ಇರಾನ್ ಮತ್ತು ಇಸ್ರೇಲ್ -ಅಮೆರಿಕ ನಡುವೆ ಯುದ್ಧ ಪ್ರಾರಂಭವಾಗಿದೆ. ಈ ಕುರಿತು ಕುರಿತು ಭಾರತ ಸರ್ಕಾರ ತನ್ನ ಮೊದಲ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಶಾಂತಿ ಕಾಪಾಡುವಂತೆ ಎಲ್ಲಾ ರಾಷ್ಟ್ರಗಳಿಗೆ ಮನವಿ ಮಾಡಿದೆ. ಇದರೊಂದಿಗೆ ಸಂಘರ್ಷದ ಹಾದಿಗಿಂತ ರಾಜತಾಂತ್ರಿಕ ಮಾತುಕತೆಗಳ ಮೂಲಕವೇ ಸಮಸ್ಯೆ ಬಗೆಹರಿಯಬೇಕು ಎಂದು ಭಾರತ ಸರ್ಕಾರ ತಿಳಿಸಿದೆ.

ನವದೆಹಲಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಎರಡು ಕಡೆಯವರು ಕೂಡಲೇ ಸೇನಾ ಕಾರ್ಯಾಚರಣೆಗಳನ್ನು ನಿಲ್ಲಿಸಿ ತಾಳ್ಮೆ ಹಾಗೂ ಶಾಂತಿ ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ. ಜೊತೆಗೆ ಯುದ್ಧದ ಸಂದರ್ಭದಲ್ಲಿ ಸಾಮಾನ್ಯ ನಾಗರಿಕರ ಸುರಕ್ಷತೆಗೆ ಮೊದಲ ಪ್ರಾಮುಖ್ಯತೆ ನೀಡಬೇಕು. ಯಾವುದೇ ಅಂತರಾಷ್ಟ್ರೀಯ ವಿವಾದಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯಿಂದ ಮಾತ್ರ ಪರಿಹರಿಸಲು ಸಾಧ್ಯ ಎಂದು ಭಾರತ ತಿಳಿಸಿದೆ. ಅಲ್ಲದೆ, ಪ್ರತಿಯೊಂದು ರಾಷ್ಟ್ರದ ಸಾರ್ವಭೌಮತ್ವವನ್ನು ಗೌರವಿಸುವುದು ಶಾಂತಿ ಸ್ಥಾಪನೆಗೆ ಅತಿ ಮುಖ್ಯ ಎಂದು ಎಚ್ಚರಿಸಿದೆ.

ಇರಾನ್ ಮತ್ತು ಇಸ್ರೇಲ್ ದೇಶಗಳಲ್ಲಿ ನೆಲೆಸಿರುವ ಸಾವಿರಾರು ಭಾರತೀಯರ ಸುರಕ್ಷತೆಯ ಬಗ್ಗೆ ಕೇಂದ್ರ ಸರ್ಕಾರವು ಹೆಚ್ಚಿನ ಗಮನ ನೀಡುತ್ತಿದೆ. ಅಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಸತತವಾಗಿ ಅನಿವಾಸಿ ಭಾರತೀಯರ ಸಂಪರ್ಕದಲ್ಲಿದ್ದು, ಸರ್ಕಾರವು ವಿಶೇಷ ಸಲಹಾ ಸೂಚನೆಯನ್ನು ಹೊರಡಿಸಿದ್ದು, ಭಾರತೀಯರು ಅತ್ಯಂತ ಜಾಗರೂಕರಾಗಿರಬೇಕು ಎಂದು ತಿಳಿಸಿದೆ.






