ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯಲ್ಲಿ 42 ಕೋಟಿ ಹಣ ಸಿಕ್ಕ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. 42 ಕೋಟಿ ಹೊಂದಿದ್ದ ಮನೆ ಮಾಲೀಕ ಗುತ್ತಿಗೆದಾರ ಅಂಬಿಕಾಪತಿ, ಆದಾಯ ತೆರಿಗೆ ಇಲಾಖೆ ವಿಚಾರಣೆ ವೇಳೆ ಹಣದ ಮೂಲ ಹಾಗು ಹಣ ಸಂಗ್ರಹ ಮಾಡಿದ್ದು ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಕೊಡಲಿದ್ದಾರೆ. ಆದರೆ ಅದು ಕಾಂಗ್ರೆಸ್ ಪಕ್ಷ ತೆಲಂಗಾಣ ಚುನಾವಣೆಗೆ ರವಾನೆ ಮಾಡಲು ಸಂಗ್ರಹ ಮಾಡಿದ್ದ ಹಣ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ತೆಲಂಗಾಣ ಹಣಕಾಸು ಸಚಿವರೂ ಕೂಡ ಕಾಂಗ್ರೆಸ್ ಪಕ್ಷ ಸಂಗ್ರಹಿಸಿತ್ತು. ತೆಲಂಗಾಣದಲ್ಲಿ ಚುನಾವಣೆ ಮಾಡಲು ಯೋಜನೆ ರೂಪಿಸಿತ್ತು ಅಂತಾನೇ ಹೇಳಿದ್ದಾರೆ. ಆದರೆ ಈ ಕೇಸ್‌ನಲ್ಲಿ ಕಾಂಗ್ರೆಸ್ ಸರ್ಕಾರಕ್ಕೂ ಐಟಿ ದಾಳಿಯಲ್ಲಿ ಸಿಕ್ಕ ಹಣಕ್ಕೂ ಯಾವುದೇ ಸಂಬಂಧವಿಲ್ಲ, ಆದರೂ ಕೂಡ ಕಾಂಗ್ರೆಸ್ ಅಡಕತ್ತರಿಯಲ್ಲಿ ಸಿಲುಕಿಕೊಂಡಂತೆ ಕಾಣಿಸುತ್ತಿದೆ.
ಬಿಬಿಎಂಪಿ ಗುತ್ತಿಗೆದಾರರ ಬಾಕಿ ಬಿಲ್ ಕಮಿಷನ್ ಹಣನಾ..?
ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಿಬಿಎಂಪಿ ಕಾಮಗಾರಿಯಲ್ಲಿ ಕಳಪೆ ಆಗಿದೆ ಎನ್ನುವ ಕಾರಣಕ್ಕೆ ಬಿಲ್ ಬಿಡುಗಡೆ ಮಾಡದೆ ತಡೆ ಹಿಡಿಯಲಾಗಿತ್ತು. ಗುತ್ತಿಗೆದಾರರು ಒತ್ತಡ ಹೇರಿದ ಬಳಿಕ ಬಿಬಿಎಂಪಿ ಅರ್ಧ ಹಣವನ್ನು ಬಿಡುಗಡೆ ಮಾಡಿತ್ತು. ಆದರೆ ಈ ಹಣ ಯಾರದ್ದು..? ಯಾರಿಗೆ ಸೇರಿದ್ದು ಅನ್ನೋ ಬಗ್ಗೆ ಆದಾಯ ತೆರಿಗೆ ಇಲಾಖೆ ಇನ್ನೂ ಕೂಡ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಹಣ ಸಿಕ್ಕಿರುವ 23 ಬಾಕ್ಸ್‌ಗಳಲ್ಲಿದ್ದ ಹಣವನ್ನು ತೆಗೆದುಕೊಂಡು ಹೋಗಿರುವ ಅಧಿಕಾರಿಗಳು, ಅಂಬಿಕಾಪತಿ ಪುತ್ರ ಪ್ರದೀಪ್‌ನನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ ಬಳಿಯ ಅಂಬಿಕಾಪತಿ ಅವರಿಗೆ ಸೇರಿದ ಬಿಲ್ಡಿಂಗ್‌ನಲ್ಲಿ ಶೋಧ ಮಾಡಿದ್ದು, ಲಾಕರ್‌ನಲ್ಲೂ 2 ಸೂಟ್‌ಕೇಸ್‌ನಲ್ಲಿ ಹಣ ಪತ್ತೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್, ಇದೆಲ್ಲಾ ರಾಜಕೀಯ ಪ್ರೇರಿತ ದಾಳಿ ಎಂದಿರುವ ಒಂದೇ ಒಂದು ಹೇಳಿಕೆ ಕಾಂಗ್ರೆಸ್‌ಗೆ ಕಪ್ಪು ಚುಕ್ಕೆಯಂತೆ ಕಾಣಿಸುತ್ತಿದೆ.
‘ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ’ಗೆ ಸೇರಿದ ಕಮಿಷನ್..!
ಮಾಜಿ ಸಿಎಂ ಕುಮಾರಸ್ವಾಮಿ ನೇರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಆರೋಪದ ಸುರಿಮಳೆ ಮಾಡಿದ್ದಾರೆ. ಐಟಿ ಅಧಿಕಾರಿಗಳ ರೇಡ್‌ನಲ್ಲಿ ಸಿಕ್ಕ ಹಣ ಯಾರದ್ದು..? ಯಾರ ಹೆಣದ ಮೇಲೆ ಸಂಗ್ರಹಿಸಿದ ಪಾಪದ ಹಣ..? ಎಂದು X ಪೋಸ್ಟ್‌ನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. 23 ಬಾಕ್ಸ್‌ಗಳಲ್ಲಿದ್ದ ಹಣ ತೆಲಂಗಾಣಕ್ಕೆ ಹೋಗ್ತಿತ್ತು ಅನ್ನೋದ್ರ ಜೊತೆಗೆ ‘ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ’ಯ ಕೈ ಕರಾಮತ್ತು ಅನ್ನೋ ಮಾಹಿತಿ ಇದೆ ಎನ್ನುವ ಮೂಲಕ ನೇರವಾಗಿ ಬೆಂಗಳೂರು ನಗರ ಅಭಿವೃದ್ಧಿ ಇಲಾಖೆ ಸಚಿವರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಸೇರಿದ ಹಣ ಎನ್ನುವುದನ್ನು ಜಗಜ್ಜಾಹೀರು ಮಾಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಐಟಿ ದಾಳಿಯಲ್ಲಿ ಸಿಕ್ಕ ಹಣಕ್ಕೂ ಸರ್ಕಾರಕ್ಕು ಸಂಬಂಧ ಇಲ್ಲ ಎಂದು ಸಮರ್ಥನೆ ಮಾಡಿಕೊಳ್ಳುವ ಸಮಯದಲ್ಲಿ ಇದೆಲ್ಲಾ ರಾಜಕೀಯ ದಾಳಿ ಎಂದಿರುವ ಡಿ.ಕೆ ಶಿವಕುಮಾರ್ ಮಾತು ಎಲ್ಲರ ಬಾಯಿ ಮುಚ್ಚಿಸಿದೆ.
ಕಾಂಗ್ರೆಸ್‌ನ ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿ ಅಂಬಿಕಾಪತಿ..!
ಆದಾಯ ತೆರಿಗೆ ದಾಳಿಯಲ್ಲಿ ಹಣ ಪತ್ತೆಯಾಗಿರುವ ಅಂಬಿಕಾಪತಿಗೂ ಡಿಕೆ ಶಿವಕುಮಾರ್‌ಗೂ ರಾಜಕೀಯ ನಂಟಿಲ್ಲ. ಆದರೆ 40 ವರ್ಷಗಳಿಂದ ಕಾಂಟ್ರ್ಯಾಕ್ಟರ್ ಆಗಿದ್ದ ಅಂಬಿಕಾಪತಿ, ಹಲವು ದೊಡ್ಡ ದೊಡ್ಡ ಪ್ರಾಜೆಕ್ಟ್ ಪಡೆಯುತ್ತಿದ್ದರು. ಕಾಂಗ್ರೆಸ್‌ನ ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸಹೋದರಿ ಅಶ್ವಥಮ್ಮನನ್ನು ಮದುವೆಯಾಗಿದ್ದು, ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಹಲವಾರು ರಾಜಕಾರಣಿಗಳಿಗೆ ಅತ್ಯಾಪ್ತನಾಗಿದ್ದ ಅಂಬಿಕಾಪತಿ, ಗುತ್ತಿಗೆದಾರರ ಸಂಘದಲ್ಲಿ ಏನೇ ಸಮಸ್ಯೆಯಾದ್ರೂ ಬಗೆಹರಿಸುತ್ತಿದ್ದರು. ಇದೀಗ ಅಂಬಿಕಾಪತಿ ಹಣ ಸಂಗ್ರಹ ಮಾಡಿದ್ದು ಯಾಕೆ..? ಡಿ.ಕೆ ಶಿವಕುಮಾರ್ ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್ ಕೊಡಲಿಲ್ಲ ಅನ್ನೋ ಕಾರಣಕ್ಕೆ ರಾಜಕೀಯ ಸಂಬಂಧವೂ ಇರಲಿಲ್ಲ. ಆದರೂ ರಾಜಕೀಯ ದಾಳಿ ಎಂದಿದ್ದು ಯಾಕೆ..? ಕುಮಾರಸ್ವಾಮಿ ಹೇಳಿದಂತೆ ಗುತ್ತಿಗೆದಾರರ ಸಂಘದಿಂದಲೇ ಸಂಗ್ರಹಿಸಿ ಹಣವೋ ಅನ್ನೋ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ.
ಕೃಷ್ಣಮಣಿ