ಭಾರತದ ಇತಿಹಾಸದಲ್ಲಿ ಮೋದಿಯಷ್ಟು ಅಸಮರ್ಥ ಪ್ರಧಾನಿ ಮತ್ತೊಬ್ಬರಿಲ್ಲ. ಮೋದಿ ಆಡಳಿತ ಎಲ್ಲ ರಂಗದಲ್ಲೂ ವಿಫಲವಾಗಿದೆ. ಅಗತ್ಯ ವಸ್ತುಗಳ ಬೇಲೆ ಏರಿಕೆಯಂತೂ ದೇಶದ ಬಡವರು, ಕೂಲಿ ಕಾರ್ಮಿಕರು, ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರ ಬದುಕನ್ನು ನರಕ ಮಾಡಿದೆ. ಮೋದಿ ತನ್ನೆಲ್ಲ ವಿಫಲತೆಗಳಿಗೆ ಹಿಂದಿನ ಆಡತಿಗಾರರನ್ನು ಹಳಿಯುವ ಅತಿ ಕೆಟ್ಟ ಚಾಳಿ ಹುಟ್ಟುಹಾಕಿದ್ದಾರೆ. ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಕಳೆದ ಏಳು ವರ್ಷಗಳಲ್ಲಿ ಇಂಧನಗಳ ಬೆಲೆ ಅನಿಯಂತ್ರಿತವಾಗಿ ಏರಿಕೆಯಾಗುತ್ತಿದೆ. ಹಿಂದೆ ಒಂದಷ್ಟು ತೈಲ ಬೆಲೆ ಏರಿಕೆಯಾದಾಗಲೆಲ್ಲ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಹಾದಿಬೀದಿ ರಂಪ ಮಾಡಿದ್ದನ್ನು ನಾವು ನೋಡಿದ್ದೇವೆ. ಹಿಂದಿನ ಯುಪಿಎ ಸರ್ಕಾರವು ಕಚ್ಚಾ ತೈಲಗಳ ನಿರಂತರ ಬೆಲೆ ಏರಿಕೆ ಆಘಾತಗಳಿಂದ ಗ್ರಾಹಕರನ್ನು ವಿಯೋಜಿಸಲು ಬಿಡುಗಡೆ ಮಾಡಿದ ತೈಲ ಬಾಂಡ್‌ಗಳು ಇಂದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಇಂಧನದ ಮೇಲಿನ ತೆರಿಗೆ ಪ್ರಮಾಣ ತಗ್ಗಿಸಲು ಮತ್ತು ಅಗ್ಗದ ದರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸಕ್ರಿಯಗೊಳಿಸಲು ಮೋದಿ ನೇತ್ರತ್ವದ ಒಕ್ಕೂಟ ಸರಕಾರವು ಹಿಂದಿನ ಸರಕಾರ ವಿತರಿಸಿದ ತೈಲ ಬಾಂಡ್ ಕಾರಣವೆಂದು ತನ್ನ ಅಸಾಹಯತೆ ಮತ್ತು ಅಸಮರ್ಥತೆ ತೋಡಿಕೊಂಡಿದೆ. ಈ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.
ಸಾಮಾನ್ಯ ಜನರಿಗೆ ಈ ತೈಲ ಬಾಂಡ್ ಗಳೆಂದರೇನೆಂದು ತಿಳಿದಿಲ್ಲ. ಮೊದಲು ನಾವು ಈ ತೈಲ ಬಾಂಡ್ ಗಳು ಎಂದರೇನು ತಿಳಿದುಕೊಳ್ಳಬೇಕು. ಅನಿಯಂತ್ರಿತ ಕಚ್ಚಾ ತೈಲ ಬೆಲೆ ಏರಿಕೆಯಿಂದ ಗ್ರಾಹಕರನ್ನು ರಕ್ಷಿಸಲು ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಅನುಭವಿಸುವ ನಷ್ಟವನ್ನು ಸರಿದೂಗಿಸಲು ಅಂದಿನ ಡಾ. ಸಿಂಗ್ ನೇತ್ರತ್ವದ ಯುಪಿಎ ಸರಕಾರ 2005 ರಿಂದ 2010 ರ ಅವಧಿಯಲ್ಲಿ ತೈಲ ಬಾಂಡ್‌ಗಳನ್ನು ವಿತರಿಸಿತ್ತು. ಈ ತೈಲ ಬಾಂಡ್‌ಗಳು ನೀಡಲು ಮುಖ್ಯ ಕಾರಣ, ಒಕ್ಕೂಟ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿರ್ವಹಿಸುವ ಅಥವಾ ನಿಗದಿಪಡಿಸುವ ಸಮಯದಲ್ಲಿ ನಗದು ಬದಲಾಗಿ ಈ ಬಾಂಡ್‌ಗಳನ್ನು ತೈಲ ಮಾರುಕಟ್ಟೆ ಕಂಪನಿಗಳಿಗೆ (ಒಎಂಸಿ) ನೀಡಲಾಗಿತ್ತು. ಗ್ರಾಹಕರನ್ನು ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆಯ ಆಘಾತದಿಂದ ರಕ್ಷಿಸಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸರ್ಕಾರವು ನಿಗದಿಪಡಿಸುವ ಪದ್ದತಿ ಇದೆ.
ಉದಾಹರಣೆಗೆ, ಹಿಂದೆ ಕಚ್ಚಾ ತೈಲ ಬೆಲೆಗಳು ಅಧಿಕವಾಗಿದ್ದರೆ, ತೈಲ ಸಂಸ್ಕರಣೆ ಮತ್ತು ಮಾರಾಟ ಕಂಪನಿಗಳು ತಾಂತ್ರಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ನಷ್ಟಕ್ಕೆ ಗುರಿಯಾಗುತ್ತಿದ್ದವು. ಆದಾಗ್ಯೂ, ಸರ್ಕಾರವು ತೈಲ ಕಂಪನಿಗಳಿಗೆ ದೀರ್ಘಾವಧಿಯ ಬಾಂಡ್‌ಗಳನ್ನು ನೀಡುವುದರ ಮೂಲಕ ಅವುಗಳನ್ನು ಸಾಮಾನ್ಯವಾಗಿ 15-20 ವರ್ಷಗಳವರೆಗೆ ಮರುಪಾವತಿ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಹೆಚ್ಚಿದ ಕಚ್ಚಾ ತೈಲದ ಬೆಲೆಗಳು ಮತ್ತು 2008 ರ ಆರ್ಥಿಕ ಹಿಂಜರಿತದಿಂದ ಸರ್ಕಾರದ ಮೇಲೆ ನಂಬಿಕೆಯ ಒತ್ತಡ ಹೆಚ್ಚಾಗಿತ್ತು. ಬಾಂಡ್‌ಗಳ ರೂಪದಲ್ಲಿ ಬಂಡವಾಳವನ್ನು ಹೆಚ್ಚಿಸುವ ಮೂಲಕ, ಈ ಪಾವತಿಗಳನ್ನು ತೈಲ ಬೆಲೆಗಳಲ್ಲಿ ಹೆಚ್ಚಿನ ಏರಿಕೆ ಆಗದಂತೆ ನೋಡಿಕೊಂಡು ಮುಂದೂಡಲ್ಪಟ್ಟ ರೀತಿಯಲ್ಲಿ ಪಾವತಿಸುತ್ತಾ ಗ್ರಾಹಕರನ್ನು ಬೆಲೆ ಏರಿಕೆಯಿಂದ ರಕ್ಷಿಸಬಹುದಿತ್ತು. ಈ ಬಾಂಡ್‌ಗಳು ಮೂಲಭೂತವಾಗಿ, ಸರ್ಕಾರವು ತೈಲ ಮಾರುಕಟ್ಟೆ ಕಂಪನಿಗಳಿಗೆ ನೀಡಬೇಕಾದ ಸಬ್ಸಿಡಿಗಳ ಮುಂದೂಡಲ್ಪಟ್ಟ ಪಾವತಿಯ ಮುಚ್ಚಳಿಕೆ ಪತ್ರಗಳಂತೆ.
ಸರ್ಕಾರವು ಈ ಕಂಪನಿಗಳಿಗೆ ಮುಂಚಿತವಾಗಿ ಸಬ್ಸಿಡಿ ನೀಡದ ಕಾರಣ, ಅಸಲು ಅಥವಾ ಬಡ್ಡಿ ಘಟಕಗಳ ಮರುಪಾವತಿ ನಡೆಯುವವರೆಗೂ ಈ ಪಾವತಿಗಳು ಬಜೆಟ್ ದಾಖಲೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈ ಆಯವ್ಯಯದಿಂದ ಹೊರಗಿಲ್ಪಟ್ಟ ಐಟಂಗಳನ್ನು ಕೆಲವೊಮ್ಮೆ ತೈಲ ಕಂಪನಿಗಳ ಮರುಪಡೆಯುವಿಕೆ ಎಂದು ವಿವರಿಸಲಾಗುತ್ತದೆ. ಆದ್ದರಿಂದ, ವಾರ್ಷಿಕ ಬಜೆಟ್ ಸಮಯದಲ್ಲಿ ಬಹಿರಂಗಪಡಿಸಿದ ಹಣಕಾಸಿನ ಕೊರತೆಯ ಸಂಖ್ಯೆಯಲ್ಲಿ ಇದನ್ನು ನಮೂದಿಸಲಾಗುವುದಿಲ್ಲ. ಈ ಬಾಂಡ್‌ಗಳ ಅಸಲು ಮತ್ತು ಬಡ್ಡಿಯ ಮರುಪಾವತಿಯು ಪ್ರಾರಂಭವಾದಾಗ ಮಾತ್ರ ಹಣಕಾಸಿನ ಕೊರತೆಯು ಇವುಗಳಿಗೆ ಲೆಕ್ಕವಿಡಲು ಆರಂಭಿಸಲಾಗುತ್ತದೆ. ಇದಲ್ಲದೆ, ತೈಲ ಬಾಂಡ್‌ಗಳು ಶಾಸನಬದ್ಧ ಲಿಕ್ವಿಡಿಟಿ ಅನುಪಾತ (ಎಸ್‌ಎಲ್‌ಆರ್) ಸೆಕ್ಯುರಿಟಿಗಳಾಗಿ ಅರ್ಹತೆ ಪಡೆಯುವುದಿಲ್ಲ, ಇತರ ಸರ್ಕಾರಿ ಸೆಕ್ಯೂರಿಟಿಗಳಿಗೆ ಹೋಲಿಸಿದರೆ ಅವು ಕಡಿಮೆ ಲಿಕ್ವಿಡಿಟಿ ಹೊಂದಿರುತ್ತವೆ.
ಕಡಿಮೆ ಮರುಪಡೆಯುವಿಕೆ ಎಂದರೆ ಕಡಿಮೆ ವೆಚ್ಚದಲ್ಲಿ ಇಂಧನವನ್ನು ಮಾರಾಟ ಮಾಡಲು ರಾಜ್ಯ ನಡೆಸುವ ಸಂಸ್ಕರಣಾಗಾರರು ಮುಂದಿಟ್ಟು ಪಡೆಯುವ ಆದಾಯವಾಗಿದೆ. ಇದು ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಕೃತಕವಾಗಿ ನಿಯಂತ್ರಣದಲ್ಲಿರಿಸುತ್ತದೆ. 2005 ಮತ್ತು 2009 ರ ನಡುವೆ ಅಂದಿನ ಸರ್ಕಾರವು 1.4 ಲಕ್ಷ ಕೋಟಿ ಮೌಲ್ಯದ ತೈಲ ಬಾಂಡ್‌ಗಳನ್ನು ವಿತರಿಸಿತ್ತು. 2.9 ಲಕ್ಷ ಕೋಟಿ ಮೊತ್ತದ ಮರುಪಾವತಿಗಾಗಿ ತೈಲ ಮಾರಾಟ ಕಂಪನಿಗಳ ನಷ್ಟವನ್ನು ಭಾಗಶಃ ಸರಿದೂಗಿಸಲು ಈ ವ್ಯವಸ್ಥೆ ಮಾಡಲಾಗಿತ್ತು. ಕಡಿಮೆ ಮರುಪಡೆಯುವಿಕೆ ಎಂದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲವನ್ನು ಖರೀದಿಸುವ ವೆಚ್ಚ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಅವನ್ನು ಮಾರಾಟ ಮಾಡುವ ಬೆಲೆಯ ನಡುವಿನ ವ್ಯತ್ಯಾಸವಾಗಿದೆ.
ಆರ್ಥಿಕ ಹಿಂಜರಿತದ ನಂತರ, ತೈಲ ಮಾರಾಟ ಕಂಪನಿಗಳು ದೊಡ್ಡ ಪ್ರಮಾಣದ ಅಂಡರ್ ರಿಕವರಿಯನ್ನು ಎದುರಿಸುತ್ತಿವೆ. ಇದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸುವ ಸಂದಿಗ್ಧತೆಗೆ ಸರ್ಕಾರವನ್ನು ಸಿಲುಕಿಸಿದೆ. ತೈಲ ಮಾರಾಟ ಕಂಪನಿಗಳ ಮೇಲಿನ ಒತ್ತಡವನ್ನು ತಗ್ಗಿಸಲು ತೈಲ ಬಾಂಡ್‌ಗಳನ್ನು ವಾಹಕಗಳಾಗಿ ಆಯ್ಕೆ ಮಾಡಿಕೊಂಡು ಬೆಲೆಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ.
ತೈಲ ಬೆಲೆಗಳನ್ನು ಅಂದಿನ ಸರಕಾರ ಅನಿಯಂತ್ರಿತಗೊಳಿಸಿದೆ. 2010 ರಲ್ಲಿ ತೈಲ ಬಾಂಡ್‌ಗಳನ್ನು ಸ್ಥಗಿತಗೊಳಿಸಿ ನಗದು ರೂಪದಲ್ಲಿ ಹಣ ಪಾವತಿಸಲಾಗುವುದು ಎಂದು ತೈಲ ಮಾರಾಟ ಕಂಪನಿಗಳಿಗೆ ಅಶ್ವಾಸನೆ ನೀಡಿ ಆ ಪ್ರಕಾರ ಘೋಷಣೆ ಮಾಡಲಾಗಿತ್ತು. ಜೂನ್ 2010 ರಲ್ಲಿ, ಪೆಟ್ರೋಲ್ ಬೆಲೆಗಳನ್ನು ಅನಿಯಂತ್ರಿತಗೊಳಿಸಲಾಯಿತು. ಇದು ಕಚ್ಚಾ ತೈಲದ ಮಾರುಕಟ್ಟೆಯ ಬೆಲೆಯನ್ನು ಪ್ರತಿಬಿಂದಿಸುತ್ತಿತ್ತು. ಸರ್ಕಾರವು ಅಕ್ಟೋಬರ್ 2014 ರಲ್ಲಿ ಡೀಸೆಲ್ ಬೆಲೆಯನ್ನು ಮುಕ್ತಗೊಳಿಸಿತು. ಆರಂಭದಲ್ಲಿ, ಸರಾಸರಿ ಜಾಗತಿಕ ಕಚ್ಚಾ ಬೆಲೆಗಳ ಆಧಾರದ ಮೇಲೆ ಹದಿನೈದು ದಿನಗಳಿಗೊಮ್ಮೆ ಬೆಲೆಗಳು ಬದಲಾಗುತ್ತಿದ್ದವು. ಜೂನ್ 2017 ರಲ್ಲಿ, ಭಾರತವು ಡೈನಾಮಿಕ್ ಇಂಧನ ಬೆಲೆ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು, ಅಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆ ದಿನನಿತ್ಯ ಏರಿಳಿತಗೊಳ್ಳಲಾರಂಭಿಸಿತು.
ತೈಲ ಬಾಂಡ್‌ಗಳು ಈಗ ಸುದ್ದಿಯಾಗಲು ಕಾರಣವೇನೆಂದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಗಸ್ಟ್ 16 ರಂದು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ನೀಡಿದ್ದ ತೈಲ ಬಾಂಡ್‌ಗಳಿಗಾಗಿ ನರೇಂದ್ರ ಮೋದಿ ಸರ್ಕಾರವು ತೈಲ ಮಾರಾಟ ಕಂಪನಿಗಳಿಗೆ ಹಳೆ ಬಾಕಿ ಪಾವತಿಸುತ್ತಿದೆ ಎಂದು ಹೇಳಿರುವದರಿಂದ. ನಿರ್ಮಲಾ ಸೀತಾರಾಮನ್ ಅವರು, 31 ಮಾರ್ಚ್, 2021 ರ ವೇಳೆಗೆ, ತೈಲ ಬಾಂಡಗಳ ಮೇಲಿನ 1.31 ಲಕ್ಷ ಕೋಟಿ ರೂ. ಬಾಕಿ ಮೊಬಲಗು ಮತ್ತು 37,340 ಕೋಟಿ ಬಡ್ಡಿಯನ್ನು ಈಗಿನ ಸರಕಾರ ಮರುಪಾವತಿಸಬೇಕಾಗಿದೆ ಎಂದು ಸಚಿವೆ ಹೇಳಿದ್ದಾರೆ.
ನಾವು ಹಿಂದಿನ ಸರ್ಕಾರದಿಂದ ಪಡೆದಿರುವ ಎಲ್ಲವನ್ನು ಪಟ್ಟಿ ಮಾಡಿ ಒಂದು ಶ್ವೇತಪತ್ರವನ್ನು 2014 ರಲ್ಲಿ ಬಿಡುಗಡೆ ಮಾಡಬೇಕಿತ್ತು. ಹಿಂದಿನ ಸರಕಾರವು ಬೆಲೆಗಳನ್ನು ಕಡಿಮೆ ಮಾಡಿತ್ತು ಆದರೆ ಆ ಹೊರೆವನ್ನು ಆಯಿಲ್ ಮಾರ್ಕೆಟಿಂಗ್ ಕಂಪನಿಗಳು (OMCs) ತೆಗೆದುಕೊಳ್ಳಬೇಕಿತ್ತು ಎಂದಿದ್ದಾರೆ ಸಚಿವೆ. ತೈಲ ಮಾರಾಟ ಕಂಪನಿಗಳಿಗೆ ತೈಲ ಬಾಂಡ್‌ಗಳ ಒಟ್ಟು ಬಾಕಿ ಪಾವತಿಗಳೆಂದರೆ ಕಳೆದ ಏಳು ವರ್ಷಗಳಲ್ಲಿ ತೈಲ ಬಾಂಡ್‌ಗಳ ಮೇಲೆ ಸರಕಾರ ಇದುವರೆಗೆ 70,195.72 ಕೋಟಿ ರೂ. ಬಡ್ಡಿ ಕಟ್ಟಿದೆ. 1.34 ಲಕ್ಷ ಕೋಟಿ ಮೌಲ್ಯದ ತೈಲ ಬಾಂಡ್‌ಗಳಲ್ಲಿ ರೂ. 3,500 ಕೋಟಿ ಮೊಬಲಗು ಪಾವತಿಸಲಾಗಿದೆ, ಮತ್ತು ಉಳಿದ 1.3 ಲಕ್ಷ ಕೋಟಿ ರೂ. 2025-26 ರವರೆಗೆ ಮರುಪಾವತಿಸಬೇಕಿದೆ ಎನ್ನಲಾಗುತ್ತಿದೆ. ಹಾಗಾದರೆ, ಕೇವಲ ತೈಲ ಬಾಂಡ್ ಗಳ ಕಾರಣವೊಂದೇ ಇಂಧನ ಬೆಲೆಗಳ ಹೆಚ್ಚಳಕ್ಕೆ ಕಾರಣವಾಯಿತೆ ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ.
ತೆರಿಗೆ ಪ್ರಮಾಣವನ್ನ ತಗ್ಗಿಸಲು ಮತ್ತು ಅಗ್ಗದ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸಕ್ರಿಯಗೊಳಿಸಲು ಕೇಂದ್ರಕ್ಕೆ ಇದು ಕಾಲ್ತೊಡಕಾಗಿದೆ ಎಂದು ಈಗಿನ ಸರಕಾರ ಆರೋಪಿಸುತ್ತಿದೆ. ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ. 10,000 ಕೋಟಿಯನ್ನು ಮರುಪಾವತಿ ಮಾಡಬೇಕಿದೆ, 2023-24 ರಲ್ಲಿ ಇನ್ನೂ 31,150 ಕೋಟಿ, 2024-25ರಲ್ಲಿ ರೂ 52,860 ಕೋಟಿ, ಮತ್ತು 2025-26ರಲ್ಲಿ ರೂ 36,913 ಕೋಟಿಗಳನ್ನು ಮರುಪಾವತಿಸಬೇಕು.
ಸಂಚಿತ ಆಧಾರದಲ್ಲಿ ತೈಲ ಬಾಂಡ್ ಗಳ ಮೇಲಿನ ಮೊಬಲಗು ಮತ್ತು ಬಡ್ಡಿಗಳಿಗೆ ಸರಕಾರ ಇವತ್ತು ಸಂದಾಯ ಮಾಡುತ್ತಿರವ ಹಣವು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಅಬಕಾರಿ ಸುಂಕದಿಂದ ಸರಕಾರ ಸಂಗ್ರಹಿಸುವ ಮೊತ್ತಕ್ಕಿಂತ ಅತ್ಯಂತ ಕಡಿಮೆಯಾಗಿದೆ ಎನ್ನುತ್ತವೆ ಅಂಕಿಅಂಶಗಳು. ಉದಾಹರಣೆಗೆ, 2020-21ರಲ್ಲಿ ಇದು ಪೆಟ್ರೋಲಿಯಂ ಉತ್ಪನ್ನಗಳಿಂದ ಕೇಂದ್ರ ಅಬಕಾರಿ ಆದಾಯ 3.71 ಲಕ್ಷ ಕೋಟಿ ಸಂಗ್ರಹಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ತೈಲ ಬಾಂಡ್‌ಗಳ ಮೇಲಿನ ಬಡ್ಡಿ ಮತ್ತು ಮೊಬಲಗಳ ಮರು ಮಾವತಿ ಮಾಡಬೇಕಾಗಿರುವ ಹಣಕ್ಕಿಂತ ಸುಮಾರು ಮೂರು ಪಟ್ಟು ಅಂದರೆ 1.34 ಲಕ್ಷ ಕೋಟಿ ರೂ. ಹಣ ಸರಕಾರ ಇಂದನ ಮಾರಾಟದಿಂದ ಬರುವ ಅಬಕಾರಿ ಶುಲ್ಕಗಳಿಂದಲೇ ಪಡೆಯುತ್ತಿದೆ ಎನ್ನುತ್ತವೆ ಅಂಕಿಅಂಶಗಳು. ಇದು ಕೇವಲ ಹಿಂದಿನ ಸರ್ಕಾರದಿಂದ ತೈಲ ಮಾರಾಟ ಕಂಪನಿಗಳಿಗೆ ವಿತರಿಸಲಾದ ತೈಲ ಬಾಂಡ್‌ಗಳ ಮೇಲಿನ ಮರುಪಾವತಿಯಿಂದ ಮಾತ್ರ ಚಿಲ್ಲರೆ ಮಾರಾಟದ ಇಂಧನ ಬೆಲೆ ಹೆಚ್ಚುತ್ತಿದೆ ಎನ್ನುವುದು ಇಂದಿನ ಸರಕಾರದ ಆರೋಪ. ಅಂದರೆ, ಸಚಿವೆ ನಿರ್ಮಲಾ ಸೀತಾರಾಮನ್ ಸುಳ್ಳು ಹೇಳುತ್ತಿದ್ದಾರೆ ಮತ್ತು ಹಿಂದಿನ ಸರಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಅಂತಾಯ್ತು. ಇಂಧನಗಳ ಅನಿಯಂತ್ರಿತ ಬೆಲೆ ಹೆಚ್ಚಳಕ್ಕೆ ಮೋದಿ ಸರಕಾರ ಹೇರುತ್ತಿರುವ ಅತಿಯಾದ ತೆರಿಗೆಗಳು ಮತ್ತು ಆಗಾಗ ಏರುತ್ತಿರುವ ಕಚ್ಚಾ ತೈಲಗಳ ಅಲ್ಪ ಪ್ರಮಾಣದ ಬೆಲೆ ಏರಿಕೆಗಳು ಪ್ರಮುಖ ಕಾರಣಗಳಾಗಿವೆ ಎನ್ನಲಾಗುತ್ತಿದೆ.
ಪೆಟ್ರೋಲಿಯಂ ಉತ್ಪನ್ನಗಳಿಗೆ ಸರಕಾರ ತೆರಿಗೆ ವಿಧಿಸುವ ಕ್ರಮವನ್ನು ನಾವು ಗಮನಿಸಬೇಕಿದೆ. ಗ್ರಾಹಕರು ಪೆಟ್ರೋಲ್ ಪಂಪ್‌ನಲ್ಲಿ ಪಾವತಿಸುವ ಬೆಲೆಯ ಸುಮಾರು 60 ಪ್ರತಿಶತದಷ್ಟು ತೆರಿಗೆಗಳು ಮತ್ತು ಸುಂಕಗಳನ್ನು ಸರಕಾರ ನಿಗದಿಪಡಿಸುತ್ತಿದೆ. ಒಂದು ಲೀಟರ್ ಪೆಟ್ರೋಲ್ ಬೆಲೆಯು; ಮೂಲ ಬೆಲೆ, ಸರಕು, ಡೀಲರ್‌ಗಳಿಗೆ ವಿಧಿಸುವ ಬೆಲೆ (ಅಬಕಾರಿ ಸುಂಕ ಮತ್ತು ವ್ಯಾಟ್ ಹೊರತುಪಡಿಸಿ), ಕೇಂದ್ರ ಅಬಕಾರಿ ಸುಂಕ (ರಸ್ತೆ ಸೆಸ್ ಸೇರಿದಂತೆ), ಡೀಲರ್ ಕಮಿಷನ್, ವ್ಯಾಟ್ (ಡೀಲರ್ ಖಮಿಷನ್ನಿನ ವ್ಯಾಟ್ ಸೇರಿದಂತೆ) ಇವೆಲ್ಲವುಗಳನ್ನು ಒಳಗೊಂಡಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಪೆಟ್ರೋಲಿಯಂ ಉತ್ಪನ್ನಗಳನ್ನು ಹಾಲು ಕರೆಯುವ ಹಸುವಾಗಿ ಬಳಸಿಕೊಳ್ಳುತ್ತಿವೆ. 2020-21ರಲ್ಲಿ, ಕೇಂದ್ರವು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಕೇಂದ್ರೀಯ ಅಬಕಾರಿ ಸುಂಕದಿಂದ ರೂ 3.71 ಲಕ್ಷ ಕೋಟಿಯಷ್ಟು ಗಳಿಕೆ ಮಾಡಿಕೊಂಡಿದೆ. ಇದು ವರ್ಷದಲ್ಲಿ ಗಳಿಸಿದ 19 ಲಕ್ಷ ಕೋಟಿ ರೂಪಾಯಿಗಳ ಒಟ್ಟು ತೆರಿಗೆ ಆದಾಯದ 20 ಪ್ರತಿಶತದಷ್ಟು ಎನ್ನುವುದನ್ನು ನಾವು ಗಮನಿಸಬೇಕಿದೆ. ಅಂತೆಯೇ, ಪೆಟ್ರೋಲಿಯಂ ಉತ್ಪನ್ನಗಳಿಗೆ ತೆರಿಗೆ ವಿಧಿಸುವುದರಿಂದ ರಾಜ್ಯಗಳು ಗಮನಾರ್ಹ ಆದಾಯವನ್ನು ಗಳಿಸುತ್ತಿವೆ. 2020-21 ರಲ್ಲಿ, ಎಲ್ಲಾ ರಾಜ್ಯಗಳು ಒಟ್ಟಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ರಾಜ್ಯ ವ್ಯಾಟ್ ನಿಂದ 2.02 ಲಕ್ಷ ಕೋಟಿ ರೂ. ಗಳಿಕೆ ಮಾಡಿಕೊಂಡಿವೆ ಎನ್ನುವುದು ಗಮನಾರ್ಹ ಅಂಶವಾಗಿದೆ.
ಈ ಗಳಿಕೆಯ ಪ್ರಮಾಣವು ಎಲ್ಲ ರಾಜ್ಯಗಳಲ್ಲಿ ಬಹುತೇಕ ಒಂದೇ ತೆರನಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಒಂದೇ ಒಂದು ಉತ್ಪನ್ನದಿಂದ ಹೇಗೆ ಅ-ಸಮಾನವಾಗಿ ಅಧಿಕ ಪ್ರಮಾಣದ ತೆರಿಗೆ ಆದಾಯ ಗಳಿಸುತ್ತಿವೆ ಎನ್ನುವುದು ಸೋಜಿಗದ ಸಂಗತಿಯಾಗಿದೆ. ಇಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಂಟಿಯಾಗಿ ಮಾಡುತ್ತಿರುವ ಸಂಗತಿ ಸ್ಪಷ್ಟವಾಗಿ ಗೋಚರಿಸುತ್ತದೆ. ಕೋರೊನದಿಂದಾದ ಆರ್ಥಿಕ ಸಂಕಷ್ಟವನ್ನು ಸರಿದೂಗಿಸಲು ಇಂಧನದ ಮೇಲೆ ಹೆಚ್ಚಿನ ತೆರಿಗೆಯನ್ನು ಸರಕಾರ ಹೇರುತ್ತಿದೆಯೆ ಎನ್ನುವ ಅನುಮಾನಗಳಿಗೆ ಇಲ್ಲಿ ಹೌದು ಎನ್ನುವ ಉತ್ತರ ಸಿಗುತ್ತಿದೆ. ಕಳೆದ ವರ್ಷ, ಕೊರೋನ ಸೋಂಕಿನ ಮೊದಲ ಅಲೆಯ ಸಮಯದಲ್ಲಿ, ಕೇಂದ್ರವು ಡೀಸೆಲ್ ಮೇಲೆ 13 ರೂ. ಮತ್ತು ಪೆಟ್ರೋಲ್ ಮೇಲೆ 10 ರೂ. ಅಬಕಾರಿ ಸುಂಕ ಹೆಚ್ಚಿಸಿದೆ. ಸರಕಾರಿ ಅಧಿಸೂಚನೆಯ ಪ್ರಕಾರ ಪೆಟ್ರೋಲ್ ಮೇಲಿನ ವಿಶೇಷ ಅಬಕಾರಿ ಸುಂಕವನ್ನು 2 ರೂ.ನಿಂದ 12 ರೂ.ಗೆ ಮತ್ತು ಡೀಸೆಲ್ ಗೆ ರೂ. 5 ರಿಂದ 9 ರೂ. ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಎರಡರ ಮೇಲಿನ ರಸ್ತೆ ಸೆಸ್ ಅನ್ನು ಲೀಟರ್‌ಗೆ 8 ರೂ.ಗಳಿಂದ 18 ರೂ.ಗೆ ಹೆಚ್ಚಿಸಲಾಗಿದೆ.
ಜನತೆಯ ಮೇಲೆ ತೆರಿಗೆ ಭಾರ ಹೇರಲು ಸರಕಾರವು ಕೋವಿಡ್ -19 ಸಾಂಕ್ರಾಮಿಕ ಸನ್ನಿವೇಷವನ್ನು ಸ್ವಾರ್ಥತೆಯಿಂದ ಬಳಸಿಕೊಂಡಿದೆ. ಈ ಸಂದಿಗ್ಧ ಸನ್ನಿವೇಷದ ಹಿನ್ನೆಲೆಯಲ್ಲಿ ಉದ್ಭವವಾದ ಅಸಾಧಾರಣ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರಕ್ಕೆ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆದರೆ ಹಲವು ರಾಜ್ಯ ಸರಕಾರಗಳು ತಮ್ಮ ಸ್ವಂತ ಆದಾಯವನ್ನು ಹೆಚ್ಚಿಸಿಕೊಳ್ಳಲು ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಹೆಚ್ಚಿಸಿವೆ. ಅದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇನ್ನಷ್ಟು ಹೆಚ್ಚಿವೆ. ಕಳೆದ ವರ್ಷ ಮೇ 5 ರಂದು ದೆಹಲಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕ್ರಮವಾಗಿ ಈಗಿರುವ 27 ಪ್ರತಿಶತ ಮತ್ತು 16.75 ಶೇಕಡದಿಂದ 30 ಪ್ರತಿಶತಕ್ಕೆ ಏರಿಸಿದೆ. ತಮಿಳುನಾಡು ಸರಕಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಹೆಚ್ಚಿಸಿದ್ದು, ಇದರ ಪರಿಣಾಮವಾಗಿ ಪೆಟ್ರೋಲ್ ಲೀಟರ್ ಗೆ ರೂ. 3.25 ಮತ್ತು ಡೀಸೆಲ್ ಲೀಟರಿಗೆ ರೂ. 2.50 ಹೆಚ್ಚಳವಾಗಿದೆ. ಹರಿಯಾಣ ಸರಕಾರ ಪೆಟ್ರೋಲ್ ಮೇಲೆ ವ್ಯಾಟ್ ಅನ್ನು ಲೀಟರ್ ಗೆ 1 ರೂ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ರೂ 1.1 ರಷ್ಟು ಹೆಚ್ಚಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸರಕಾರ ವಿದಿಸುವ ಕೇಂದ್ರೀಯ ಅಬಕಾರಿ ಸುಂಕಕ್ಕೆ ಈ ಮೊದಲು ಒಂದು ಮಿತಿ ಇತ್ತು. ಆದಾಗ್ಯೂ, ಮಾರ್ಚ್ 2020 ರಲ್ಲಿ, ಸರ್ಕಾರವು 2020 ರ ಹಣಕಾಸು ಕಾಯಿದೆಗೆ ತಿದ್ದುಪಡಿ ಮಾಡುವ ಮೂಲಕ ನಿಯಮಗಳನ್ನು ಬದಲಾಯಿಸಿದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎರಡರ ಮೇಲೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು 8 ರೂ. ಗಳಷ್ಟು ಹೆಚ್ಚಲು ಕಾರಣವಾಯಿತು. ಆ ಮಿತಿಯನ್ನು ಪೆಟ್ರೋಲ್ ಗೆ ರೂ. 18 ಮತ್ತು ಡೀಸೆಲ್ ಮೇಲೆ 12 ರೂ. ಗಳ ವರಗೆ ತಂದು ನಿಲ್ಲಿಸಿದೆ. ಈ ಮಿತಿ ಹೆಚ್ಚಳದ ಕಾನೂನು ತಿದ್ದುಪಡೆ ಎರಡು ಪ್ರಮಖ ಸಾರಿಗೆ ಇಂಧನಗಳ ಮೇಲಿನ ಸುಂಕವನ್ನು ಹೆಚ್ಚಿಸಲು ಕೇಂದ್ರ ಸರಕಾರಕ್ಕೆ ವಿಫುಲ ಅವಕಾಶ ಮಾಡಿಕೊಟ್ಟಿದೆ.
ಈಗ ಕೇಂದ್ರ ಸರಕಾರವು ಹಿಂದಿನ ಸರಕಾರದ ಮೇಲೆ ಗೂಬೆ ಕೂರಿಸುತ್ತ, ಅಬಕಾರಿ ಶುಲ್ಕದ ಮಿತಿ ಹೆಚ್ಚಳದ ಕಾನೂನುನನ್ನು ತಿದ್ದುಪಡೆ ಮಾಡಿ ಇಂಧನಗಳ ಮೇಲೆ ಯದ್ವಾತದ್ವಾ ಸುಂಕಗಳನ್ನು ಹೇರಿ ಲಾಭಗಳಿಸುತ್ತಿದೆ. ಅಂದಾಜಿನ ಪ್ರಕಾರ ಒಂದು ರೂಪಾಯಿ ಅಬಕಾರಿ ಸುಂಕ ಹೆಚ್ಚಳದಿಂದ ಸರಕಾರಕ್ಕೆ ವಾರ್ಷಿಕ ಆದಾಯ 13,000-14,000 ಕೋಟಿ ರೂ. ಸಂದಾಯವಾಗುತ್ತದೆ. ಹೇಗಿದೆ ನೋಡಿ ಮೋದಿ ಸರಕಾರದ ಜನವಿರೋಧಿ ನೀತಿ ಮತ್ತು ಹಗಲು ದರೋಡೆ.