![](https://pratidhvani.com/wp-content/uploads/2025/02/WhatsApp-Image-2025-02-14-at-23.09.57-1024x565.jpeg)
ಕರ್ನಾಟಕ ಸರ್ಕಾರದ ವತಿಯಿಂದ ಆಯೋಜಿಸಿದ್ದ ಇನ್ವೆಸ್ಟ್ ಕರ್ನಾಟಕದಲ್ಲಿ ಸಾಕಷ್ಟು ಬಿಜೆಪಿ ನಾಯಕರೂ ಸೇರಿದಂತೆ ಹತ್ತು ಹಲವು ಗಣ್ಯರು ಭಾಗಿಯಾಗಿದ್ದರು. ಸುಮಾರು10 ಲಕ್ಷ ಕೋಟಿ ಹೂಡಿಕೆ ಆಗುವ ಮೂಲಕ ಸಾಕಷ್ಟು ಯಶಸ್ಸು ಗಳಿಸಿದೆ. ಆದರೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಾತ್ರ ಅರಮನೆ ಮೈದಾನದ ಕಡೆಗೆ ಸುಳಿಯಲೇ ಇಲ್ಲ. ಕೇಂದ್ರ ಸಚಿವ ರಾಜನಾಥ್ ಸಿಂಗ್, ವಿ ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿದಂತೆ ಕಾಂಗ್ರೆಸ್ ಹೊರತುಪಡಿಸಿದ ಸಾಕಷ್ಟು ನಾಯಕರು ಬಂದಿದ್ದರು. ಆದರೆ ಕುಮಾರಸ್ವಾಮಿ ಮಾತ್ರ ನಾಪತ್ತೆ.
![](https://pratidhvani.com/wp-content/uploads/2025/02/118152823-1024x576.webp)
ರಾಜ್ಯ ಸರ್ಕಾರ ನಮ್ಮನ್ನು ಯಾವುದಕ್ಕಾದರೂ ಕರೆದಿದ್ಯಾ..? ನಮ್ಮನ್ನು ಭೇಟಿ ಮಾಡುವ ಕೆಲಸ ಮಾಡಿದ್ಯಾ ಎಂದಿದ್ದರು ಕುಮಾರಸ್ವಾಮಿ. ಆದರೆ ಇನ್ವೆಸ್ಟ್ ಕರ್ನಾಟಕ 2025 ಕಾರ್ಯಕ್ರಮಕ್ಕೆ ಸ್ವತಃ ಕಾರ್ಯಕ್ರಮದ ರೂವಾರಿಯೂ ಆಗಿದ್ದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಆಹ್ವಾನ ನೀಡಿದ್ದರು. ದೆಹಲಿಯ ಕಚೇರಿಯಲ್ಲಿ ಭೇಟಿ ಮಾಡಿ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದರು. ಆದರೂ ಕುಮಾರಸ್ವಾಮಿ ಗೈರು ಹಾಜರು. ದೆಹಲಿಯಲ್ಲಿ ಸಾಕಷ್ಟು ಕೆಲಸ ಒತ್ತಡವೆಂದರೆ ಅದೂ ಇಲ್ಲ. ಬೆಂಗಳೂರಿನಲ್ಲೇ ಇದ್ದರು, ಬಂಡವಾಳ ಹೂಡಿಕೆ ಸಮಾವೇಶದ ಕಡೆಗೆ ಬರುವ ಮನಸ್ಸು ಮಾಡಲಿಲ್ಲ.
![](https://pratidhvani.com/wp-content/uploads/2025/02/Shobha-Karandlaje-in-Invest-Karnataka-2025.avif)
ಖಾಸಗಿ ಸುದ್ದಿ ವಾಹಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ, ಕೂಗಳತೆ ದೂರಲ್ಲಿದ್ದ ಅರಮನೆ ಮೈದಾನಕ್ಕೆ ಯಾಕೆ ಬರಲಿಲ್ಲ ಅನ್ನೋದಕ್ಕೆ ಸ್ವತಃ ಕುಮಾರಸ್ವಾಮಿಯೇ ಉತ್ತರ ಕೊಡಬೇಕಿದೆ. ನಮ್ಮನ್ನು ಯಾರು ಕರೆದಿಲ್ಲ, ಇಲ್ಲೀವರೆಗೂ ನಮ್ಮನ್ನು ಯಾರು ಬಂದು ಭೇಟಿ ಮಾಡಿಲ್ಲ ಅನ್ನೋ ಮಾತನ್ನು ಮತ್ತೊಮ್ಮೆ ಉಚ್ಛಾರಣೆ ಮಾಡದಂತೆ ಮಾಡಿಕೊಂಡರು. ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರದ ನಡುವೆ ಸಮನ್ವಯತೆ ಇದ್ದಾಗ ಅಭಿವೃದ್ಧಿ ವೇಗ ಪಡೆಯುತ್ತದೆ. ಆದರೆ ಈ ರೀತಿಯ ಕಾರ್ಯಕ್ರಮಗಳಿಗೆ ಆಹ್ವಾನ ಮಾಡಿದರೂ ಕೇಂದ್ರ ಸಚಿವರು ಗೈರು ಹಾಜರಾದರೆ ಹೊಣೆ ಯಾರು ಎನ್ನುವಂತಾಗಿದೆ.
![](https://pratidhvani.com/wp-content/uploads/2025/02/union-minister-hd-kumaraswamy-addresses-press-conference-1024x796.jpg)
ಕೇರಳ ಸಂಸದ ಶಶಿ ತರೂರ್ ಭಾಗಿಯಾಗಿ, ಹೂಡಿಕೆ ಸಮಾವೇಶವನ್ನು ಹಾಡಿ ಹೊಗಳಿದ್ರು. ಎಲ್ಲರಿಗೂ ನಮಸ್ಕಾರ ಎಂದು ಮಾತು ಶುರು ಮಾಡಿದ ಶಶಿ ತರೂರ್, ನನ್ನ ಸ್ನೇಹಿತರಿಗೆ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಶುರು ಮಾಡಿದರು. ಆ ಬಳಿಕ ಇನ್ವೆಸ್ಟ್ ಕರ್ನಾಟಕ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ನವೋದ್ಯಮಿಗಳು, ಸ್ಟಾರ್ಟ್ ಅಪ್ ಗಳು, ಸಮಾವೇಶದಲ್ಲಿ ಭಾಗಿಯಾಗಿದ್ರು. ಈ ಸಮಾವೇಶದಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚೆ ಆಗಿದೆ. ಕರ್ನಾಟಕ ಬಂಡವಾಳ ಹೂಡಿಕೆಗೆ ಉತ್ತಮ ಸ್ಥಾನದಲ್ಲಿದೆ ಅಂದ್ರು. ಕರ್ನಾಟಕ ಭಾರತದ ಆರ್ಥಿಕತೆಗೆ ತಮ್ಮದೇ ಕೊಡುಗೆ ನೀಡುತ್ತಿದೆ. ವಿಶ್ವ ಅನೇಕ ಸಮಸ್ಯೆಗಳನ್ನ ಎದುರಿಸುತ್ತಿದೆ. ನಮ್ಮ ದೇಶದಲ್ಲಿ ಸಮಸ್ಯೆಗಳು ಇವೆ. ಕೇಂದ್ರವೂ ಹೊಂದಾಣಿಕೆಯಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ರು.
![](https://pratidhvani.com/wp-content/uploads/2025/02/1322110-2c648af7-6d16-41e1-960a-345a338f6792-1024x646.webp)