ನಿಜವಾದ ಭಾರತೀಯ ಯಾರೆಂದು ನಿರ್ಧರಿಸೋದು ಸುಪ್ರೀಂಕೋರ್ಟ್ ನ್ಯಾಯಾಧೀಶರ ವ್ಯಾಪ್ತಿಗೆ ಬರಲ್ಲ ಎಂದು ಕಾಂಗ್ರೆಸ್ ನಾಯಕಿ, ಸಂಸದೆ ಪ್ರಿಯಾಂಕಾ ಗಾಂಧಿರವರು (Priyank Gandhi) ರಾಹುಲ್ ಗಾಂಧಿ (Rahul Gandhi) ಬೆಂಬಲಕ್ಕೆ ನಿಂತಿದ್ದಾರೆ.

ಸಂಸತ್ ಆವರಣದಲ್ಲಿ ಮಾತನಾಡಿ, ಸೇನೆಯ ಬಗ್ಗೆ ರಾಹುಲ್ ಗಾಂಧಿ (Rahul Gandhi) ನೀಡಿದ್ದ ಹೇಳಿಕೆಗೆ ಸುಪ್ರೀಂ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಿಜವಾದ ಭಾರತೀಯ ಯಾರು ಎಂದು ನಿರ್ಧರಿಸುವುದು ಸುಪ್ರೀಂಕೋರ್ಟ್ ನ್ಯಾಯಾಧೀಶರ (Supreme Court Judge) ವ್ಯಾಪ್ತಿಗೆ ಬರುವುದಿಲ್ಲ. ನನ್ನ ಸಹೋದರ ರಾಹುಲ್ ಗಾಂಧಿಗೆ ಸೇನೆಯ ಬಗ್ಗೆ ಅತ್ಯುನ್ನತ ಗೌರವವಿದೆ ಎಂದು ಹೇಳಿದರು.

ನ್ಯಾಯಾಂಗಕ್ಕೆ ಎಲ್ಲಾ ರೀತಿಯಲ್ಲಿಯೂ ಗೌರವಗಳನ್ನು ನೀಡುತ್ತಾ, ನಿಜವಾದ ಭಾರತೀಯ ಯಾರು ಮತ್ತು ಯಾರಲ್ಲ ಎಂಬುದನ್ನು ನಿರ್ಧರಿಸುವುದು ಅವರ ಕೆಲಸವಲ್ಲ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ, ಸರ್ಕಾರಕ್ಕೆ ಪ್ರಶ್ನೆ ಕೇಳುವುದು ರಾಹುಲ್ ಗಾಂಧಿಯವರ ಕರ್ತವ್ಯವಾಗಿದೆ. ರಾಹುಲ್ ಗಾಂಧಿ ಯಾವಾಗಲೂ ಅದನ್ನೇ ಮಾಡಿದ್ದಾರೆ. ಆದರೆ ಈಗ ಸೇನೆ ಬಗ್ಗೆ ಮಾತನಾಡಿರುವುದು ಸರ್ಕಾರಕ್ಕೆ ಇಷ್ಟವಿಲ್ಲ. ಜೊತೆಗೆ ಈ ಪ್ರಶ್ನೆಗೆ ಉತ್ತರ ನೀಡೋದು ಅವರಿಗೆ ಕಷ್ಟವಾಗಿದೆ ಎಂದು ತಿಳಿಸಿದರು.





