ, ಅಪವಿತ್ರಗೊಳಿಸುವಿಕೆ ಮತ್ತು ಅನ್ಯ ಧರ್ಮದ ವಿಗ್ರಹಗಳು ಸ್ವಾಧೀನಪಡಿಸಿಕೊಂಡು ಬದಲಾಯಿಸುವಿಕೆಯ ಆರ್ಯನ್ನರ ಕೃತ್ಯಗಳು ಅಸಾಮಾನ್ಯವೇನಲ್ಲ”ಎನ್ನುತ್ತಾರೆ. ಝಾ ಅವರ ಪುಸ್ತಕದಲ್ಲಿನ ಮಾಹಿತಿಯ ಪ್ರಕಾರ, ಹಿಂದುತ್ವವಾದಿಗಳು ಪೂರ್ವನಿಯೋಜಿತ ಗ್ರಹಿಕೆಯಂತೆ ಮುಸ್ಲಿಂ ಆಡಳಿತಗಾರರು ಭಾರತದಲ್ಲಿ ಹಿಂದೂ ದೇವಾಲಯಗಳನ್ನು ನಿರ್ದಾಕ್ಷಿಣ್ಯವಾಗಿ ನಾಶಗೊಳಿಸಿದರು ಮತ್ತು ಹಿಂದೂ ವಿಗ್ರಹಗಳನ್ನು ಒಡೆದರು ಎಂಬ ನಿರಂತರ ಸುಳ್ಳು ಆರೋಪಗಳು.
ಮುಸಲ್ಮಾನರ ಆಳ್ವಿಕೆಯಲ್ಲಿ ೬೦,೦೦೦ ಹಿಂದೂ ದೇವಾಲಯಗಳನ್ನು ಕೆಡವಲಾಯಿತು ಎಂಬ ಹಿಂದುತ್ವವಾದಿಗಳ ಆರೋಪಕ್ಕೆ ಯಾವುದೇ ನಂಬಲರ್ಹವಾದ ಪುರಾವೆಗಳಿಲ್ಲದಿದ್ದರೂ ಅವರು ಪಟ್ಟುಬಿಡದೆ ಸುಳ್ಳು ಪ್ರಚಾರವನ್ನು ಮಾಡುತ್ತಾರೆ. ಆದರೆ ಅವರ ಆರೋಪವನ್ನು ಪರಿಶೀಲಿಸಿದಾಗ ಅವುಗಳಲ್ಲಿ ೮೦-೯೦ ಹಿಂದೂ ಸ್ಮಾರಕಗಳು ಮುಸಲ್ಮಾನ್ ಆಡಳಿತಗಾರರಿಂದ ನಾಶವಾಗಿರುವ ಸಾಧ್ಯತೆಗಳಿವೆ ಎನ್ನುವ ಮಾಹಿತಿ ಝಾ ಅವರ ಗ್ರಂಥದಲ್ಲಿದೆ. ಬ್ರಾಹ್ಮಣೀಯ ಶಕ್ತಿಗಳಿಂದ ಬೌದ್ಧ ಸ್ತೂಪಗಳು, ವಿಹಾರಗಳು ಮತ್ತು ಇತರ ಸ್ಮಾರಕಗಳ ಅಪವಿತ್ರಗೊಳಿಸುವಿಕೆ, ವಿನಾಶ ಮತ್ತು ಸ್ವಾಧೀನದ ಕೃತ್ಯಗಳ ಕುರಿತ ತಮ್ಮ ಸೀಮಿತ ಸಮೀಕ್ಷೆಯ ಪ್ರಕಾರ, ಝಾ ಹೇಳುತ್ತಾರೆ, “ಅಂತಹ ವಿನಾಶದ ಪುರಾವೆಗಳು ಬೌದ್ಧ ಧರ್ಮವನ್ನು ವಿಶ್ವ ಧರ್ಮವನ್ನಾಗಿ ಮಾಡಿದ ಕೀರ್ತಿಗೆ ಪಾತ್ರನಾಗಿರುವ ಮೌರ್ಯ ಸಾಮ್ರಾಟ ಅಶೋಕನ ಆಳ್ವಿಕೆಯ ಅಂತ್ಯದ ಜೊತೆಯಲ್ಲೆ ಆರಂಭಗೊಂಡಿವೆ. ಹನ್ನೆರಡನೆಯ ಶತಮಾನದ ಕಲ್ಹಣನ ರಾಜತರಂಗಿಣಿ ಎಂಬ ಕಾಶ್ಮೀರಿ ಪಠ್ಯದಲ್ಲಿ ದಾಖಲಾಗಿರುವಂತೆ ಅಶೋಕನ ಪುತ್ರರಲ್ಲಿ ಒಬ್ಬನಾದ ಜಲೌಕನನ್ನು ಉಲ್ಲೇಖಿಸುತ್ತದೆ.
ಜಲೌಕನು ತಮ್ಮ ತಂದೆಗಿಂತ ಭಿನ್ನವಾಗಿ ಶೈವ ಧರ್ಮದ ಅನುಯಾಯಿಯಾಗಿದ್ದನು ಮತ್ತು ಬೌದ್ಧ ಸ್ಮಾರಕಗಳನ್ನು ನಾಶಪಡಿಸಿದನು. ಈ ಗ್ರಂಥದ ವಿಶ್ವಾಸಾರ್ಹತೆ ಪರಿಶೀಲಿಸಿದರೆ, ಭಾರತೀಯ ಶ್ರಮಿಕ ಧರ್ಮಗಳ ಮೇಲಿನ ದಾಳಿಗಳು ಅಶೋಕನ ಜೀವಿತಾವಧಿಯಲ್ಲಿ ಅಥವಾ ಆತನ ಮರಣದ ನಂತರ ಪ್ರಾರಂಭವಾದವು ಎನ್ನುವುದು ಝಾ ಅವರ ಸಂಶಯ. ಝಾ ಪ್ರಕಾರ, ಬೌದ್ಧ ಭಿಕ್ಕುಗಳ ಮೇಲಿನ ದಾಳಿಗಳ ಇತರ ಆರಂಭಿಕ ಪುರಾವೆಗಳು ಮೌರ್ಯ ಯುಗದ ನಂತರದಲ್ಲಿ ಕಾಣಸಿಗುತ್ತವೆ. ಇದು ಪ್ರಸಿದ್ಧ ಬೌದ್ಧ ಸಂಸ್ಕೃತವಾದ “ದಿವ್ಯವದನಾ”ದಲ್ಲಿ ದಾಖಲಿಸಲಾಗಿದೆ. ಇದರಲ್ಲಿ ಬ್ರಾಹ್ಮಣ ದೊರೆ ಪುಷ್ಯಮಿತ್ರ ಶುಂಗನನ್ನು ಬೌದ್ಧರ ಮಹಾನ್ ಶೋಷಕ ಎಂದು ವಿವರಿಸಲಾಗಿದೆ. ಶುಂಗನು ತನ್ನ ಬೃಹತ್ ಸೈನ್ಯದ ಪಥಸಂಚಲನ ನಡೆಸಿದನೆಂದು ಇದರಲ್ಲಿ ಹೇಳಲಾಗಿದೆ. ಆ ಮೂಲಕ ಆತ, ಬೌದ್ಧ ಸ್ತೂಪಗಳನ್ನು ನಾಶಮಾಡಿ, ಸ್ಮಾರಕಗಳನ್ನು ಸುಟ್ಟು ಬೌದ್ಧ ಭಿಕ್ಕುಗಳನ್ನು ಕೊಲ್ಲಿಸಲು ಪ್ರತಿ ಭಿಕ್ಕುವಿನ ತಲೆಗೆ ನೂರು ವರಹಗಳ ಬಹುಮಾನವನ್ನು ಘೋಷಿಸಿದ್ದರ ಬಗ್ಗೆ ವಿವರಿಸಲಾಗಿದೆ ಎನ್ನುತ್ತಾರೆ ಝಾ ಅವರು.
ಪ್ರಸಿದ್ಧ ವ್ಯಾಕರಣಕಾರ ಪತಂಜಲಿಯ ‘ಮಹಾಭಾಷ್ಯ’ ಗ್ರಂಥದ ಆಧಾರದಲ್ಲಿ ಬೌದ್ಧ ಸ್ಮಾರಕಗಳ ಮೇಲಿನ ಬ್ರಾಹ್ಮಣರ ದಾಳಿಗಳಿಗೆ ಝಾ ಅವರು ಸಾಕ್ಷ್ಯಗಳನ್ನು ಒದಗಿಸುತ್ತಾರೆ. ಮಹಾಭಾಷ್ಯದಲ್ಲಿ ಪಲಂಜಲಿಯು “ಬ್ರಾಹ್ಮಣರು ಮತ್ತು ಶ್ರಮಣರು(ಬೌದ್ಧರು) ಹಾವು-ಮುಂಗುಸಿಯಂತೆ ಶಾಶ್ವತ ಶತ್ರುಗಳು ಎಂದು ಹೇಳಿದ್ದಾರೆ. ಇದೆಲ್ಲವನ್ನೂ ಒಟ್ಟಿಗೆ ನೋಡಿದರೆ ಬೌದ್ಧ ಸ್ಮಾರಕಗಳ ಮೇಲಿನ ಬ್ರಾಹ್ಮಣರ ಆಕ್ರಮಣಕ್ಕೆ ವೇದಿಕೆ ಸಿದ್ಧವಾಗಿದ್ದೆ ಶುಂಗನ ಆಡಳಿತದಲ್ಲಿ ಎಂಬುದು ಖಚಿತವಾಗುತ್ತದೆ. ಮೌರ್ಯರ ನಂತರ ವಿಶೇಷವಾಗಿ ಪುಷ್ಯಮಿತ್ರನ ಆಡಳಿತದಲ್ಲಿ, ಆತ ಅಶೋಕನ ಪಿಲ್ಲರ್ ಹಾಲ್ ಮತ್ತು ಪಾಟಲಿಪುತ್ರದಲ್ಲಿನ (ಇಂದಿನ ಪಾಟ್ನಾ) ಕುಕುಟರಾಮ ಬೌದ್ಧ ವಿಹಾರವನ್ನು ನಾಶಪಡಿಸಿರಬಹುದು. ಬೌದ್ಧ ಸ್ಮಾರಕಗಳ ಮೇಲೆ ಶುಂಗನ ಆಕ್ರಮಣದ ಸಾಧ್ಯತೆಯನ್ನು ಅನೇಕ ಶಿಲಾಖಂಡರಾಶಿಗಳ ಮೇಲಿನ ಪದರಗಳು ಮತ್ತು ಬೌದ್ಧ ಧರ್ಮದ ಅನೇಕ ಕೇಂದ್ರಗಳು, ವಿಶೇಷವಾಗಿ ಮಧ್ಯಪ್ರದೇಶದಲ್ಲಿ ಕಂಡುಬಂದಿರುವ ನಿರ್ಜನತೆಯ ಪುರಾವೆಗಳು ಬೆಂಬಲಿಸುತ್ತವೆ. ಉದಾಹರಣೆಗೆ, ಅಶೋಕನ ಕಾಲದಲ್ಲಿ ಪ್ರಮುಖ ಬೌದ್ಧ ತಾಣವಾಗಿದ್ದ ಸಾಂಚಿಯು ಶುಂಗರ ಕಾಲದಲ್ಲಿ ಹಲವಾರು ಬೌದ್ಧ ಸ್ಮಾರಕಗಳನ್ನು ಧ್ವಂಸಗೊಳಿಸಿದ್ದಕ್ಕೆ ಪುರಾವೆಗಳನ್ನು ನೀಡಿದೆ. ಇದೇ ರೀತಿಯ ಪುರಾವೆಗಳು ಹತ್ತಿರದ ಸ್ಥಳಗಳಾದ ಕಟ್ನಿ ಜಿಲ್ಲೆಯ ಸತ್ಧಾರಾ ಮತ್ತು ರೇವಾ ಜಿಲ್ಲೆಯ ದೇವುರ್ಕೋಥರ್’ನಲ್ಲೂ ಕಾಣಸಿಗುತ್ತವೆ ಎನ್ನುತ್ತಾರೆ ಝಾ ಅವರು.
ಶುಂಗರ ಆಳ್ವಿಕೆಯ ಅಂತ್ಯದ ನಂತರವೂ ಮಧ್ಯಪ್ರದೇಶದಲ್ಲಿ ಬೌದ್ಧ ಸ್ಮಾರಕಗಳ ನಾಶ ಮತ್ತು ಸ್ವಾಧೀನ ಮುಂದುವರೆದಿತ್ತು ಎಂದು ಝಾ ಹೇಳುತ್ತಾರೆ. ಉದಾಹರಣೆಗೆ, ಅಹಮದ್‌ಪುರದಲ್ಲಿ, ಐದನೇ ಶತಮಾನದಲ್ಲಿ ಬೌದ್ಧ ಸ್ತೂಪದ ಬುನಾದಿಯ ಮೇಲೆ ಬ್ರಾಹ್ಮಣ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ತೋರುತ್ತದೆ, ಮತ್ತು ವಿದಿಶಾದ ಸುತ್ತಮುತ್ತಲಿನ ಹಲವಾರು ಸ್ಥಳಗಳಲ್ಲಿ ಬೌದ್ಧ ಪ್ರತಿಮೆಗಳು ಕಂಡುಬಂದಿವೆ, ಇವುಗಳು ಎಂಟನೇ ಶತಮಾನದ ಸುಮಾರಿಗೆ ಶೈವ ಅಥವಾ ಜೈನ ಮಂದಿರಗಳಾಗಿ ರೂಪಾಂತರಗೊಂಡಿವೆ. ನಂತರ, ವಿದಿಶಾದಿಂದ ಈಶಾನ್ಯಕ್ಕೆ ೨೫೦ ಕಿ.ಮೀ. ಗಳ ದೂರದಲ್ಲಿರುವ ಖಜುರಾಹೊವು ಹತ್ತನೇ ಶತಮಾನದ ಚಾಂಡೆಲ್ಲಾರ ಆಡಳಿತದಲ್ಲಿ ದೇವಾಯಲಗಳ ಪಟ್ಟಣವಾಗಿ ಗುರುತಿಸಿಕೊಳ್ಳುವ ಮೊದಲೇ ಅಲ್ಲಿ ಬೌದ್ಧ ಸ್ಮಾರಗಳು ಅಸ್ಥಿತ್ವದಲ್ಲಿದ್ದವು. ಇಲ್ಲಿ, ಘಂಟೈ ದೇವಾಲಯವನ್ನು ಬೌದ್ಧ ಸ್ಮಾರಕವೊಂದರ ಅವಶೇಷಗಳ ಮೇಲೆ ನಿರ್ಮಿಸಿದಂತಿದೆ. ಒಂಬತ್ತನೇ ಅಥವಾ ಹತ್ತನೇ ಶತಮಾನದಲ್ಲಿ ಈ ಪ್ರದೇಶದಲ್ಲಿ ಜೈನರು ಬಲವಾದ ಅಸ್ತಿತ್ವವನ್ನು ಹೊಂದಿದ್ದಂತೆ ಕಾಣುತ್ತದೆ ಎನ್ನುತ್ತಾರೆ ಝಾ ಅವರು.
ಕುಶಾನರ ಕಾಲದಲ್ಲಿ ಪಶ್ಚಿಮ ಉತ್ತರ ಪ್ರದೇಶದಲ್ಲಿ ಪ್ರವರ್ಧಮಾನಕ್ಕೆ ಬಂದ ಪಟ್ಟಣವಾಗಿದ್ದ ಮಥುರಾದಲ್ಲಿನ ಅನೇಕ ಪುರಾವೆಗಳನ್ನು ವಿವರಿಸುತ್ತಾ, ಝಾ ಹೇಳುತ್ತಾರೆ, ಭೂತೇಶ್ವರ ಮತ್ತು ಗೋಕರ್ಣೇಶ್ವರದಂತಹ ಕೆಲವು ಇಂದಿನ ಬ್ರಾಹ್ಮಣ ದೇವಾಲಯಗಳು ಪ್ರಾಚೀನ ಕಾಲದಲ್ಲಿ ಬೌದ್ಧ ಸ್ಮಾರಕಗಳಾಗಿದ್ದವು. ಇಲ್ಲಿ, ಕತ್ರಾ ದಿಬ್ಬವು ಕುಶಾನರ ಕಾಲದಲ್ಲಿ ಬೌದ್ಧ ಕೇಂದ್ರವಾಗಿತ್ತು. ಮುಂದೆ ಮಧ್ಯಕಾಲೀನ ಯುಗದ ಆರಂಭದಲ್ಲಿ ಅದು ಹಿಂದೂ ಧಾರ್ಮಿಕ ಸ್ಥಳವಾಯಿತು.
ಮುಂದೆ, ಅಲಹಾಬಾದ್ ಬಳಿಯ ಕೌಶಂಬಿಯಲ್ಲಿ, ಪ್ರಸಿದ್ಧ ಘೋಸಿತಾರಾಮ್ ಬೌದ್ಧ ವಿಹಾರವು ಪುಷ್ಯಮಿತ್ರನ ಕಾಲದಲ್ಲಿ ಸುಟ್ಟು ನಾಶಗೊಳಿಸಲಾಯಿತು ಎಂದು ಝಾ ಹೇಳುತ್ತಾರೆ. ಗೌತಮ ಬುದ್ಧನು ತನ್ನ ಮೊದಲ ಧರ್ಮೋಪದೇಶ ಆರಂಭಿಸಿದ ವಾರಣಾಸಿ ಬಳಿಯ ಸಾರನಾಥ್ ನ್ನು ಗುರಿಯಾಗಿಸಿಕೊಂಡು ಬ್ರಾಹ್ಮಣರು ಆಕ್ರಮಣ ಮಾಡಿದರು. ಇದರ ತರುವಾಯ ಮೌರ್ಯರು ನಿರ್ಮಿಸಿದ ಬೌದ್ಧ ಸ್ಮಾರಕಗಳ ಪಳಿಯುಳಿಕೆಗಳನ್ನು ಮರುಬಳಕೆ ಮಾಡುವ ಮೂಲಕ ಬಹುಶಃ ಗುಪ್ತರ ಕಾಲದಲ್ಲಿ ಕೋರ್ಟ್-೩೬ ಮತ್ತು ಸ್ಟ್ರಕ್ಚರ್-೧೩೬ ನಂತಹ ಬ್ರಾಹ್ಮಣ ಕಟ್ಟಡಗಳನ್ನು ನಿರ್ಮಿಸಲಾಯಿತು ಎನ್ನುವುದು ಝಾ ಅವರ ಅಭಿಮತ.
ಐದನೇ ಶತಮಾನದ ಆರಂಭ ಕಾಲದ ಗುಪ್ತರ ಆಡಳಿತಾವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದ ಚೀನೀ ಯಾತ್ರಿಕ ಫಾ-ಹಸಿನ್ ಅವರನ್ನು ಉಲ್ಲೇಖಿಸಿ, ಝಾ ಹೇಳುತ್ತಾರೆ, ಬುದ್ಧನು ತನ್ನ ಬದುಕಿನ ಬಹುಭಾಗವನ್ನು ಕಳೆದ ಶ್ರಾವಸ್ತಿಯಲ್ಲಿ, ಗುಪ್ತರ ಕಾಲದಲ್ಲಿ ಬ್ರಾಹ್ಮಣರು ಕುಶಾನ ಬೌದ್ಧ ಸ್ಥಳವನ್ನು ಸ್ವಾಧೀನಪಡಿಸಿಕೊಂಡು, ಅಲ್ಲಿ ದೇವಾಲಯ ನಿರ್ಮಿಸಿ ರಾಮಾಯಣದ ಫಲಕಗಳನ್ನು ಅಳವಡಿಸಿದರು. ವಾಸ್ತವವಾಗಿ, ಇಂದಿನ ಉತ್ತರ ಪ್ರದೇಶದ ಬೌದ್ಧ ಸ್ಮಾರಕಗಳ ಸಾಮಾನ್ಯ ಸ್ಥಿತಿಯು ಅತ್ಯಂತ ಕೆಟ್ಟದಾಗಿದೆ. ಪುರಾತತ್ತ್ವ ಇಲಾಖೆಯ ಕಾಗದದಲ್ಲಿ ವಿವರಿಸಿದಂತೆ ಸುಲ್ತಾನ್‌ಪುರ ಜಿಲ್ಲೆಯಲ್ಲಿ ಮಾತ್ರ ೪೯ ಕ್ಕಿಂತ ಹೆಚ್ಚಿನ ಸಂಖ್ಯೆಯ ಬೌದ್ಧ ಸ್ಮಾರಕಗಳು ಬೆಂಕಿಯಿಂದ ನಾಶವಾಗಿವೆ. ಇದನ್ನು ಪುರಾತತ್ವ ಶಾಸ್ತ್ರಜ್ಞ ಅಲೋಯಿಸ್ ಆಂಟನ್ ಫ್ಯೂರರ್ ಅವರು ‘ಬೌದ್ಧಧರ್ಮದ ಮೇಲೆ ಬ್ರಾಹ್ಮಿನಿಸಂ ನ ಅಂತಿಮ ವಿಜಯ’ ಎಂದು ವರ್ಣಿಸಿರುವ ಬಗ್ಗೆ ಝಾ ಅವರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಗುಪ್ತರ ಕಾಲದ ನಂತರ, ಹರ್ಷವರ್ಧನನ ಆಳ್ವಿಕೆಯಲ್ಲಿ ೬೩೧-೬೪೫ ರ ನಡುವೆ ಭಾರತಕ್ಕೆ ಭೇಟಿ ನೀಡಿದ ಚೀನೀ ಬೌದ್ಧ ಯಾತ್ರಿಕ ಮತ್ತು ಪ್ರವಾಸಿ ಹ್ಸುವಾನ್ ತ್ಸಾಂಗ್ ನ ಹೇಳಿಕೆಯನ್ನು ಝಾ ಅವರು ಹೀಗೆ ಉಲ್ಲೇಖಿಸಿದ್ದಾರೆ: “ಆರನೇ ಶತಮಾನದ ಶಿವಭಕ್ತ ಹೂಣ ದೊರೆ ಮಿಹಿರಾಕುಲ, ೧,೬೦೦ ಬೌದ್ಧ ಸ್ತೂಪಗಳು ಮತ್ತು ವಿಹಾರಗಳನ್ನು ನಾಶಪಡಿಸಿದನು ಮತ್ತು ಸಾವಿರಾರು ಬೌದ್ಧ ಸನ್ಯಾಸಿಗಳು ಮತ್ತು ಸಾಮಾನ್ಯ ಬೌದ್ಧರನ್ನು ಕೊಂದರು. ಗಾಂಧಾರದಲ್ಲಿ ೧,೦೦೦ ಸಂಘರಾಮಗಳು ‘ನಿರ್ಜನ’ ಅಥವಾ ಪಾಳು ಬಿದ್ದ ಸ್ಥಿತಿಯಲ್ಲಿವೆ. ಉದ್ದಿಯಾನದಲ್ಲಿ ೧,೪೦೦ ಸಂಘರಾಮಗಳನ್ನು ಸಾಮಾನ್ಯವಾಗಿ ವ್ಯರ್ಥˌ ನಿಸ್ಪ್ರಯೋಜಕ ಮತ್ತು ನಿರ್ಜನ ಸ್ಥಿತಿಯಲ್ಲಿವೆ.” ಮುಂದುವರೆದು, ಝಾ ಹೇಳುತ್ತಾರೆ, “ಬುದ್ಧನಿಗೆ ಜ್ಞಾನೋದಯವಾದ ಸ್ಥಳ ಬಿಹಾರದ ಬೋಧಗಯಾದಲ್ಲಿ ಗೌಡ ವಂಶದ ರಾಜ ಶಶಾಂಕನು ಬೋಧಿ ವೃಕ್ಷವನ್ನು ಕಡಿದು ಅಲ್ಲಿನ ಸ್ಥಳೀಯ ದೇವಾಲಯದಿಂದ ಬುದ್ಧನ ಪ್ರತಿಮೆಯನ್ನು ತೆಗೆದುಹಾಕಿ ಆ ಜಾಗದಲ್ಲಿ ಮಹೇಶ್ವರನ ಚಿತ್ರಣ ಇಟ್ಟನೆಂದು ಹುಯೆನ್ ತ್ಸಾಂಗ್ ವಿವರಿದ್ದಾನಂತೆ.
ಬೋಧಗಯಾವು ಬೌದ್ಧರಾಗಿದ್ದ ಪಾಲಾ ರಾಜರ ಆಳ್ವಿಕೆಯ ಕಾಲದಲ್ಲಿ ಮತ್ತೆ ಬೌದ್ಧರ ನಿಯಂತ್ರಣಕ್ಕೆ ಒಳಪಟ್ಟಿತು, ಮತ್ತು ಈ ಸ್ಥಳವು ಭಾರತೀಯ ಇತಿಹಾಸದಾದ್ಯಂತ ಧಾರ್ಮಿಕ ಸ್ಪರ್ಧೆಯ ತಾಣವಾಗಿ ಉಳಿದಿದೆ.” ಅಂತರಾಷ್ಟ್ರೀಯ ಖ್ಯಾತಿಯ ನಳಂದ ಬೌದ್ಧ ವಿಶ್ವವಿದ್ಯಾನಿಲಯವನ್ನು ಉಲ್ಲೇಖಿಸಿ, ಅಲ್ಲಿ ವಿಶೇಷವಾಗಿ ತನ್ನ ಅಧ್ಯಯನದ ಪ್ರಯುಕ್ತ ಐದು ವರ್ಷಗಳಿಗೂ ಹೆಚ್ಚು ಕಾಲ ತಂಗಿದ್ದ ಹುಯೆನ್ ತ್ಸಾಂಗ್ ಅದರ ವಿಶಾಲವಾದ ಸನ್ಯಾಸಿಗಳ ಸಂಕೀರ್ಣವನ್ನು ಉಲ್ಲೇಖಿಸಿರುವ ಕುರಿತು, ಝಾ ಹೇಳುತ್ತಾರೆ, ಅಲ್ಲಿನ ಗ್ರಂಥಾಲಯಕ್ಕೆ “ಹಿಂದೂ ಮತಾಂಧರು” ಬೆಂಕಿ ಹಚ್ಚಿದರು. ಆದರೆˌ ಈ ದುಸ್ಕೃತ್ಯದ ಕಳಂಕವನ್ನು ಮಾಮ್ಲುಕ್ ಕಮಾಂಡರ್ ಭಕ್ತಿಯಾರ್ ಖಿಲ್ಜಿಯ ತಲೆಗೆ ಕಟ್ಟುವ ಮೂಲಕ ಸುಳ್ಳು ಪ್ರಚಾರ ಮಾಡಲಾಯಿತು. ವಾಸ್ತವದಲ್ಲಿ ಭಕ್ತಿಯಾರ್ ನಳಂದ ವಿಶ್ವವಿದ್ಯಾಲಯಕ್ಕೆ ಹೋಗಿರಲೆಯಿಲ್ಲ. ಆದರೆ, ಇಂದಿನ ಬಿಹಾರ ಷರೀಫ್ ನ ಹತ್ತಿರದಲ್ಲಿರುವ ಓದಂತಪುರಿ ಬೌದ್ಧ ಮಹಾವಿಹಾರವನ್ನು ಭಕ್ತಿಯಾರ್ ನಾಶಗೊಳಿಸಿದ್ದರ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ ಎನ್ನುತ್ತಾರೆ ಝಾ ಅವರು.
ಪೂರ್ವ ಗಂಗಾ ದೊರೆ ಅನಂತವರ್ಮನ್ ಚೋಡಗಂಗ ದೇವನ ಆಳ್ವಿಕೆಯ ಕಾಲದ ಹನ್ನೆರಡನೇ ಶತಮಾನದಲ್ಲಿ ನಿರ್ಮಿಸಲಾದ ಈಶಾನ್ಯ ಭಾರತದ ಅತ್ಯಂತ ಪ್ರಮುಖ ಬ್ರಾಹ್ಮಣ ಯಾತ್ರಾ ಕೇಂದ್ರಗಳಲ್ಲಿ ಒಂದಾದ ಪುರಿಯ ಜಗನ್ನಾಥ ದೇವಾಲಯವನ್ನು ಸಹ “ಬೌದ್ಧ ಸ್ಮಾರಕದ ಮೇಲೆ ನಿರ್ಮಿಸಲಾಗಿದೆ ಎಂದು ಝಾ ಅವರು ಶಂಕಿಸುತ್ತಾರೆ. ಝಾ ಅವರ ಪ್ರಕಾರ, “ಪುರಿ ಜಿಲ್ಲೆಯ ಪೂರ್ಣೇಶ್ವರ, ಕೇದಾರೇಶ್ವರ, ಕಂಠೇಶ್ವರ, ಸೋಮೇಶ್ವರ ಮತ್ತು ಅಂಗೇಶ್ವರ ದೇವಾಲಯಗಳನ್ನು ಬೌದ್ಧ ವಿಹಾರಗಳ ಬುನಾದಿಗಳ ಮೇಲೆ ಅಥವಾ ಅವುಗಳನ್ನು ನಾಶಗೊಳಿಸಿದ ನಂತರ ಉಳಿದ ಪಳಿಯುಳಿಕೆಗಳನ್ನು ಬಳಸಿ ನಿರ್ಮಿಸಲಾಗಿದೆ. ಬಹುಶಃ ಝಾ ಅವರ ಈ ಪುಸ್ತಕವು ಬೌದ್ಧ ಸ್ಮಾಕರಗಳ ಮೇಲಿನ ಬ್ರಾಹ್ಮಣರ ದಾಳಿಗಳ ಕುರಿತು ಇನ್ನೂ ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲಲು ವಿಫಲವಾಗಿದೆ ಎನ್ನಬಹುದು. ಕರ್ನಾಕಟದ ಸನ್ನತಿˌ ಚಿತ್ತಾಪುರದ ನಾಗಾಯಿ ಹಾಗು ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿಯ ವೆಂಕಟೇಶ್ವರನ ದೇವಾಲಯಗಳು ಸೇರಿದಂತೆ ಭಾರತದಲ್ಲಿನ ಅಪಾರ ಸಂಖ್ಯೆಯ ಬೌದ್ಧ ವಿಹಾರಗಳು/ಸ್ಮಾರಕಗಳನ್ನು ಬ್ರಾಹ್ಮಣ ದೇಗುಲಗಳಾಗಿ ರೂಪಾಂತರಗೊಳಿಸಿರುವ ಎಲ್ಲ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.