ಕರ್ನಾಟಕದಲ್ಲಿ ಭಾರೀ ಚರ್ಚೆಗೆ ಗ್ರಾಸ ಆಗಿರುವ ವಿಚಾರ ಮುಂದಿನ ವಿಧಾನಸಭಾ ಚುನಾವಣೆ ಬಳಿಕ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಷಿಯನ್ನು ಸಿಎಂ ಮಾಡಲು RSS ಮುಂದಾಗಿದೆ ಎನ್ನುವ ಹೇಳಿಕೆ. ಕುಮಾರಸ್ವಾಮಿಯ ಈ ಹೇಳಿಕೆಗೆ ಕಾರಣ ಪ್ರಹ್ಲಾದ್ ಜೋಷಿ, ಅವರು ಪಂಚರತ್ನ ಯಾತ್ರೆಯನ್ನು ನವಗ್ರಹ ಯಾತ್ರೆ ಎಂದು ಹೇಳಿಕೆ ನೀಡಿದ್ದು, ಅಷ್ಟೇ ಅಲ್ಲದೆ ಆ ನವಗ್ರಹಗಳಲ್ಲಿ ದೇವೇಗೌಡರೂ ಒಂದು ಗ್ರಹ ಎಂದಿದ್ದು ಕುಮಾರಸ್ವಾಮಿಯನ್ನು ಕೆರಳುವಂತೆ ಮಾಡಿತ್ತು. ಆ ಬಳಿಕ ಇಡೀ ಬ್ರಾಹ್ಮಣ ಸಮುದಾಯವನ್ನು ಟೀಕಿಸಿದ್ದಾರೆ ಎನ್ನುವ ಮಟ್ಟಕ್ಕೂ ಚರ್ಚೆ ಆಗಿದೆ. ಆದರೆ ಕುಮಾರಸ್ವಾಮಿ ಮಾತ್ರ ನಾನು ವೈಯಕ್ತಿಕವಾಗಿ ಟೀಕೆ ಮಾಡಿದ್ದೇನೆ. ವ್ಯಕ್ತಿಗತವಾಗಿ ಟೀಕೆ ಮಾಡಿರುವುದನ್ನು ನಾನು ಒಪ್ಪಿಕೊಳ್ತೇನೆ. ಆದರೆ ಸಮುದಾಯವನ್ನು ಟೀಕಿಸುವ ಕೆಲಸ ಮಾಡಿಲ್ಲ. ನಾನು ಆದಿಶಂಕರಾಚಾರ್ಯರು, ಶೃಂಗೇರಿ ಗುರುಗಳ ಫೋಟೋ ಇಟ್ಟುಕೊಂಡು ಪೂಜಿಸುತ್ತೇನೆ. ಗಾಂಧೀಜಿ ಹಾಗು ಶಿವಾಜಿಯನ್ನು ಕೊಂದವರ ಸಮುದಾಯ ಎಂದು ಹೇಳಿದ್ದೇನೆ. ಇದರಲ್ಲಿ ಯಾವುದೇ ಸುಳ್ಳು ಇಲ್ಲ. ಸಮುದಾಯವನ್ನು ನೋಯಿಸುವ ಉದ್ದೇಶವಿಲ್ಲ. ಮುಂದೆ ಅನಾಹುತದ ಬಗ್ಗೆ ಜನರಿಗೆ ಜಾಗೃತಿ ಮಾಡುವ ಕೆಲಸ ಮಾಡಿದ್ದೇನೆ ಅಷ್ಟೆ ಎನ್ನುವ ಮೂಲಕ
ಪ್ರಹ್ಲಾದ್ ಜೋಷಿ ಸಿಎಂ ಆಗುವ ಭಯ ಯಾಕೆ..?
ಕುಮಾರಸ್ವಾಮಿ ಯಾರು ಬೇಕಿದ್ದರೂ ಸಿಎಂ ಆಗಬಹುದು, ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಅವಕಾಶವಿದೆ. ಆದರೆ ಪ್ರಹ್ಲಾದ್ ಜೋಷಿ ಅವರು ರಾಜಕೀಯಕ್ಕೇ ಬಂದಿದ್ದೇ ಈದ್ಗಾ ಮೈದಾನದ ಹೋರಾಟದ ಮೂಲಕ. ಈಗಾಗಲೇ ಕಳೆದ ಮೂರೂವರೆ ವರ್ಷದ ಹಿಂದಿನಿಂದ ರಾಜ್ಯದಲ್ಲಿ ಏನು ನಡೆಯುತ್ತಿದೆ. ಒಂದು ವೇಳೆ ಪ್ರಹ್ಲಾದ್ ಜೋಷಿ ಏನಾದರೂ ಮುಖ್ಯಮಂತ್ರಿ ಆದರೆ ರಾಜ್ಯದ ಪರಿಸ್ಥಿತಿ ಎಲ್ಲಿಗೆ ತಲುಪುತ್ತದೆ ಎನ್ನುವುದು ನನ್ನ ಆತಂಕಕ್ಕೆ ಕಾರಣ. ಅದನ್ನು ಬಿಟ್ಟರೆ ಯಾರು ಬೇಕಾದರೂ ಮುಖ್ಯಮಂತ್ರಿ ಆಗಲಿ ಎಂದಿದ್ದಾರೆ. ಅಂದರೆ ಈಗಾಗಲೇ ಹಿಂದೂ ಮುಸ್ಲಿಂ ಅನ್ನೋ ದ್ವೇಷದ ರಾಜಕಾರಣ ರಾಜ್ಯದಲ್ಲಿ ಮುಗಿಲು ಮುಟ್ಟಿದೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಸರ್ಕಾರ ಇದ್ದರೂ ದ್ವೇಷದ ಕೆಲಸ ನಡೆಯುತ್ತಿದೆ. ಈಗಾಗಲೇ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಮತ್ತಷ್ಟು ಬದಲಾವಣೆ ಕಟ್ಟಿಟ್ಟ ಬುತ್ತಿ ಎನ್ನುವ ಮಾಹಿತಿ ರವಾನಿಸಿದ್ದಾರೆ.

ಜಗದೀಶ್ ಶೆಟ್ಟರ್ ಅವರನ್ನು ವೇದಿಕೆ ಕೂರಿಸಲಿಲ್ಲ ಯಾಕೆ..!
ಲಿಂಗಾಯತ ಸಮುದಾಯದ ಬಿ.ಎಸ್ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿದ ಬಳಿಕ ಬಿ.ವೈ ವಿಜಯೇಂದ್ರ ಅವರನ್ನೂ ಪಕ್ಷದ ಕಾರ್ಯ ಕಲಾಪಗಳಿಂದ ದೂರ ಇಡಲಾಗಿದೆ. ಇದರ ನಡುವೆ ಮತ್ತೋರ್ವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಪಕ್ಷದಲ್ಲಿ ಸೈಡ್ಲೈನ್ ಮಾಡುವ ಕೆಲಸ ಆಗಿದೆ ಎಂದಿದ್ದಾರೆ. ಇದಕ್ಕೆ ಸಾಕ್ಷ್ಯ ನೀಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕಳೆದ ತಿಂಗಳು ಜನವರಿ 12ರಂದು ಧಾರವಾಡದಲ್ಲಿ ಯುವ ಸಮ್ಮೇಳನ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಅದೇ ಕ್ಷೇತ್ರದ ಓರ್ವ ಬಿಜೆಪಿ ಶಾಸಕ, ಮಾಜಿ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಅವರನ್ನು ವೇದಿಕೆ ಮೇಲೆ ಹತ್ತಿಸಲಿಲ್ಲ ಯಾಕೆ..? ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಪಕ್ಷದಲ್ಲಿ ಬ್ರಾಹ್ಮಣ ಸಮುದಾಯದ ನಾಯಕರ ನಿರ್ಧಾರಗಳು ಮೇಲುಗೈ ಸಾಧಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಉತ್ತಮ ಸೂಚನೆ ಅಲ್ಲ ಎನ್ನುವುದನ್ನು ಬಿಡಿಸಿಟ್ಟಿದ್ದಾರೆ.
ಲಿಂಗಾಯತ ಸಮುದಾಯವನ್ನು ಬಿಜೆಪಿ ಬಳಸಿಕೊಳ್ತಿದ್ಯಾ..?
ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರುವುದಕ್ಕೆ ಪ್ರಮುಖ ಕಾರಣ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಲಿಂಗಾಯತ ಸಮುದಾಯ ಬಿಜೆಪಿಯನ್ನು ಬೆಂಬಲಿಸಿದ್ದು. ಆದರೆ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಬದಲಾವಣೆ ನೋಡಿದಾಗ ಲಿಂಗಾಯತ ಸಮುದಾಯದ ನಾಯಕರಿಗೆ ಬಿಜೆಪಿಯಲ್ಲಿ ಸ್ಥಾನಮಾನಗಳು ಕುಸಿಯುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಆಗಿದ್ದರೂ ನಿರ್ಧಾರಗಳು ಬೇರೆ ಕಡೆಯಿಂದ ಆಗುತ್ತಿವೆ ಎನ್ನುವ ಮಾತುಗಳಿವೆ. ದೆಹಲಿಯಲ್ಲಿ ಪ್ರಹ್ಲಾದ್ ಜೋಷಿಯನ್ನು ಮುಖ್ಯಮಂತ್ರಿ ಮಾಡುವ ಚರ್ಚೆಗಳು ನಡೆದಿರುವ ಕಾರಣದಿಂದಲೇ ಕುಮಾರಸ್ವಾಮಿ ಲಿಂಗಾಯತ ಹಾಗು ಒಕ್ಕಲಿಗ ಸಮುದಾಯಗಳಿಗೆ ಸಂದೇಶ ಕಳುಹಿಸುವ ಕೆಲಸ ಮಾಡಿದ್ದಾರೆ. ಬಿಜೆಪಿಗೆ ಮತ ಹಾಕಿದ್ರೆ ಮತ್ತೆ ರಾಜ್ಯದಲ್ಲಿ ಹಿಂದೂ ಮುಸ್ಲಿಂ ಸೇರಿದಂತೆ ಧರ್ಮ ಸಂಘರ್ಷ ಹಾಗು ಜಾತಿ ಜಾತಿಗಳ ನಡುವೆ ದ್ವೇಷ ಭಾವನೆ ಹೆಚ್ಚುವಂತೆ ಮಾಡುತ್ತಾರೆ. ಈ ಬಗ್ಗೆ ಎಚ್ಚರ ಎನ್ನುವುದು ಕುಮಾರಸ್ವಾಮಿ ಮಾತಿನ ಸಾರಾಂಶ ಆಗಿದೆ. ಈ ಮಾತಿಗೆ ಬಿಜೆಪಿ ನಿಜವಾಗಲೂ ಗಾಬರಿಗೆ ಒಳಗಾದಂತೆ ಕಾಣಿಸುತ್ತಿದ್ದು, ಕುಮಾರಸ್ವಾಮಿ ಮಾತು ಸರಿಯಲ್ಲ ಎಂದು ಒಗ್ಗಟ್ಟಿನ ಪ್ರಯತ್ನ ಮಾಡಿದ್ದಾರೆ.
