ಯಡಿಯೂರಪ್ಪ ಅವರ ರಾಜೀನಾಮೆ ಪಡೆಯಲೇಬೇಕು ಎಂದು ಬಿಜೆಪಿ ಹೈಕಮಾಂಡ್ ನಿರ್ಧರಿಸಿದ್ದ ಮೇಲೆ ಇನ್ನು ಸ್ವಲ್ಪ ದಿನಗಳ ಬಳಿಕೆ ರಾಜೀನಾಮೆ ಪಡೆಯಬಹುದಿತ್ತು, ಈಗ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಎದುರಾಗಿದೆ, ಇಂಥಾ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ಮಂತ್ರಿ ಮಂಡಲವೇ ಇಲ್ಲದ ಮೇಲೆ ಜನರ ಕಷ್ಟಗಳನ್ನು ಕೇಳೋರು ಯಾರು? ಬಿಜೆಪಿ ಯವರಿಗೆ ಜನರ ಜೀವಕ್ಕಿಂತ ಅಧಿಕಾರ ಹಸ್ತಾಂತರ ಮುಖ್ಯವಾಯಿತೇ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಿಜೆಪಿ ಪಕ್ಷದಲ್ಲಿ ಪ್ರಜಾಪ್ರಭುತ್ವವೇ ಇಲ್ಲ. ಯಡಿಯೂರಪ್ಪ ಅವರು ಶಾಸಕರ ಬೆಂಬಲದ ಮೇಲೆ ಮುಖ್ಯಮಂತ್ರಿಯಾದವರು. ಅವರನ್ನು ಇದ್ದಕ್ಕಿದ್ದಂತೆ ಕಿತ್ತು ಹಾಕಿದ್ದಾರೆ, ಮುಂದಿನ ಮುಖ್ಯಮಂತ್ರಿ ಆಯ್ಕೆಯ ಹಕ್ಕು ಕೂಡ ಶಾಸಕರಿಗಿಲ್ಲ. ಬಿಜೆಪಿ ಶಾಸಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ? ಹೈಕಮಾಂಡ್ ಮಾತಿಗೆ ಸುಮ್ಮನೆ ತಲೆಯಾಡಿಸಬೇಕಷ್ಟೆ. ಅವರು ಯಾರನ್ನು ಬೇಕಾದರೂ ಅಧಿಕಾರದಿಂದ ಕಿತ್ತು ಹಾಕಬಹುದು, ಇಷ್ಟ ಬಂದವರನ್ನು ಕುರ್ಚಿಯಲ್ಲಿ ಕೂರಿಸಬಹುದು. ರಾಷ್ಟ್ರೀಯ ಪಕ್ಷ ಅಂದಮೇಲೆ ಹೈಕಮಾಂಡ್ ಇರುವುದು ಸಹಜ, ಆದರೆ ರಾಜ್ಯದ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಸರ್ವಾಧಿಕಾರಿಯಂತೆ ವರ್ತಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯರಂತಹ ನೂರು ಜನ ಬಂದರೂ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಅವರು ಅಹಂಕಾರದ ಮಾತನಾಡಿದ್ದಾರೆ, ಆದರೆ ರಾಜ್ಯದಲ್ಲಿ ಈ ವರೆಗೆ ಒಮ್ಮೆಯಾದರೂ ಬಿಜೆಪಿ ಪಕ್ಷ ಸರಳ ಬಹುಮತ ಪಡೆದು ಸರ್ಕಾರ ರಚಿಸಿದೆಯೇ? ಆಪರೇಷನ್ ಕಮಲದ ಮೂಲಕ ಸರ್ಕಾರ ಮಾಡಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಇದ್ದರೂ, ಇಲ್ಲದಿದ್ದರೂ ನಮಗೇನು ಲಾಭವಿಲ್ಲ. ಕಾರಣ ರಾಜ್ಯದ ಜನ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ, ಈ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ದಿನಗಳಲ್ಲಿ ಲಾಭದಾಯಕವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಿಲ್ಲ, ಈ ಬಾರಿಯೂ ಪ್ರವಾಹ ಬಂದಿದೆ. ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿನೀಡಿ, ಜನರ ಕಷ್ಟ ಆಲಿಸಲು ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಹೀಗಾದರೆ ಜನರ ಪಾಡೇನು? ಪರಿಹಾರ ಕೊಟ್ಟಿದ್ದೀವೆ ಎಂದು ಬಿಜೆಪಿಯವರು ಹೇಳ್ತಾರೆ ಅದೆಲ್ಲ ಬರೀ ಸುಳ್ಳು. ಅರ್ಧದಷ್ಟು ಜನರಿಗೆ ಎರಡು ವರ್ಷ ಕಳೆದರೂ ಪರಿಹಾರ ಸಿಕ್ಕಿಲ್ಲ. ಈಗ ಕೊಟ್ಟಿಲ್ಲ ಅಂದರೆ ಇನ್ಯಾವಾಗ ಅವರಿಗೆ ಪರಿಹಾರದ ಹಣ ಕೊಡೋದು? ಎಂದು ಪ್ರಶ್ನಿಸಿರುವ ಅವರು, ಅವಿಭಕ್ತ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಿದ ರೀತಿ ಅವೈಜ್ಞಾನಿಕವಾಗಿದೆ. ಕೆಲವು ಮನೆಗಳಲ್ಲಿ ಮೂರು – ನಾಲ್ಕು ಕುಟುಂಬಗಳು ವಾಸವಿರುತ್ತವೆ. ಅಂತಹಾ ಮನೆಗಳು ಪ್ರವಾಹದಿಂದ ಬಿದ್ದುಹೋದರೆ ಪ್ರತಿ ಕುಟುಂಬಕ್ಕೂ ಪ್ರತ್ಯೇಕ ಮನೆ ಕಟ್ಟಿಸಿಕೊಡಯವಂತೆ ನಾನು ಈ ಹಿಂದೆಯೇ ಸರ್ಕಾರಕ್ಕೆ ಮನವಿ ಮಾಡಿದ್ದೆ. ಆದರೆ ಸರ್ಕಾರ ಅಂಥಾ ಕುಟುಂಬಕ್ಕೆ ಕೇವಲ ಒಂದು ಮನೆ ಕಟ್ಟಿಸಿಕೊಟ್ಟು ಕೈತೊಳೆದುಕೊಂಡಿದೆ. ಹೀಗಾದರೆ ಕುಟುಂಬದ ಉಳಿದವರು ಎಲ್ಲಿ ಹೋಗಬೇಕು? ಎಂದು ಕೇಳಿದ್ದಾರೆ.
ಮಲಪ್ರಭಾ ನದಿ ನೀರು ಊರೊಳಗೆ ನುಗ್ಗಿದ ಪರಿಣಾಮ ಬೆಳಗಾವಿ ಜಿಲ್ಲೆಯ ದುರ್ಗಾನಗರ ಮತ್ತು ಮಾರುತಿ ನಗರ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ಊರಿನ ಜನರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆಯಾದರೂ ಅಲ್ಲಿ ಅಗತ್ಯ ಸೌಲಭ್ಯ ನೀಡಿಲ್ಲ. ಹಾಗಾಗಿ ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿ ಸಂತ್ರಸ್ತರಿಗೆ ಬೇಳೆ ಕಾಳು, ಇತರೆ ಅಗತ್ಯ ವಸ್ತುಗಳನ್ನು ಕೂಡಲೇ ನೀಡಬೇಕು ಎಂದು ಸೂಚನೆ ನೀಡಿದ್ದೇನೆ.
ಬೆಳಗಾವಿ ಕೆಲವು ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾದಗಲೆಲ್ಲಾ ಊರೊಳಗೆ ನೀರು ನುಗ್ಗುತ್ತಿದೆ, ಇದನ್ನು ತಪ್ಪಿಸಲು ನಾಲೆಗೆ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಮತ್ತು ರೂ. 13 ಕೋಟಿ ವೆಚ್ಚದಲ್ಲಿ ತಡೆಗೋಡೆಯ ನೀಲನಕ್ಷೆಯನ್ನು ಸಿದ್ಧಪಡಿಸಿದ್ದಾರೆ. ತಕ್ಷಣ ನೀಲನಕ್ಷೆಯನ್ನು ಸರ್ಕಾರಕ್ಕೆ ಕಳುಹಿಸಿಕೊಡಿ, ತಡೆಗೋಡೆ ನಿರ್ಮಾಣ ಕುರಿತು ಸರ್ಕಾರದ ಜೊತೆ ಮಾತನಾಡುತ್ತೇನೆ. ಬೆಳಗಾವಿ – ಗೋವಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿದೆ. ಈ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಕೋರುತ್ತೇನೆ ಎಂದು ಅವರು ಹೇಳಿದ್ದಾರೆ.