ದೆಹಲಿಯಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರ ನೇತೃತ್ವದಲ್ಲಿ 2 ದಿನಗಳ ಮಹತ್ವದ ಸಭೆ ನಡೆಸಲಾಗ್ತಿದೆ. ಎಲ್ಲಾ ಮಾಧ್ಯಮಗಳಲ್ಲೂ ಕಾಂಗ್ರೆಸ್ ಸರ್ಕಾರದಲ್ಲಿ ಗೊಂದಲ ಉಂಟಾಗಿದ್ದು, ಹೈಕಮಾಂಡ್ ನಾಯಕರು ಎಲ್ಲರನ್ನೂ ಸಮಾಧಾನ ಮಾಡಲು ಕಸರತ್ತು ನಡೆಸಿದ್ದಾರೆ ಎನ್ನುವ ಬಗ್ಗೆ ವರದಿಗಳಾಗ್ತಿವೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಲೋಕಸಭಾ ಚುನಾವಣಾ ಕಸರತ್ತು ಶುರು ಮಾಡಿದೆ ಅನ್ನೋ ಸಂದೇಶಗಳು ಕೆಂಪುಕೋಟೆಯ ಅಂಗಳದಿಂದ ಹೊರ ಬಂದಿದೆ. ಹಾಲಿ ಸಚಿವರು ಹಾಗು ಸೋಲುಂಡಿರುವ ಕಾಂಗ್ರೆಸ್ ನಾಯಕರ ಸಭೆ ನಡೆಸಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 20 ಸ್ಥಾನ ಗೆಲ್ಲುವ ಬಗ್ಗೆ ಚರ್ಚೆ ಮಾಡಲಾಗಿದೆ.
ಇದನ್ನೂ ಓದಿ ; ಮೈತ್ರಿ ಬಿಟ್ಟು ದಹಲಿ ಬಗ್ಗೆ ಯೋಚಿಸಿ: ಪ್ರತಿಪಕ್ಷಗಳಿಗೆ ಅಮಿತ್ ಶಾ ತಿರುಗೇಟು
ಕಾಂಗ್ರೆಸ್ ಗೊಂದಲದ ಬಗ್ಗೆ ಚರ್ಚೆಯೇ ನಡೆದಿಲ್ವಾ..?
ಕಾಂಗ್ರೆಸ್ ಪಕ್ಷದ ಒಳಗೆ ಆಂತರಿಕವಾಗಿ ಭಿನ್ನಾಭಿಪ್ರಾಯವೇ ಇಲ್ಲ ಎಂದು ಹೇಳುವುದಕ್ಕೆ ಸಾಧ್ಯವೇ ಇಲ್ಲ. ಕಾಂಗ್ರೆಸ್ನಲ್ಲಿ ಅಧಿಕಾರದಲ್ಲಿ ಹಸ್ತಕ್ಷೇಪ, ಅಧಿಕಾರಿಗಳ ಮೇಲೆ ಹಿಡಿತ ಸೇರಿದಂತೆ ಸಾಕಷ್ಟು ಆಡಳಿತಾತ್ಮಕ ಹಾಗು ಅಧಿಕಾರಕ್ಕಾಗಿ ಪೈಪೋಟಿ ನಡೆಯುತ್ತಿದೆ. ಈ ಬಗ್ಗೆಯೂ ಕಾಂಗ್ರೆಸ್ ಹೈಕಮಾಂಡ್ ಪರೋಕ್ಷವಾಗಿ ರಾಜ್ಯ ನಾಯಕರುಗಳಿಗೆ ಎಚ್ಚರಿಕೆ ನೀಡಿದ್ದು, ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ನಿಮ್ಮ ಆಂತರಿಕ ಕಚ್ಚಾಟ ಅಡ್ಡಿಯಾಗಬಾರದು, ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಹೇಗೆ ಒಗ್ಗಟ್ಟಿನ ಮಂತ್ರ ಪಠಿಸಿದ್ರೋ ಅದೇ ರೀತಿಯಲ್ಲಿ ಲೋಕಸಭಾ ಚುನಾವಣೆ ನಡೆಯಬೇಕು. ಕಾಂಗ್ರೆಸ್ಗೆ ಬಲ ಎಂದರೆ ಅದು ಕರ್ನಾಟಕ, ಅದನ್ನು ಉಳಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗ್ತಿದೆ.

ಕಾಂಗ್ರೆಸ್ನಲ್ಲಿ ಕಚ್ಚಾಟ.. ಆಂತರಿಕ ಭಿನ್ನಮತ.. ನಿರ್ಲಕ್ಷ್ಯ..
ಇಂದು 76ನೇ ವರ್ಷಕ್ಕೆ ಕಾಲಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಳೆದ ವರ್ಷ ಇದೇ ದಿನ ದಾವಣೆಗೆರೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ಮೂಲಕ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದರು. ಆಗಲೂ ಕಾಂಗ್ರೆಸ್ನಲ್ಲಿ ಭಿನ್ನಮತ ಜೋರಾಗಿದೆ. ಸಿದ್ದರಾಮಯ್ಯ ಬಣ ಡಿ.ಕೆ ಶಿವಕುಮಾರ್ ಬಣವನ್ನು ಹೊರಗಿಟ್ಟು ದೊಡ್ಡ ಕಾರ್ಯಕ್ರಮ ಮಾಡ್ತಿದೆ ಎಂಬೆಲ್ಲಾ ಸುದ್ದಿಯಾಗಿತ್ತು. ಭಾರತ್ ಜೋಡೋ ಯಾತ್ರೆ ವೇಳೆಯಲ್ಲೂ ರಾಹುಲ್ ಗಾಂಧಿ ಇಬ್ಬರನ್ನು ಒತ್ತಾಯ ಪೂರ್ವಕವಾಗಿ ಆಲಂಗಿಸುವಂತೆ ನಾಟಕ ಮಾಡಿಸಿದ್ರು ಎನ್ನಲಾಗಿತ್ತು. ಇನ್ನು ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದೆಲ್ಲಾ ಮಾಧ್ಯಮಗಳಲ್ಲಿ ಚರ್ಚೆಯಾಯ್ತು. ಅಂತಿಮವಾಗಿ ಚುನಾವಣಾ ಪ್ರಚಾರದ ವೇಳೆಯಲ್ಲೂ ಇಬ್ಬರು ಪ್ರತ್ಯೇಕ ಬಸ್ ಪ್ರವಾಸ ಮಾಡ್ತಿದ್ದಾರೆ, ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ಪರಸ್ಪರ ಸೋಲಿಸುವುದಕ್ಕೆ ಸಂಚು ಮಾಡ್ತಿದ್ದಾರೆ ಎನ್ನಲಾಯ್ತು. ಆದರೆ ಎಲ್ಲದ್ದಕ್ಕೂ ಫಲಿತಾಂಶ ಉತ್ತರ ಕೊಟ್ಟುಬಿಡ್ತು..
ಕಾಂಗ್ರೆಸ್ ಕಿತ್ತಾಟವನ್ನು ವಿಪಕ್ಷಗಳು ನಿರ್ಲಕ್ಷ್ಯ ಮಾಡಿದ್ರೆ ಆಪತ್ತು..!

ಕಳೆದ ಒಂದು ವರ್ಷದಲ್ಲಿ ಮಾಧ್ಯಮಗಳಲ್ಲಿ ಏನೆಲ್ಲಾ ಚರ್ಚೆಯಾಯ್ತು, ಕಾಂಗ್ರೆಸ್ ಹೇಗೆ ಒಗ್ಗಟ್ಟಿನಿಂದ ಚುನಾವಣೆ ಗೆದ್ದಿದೆ ಅನ್ನೋದನ್ನು ನೋಡಿದಾಗ ವಿರೋಧ ಪಕ್ಷಗಳಾದ ಬಿಜೆಪಿ ಹಾಗು ಜೆಡಿಎಸ್ ಎಚ್ಚೆತ್ತುಕೊಳ್ಳಬೇಕಿದೆ. ಕಾಂಗ್ರೆಸ್ನಲ್ಲಿ ಕಚ್ಚಾಟ, ಗೊಂದಲ ಎನ್ನುವುದನ್ನೇ ನೋಡಿಕೊಂಡು ಕಾಲಹರಣ ಮಾಡುತ್ತಿದ್ದರೆ ಪ್ರಯೋಜನವಿಲ್ಲ. ದೆಹಲಿಯಲ್ಲಿ ಗೊಂದಲದ ಸಭೆ ಎನ್ನುವುದಕ್ಕಿಂತ ಮುಂದಿನ ಲೋಕಸಭಾ ಚುನಾವಣಾ ಕಾರ್ಯತಂತ್ರ ಎನ್ನುವುದನ್ನು ಮನಗಾಣಬೇಕು. ಈ ಬಾರಿ 5 ಗ್ಯಾರಂಟಿ ಯೋಜನೆಗಳ ಲಾಭ ಸರ್ವೇ ಸಾಮಾನ್ಯವಾಗಿ ಕಾಂಗ್ರೆಸ್ಗೆ ಲಾಭ ತಂದುಕೊಡುವ ಸಾಧ್ಯತೆಗಳು ಹೆಚ್ಚಾಗಿವೆ. ಆದರೂ ಕೆಲವೊಂದಿಷ್ಟು ವಿರೋಧ ಮತಗಳು ಯಾರ ಪಾಲಾಗುತ್ತವೆ ಎನ್ನುವುದರ ಮೇಲೆ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ ನಿರ್ಧಾರ ಆಗಲಿದೆ.
ಕೃಷ್ಣಮಣಿ